ಆಗುಂಬೆಯಲ್ಲಿರುವ ಕಾಳಿಂಗನ ಆಪ್ತ ಗೆಳೆಯ ಗೌರಿಶಂಕರ್: ಆಗುಂಬೆ, ಕಾಳಿಂಗ ಸರ್ಪದ ಕುರಿತು ತಿಳಿಯುವ ಆಸಕ್ತಿ ಇದ್ದರೆ ಕಾಳಿಂಗ ಮನೆಗೆ ಹೋಗಿ ಬನ್ನಿ

ಜೀವನವನ್ನೇ ಕಾಡುಗಳಿಗೆ ಅರ್ಪಿಸಿಕೊಂಡ ಕೆಲವೇ ಕೆಲವು ಜೀವಗಳು ನಮಗೆ ಸಿಗುತ್ತವೆ. ಅಂಥಾ ಒಂದು ಅಪರೂಪದ ವ್ಯಕ್ತಿ ಗೌರಿಶಂಕರ್. ಹಾವುಗಳ ಒಳಿತಿಗಾಗಿ ಕೆಲಸ ಮಾಡುವ, ಕಾಳಿಂಗ ಸರ್ಪದ ಕುರಿತು ಸಿಕ್ಕಾಪಟ್ಟೆ ತಿಳಿದುಕೊಂಡಿರುವ, ಕಾಡನ್ನೂ ಪ್ರೀತಿಸುವ ಅದ್ಭುತ ವ್ಯಕ್ತಿ ಗೌರಿಶಂಕರ್ ಮತ್ತು ಅವರ ಕನಸಿನ ಕಾಳಿಂಗ ಮನೆಯ ಕುರಿತ ಕುತೂಹಲಕರ ಬರಹ.
- ಸಿಂಧೂ ಪ್ರದೀಪ್
ವಿಶ್ವದ ಅತೀ ದೊಡ್ಡ ವಿಷಪೂರಿತ ಹಾವು ಯಾವುದು ಗೊತ್ತಾ? ಅದೇ ಕಾಳಿಂಗ ಸರ್ಪ.(King Cobra) ಅಬ್ಬಾ ಈ ಹೆಸರು ಕೇಳಿದ್ದು ಮೈಯೆಲ್ಲಾ ಜುಮ್ ಅನ್ನಿಸುತ್ತದೇ ಅಲ್ಲವೇ.
ಕಾಳಿಂಗನ ನೆಲೆವೀಡು, ಕಾಳಿಂಗನ ಅರಮನೆ, ಕಾಳಿಂಗನ ರಾಜಧಾನಿ ಎಂದೆಲ್ಲಾ ಕರೆಸಿಕೊಳ್ಳುವ ಸ್ಥಳವೇ ನಮ್ಮ ರಾಜ್ಯದ ಶಿವಮೊಗ್ಗ(Shimoga) ಜಿಲ್ಲೆಯಲ್ಲಿರುವ ದಕ್ಷಿಣದ ಚಿರಾಪುಂಜಿ ಆಗುಂಬೆ.(Agumbe)

ಮಲೆನಾಡು ಹಾಗೂ ಕರಾವಳಿಯ ಮಧ್ಯ ಸಂಪರ್ಕ ಕಲ್ಪಿಸುವ ಘಾಟಿ ರಸ್ತೆಗಳು, ಮಳೆಯನ್ನು ತನ್ನೆಡೆಗೆ ಹಿಡಿದಿಟ್ಟುಕೊಳ್ಳುವ ಶಕ್ತಿ ಇರುವ ದಟ್ಟವಾದ ನಿತ್ಯಹರಿದ್ವರ್ಣ ಮಳೆಕಾಡುಗಳು, ಪಶ್ಚಿಮ ಘಟ್ಟಗಳ ಸಾಲು ಹಾಗೂ ಸೂರ್ಯಾಸ್ತಮಾನಕ್ಕೆ ಹೆಸರುವಾಸಿಯಾಗಿರುವ ಈ ಆಗುಂಬೆ ಸಾಕಷ್ಟು ಅಪರೂಪದ ಪ್ರಭೇದದ ಪ್ರಾಣಿ ಪಕ್ಷಿಗಳ ಆಲಯವು ಆಗಿದೆ.
