ವಿಂಗಡಿಸದ

ಪ್ರವಾಸ ಮತ್ತು ಪುಸ್ತಕ ಪ್ರೀತಿ ಹೆಚ್ಚಿಸುವ ನನ್ನಿಷ್ಟದ ಪುಸ್ತಕಗಳು

#ಪುಸ್ತಕ ದಿನದ ವಿಶೇಷ 

ಇಂದು ವಿಶ್ವ ಪುಸ್ತಕ ದಿನ. ಪುಸ್ತಕಗಳಿಗೂ ಪ್ರವಾಸಕ್ಕೂ ಅವಿನಾಭಾವ ಸಂಬಂಧ. ಪುಸ್ತಕ ಓದಿಯೇ ಯಾವುದೋ ಊರಿನಲ್ಲಿ ತಿರುಗಾಡಿ ಬಂದ ಅನುಭವ ಪಡೆಯಬಹುದು. ಇನ್ನು ಕೆಲವು ಪುಸ್ತಕಗಳು ಓದಿದ ಕೂಡಲೇ ಆ ಊರಿಗೆ ಹೋಗುವ ಆಸೆ ಸ್ಫುರಿಸಬಹುದು. ಅಂಥಾ ಕೆಲವು ಪುಸ್ತಕಗಳ ಪರಿಚಯ ಇಲ್ಲಿದೆ. ವಿಶ್ವ ಪುಸ್ತಕ ದಿನದ ಶುಭಾಶಯಗಳು. 

-ಸುಜಯ್. ಪಿ.

‘ಪ್ರಯಾಣ ಮತ್ತು ಪುಸ್ತಕವಿಲ್ಲದ ಬದುಕು ವಿರಹದ ಅನುಭವವಿಲ್ಲದ ಸುಧೀರ್ಘ ಜೀವನದಂತೆ.’

ಜೋಗಿಯವರ ಪುಸ್ತಕವೊಂದರಲ್ಲಿ ಕಂಡ ಈ ಸಾಲುಗಳು ತುಂಬಾ ನಿಜವಾದದ್ದು. ವಿರಹ ಅಂದರೆ ಅಗಲಿಕೆಯನ್ನು ಇಲ್ಲಿ ಹೋಲಿಸಿರುವುದಕ್ಕೆ ಕಾರಣ ಒಂದು ಸಮಯದಲ್ಲಿ ಜೊತೆಯಾಗಿದ್ದವರು ಮಾತ್ರ ವಿರಹ ಅನುಭವಿಸಲು ಸಾಧ್ಯ ಎಂಬುದು ಇರಬಹುದು, ಇರಲಿ ಬಿಡಿ.

ಪುಸ್ತಕ ಮತ್ತು ಪ್ರಯಾಣಗಳು ಹಾಗೆಯೇ ಕೆಲವೊಮ್ಮೆ ಮೂಟೆಗಟ್ಟಲೆ ಖುಷಿ ಕೊಡಬಹುದು ಇನ್ನು ಕೆಲವೊಮ್ಮೆ ತೀರಾ ಭಾವುಕರನ್ನಾಗಿಸಿಬಿಡಬಹುದು. 

ಪ್ರಯಾಣ ಮತ್ತು ಪುಸ್ತಕ ಒಂದಕ್ಕೊಂದು ತೀರಾ ಹತ್ತಿರವಾಗಿರುವ ಸಂಗತಿಗಳು. ‘ದೇಶ ಸುತ್ತಿ ನೋಡು ಕೋಶ ಓದಿ ನೋಡು’ ಎಂಬ ಮಾತು ಬೇರೆ ಇದೆಯಲ್ವ. “ಪುಸ್ತಕಕ್ಕಿಂತ ಪ್ರಾಮಾಣಿಕ ಗೆಳೆಯ ಮತ್ತೊಬ್ಬನಿಲ್ಲ”. ಇದು ಪ್ರಸಿದ್ಧ ಕಾದಂಬರಿಕಾರ ಅರ್ನೆಸ್ಟ್ ಹೆಮಿಂಗ್ವೇಯ ಮಾತುಗಳು. 

