ಮ್ಯಾಜಿಕ್ ತಾಣಗಳುವಿಂಗಡಿಸದ

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿರುವ ತಮಿಳುನಾಡಿನ ತಾಣಗಳು:

ಭಾರತದಲ್ಲಿರುವ 42 ಯುನೆಸ್ಕೋ ವಿಶ್ವ ಪಾರಂಪರಿಕ ತಾಣ (UNESCO World Heritage Sites) ಗಳ ಪೈಕಿ ತಮಿಳುನಾಡಿನ ದೇವಾಲಯಗಳು, ಪಶ್ಚಿಮ ಘಟ್ಟಗಳು ಮತ್ತು ನೀಲಗಿರಿ ಮೌಂಟೇನ್ ರೈಲ್ವೇಗಳೂ ಕೂಡಾ ಒಳಗೊಂಡಿವೆ. ತಮಿಳುನಾಡಿನ ವಿಶ್ವ ಪಾರಂಪರಿಕ ತಾಣಗಳ ಕುರಿತಾದ ಮಾಹಿತಿ ಇಲ್ಲಿದೆ.

ಉಜ್ವಲಾ ವಿ ಯು

1. ಮಹಾಬಲಿಪುರಂ ಸ್ಮಾರಕಗಳು:

Group of monuments at Mahabalipuram

ತಮಿಳುನಾಡಿನಲ್ಲಿರುವ ಮಹಾಬಲಿಪುರಂ ಸ್ಮಾರಕ (Group of monuments at Mahabalipuram) ಗಳನ್ನು 1984 ರಲ್ಲಿ ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲಾಯಿತು. ಇದು ಬಂಗಾಳಕೊಲ್ಲಿಯ ಕೋರಮಂಡಲ್ ಕರಾವಳಿಯಲ್ಲಿದೆ. ಈ ಸ್ಮಾರಕ ಸಮೂಹಗಳನ್ನು ಪಲ್ಲವ ಅರಸರು 7 ನೇ ಮತ್ತು 8 ನೇ ಶತಮಾನದಲ್ಲಿ ನಿರ್ಮಿಸಿದ್ದಾರೆ. ಹತ್ತು ಪ್ರಮುಖ ರಥಗಳು, ಹತ್ತು ಮಂಟಪಗಳು, ಎರಡು ಬಂಡೆಯ ಉಬ್ಬುಶಿಲ್ಪಗಳು ಮತ್ತು ಮೂರು ರಚನಾತ್ಮಕ ದೇವಾಲಯಗಳನ್ನು ಈ ಸಮೂಹ ಒಳಗೊಂಡಿದೆ. ಈ ತಾಣವು 40 ಪುರಾತನ ಸ್ಮಾರಕಗಳನ್ನು ಹೊಂದಿದೆ. ಇಲ್ಲಿನ ಸಮುದ್ರ ತೀರದ ದೇವಾಲಯವು ಆಕರ್ಷಣೀಯ ತಾಣವಾಗಿದೆ.

2. ಗ್ರೇಟ್ ಲಿವಿಂಗ್ ಚೋಳ ದೇವಾಲಯಗಳು: ತಂಜಾವೂರಿನ ಬೃಹದೀಶ್ವರ ದೇವಾಲಯ,  ಗಂಗೈಕೊಂಡಚೋಳಪುರಂನಲ್ಲಿರುವ ಬೃಹದೀಶ್ವರ ದೇವಾಲಯ ಮತ್ತು ಧಾರಾಸುರಂನ ಐರಾವತೇಶ್ವರ ದೇವಾಲಯಗಳು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ “ಗ್ರೇಟ್ ಲಿವಿಂಗ್ ಚೋಳ ದೇವಾಲಯ”( Great Living Chola Temples) ಗಳ ಪಟ್ಟಿಯಲ್ಲಿರುವ ದೇವಾಲಯಗಳು.

A. ತಂಜಾವೂರಿನ ಬೃಹದೀಶ್ವರ ದೇವಾಲಯ:

Thanjavur Brihadeeswara Temple

ಈ ದೇವಾಲಯವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ 1987ರಲ್ಲಿ ಸೇರಿಸಲಾಯಿತು. ತಂಜಾವೂರಿನ ಈ ದೇವಾಲಯವು ಚೋಳರ ದೇವಾಲಯಗಳ ಮೊದಲ ಶ್ರೇಷ್ಠ ಉದಾಹರಣೆಯಾಗಿದೆ. ಪೆರುವುದೈಯರ್ ಕೊವಿಲ್, ರಾಜರಾಜೇಶ್ವರಮ್ ಎಂದೂ ಈ ದೇವಾಲಯವನ್ನು ಕರೆಯಲಾಗುತ್ತದೆ. ವಿಶ್ವದಲ್ಲಿಯೇ ಸಂಪೂರ್ಣವಾಗಿ ಬೆಣಚುಕಲ್ಲುಗಳಿಂದ ನಿರ್ಮಿತವಾದ ಏಕೈಕ ದೇವಾಲಯ ಇದಾಗಿದೆ. ಗ್ರಾನೈಟ್ ಬಳಸಿ ನಿರ್ಮಿಸಲಾದ ದೇಗುಲದ ಮೇಲಿರುವ ವಿಮಾನ ಗೋಪುರವು ದಕ್ಷಿಣ ಭಾರತದ ಅತ್ಯಂತ ಎತ್ತರದ ಗೋಪುರಗಳಲ್ಲಿ ಒಂದಾಗಿದೆ. ಇಲ್ಲಿನ ಶಿವ ಲಿಂಗವೂ ಸಹ ವಿಶ್ವದ ಅತಿ ಎತ್ತರದ ಶಿವಲಿಂಗಗಳಲ್ಲಿ ಒಂದೆನಿಸುವುದರ ಜೊತೆಗೆ ತಮಿಳುನಾಡಿನಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿತಾಣವೂ ಕೂಡಾ ಇದಾಗಿದೆ.