ಈ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಯಥೇಚ್ಛವಾಗಿ ಸಿಗುವ ಒಂದು ಉರಗ ಪ್ರಭೇದವೇ ಕಾಳಿಂಗ ಸರ್ಪ, ಅತ್ಯಂತ ವಿಷಕಾರಿಯಾದ ಈ ಹಾವು ಕಡಿದರೆ ಔಷಧಿ ಇಲ್ಲ. ವಿಷ ದೇಹವನ್ನು ಸೇರಿರುವ ತೀವ್ರತೆಗೆ ಅನುಗುಣವಾಗಿ ಇಪ್ಪತ್ತರಿಂದ ನಲವತ್ತು ನಿಮಿಷದ ಒಳಗೆ ವ್ಯಕ್ತಿಯು ಪ್ರಾಣ ಕಳೆದುಕೊಳ್ಳುತ್ತಾನೆ. ಇದರ ಕಡಿತದಿಂದ ಒಂದು ದೊಡ್ಡ ಆನೆ ಕೂಡ ಕೆಲವೇ ಗಂಟೆಗಳಲ್ಲಿ ತನ್ನ ಪ್ರಾಣ ಕಳೆದುಕೊಳ್ಳುತ್ತದೆ ಎಂದರೆ ಇದು ಎಷ್ಟು ಭಯಾನಕ ಎಂದು ಊಹಿಸಿಕೊಳ್ಳಬಹುದು.

ಇಲ್ಲಿ ಒಬ್ಬ ವ್ಯಕ್ತಿ ಈ ಕಾಳಿಂಗ ಸರ್ಪಗಳೊಂದಿಗೆ ಸುಮಾರು 20 ವರ್ಷಗಳಿಂದ ಒಡನಾಟ ಹೊಂದಿದ್ದಾರೆ ಎಂದರೆ ನಂಬುತ್ತೀರಾ? ನಂಬಬೇಕು. ಅವರೇ ಪಿ ಗೌರಿ ಶಂಕರ್.
ಹಾವುಗಳ ಒಡನಾಟ
ಮೂಲತಃ ಬೆಂಗಳೂರಿನವರಾದ ಇವರು ಒಬ್ಬ ಸರಿಸೃಪ ವಿಜ್ಞಾನಿ, ವನ್ಯಜೀವಿ ಜೀವಶಾಸ್ತ್ರಜ್ಞ, ಕಾಳಿಂಗ ಸರ್ಪ ತಜ್ಞ. ಚಿಕ್ಕದರಿಂದಲೂ ಪ್ರಾಣಿ ಪ್ರೇಮಿಯಾಗಿದ್ದರು. ಆದರೆ ಇವರನ್ನು ತೀವ್ರವಾಗಿ ಆಕರ್ಷಿಸಿದ್ದು ಈ ಹಾವುಗಳು. ತಾವು ಒಂಭತ್ತನೇ ತರಗತಿಯಲ್ಲಿ ಇರಬೇಕಾದರೆ ಒಂದು ಪಟ್ಟೆಬೆನ್ನೇಣು ಹಾವನ್ನು(Buff-stripped Keelback) ಹಿಡಿದು ರಕ್ಷಿಸಿದರು ಇಲ್ಲಿಂದಲೇ ಇವರಿಗೆ ಶುರುವಾಗಿದ್ದು ಹಾವುಗಳ ಆಸಕ್ತಿ.
ಹಾವುಗಳೊಂದಿಗೆ ಒಡನಾಟ ಬೆಳೆಸಿಕೊಂಡ ಇವರು ಆಕರ್ಷಿತರಾಗಿದ್ದು ಈ ಕಾಳಿಂಗನ ಕಡೆಗೆ. ಅವುಗಳ ಬಗ್ಗೆ ಅಧ್ಯಯನ ಪ್ರಾರಂಭಿಸಿದರು, ಸ್ವೀಡನ್ ನ ಉಪ್ಸಲಾ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ವಿದ್ಯಾರ್ಥಿಯಾಗಿ (PhD Exchange Student) ಅಧ್ಯಯನ ನಡೆಸಿದ್ದಾರೆ.

ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್ & ಸೆಂಟರ್ ಫಾರ್ ಹರ್ಪಿಟಾಲಜಿ(The Madras Crocodile Bank Trust & Centre for Herpetology) ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಅಲ್ಲೂ ಕೂಡ ಹಲವು ವಿಷಯಗಳನ್ನು ತಿಳಿದುಕೊಂಡರು, ನಂತರ ತಮ್ಮ ಪತ್ನಿ ಶರ್ಮಿಳಾ ಅವರೊಂದಿಗೆ 2012 ರಲ್ಲಿ ಆಗುಂಬೆಯಲ್ಲಿ ಕಾಳಿಂಗ ಮನೆ (Kalinga Centre for Rainforest Ecology) ಅನ್ನು ಸ್ಥಾಪಿಸಿ ಇನ್ನಷ್ಟು ಸಂಶೋಧನೆಯಲ್ಲಿ ತೊಡಗಿದ್ದಾರೆ.
ಇದುವರೆಗೂ ಸುಮಾರು 350ಕ್ಕೂ ಹೆಚ್ಚು ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿಸಿದ್ದಾರೆ. 50ಕ್ಕೂ ಹೆಚ್ಚು ಕಾಳಿಂಗ ಸರ್ಪಗಳ ಗೂಡುಗಳನ್ನು ರಕ್ಷಣೆ ಮಾಡಿದ್ದಾರೆ. ಎಷ್ಟು ಕಲಿತರೂ ಸಾಲದು ಎಂಬಂತೆ ಈಗ ಉತ್ತರ ಒರಿಸ್ಸಾದ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಅಂತಿಮ ವರ್ಷದ ಅಧ್ಯಯನ ಹಾಗೂ ಸಂಶೋಧನೆಗಳು ನಡೆಸುತ್ತಿದ್ದಾರೆ.

15 ದೇಶ ಸುತ್ತಿದ ಪ್ರವಾಸ ಪ್ರೇಮಿ
ಇದನ್ನೆಲ್ಲಾ ಹೊರತುಪಡಿಸಿ ನಿಮಗೆ ಪ್ರವಾಸ ಎಂದರೆ ಇಷ್ಟವೇ ಎಂದು ಕೇಳಿದರೆ ಭಯಂಕರ ಇಷ್ಟ ಎಂದು ನಗುತ್ತಲೇ ಉತ್ತರಿಸುತ್ತಾರೆ. ಕುಟುಂಬದ ಜೊತೆ ಹಾಗು ವೃತ್ತಿ ನಿಮಿತ್ತವಾಗಿ ಹಲವಾರು ಕಡೆ ಪ್ರವಾಸ ಕೈಗೊಳ್ಳುವ ಇವರು ಇದುವರೆಗೂ ಸುಮಾರು 10ರಿಂದ 14 ದೇಶಗಳನ್ನು ಸುತ್ತಿದ್ದಾರೆ. ಅದರಲ್ಲಿ ಬಹು ಮುಖ್ಯ ಪಾಲು ಈ ಕಾಳಿಂಗ ಹಾಗೂ ದಟ್ಟ ಕಾಡುಗಳಿಗೆ ಸೇರುತ್ತದೆ.
ಇವರು ತಮ್ಮ ಥಾಯ್ ಲ್ಯಾಂಡ್ ನ ಅನುಭವವನ್ನು ನಮ್ಮೊಂದಿಗೆ ವಿವರಿಸಿದ ರೀತಿ ಬಹಳ ರೋಚಕ.