ಹೀಗೆ ಪುಸ್ತಕ ಮತ್ತು ಪ್ರಯಾಣ ಈ ಎರಡೂ ಸಂಗತಿಗಳು ಒಂದಾದರೆ ಅಲ್ಲಿ ರುಚಿಕಟ್ಟಾದ ಭಕ್ಷ್ಯವೊಂದು ರೆಡಿಯಾಯಿತು ಎಂದೇ ಅರ್ಥ.

ಇಂದು ವಿಶ್ವ ಪುಸ್ತಕ ದಿನ.(world book day) (ಎಪ್ರಿಲ್ ೨೩) 

ಎಷ್ಟೋ ಬಾರಿ ಪಯಣ ಮತ್ತು ಪ್ರವಾಸಗಳೇ ಹಲವಾರು ಕಥೆಗಳ ಹುಟ್ಟಿಗೆ ಕಾರಣವಾಗಿರುತ್ತದೆ. ಪ್ರತಿಯೊಂದು ಕಥೆಯಲ್ಲೂ ಕೂಡ ಪಯಣದ ನೆನಪು ಇದ್ದೇ ಇರುತ್ತದೆ. ಪ್ರವಾಸ ಕಥನಗಳು ಅತ್ಯುತ್ತಮ ಕೃತಿಗಳಾದ ಹಲವಾರು ಉದಾಹರಣೆಗಳಿವೆ. ಅಂತಹ ಪ್ರವಾಸವೇ ವಿಷಯವಾಗಿರುವ ಕೆಲವೊಂದು ಪುಸ್ತಕಗಳ ಬಗ್ಗೆ ಸ್ವಲ್ಪ ಮಾತಾಡೋಣ. 

ಕರ್ವಾಲೋ, ಮಹಾಪಲಾಯನ, ಪ್ಯಾಪಿಲಾನ್ ೧ ೨ ೩, ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ 

  • ಪೂರ್ಣಚಂದ್ರ ತೇಜಸ್ವಿ

ಕನ್ನಡ ಸಾಹಿತ್ಯ ಲೋಕಕ್ಕೆ ತೇಜಸ್ವಿಯವರ ಕೊಡುಗೆ ಅಪಾರ. ಅವರ ಪುಸ್ತಕ ಓದದೇ ಇರುವ ಕನ್ನಡ ಓದುಗರು ತೀರಾ ಅಪರೂಪವೆಂದೇ ಹೇಳಬಹುದು.

ತೇಜಸ್ವಿಯವರ ಕೃತಿಗಳಲ್ಲಿ ಮುಖ್ಯವಾಗಿ ಬರುವುದೇ ಕರ್ವಾಲೋ. ಭಾರತದ ಮಾತ್ರವಲ್ಲದೆ ಪ್ರಪಂಚದ ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿಯು ವಿಜ್ಞಾನಿ ಕರ್ವಾಲೋ, ಮಂದಣ್ಣ, ಪ್ರಭಾಕರ ಇವರೆಲ್ಲರ ಕಾಡಿನೊಳಗಿನ ಹಾರುವ ಓತಿಯ ಹುಡುಕಾಟದ, ಪಯಣದ ಕಥೆಯೇ ಆಗಿದೆ.  