B. ಗಂಗೈಕೊಂಡ ಚೋಳಪುರಂನಲ್ಲಿರುವ ಬೃಹದೀಶ್ವರ ದೇವಾಲಯ:

gangaikonda cholapuram Brihadeeswarar Temple

ಈ ದೇವಾಲಯವನ್ನು 2004ರಲ್ಲಿ ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲಾಯಿತು. . ಈ ದೇವಾಲಯವನ್ನು 1035 AD ಯಲ್ಲಿ ರಾಜೇಂದ್ರ-I ರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಇದು ದ್ರಾವಿಡ ದೇವಾಲಯದ ವಾಸ್ತುಶಿಲ್ಪಕ್ಕೆ ಒಂದು ಶ್ರೇಷ್ಠ ಉದಾಹರಣೆಯಾಗಿದೆ . ಈ ದೇವಾಲಯವೂ ಸಹ 55 ಮೀ ಎತ್ತರದ ವಿಮಾನ ಗೋಪುರವನ್ನು ಹೊಂದಿದ್ದು, ಅತಿ ಎತ್ತರದ ವಿಮಾನ ಗೋಪುರವನ್ನು ಹೊಂದಿರುವ ದೇವಾಲಯವಾಗಿದೆ. ಈ ದೇವಾಲಯವು ತನ್ನ ಅಮೋಘ ವಾಸ್ತುಶಿಲ್ಪದಿಂದಾಗಿ ಭಾರತದ ಅತ್ಯಮೂಲ್ಯ ಆಸ್ತಿ ಎನಿಸಿದೆ.

C. ಧಾರಾಸುರಂನ ಐರಾವತೇಶ್ವರ ದೇವಾಲಯಗಳು:

Dharasuram Airavateshwara Temple

12 ನೇ ಶತಮಾನದಲ್ಲಿ ಚೋಳ ಚಕ್ರವರ್ತಿ ರಾಜ ರಾಜ II ರಿಂದ ನಿರ್ಮಿಸಲ್ಪಟ್ಟ ಈ ದೇವಾಲಯವು 2004ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿತು. ಐರಾವತೇಶ್ವರ ದೇವಸ್ಥಾನವು ತಂಜಾವೂರು ಜಿಲ್ಲೆಯ ಕುಂಭಕೋಣಂ ಪ್ರದೇಶದಲ್ಲಿದೆ. ಈ ದೇವಾಲಯವೂ ಸಹ ಚೋಳರ ಭವ್ಯವಾದ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ದೇವಾಲಯದ ಆವರಣವು ಪುರಾಣಗಳ ಕಥೆಗಳನ್ನು ಚಿತ್ರಿಸುವ ಕೆತ್ತನೆಗಳು ಮತ್ತು ಶಾಸನಗಳಿಂದ ತುಂಬಿದೆ. ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಏಳು ಸಂಗೀತದ ಸ್ವರಗಳನ್ನು ಪ್ರತಿನಿಧಿಸುವ ಏಳು ಮೆಟ್ಟಿಲುಗಳು. ಇದನ್ನು “ಸಂಗೀತದ ಹೆಜ್ಜೆಗಳು” ಎನ್ನಲಾಗುತ್ತದೆ.

3. ಪಶ್ಚಿಮ ಘಟ್ಟಗಳು:

Western ghats of Tamilnadu

1,600 ಕಿಮೀ ಉದ್ದದ ಪ್ರದೇಶದಲ್ಲಿ ಸುಮಾರು 140,000 ಕಿಮೀ² ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳು ಸಹ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿದೆ. ಇದು ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಜೊತೆಗೆ ತಮಿಳುನಾಡಿನ ಪಶ್ಚಿಮ ಘಟ್ಟಗಳ ಭಾಗಗಳನ್ನೂ ಒಳಗೊಂಡಿದೆ.

4. ನೀಲಗಿರಿ ಮೌಂಟೇನ್ ರೈಲ್ವೇ:

The Niligiri Mountain Railways, Tamilnadu

ಪರ್ವತ ಭೂಪ್ರದೇಶದಲ್ಲಿ ಅತ್ಯಂತ ಪರಿಣಾಮಕಾರಿ ರೈಲು ಸಂಪರ್ಕವನ್ನು ಸ್ಥಾಪಿಸಿ, ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ಒದಗಿಸುತ್ತಿರುವ ಮೂರು ರೈಲು ಮಾರ್ಗಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ “ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ” ಎಂಬ ಶೀರ್ಷಿಕೆಯಡಿಯಲ್ಲಿ ಸೇರಿಸಲಾಗಿದೆ. ಇದು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ ಮತ್ತು ಕಲ್ಕಾ ಶಿಮ್ಲಾ ರೈಲ್ವೇ ಗಳನ್ನು ಒಳಗೊಂಡಂತೆ ತಮಿಳುನಾಡಿನ ನೀಲಗಿರಿ ಮೌಂಟೇನ್ ರೈಲ್ವೇ ಕೂಡಾ ಒಳಗೊಂಡಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button