ವಿಂಗಡಿಸದ

ರಾಯಚೂರು ಜಿಲ್ಲೆಯಲ್ಲಿದೆ ಮನಸೂರೆಗೊಳಿಸುವ ಐತಿಹಾಸಿಕ ತಾಣಗಳು

“ರಾಯಚೂರು ಜಿಲ್ಲೆ” (Raichur District Tourist places) – ದೇವಾಲಯ, ಕೋಟೆ, ಜಲಪಾತ, ಶಿಲಾ ಶಾಸನಗಳಿಗೆ ಪ್ರಸಿದ್ಧವಾಗಿದೆ. ಮೌರ್ಯರ ಕಾಲದಿಂದ ಮುಸ್ಲಿಂ ಅವಧಿಯ ಅಂತ್ಯದವರೆಗೆ, ಸಂಸ್ಕೃತ, ಪ್ರಾಕೃತ, ಕನ್ನಡ, ಅರೇಬಿಕ್ ಮತ್ತು ಪರ್ಷಿಯನ್ ಮುಂತಾದ ವಿವಿಧ ಭಾಷೆಗಳ ನೂರಾರು ಶಾಸನಗಳನ್ನು ನೀಡಿರುವ ಹೆಗ್ಗಳಿಕೆ ರಾಯಚೂರು ಜಿಲ್ಲೆಗೆ ಇದೆ.

1.ಮಲ್ಲಿಯಾಬಾದ್ ಕೋಟೆ:

Malliabad Fort, Malliabad

ರಾಯಚೂರಿನಿಂದ 5 ಕಿಮೀ ದೂರದಲ್ಲಿರುವ, ಇದು ಐತಿಹಾಸಿಕ ಕೋಟೆ ಮತ್ತು ಸ್ಮಾರಕಗಳನ್ನು ಹೊಂದಿದೆ. ಪಾಳುಬಿದ್ದ ವಿಷ್ಣು ದೇವಾಲಯ ಮತ್ತು ಬಿಳಿ ಗ್ರಾನೈಟ್‌ನಲ್ಲಿ ಕೆತ್ತಿದ ದೊಡ್ಡ ಗಾತ್ರದ ಆನೆಗಳು ಕೋಟೆಯಲ್ಲಿವೆ. ಆನೆಗಳು ವಿಜಯನಗರ ಸಾಮ್ರಾಜ್ಯದ ಕಾಲದವು. ರಾಜ್ಯ ಪುರಾತತ್ವ ಇಲಾಖೆಯು ಇದನ್ನು ಸಂರಕ್ಷಿತ ಐತಿಹಾಸಿಕ ಸ್ಮಾರಕವೆಂದು ಘೋಷಿಸಿದೆ. ಈ ಕೋಟೆಯು 13 ನೇ ಶತಮಾನದಲ್ಲಿ ವಾರಂಗಲ್‌ನ ಕಾಕತೀಯರಿಂದ ನಿರ್ಮಿಸಲ್ಪಟ್ಟಿತು.

2. ರಾಯಚೂರು ಕೋಟೆ:

Raichur Fort, Raichur

ರಾಯಚೂರಿನ ನಗರದ ಹೃದಯ ಭಾಗದಲ್ಲಿರುವ ಈ ಸುಪ್ರಸಿದ್ಧ ಕೋಟೆಯನ್ನು ಕಾಕತೀಯ ರಾಜವಂಶಗಳು, ರಾಷ್ಟ್ರಕೂಟರು, ವಿಜಯನಗರ ಸಾಮ್ರಾಜ್ಯ, ಬಹಮನಿ ಸುಲ್ತಾನರು ಎಂಬ ಹಲವು ರಾಜಮನೆತನಗಳು ಆಳಿವೆ. ಬಾದಾಮಿಯ ಚಾಲುಕ್ಯರ ಕಾಲದಿಂದಲೂ ಇಲ್ಲಿ ಕೋಟೆಯು ಅಸ್ತಿತ್ವದಲ್ಲಿದ್ದು, ಈಗಿರುವ ಕೋಟೆಯನ್ನು ಕ್ರಿ.ಶ. 1294 ರಲ್ಲಿ ಕಾಕತೀಯರ ಆಳ್ವಿಕೆಯಲ್ಲಿ ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ. ಕೋಟೆಯ ಮೂರು ಬದಿಗಳು ಲೋ ಸರ್ಕ್ಯೂಟ್ ಗೋಡೆಗಳಿಂದ ಆವೃತವಾಗಿದೆ. ಒಳಗಿನ ಗೋಡೆಗಳು ಕಲ್ಲುಗಳಿಂದ ಮಾಡಲ್ಪಟ್ಟಿವೆ. ಒಳಗಿನ ಕೋಟೆಯು ಎರಡು ಗೇಟ್ ವೇಗಳನ್ನು, ಮತ್ತು ಹೊರಗಿನ ಕೋಟೆಯು ಐದು ಗೇಟ್ ವೇಗಳನ್ನು ಹೊಂದಿದೆ. ಕೋಟೆಯ ಒಳಗೆ ಸಣ್ಣ ಮಸೀದಿ, ಪುರಾತನ ಕಟ್ಟಡಗಳು, ಹಳೆಯ ಕಾಲದ ಶಿಲಾ ಶಾಸನಗಳನ್ನು ಕಾಣಬಹುದು. 2011 ರಲ್ಲಿ, ಸ್ವಚ್ಛತಾ ಕಾರ್ಯ ನಡೆಯುವಾಗ ಕೋಟೆಯ ವಾಯುವ್ಯ ಭಾಗದಲ್ಲಿ 13ನೇ ಶತಮಾನದ 95 ಗ್ರಾನೈಟಿನ ಚೆಂಡುಗಳು ಹಾಗು ಒಂದು ಫಿರಂಗಿ ದೊರೆತವು.