Poornachandra Tejaswi ಪೂರ್ಣಚಂದ್ರ ತೇಜಸ್ವಿ

ಇನ್ನು ಮಹಾ ಪಲಾಯನ, ಪ್ಯಾಪಿಲಾನ್ ಸರಣಿಗಳು ತೇಜಸ್ವಿಯವರ ಅತ್ಯುತ್ತಮ ಅನುವಾದಿತ ಕೃತಿಗಳು. ಸೈಬೀರಿಯಾದ ಶತ್ರು ಶಿಬಿರದಿಂದ ತಪ್ಪಿಸಿಕೊಂಡು ಬರುವ ನಿರಪರಾಧಿಗಳ ಕಥೆ. ಸುಮಾರು ನಾಲ್ಕು ಸಾವಿರ ಮೈಲಿ ನಡೆದು ಭಾರತ ತಲುಪಿದ ಅದ್ಭುತ ಪಯಣದ ಕಥೆ. 

ನೀವು ಇದನ್ನು ಇಷ್ಟಪಡಬಹುದು: ನೀವು ವಿದೇಶಕ್ಕೆ ಹೋದಾಗ ಈ ಊರಿನ ಹೆಸರು ನೋಡಿ ಬೆರಗಾಗಬೇಡಿ: ನಮ್ಮ ದೇಶದ ಊರಿನ ಹೆಸರನ್ನೇ ಹೊಂದಿರುವ ವಿದೇಶದ 13 ಊರುಗಳು

ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ ಪುಸ್ತಕದಲ್ಲಿ ತೇಜಸ್ವಿ ತಮ್ಮ ಅಂಡಮಾನ್ ಪ್ರವಾಸವನ್ನು ಒಂದು ಕಾದಂಬರಿಯಷ್ಟೇ ರಸವತ್ತಾಗಿ ಬರೆದಿದ್ದಾರೆ. ನೈಲ್ ನದಿಯ ಬಗೆಗಿನ ಸವಿಸ್ತಾರವಾದ ಮಾಹಿತಿಯೂ ಇದರಲ್ಲಿದೆ.

ದಾರಿ ತಪ್ಪಿಸು ದೇವರೆ, ನಾನು ಸನ್ಯಾಸಿಯಾಗಲು ಹೊರಟಿದ್ದೆ 

  • ಮಂಜುನಾಥ್ ಕಾಮತ್

ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿರುವ ಮಂಜುನಾಥ್ ಕಾಮತರು ತಮ್ಮ ಬರಹಗಳಿಗೆ, ಪ್ರವಾಸಗಳಿಗೆ ಹೆಸರುವಾಸಿ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಇವರ ‘ದಾರಿ ತಪ್ಪಿಸು ದೇವರೇ’ ಮತ್ತು ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ ಪುಸ್ತಕಗಳು ಜೀವನೋತ್ಸಾಹದ ಬುಗ್ಗೆಗಳಂತಿವೆ. ಅವರು ತನ್ನ ಬುಲೆಟ್ ಮತ್ತು ರೈಲನ್ನೇರಿ ಹೊರಟ ಹಲವು ಪ್ರವಾಸದ ನೆನಪುಗಳನ್ನು ತುಂಬಾನೇ ರಸವತ್ತಾಗಿ ಈ ಪುಸ್ತಕಗಳಲ್ಲಿ ವಿವರಿಸಿದ್ದಾರೆ. ನಾನು ಇವರ ಪುಸ್ತಕ ಓದಿದ ಮರುದಿನವೇ ಎರಡು ದಿನಗಳ ರಜೆ ಹಾಕಿ ಮೈಸೂರಿನಿಂದ ಒಬ್ಬನೇ ಹಂಪಿಯ ರೈಲು ಹತ್ತಿದ್ದೆ.

