ಶಿವಮೊಗ್ಗ ಏರ್ ಪೋರ್ಟಿನಿಂದ ಮೂರು ಹೊಸ ಮಾರ್ಗಗಳಿಗೆ ವಿಮಾನ ಹಾರಾಟ: ನಾಳೆಯಿಂದಲೇ ಶುರು
“ಮಲೆನಾಡಿನ ಹೆಬ್ಬಾಗಿಲು” ಶಿವಮೊಗ್ಗದ ಹೊರವಲಯ ಸೋಗಾನೆ ಬಳಿ ಇತ್ತೀಚಿಗೆ ಆರಂಭಗೊಂಡ ವಿಮಾನ ನಿಲ್ದಾಣದಿಂದ ಇನ್ನೂ ಮೂರು ಹೊಸ ಮಾರ್ಗಗಳಿಗೆ ನ.21 (ನಾಳೆ) ರಿಂದ ವಿಮಾನ ಯಾನ ಆರಂಭಗೊಳ್ಳಲಿದೆ.
● ಉಜ್ವಲಾ ವಿ.ಯು.
ಸ್ಟಾರ್ ಏರ್ ವಿಮಾನಯಾನ ಸಂಸ್ಥೆಯು ನಾಳೆಯಿಂದ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ “ಹೈದರಾಬಾದ್, ತಿರುಪತಿ ಹಾಗೂ ಗೋವಾ” ಗೆ ವಿಮಾನಗಳ ಸಂಚಾರವನ್ನು ಪ್ರಾರಂಭ ಮಾಡಲು ತೀರ್ಮಾನಿಸಿದೆ.
ಈಗಾಗಲೇ ಬೆಂಗಳೂರಿಗೆ ವಿಮಾನ ಸಂಚಾರ ಆರಂಭಿಸಿರುವ ಶಿವಮೊಗ್ಗ ವಿಮಾನ ನಿಲ್ದಾಣವು ನಾಳೆಯಿಂದ ಹೈದರಾಬಾದ್, ತಿರುಪತಿ ಮತ್ತು ಗೋವಾಗೆ ಕೂಡಾ ಸಂಚಾರ ಆರಂಭಿಸಿ, ನಾಲ್ಕು ಮಾರ್ಗಗಳಲ್ಲಿ ಸಂಚಾರ ಮಾಡುವ ಮೂಲಕ ತನ್ನ ವ್ಯಾಪ್ತಿಯನ್ನು ಹೆಚ್ಚಿಸಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣವು ಕರ್ನಾಟಕದ ಒಂಭತ್ತನೇ ವಿಮಾನ ನಿಲ್ದಾಣವಾಗಿದ್ಡು, ಮಲೆನಾಡು ಭಾಗದ ಮೊದಲ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣದಲ್ಲಿ ರಾತ್ರಿ ಸಹ ವಿಮಾನ ಲ್ಯಾಂಡ್ ಆಗಲು ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ.
ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿದರೆ ಅತಿ ಉದ್ದದ ರನ್ ವೇ ಹೊಂದಿರುವ ವಿಮಾನ ನಿಲ್ದಾಣವೆಂದರೆ ಅದು ಶಿವಮೊಗ್ಗ ವಿಮಾನ ನಿಲ್ದಾಣವಾಗಿದೆ. ಏರ್‌ಬಸ್ 320 ಮಾದರಿಯ ವಿಮಾನಗಳು ಕೂಡ ಇಳಿಯುವ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ.
ಸದ್ಯ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಸಂಪರ್ಕ ಹೊಂದಿದ್ದ ವಿಮಾನ ನಿಲ್ದಾಣವು ಇನ್ನು ಮುಂದೆ ಮೂರು ಹೊಸ ಮಾರ್ಗಗಳಿಗೆ ದೈನಂದಿನ ಸಂಚಾರ ಒಳಗೊಂಡಿರುತ್ತದೆ.
ಶಿವಮೊಗ್ಗ – ಹೈದರಾಬಾದ್ ನಡುವೆ ದೈನಂದಿನ ಸಂಪರ್ಕ ಹೊಂದಿರುವ ವಿಮಾನವು ತಡೆ ರಹಿತವಾಗಿದ್ದು, ಇದು ವ್ಯಾಪಾರಿಗಳಿಗೆ ಮತ್ತು ಪ್ರವಾಸಿಗರಿಗೆ ಹೈದರಾಬಾದಿನ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಅರಿಯಲು ಅನುಕೂಲ ಮಾಡಿಕೊಡಲಿದೆ.
ಶಿವಮೊಗ್ಗ-ತಿರುಪತಿ ನಡುವೆ ಸಂಪರ್ಕ ಕಲ್ಪಿಸುವ ವಿಮಾನವು ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನ ಮತ್ತು ಇತರೆ ತೀರ್ಥ ಸ್ಥಳಗಳನ್ನು ಭೇಟಿ ನೀಡುವ ಭಕ್ತಾದಿಗಳಿಗೆ ಅನುಕೂಲತೆಯನ್ನು ಮಾಡಿಕೊಡಲಿದೆ. ಅಂತೆಯೇ ಗೋವಾ ಸಂಪರ್ಕ ಕಲ್ಪಿಸುವ ವಿಮಾನವು ಗೋವಾದ ಕಡಲತೀರಗಳನ್ನು ಕಣ್ತುಂಬಿಕೊಳ್ಳಲು ಸಹಾಯ ಮಾಡಲಿವೆ.
ಸ್ಟಾರ್ ವಿಮಾನ ಸಂಸ್ಥೆಯು ಹೇಳುವಂತೆ, ಈ ವಿಮಾನಗಳು Embraer E175 ಸೌಕರ್ಯಗಳನ್ನು ಹೊಂದಿದ್ದು, ಪ್ರಯಾಣಿಕರು ಅತ್ಯಂತ ಆರಾಮದಾಯಕ ಪ್ರಯಾಣವನ್ನು ಈ ವಿಮಾನಗಳಲ್ಲಿ ಅನುಭವಿಸಬಹುದಾಗಿದೆ.
ಈ ವಿಮಾನಗಳು 12 ಐಷಾರಾಮಿ ಬ್ಯುಸಿನೆಸ್ ಆಸನಗಳೊಂದಿಗೆ 2 ವರ್ಗದ ಸಂರಚನೆಯನ್ನು ಹೊಂದಿದೆ, ಹಾಗೂ 64 ಆರ್ಥಿಕ ಆಸನಕ್ಕೆ (Economy Seats) ಒಳಗೊಂಡಿದೆ. ಈ ಮೂಲಕ ಪ್ರಯಾಣಿಕರಿಗೆ ವಿಶಾಲವಾದ ಆಸನಗಳು, ಊಟದ ವ್ಯವಸ್ಥೆ, ಆದ್ಯತೆಯ ಪ್ರವೇಶ ಮತ್ತು ಬ್ಯಾಗೇಜ್ ನಿರ್ವಹಣೆ ಸೇರಿದಂತೆ ಉತ್ತಮ ವಿಮಾನ ಯಾನ ಸೌಲಭ್ಯ ನೀಡುವ ಯೋಜನೆ ಮಾಡಲಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.