3. ಅಂಬಾ ದೇವಾಲಯ:

Amba Mutt, Somalapura

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದು. ಈ ದೇವಾಲಯಕ್ಕೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಇತರೆ ರಾಜ್ಯಗಳಿಂದ ಪ್ರವಾಸಿಗರು ಬರುತ್ತಾರೆ. ಇಲ್ಲಿ ದೇವಿ ವಿಗ್ರಹದೊಂದಿಗೆ ಶಿವ ಮತ್ತು ನಂದಿ ವಿಗ್ರಹವಿದೆ. ನಾಡ ಹಬ್ಬ ದಸರಾವನ್ನು 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

4. ಜಲದುರ್ಗ ಕೋಟೆ:

Jaladurga Fort, Lingsur

ಜಲದುರ್ಗ ಕೋಟೆಯು ಒಂದು ವಿಶಿಷ್ಟವಾದ ಕೋಟೆಯಾಗಿದ್ದು, ಇದನ್ನು ಬೆಟ್ಟದ ಮೇಲೆ ನಿರ್ಮಿಸಲಾಗಿದೆ ಮತ್ತು ಇದರ ಮೇಲಿಂದ ಕೃಷ್ಣಾ ನದಿಯ ರಮ್ಯವಾದ ನೋಟವನ್ನು ವೀಕ್ಷಿಸಬಹುದು. ಇದು ರಾಯಚೂರು ಜಿಲ್ಲೆಯ ಲಿಂಗಸೂರಿನಿಂದ 20 ಕಿ.ಮೀ ದೂರದಲ್ಲಿದೆ. ಜಲದುರ್ಗ ಕೋಟೆಯನ್ನು ದೇವಗಿರಿಯ ಯಾದವರು 12ನೇ ಶತಮಾನದಲ್ಲಿ ಕಟ್ಟಿಸಿರಬಹುದೆಂದು ಹೇಳಲಾಗುತ್ತದೆ. ಶತಮಾನಗಳಷ್ಟು ಹಳೆಯದಾದ ಕೋಟೆಯು ಕಾಲಕಾಲಕ್ಕೆ ಅನೇಕ ಆಡಳಿತಗಾರರ ನಿಯಂತ್ರಣದಲ್ಲಿತ್ತು. ಬಿಜಾಪುರದ ಆದಿಲ್ ಶಾಹಿ ರಾಜರ ಭದ್ರ ಕೋಟೆ ಇದಾಗಿತ್ತು ಎಂದು ಹೇಳಲಾಗುತ್ತದೆ. ಈ ಕೋಟೆಯು ಪ್ರಸ್ತುತ ಪಾಳು ಬಿದ್ದ ಸ್ಥಿತಿಯಲ್ಲಿದ್ದು, ಅಭಿವೃದ್ಧಿ ಹೊಂದುವ ನಿರೀಕ್ಷೆ ಇದೆ.

5. ಗುಂಡಲಬಂಡಿ ಜಲಪಾತ:

Gundalbandi Falls, gurugunta

ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150 (ಎ) ಗುರುಗುಂಟಾ ಬಳಿಯ ಗುಲ್ಲಿಪಲ್ಲಿ ಸೇತುವೆಯ ಬಳಿ ಈ ಜಲಪಾತವಿದೆ. 85 ರಿಂದ 95 ಅಡಿಗಳಷ್ಟು ದೈತ್ಯಾಕಾರದ ಬಂಡೆಗಳಿಂದ ಈ ಜಲಪಾತ ಕೂಡಿದೆ. ಕಲ್ಲಿನ ಬಂಡೆಗಳ ಮೂಲಕ ನೀರು ಬೀಳುವುದರಿಂದ ಈ ಜಲಪಾತಕ್ಕೆ ಗುಂಡಾಲಬುಂಡಿ ಜಲಪಾತ ಎಂದು ಕರೆಯಲಾಗುತ್ತದೆ.

6. ಪಂಚಮುಖಿ ಪ್ರಾಣದೇವರ ದೇವಾಲಯ:

Panchamukhi Pranadevaru, Gandhal

ರಾಯಚೂರಿನಿಂದ 35 ಕಿಮೀ ದೂರದಲ್ಲಿರುವ ಗಂಧಲ್ ಗ್ರಾಮದ ಪಂಚಮುಖಿ ಪ್ರಾಣದೇವರು ದೇವಾಲಯವು ಹನುಮಾನ್ ದೇವಾಲಯವಾಗಿದೆ. ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಹೋಗುವ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಮಾಸ್ಕಿಯ ಅಶೋಕನ ಶಾಸನ, ಕಲ್ಲೂರು ದೇವಾಲಯ, ಮುದಗಲ್ ಕೋಟೆ, ಮಾನ್ವಿ, ಹಟ್ಟಿ ಚಿನ್ನದ ಗಣಿಗಳು, ಶಕ್ತಿನಗರ, ನಾರದಗುಡ್ಡ ಇನ್ನೂ ಅನೇಕ ಪ್ರವಾಸಿ ತಾಣಗಳಿಗೆ ಪ್ರಸಿದ್ಧವಾಗಿದೆ “ರಾಯಚೂರು”.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button