ವಿಶ್ವ ದರ್ಶನ: ಬಜೆಟ್’ನಲ್ಲಿ 

  • ಶ್ರೀನಿಧಿ ಹಂದೆ

ವಿಶ್ವ ದರ್ಶನ: ಬಜೆಟ್’ನಲ್ಲಿ ಎಂಬ ಶೀರ್ಷಿಕೆಯಡಿಯಲ್ಲಿ ಬರೆದಿರುವ ಈ ಪುಸ್ತಕ ವಿದೇಶ ಪ್ರಯಾಣದ ಖರ್ಚು ಕಡಿಮೆಗೊಳಿಸಲು ಓದುಗರಿಗೆ ನೆರವಾಗಲಿದೆ. ಕಡಿಮೆ ದರದ ವಿಮಾನ ಟಿಕೆಟ್ ಪಡೆಯುವುದು ಹೇಗೆ, ವೀಸಾ, ವಸತಿ, ಊಟ,(ಸಸ್ಯಾಹಾರಿ), ಸ್ಥಳೀಯ ಸುತ್ತಾಟ, ಸಂಭವನೀಯ ತಪ್ಪುಗಳು ಮತ್ತು ಅವುಗಳಿಂದ ರಕ್ಷಿಸಿಕೊಳ್ಳುವುದು, ಸುರಕ್ಷತಾ ಮುನ್ನೆಚ್ಚರಿಕೆ ಮತ್ತಿತರ ಅಂಶಗಳನ್ನು ವಿವರವಾಗಿ ತಿಳಿಸಿಕೊಡಲಾಗಿದೆ. ಟ್ರಾವೆಲ್ ಏಜೆಂಟರ ಪ್ಯಾಕೇಜ್ ಟೂರ್’ಗೆ ಲಕ್ಷಾಂತರ ಸುರಿಯುವ ಬದಲು ಅತಿ ಕಡಿಮೆ ಖರ್ಚಿನಲ್ಲಿ ನಾವೇ ಉತ್ತಮ ವಿದೇಶ ಪ್ರವಾಸ ಆಯೋಜಿಸಲು ಈ ಪುಸ್ತಕ ನೆರವಾಗುತ್ತದೆ. ಪುಸ್ತಕದಲ್ಲಿ ನೀಡಿದ ಸಲಹೆಗಳನ್ನು ಬಳಸಿ ಪ್ರತಿ ಟ್ರಿಪ್ಪಿನಲ್ಲೂ ಸಾವಿರಾರು ರೂಪಾಯಿ ಉಳಿಸಲು ಸಾಧ್ಯವಿದೆ. ಲೇಖಕರ ಇದುವರೆಗಿನ ೩೯ ದೇಶ ಸುತ್ತಿದ ಅನುಭವದ ಆಧಾರದ ಮೇಲೆ ಪುಸ್ತಕ ಮೂಡಿಬಂದಿದೆ.

ಪೆರುವಿನ ಪವಿತ್ರ ಕಣಿವೆಯಲ್ಲಿ 

  • ನೇಮಿಚಂದ್ರ

ಉತ್ತರ ಅಮೆರಿಕದ ಆಧುನಿಕತೆಯನ್ನ ನೋಡುವ ಬದಲು ದಕ್ಷಿಣ ಅಮೆರಿಕದ ಪರಿಸರವನ್ನು ಕಾಣುವ ಆಸೆಯೊಂದಿಗೆ ಹೊರಟ ಲೇಖಕಿ ನೇಮಿಚಂದ್ರ ಅವರು ಪೆರುವಿನ ಪ್ರವಾಸ ಕಥನವನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಹತ್ತು ಬಾರಿ ಮರುಮುದ್ರಣ ಕಂಡಿರುವ ಈ ಕೃತಿ ಕನ್ನಡದ ಅತ್ಯುತ್ತಮ ಪ್ರವಾಸ ಕಥನಗಳಲ್ಲಿ ಒಂದು. 