ವನ್ಯಜೀವಿ ಸಂಶೋಧಕರು ಅಪರೂಪದ ಜೀವಿಗಳು ಹಾಗೂ ವನ್ಯಜೀವಿಗಳ ಅಧ್ಯಯನ ಮಾಡಲು ರೇಡಿಯೋ ಟೆಲಿಮೆಟ್ರಿ (Radio Telemetry)ಎಂಬ ಉಪಕರಣವನ್ನು ಬಳಸುತ್ತಾರೆ. ರೇಡಿಯೋ ಸಂಕೇತಗಳನ್ನು ಬಳಸಿ ಪ್ರಾಣಿ ಪಕ್ಷಿಗಳ ಚಲನವಲನದ ಬಗ್ಗೆ ತಿಳಿದುಕೊಳ್ಳುತ್ತಾರೆ. ಇವರು ಥೈಲ್ಯಾಂಡ್ ಗೆ(Thailand) ಹೋದಾಗ ಇವರ ಸ್ನೇಹಿತರ ಗುಂಪೊಂದು ಇದೇ ರೀತಿ ಅಧ್ಯಯನ ನಡೆಸಬೇಕಾದ ಒಂದು ಕಾಳಿಂಗ ಸರ್ಪವನ್ನು ಹಿಡಿಯಬೇಕಾದಾಗ ಸಂದರ್ಭ ಬರುತ್ತದೆ.

ಅದೂ ಕೂಡ ಥೈಲ್ಯಾಂಡ್ ನ ನಖೋನ್ ರಾಟ್ಚಾಸಿಮಾ (Nakhon Ratchasima) ಬಳಿ ಇರುವ ಸಕಾಯಿರಟ್ ಬಯೋಸ್ಫಿಯರ್ ರಿಸರ್ವ್(Sakaerat Biosphere Reserve) ಅರಣ್ಯದಲ್ಲಿ.
ನೀವು ಇದನ್ನು ಇಷ್ಟಪಡಬಹುದು: ಟೆಕ್ಕಿಯಾಗಿದ್ದ ಹುಡುಗ ಈಗ ವೈಲ್ಡ್ ಲೈಫ್ ಫೋಟೋಗ್ರಾಫರ್: ಮೂಡಿಗೆರೆಯ ಸುನೀಲ್ ಸಚಿಯವರ ಕುತೂಹಲಕರ ಕತೆ
ಮರದ ಮೇಲೆ ಕಾಳಿಂಗ
ಅರಣ್ಯವೆಂದರೆ ಅಂತಿಂಥಾ ಅರಣ್ಯವಲ್ಲ. ಸಾಮಾನ್ಯ ಜನರು ನಡೆಯಲು ಅಸಾಧ್ಯವಾದ ದಟ್ಟ ಕಾಡುಗಳು, ಆಕಾಶದೆತ್ತರಕ್ಕೆ ನಿಂತ ಮರಗಳು, ಕೆಳಗಡೆ ನಡೆಯಲು ತಡಕಾಡುವಂತೆ ಇದ್ದ ಸಣ್ಣ ಸಣ್ಣ ಪೊದೆಗಳು, 3 – 4 ಅಡಿ ಇರುವ ಬಂಡೆ ಕಲ್ಲುಗಳು. ಅದರ ಮೇಲೆ ಹಸಿರು ಹಾಸಿದಂತೆ ಇರುವ ಹುಲ್ಲುಗಳು. ಇದೇ ಇವರಿಗೆ ಸವಾಲಾಗಿದ್ದು.
ನೋಡಲು ಹುಲ್ಲುಗಾವಲಿನಂತೆ ಭಾಸವಾಗುವ ಹಸಿರ ಹಾಸಿಗೆಯ ಒಳಗೆ ದೊಡ್ಡ ಬಂಡೆಗಳು ಸ್ವಲ್ಪ ಯಾಮಾರಿದರೂ ಕೈ ಕಾಲು ಮುರಿದುಕೊಳ್ಳುವ ಸಾಧ್ಯತೆ ಹೆಚ್ಚು.

