ಕರಾವಳಿ ಕಡೆ ಹೋದ್ರೆ ಈ ಖಾದ್ಯಗಳನ್ನು ಸವಿಯೋದನ್ನು ಮರೆಯಬೇಡಿ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಖಾದ್ಯಗಳು ಅಂದಾಗ ಹೆಚ್ಚಿನ ಜನರಿಗೆ ಮೀನು, ಇಡ್ಲಿ , ವಡೆ ,ನೀರುದೋಸೆ ನೆನಪಾಗುತ್ತದೆ. ಆದರೆ ನಿಮಗೆ ಗೊತ್ತಾ ಈ ಉಭಯ ಜಿಲ್ಲೆಗಳಲ್ಲಿ ಇವಿಷ್ಟೇ ಅಲ್ಲ ಇವುಗಳನ್ನು ಬಿಟ್ಟು ಇನ್ನೂ ಒಂದಿಷ್ಟು ವಿಶೇಷ ಖಾದ್ಯಗಳು ಕೂಡ ಇವೆ. ಆ ಕಡೆ ಹೋದಾಗ ಈ ಫುಡ್ ಗಳನ್ನೂ ಮಿಸ್ ಮಾಡ್ದೆ ಸವಿಯಿರಿ.
ಕೊಟ್ಟೆ ಕಡಬು
ಕೊಟ್ಟೆ ಕಡಬು ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿನ ವಿಶೇಷ ಖಾದ್ಯ. ಸಾಮಾನ್ಯವಾಗಿ ಕೊಟ್ಟೆ ಕಡಬು ಇಡ್ಲಿಯನ್ನು ಹೋಲುತ್ತದೆ. ಈ ಭಾಗದಲ್ಲಿ ಕೊಟ್ಟೆ ಕಡಬನ್ನು ಹೆಚ್ಚಾಗಿ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಮಾಡುತ್ತಾರೆ. ಕೊಟ್ಟೆ ಕಡಬಿನಲ್ಲಿ ಕೊಟ್ಟೆಯನ್ನು ತಯಾರು ಮಾಡುವುದು ಕೂಡ ಒಂದು ಕಲೆ.
ಹಲಸಿನ (Jackfruit )ಎಲೆಗಳ ಕಪ್ ನಂತಹ ರಚನೆಯಲ್ಲಿ ತಯಾರಿಸಲಾಗುತ್ತದೆ. ಈ ಎಲೆಗಳಲ್ಲಿ ಇಡ್ಲಿ ಬೇಯುತ್ತಿದ್ದಂತೆ, ಎಲೆಗಳ ಸುವಾಸನೆ ಮತ್ತು ಇಡ್ಲಿ ಒಂದಕ್ಕೊಂದು ಹದವಾಗಿ ಬೆರೆತು ಖಾದ್ಯದ ರುಚಿಯನ್ನು ಇನ್ನಷ್ಟು ರುಚಿಕರವಾಗಿಸುತ್ತದೆ. ಇದನ್ನು ಹೆಚ್ಚಾಗಿ ಚಿಕನ್ ಸಾರಿನ ಜೊತೆಗೆ ತಿನ್ನುವವರು ಜಾಸ್ತಿ.
ಮಂಗಳೂರು ಬನ್ಸ್
ಮಂಗಳೂರು ಬನ್ಸ್ ಉಡುಪಿ (Udupi) ಹಾಗೂ ದಕ್ಷಿಣ ಕನ್ನಡ (Dakshina Kannada) ಜನಪ್ರಿಯ ತಿಂಡಿ. ಸಾಮಾನ್ಯವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಯಾವುದೇ ಹೋಟೆಲ್ ಗಳಿಗೆ ಹೋದ್ರು ಬೆಳಗಿನ ಉಪಹಾರಕ್ಕೆ ಬನ್ಸ್ ಇದ್ದೆ ಇರುತ್ತದೆ. ಹೆಚ್ಚಾಗಿ ಕೂರ್ಮದ ಜೊತೆಗೆ ಬನ್ಸ್ ಸವಿಯುತ್ತಾರೆ.ಮೆದುವಾದ ಬನ್ಸ್ ,ಸ್ವಲ್ಪ ಸಿಹಿ ಬಾಯಿಗಿಟ್ಟರಂತೂ ನಿಮಗೆ ಬೇರೆಯದ್ದೇ ರುಚಿಯನ್ನು ನೀಡುತ್ತದೆ. ಹೀಗಾಗಿಯೇ ಕರಾವಳಿ ಮಂದಿ ಮಹಾನಗರಿಗೆ ಬಂದ್ರು ಬನ್ಸ್ ರುಚಿ ಮರೆಯಲ್ಲ.
ನೀವು ಇದನ್ನು ಇಷ್ಟ ಪಡಬಹುದು: ಮಳೆಗಾಲದಲ್ಲಿ ತಯಾರಾಗುವ ಹಲಸಿನ ಹಣ್ಣಿನ ವಿಶೇಷ ಖಾದ್ಯಗಳು.