ಇದರ ಜೊತೆಗೆ ಆ ಪ್ರದೇಶದಲ್ಲಿ ಯಥೇಚ್ಛವಾಗಿ ಓಡಾಡುವ ವಿಷವನ್ನು ಉಗುಳುವ ಹಾವು (Spiting Cobra), ಅಪ್ಪಟೆ ಹಾವು, ಇನ್ನು ಹಲವು ಸರಿಸೃಪಗಳ ಮಧ್ಯ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾ ಸಾಗಬೇಕಿತ್ತು.
ಸಮಯ ಕಳೆಯುತ್ತಿತ್ತು ಕತ್ತಲಾಗುವ ಮೊದಲು ಕಾಳಿಂಗ ಸರ್ಪದ ಜಾಗವನ್ನು ಹುಡುಕಬೇಕಿತ್ತು. ಆ ಸ್ಥಳ ತಿಳಿದಿದ್ದೇ ತಡ ಹೆಜ್ಜೆ ಇಡಲು ಕಷ್ಟವಾಗುತ್ತಿದ್ದ ಸ್ಥಳದಲ್ಲಿ ಒಂದೇ ಸಮನೇ ಓಡಲಾರಂಭಿಸಿದರು. ನಿರ್ದಿಷ್ಟ ಸ್ಥಳವನ್ನು ತಲುಪಿದಾಗ ಅವರಿಗೆ ಕಣ್ಣಿಗೆ ಕಾಣಿಸಿದ್ದು 30 ರಿಂದ 40 ಅಡಿ ಎತ್ತರದ ಮರ, ಆ ಮರದ ಮೇಲೆ ಇದ್ದ ಭಯಾನಕ ವಿಷಪೂರಿತ ಕಾಳಿಂಗಸರ್ಪ.
ಗುಂಪಿನಲ್ಲಿದ್ದ ಒಬ್ಬರು ಮರವನ್ನು ಹತ್ತಿ ಹಾವು ಇದ್ದ ಕೊಂಬೆಯನ್ನು ಕಡಿದು ಬೀಳಿಸಿದರು. ಬಿದ್ದ ರಭಸಕ್ಕೆ ಹಾವು ಹುಲ್ಲುಗಾವಲಿನಂತೆ ಇದ್ದ ಪ್ರದೇಶದೊಳಗೆ ನುಸುಳಿ ಹೋಗಲಾರಂಬಿಸಿತು ತಕ್ಷಣವೇ ಎಚ್ಚೆತ್ತುಕೊಂಡ ಗೌರಿಶಂಕರ್ ಹಾವಿನ ಬಾಲ ಹಿಡಿದು ಎಳೆದರು. ಶ್ರಮಪಟ್ಟು ಸ್ವಲ್ಪ ಹೊತ್ತಿನಲ್ಲೇ ತಾವು ಕೈಗೊಂಡ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದರು.

ಬಿಬಿಸಿಯಲ್ಲೂ ಗೌರಿಶಂಕರ್
ಆಗಾಗ ಈ ರೀತಿ ರೋಚಕತೆ ಇದ್ದರೇನೇ “ಲೈಫ್ ಇಂಟರೆಸ್ಟಿಂಗ್ ಅದರ್ ವೈಸ್ ಬೋರಿಂಗ್ “ಎಂದು ಹೇಳುವ ಇವರು ಥೈಲ್ಯಾಂಡ್ ನಲ್ಲಿ ತಮಗೆ ಆದ ಅನುಭವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ನನಗಂತೂ ಈ ಕಥೆ ಕೇಳಿ ನಾನೇ ಒಂದು ಸುತ್ತು ಥೈಲ್ಯಾಂಡ್ ನ ಕಾಡಿನಲ್ಲಿ ಓಡಾಡಿ ಬಂದಂತೆ ಅನ್ನಿಸಿತು.
ಗೌರಿಶಂಕರ್ ಅವರು ಪ್ರಪಂಚದಾದ್ಯಂತ ಹಾವುಗಳ ರಕ್ಷಣೆ ಹಾಗೂ ಅವುಗಳ ನಿರ್ವಹಣೆಗಳ ಬಗ್ಗೆ ಸಾಕಷ್ಟು ಜನರಿಗೆ ತರಬೇತಿ ಕೊಡುತ್ತಿದ್ದಾರೆ, ಸಾಕಷ್ಟು ಕಾರ್ಯಾಗಾರವನ್ನೂ ಸಹ ನಡೆಸಿದ್ದಾರೆ. ಇದಲ್ಲದೇ ನಾವು ಮನೆಯಲ್ಲೇ ಕೂತು ವಿಶ್ವದ ನಾನಾ ಭಾಗದ ಬಗ್ಗೆ ತಿಳಿದುಕೊಳ್ಳುಕವ ಡಿಸ್ಕವರಿ, ನ್ಯಾಟ್ ಜಿಯೋ, ಅನಿಮಲ್ ಪ್ಲ್ಯಾನೆಟ್ ಹಾಗೂ ಬಿಬಿಸಿ ಯಂತಹಾ ಹಲವು ಚಾನೆಲ್ ಗಳಲ್ಲಿ ಇವರ ಕಾರ್ಯವೈಖರಿ ಪ್ರಸಾರವಾಗಿದೆ.

ಕಾಳಿಂಗ ನನ್ನ ಜೀವ ಎಂದು ಹೇಳುವ ಗೌರಿಶಂಕರ್ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ.
- ಮೊದಲು ಹಾವು ಎಂದರೆ ಭಯ ಪಡುವುದು ಬಿಡಬೇಕು. ಎಲ್ಲವೂ ವಿಷಪೂರಿತ ಹಾವಾಗಿರುವಿದಿಲ್ಲ.
ಅದರ ಕಾರ್ಯವೈಖರಿ ತಿಳಿದುಕೊಂಡರೆ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ.
- ಹಲವು ಮೂಢನಂಬಿಕೆಗಳಿಗೆ ಮಾರುಹೋಗದೆ ನಿಜ ಸಂಗತಿ ಏನೆಂದು ತಿಳಿದುಕೊಳ್ಳಬೇಕು. ಉದಾಹರಣೆಗೆ ಹಾವುಗಳು ಹಾಲು ಕುಡಿಯುವುದಿಲ್ಲ ಹಾಗೆಯೇ ಹಾವುಗಳು ಹಗೆ ಸಾಧಿಸುವುದಿಲ್ಲ.
- ಹಾವುಗಳು ಕೂಡ ನಮ್ಮಂತೆಯೇ ಒಂದು ಜೀವಿ. ಕಂಡಕೂಡಲೇ ಹೊಡೆಯುವುದನ್ನು ಬಿಟ್ಟು ತಮ್ಮ ಸ್ಥಳದ ಸಮೀಪ ಇರುವ ಪರಿಣಿತ ಉರಗ ತಜ್ಞರನ್ನು ಅಥವಾ ಅರಣ್ಯ ಇಲಾಖೆಯನ್ನು ಸಂಪರ್ಕಿಸಬಹುದು.
- ಅಭ್ಯಾಸ ಇಲ್ಲದೇ ಯಾವುದೇ ಹಾವು ಹಿಡಿಯುವ ದುಸ್ಸಾಹಸಕ್ಕೆ ಕೈ ಹಾಕಬೇಡಿ. ನೀವೂ ಬದುಕಿ. ಹಾವುಗಳನ್ನು ಬದುಕಲುಬಿಡಿ.

ಈ ಕಥೆಯನ್ನು ಕೇಳಿ ನಿಮಗೂ ಕೂಡ ಹಾವುಗಳ ಬಗ್ಗೆ ಇನ್ನೂ ಹಲವು ರೋಚಕ ಸಂಗತಿಗಳನ್ನು ತಿಳಿದುಕೊಳ್ಳಬೇಕು ಅನ್ನಿಸಿದ್ದರೆ, ಗೌರಿಶಂಕರ್ ಅವರ ಕನಸಿನ ಕೂಸು ಈ ಕಾಳಿಂಗ ಮನೆ ನಿಮಗಾಗಿ ತೆರೆದಿರುತ್ತದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