ಸುಕ್ಕಿನುಂಡೆ
ಕರಾವಳಿಗೆ (coastal karnataka)ಹೋದಾಗ ನೀವು ಸವಿಯಲೇ ಬೇಕಾದ ಮತ್ತೊಂದು ತಿಂಡಿ ಅಂದ್ರೆ ಸುಕ್ಕಿನುಂಡೆ. ಹೆಚ್ಚಾಗಿ ಕಡಲೆ ಬೇಳೆಯಲ್ಲಿ ಮಾಡುವ ಸಿಹಿ ತಿನಿಸಿದು. ಸುಕ್ಕಿನುಂಡೆ ಸಾಂಪ್ರದಾಯಿಕ ತಿನಿಸಾಗಿದ್ದು, ಯಾವುದೇ ಬೇಳೆಯನ್ನು ಬಳಸಿ ಈ ರೆಸಿಪಿಯನ್ನು ಮಾಡಬಹುದು. ಮೇಲ್ನೋಟಕ್ಕೆ ಹೋಳಿಗೆಯ ರುಚಿ ಇದ್ದು, ತಿನ್ನಲು ಸಖತ್ ಆಗಿ ಇರುತ್ತೆ. ಈ ಭಾಗದ ಯಾವುದೇ ಸಣ್ಣಪುಟ್ಟ ಹೋಟೆಲ್ ಗಳಿಗೆ ಹೋದರೆ ಅಲ್ಲಿ ಸುಕ್ಕಿನುಂಡೆ ಜಾಗ ಪಡೆದಿರುತ್ತದೆ.
ಗೋಳಿ ಬಜೆ
ಕರಾವಳಿ ಕರ್ನಾಟಕದ ಅತ್ಯಂತ ಜನಪ್ರಿಯವಾದ ತಿಂಡಿ ಇದು . ಇದನ್ನು ಕೆಲವರು ಮಂಗಳೂರು ಬೋಂಡ ಎಂದು ಕರೆಯುತ್ತಾರೆ. ಇದು ಹೊರಗೆ ಗರಿಗರಿಯಾದ ಮತ್ತು ಒಳಗೆ ಮೃದುವಾಗಿರುವ ತಿನಿಸಸು. ಅಕ್ಕಿ ಹಿಟ್ಟು, ಮೈದಾ, ಮೊಸರು, ಹಸಿರು ಮೆಣಸಿನಕಾಯಿ ಮತ್ತು ಶುಂಠಿಯಿಂದ ಮಾಡುವ ಕರಾವಳಿಯ ಫೇಮಸ್. ಸಂಜೆಯ ವೇಳೆ ಕಾಫಿ ಜೊತೆಗೆ ಗೋಳಿ ಬಜೆ ತಿನ್ನೋದಕ್ಕೆ ಬೆಸ್ಟ್ ಕಾಂಬಿನೇಷನ್.
ಪತ್ರೊಡೆ
ಕರಾವಳಿ ಎಂದಾಗ ಬಹುತೇಕರಿಗೆ ಪತ್ರೊಡೆಯ ನೆನಪಾಗುತ್ತದೆ. ಕೆಸುವಿನೆಲೆ ಯಿಂದ ಇದು ಮಾಡುತ್ತಾರೆ. ಮಳೆಗಾಲದಲ್ಲಿ ಮಾಡುವ ತಿನಿಸಿದು . ಕೆಸುವಿನ ಎಲೆಗಳನ್ನು ಕೊಯ್ದು ತಂದು, ತೊಳೆದು ನೆನೆಸಿಟ್ಟ ಅಕ್ಕಿ, ಕಡ್ಲೆಬೇಳೆಯ ಜೊತೆಗೆ ಒಂದಿಷ್ಟು ಜೀರಿಗೆ, ಕೊತ್ತಂಬರಿ, ಬೆಲ್ಲ, ಮೆಣಸು, ತೆಂಗಿನಕಾಯಿ ಹಾಕಿ ಹಿಟ್ಟು ಮಾಡಿಟ್ಟು, ಒಂದೊಂದೇ ಎಲೆಯ ಮೇಲೆ ಹಿಟ್ಟು ಹಚ್ಚಿ, ಎಲೆಯ ಮೇಲೆ ಎಲೆ ಇಡುತ್ತಾ, ಹಿಟ್ಟನ್ನೂ ಹಚ್ಚುತ್ತಾ ಮಡಚಿ, ಹಬೆಯಲ್ಲಿ ಬೇಯಿಸಿ ಮಾಡುವ ಅಪರೂಪದ ಸಂಪ್ರದಾಯ ತಿನಿಸು. ಬಹಳ ರುಚಿಯಾದ ಅಷ್ಟೇ ಆರೋಗ್ಯಕರವೂ ಆದ ವಿಶಿಷ್ಠ ತಿನಿಸಿದು. ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದ್ದು.
ಇವಿಷ್ಟೇ ಅಲ್ಲ ಕರಾವಳಿಯ ವಿಶಿಷ್ಟ ಖಾದ್ಯಗಳ ಬಗ್ಗೆ ಬರೆಯುತ್ತಾ ಹೋದರೆ ಅವುಗಳ ಪಟ್ಟಿ ಇನ್ನೂ ಬಹುದೊಡ್ಡದ್ದಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