ಹಾಯ್ ಅಂಗೋಲಾ 

  • ಪ್ರಸಾದ್ ನಾಯ್ಕ್ 

೨೦೨೦ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕೃತಿ ಬರೆದ ಪ್ರಸಾದ್ ನಾಯ್ಕ್ ಅವರು ಕೆಲಸದ ಮೇಲೆ ಆಫ್ರಿಕಾದ ಅಂಗೋಲಾದಲ್ಲಿ ಇಳಿಯುತ್ತಾರೆ. ಆದರೆ ಅಂಗೋಲದಲ್ಲಿ ಕಳೆದ ದಿನಗಳನ್ನು ಪುಸ್ತಕ ರೂಪದಲ್ಲಿ ಬರೆದು ನಾವದನ್ಮು ಓದಿದಾಗ ಪ್ರಸಾದರು ತೀರಾ ಆ ಮಣ್ಣಿನವರೇನೋ ಅಂತ ಅನಿಸಿಬಿಡುತ್ತದೆ. ದೇಶವೊಂದರ ಪ್ರತಿ ವ್ಯವಸ್ಥೆಯ ಚಿತ್ರಣ ಈ ಪುಸ್ತಕದಲ್ಲಿದೆ.‌ ಅಂಗೋಲದ ಬೀದಿ ಸುತ್ತಬೇಕೆನಿಸಿದರೆ ಪ್ರಸಾದರ ಈ ಪುಸ್ತಕ ಓದಿದರೆ ಸಾಕು. 

ನನ್ನ ಗ್ರಹಿಕೆಯ ಅಮೆರಿಕಾ ಅಮೆರಿಕಾ, ನನ್ನ ಗ್ರಹಿಕೆಯ ನೇಪಾಳ, ನನ್ನ ಗ್ರಹಿಕೆಯ ಸಿಕ್ಕಿಂ, ನನ್ನ ಗ್ರಹಿಕೆಯ ಅಲಸ್ಕಾ 

  • ನಾಗತಿಹಳ್ಳಿ ಚಂದ್ರಶೇಖರ್

ಪಕ್ಕಾ ತಿರುಗಾಡಿಯಾಗಿರುವ ಕನ್ನಡದ ಪ್ರಸಿದ್ಧ ಕಥೆಗಾರ, ಲೇಖಕ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಪ್ರವಾಸ ಕಥನದ ಪುಸ್ತಕಗಳನ್ನು ಓದುವ ಮಜವೇ ಬೇರೆ. ಹಲವಾರು ದೇಶಗಳನ್ನು ಸುತ್ತಿರುವ ಲೇಖಕರು ತಮ್ಮ ಅನುಭವಗಳನ್ನು ತುಂಬಾನೇ ರಸವತ್ತಾಗಿ ಕನ್ನಡದ ಓದುಗರಿಗೆ ಉಣಬಡಿಸುತ್ತಾರೆ. ಇವರ ನನ್ನ ಗ್ರಹಿಕೆಯ ಅಮೇರಿಕಾ ಅಮೆರಿಕಾ ಪುಸ್ತಕ ಕನ್ನಡದ ಯಶಸ್ವಿ ಚಲನಚಿತ್ರವೂ ಆಯಿತು.

Nagathihalli Chandrashekhar ನಾಗತಿಹಳ್ಳಿ ಚಂದ್ರಶೇಖರ್

ಅವರ ನೇಪಾಳ, ಸಿಕ್ಕಿಂ ರಾಜ್ಯಗಳ ಪ್ರವಾಸ ಪುಸ್ತಕಗಳನ್ನು ಓದುತಿದ್ದರೆ ನಾವೂ ಅವರ ಜೊತೆಗೆ ನಡೆಯತಿದ್ದೇವೇನೋ ಎಂದು ಅನಿಸಿಬಿಡುತ್ತದೆ. 

‘ನನ್ನೊಳಗಿನ ಹಾಡು ಕ್ಯೂಬಾ’ 

  • ಜಿ ಎನ್ ಮೋಹನ್

ಈ ಪುಸ್ತಕ ಕನ್ನಡದ ಅತಿ ಜನಪ್ರಿಯ ಪ್ರವಾಸಿ ಪುಸ್ತಕಗಳ ಪಟ್ಟಿಗೆ ಸೇರುತ್ತದೆ. ಈ ಪುಸ್ತಕ ನಾನು ಓದಿಲ್ಲವಾದರೂ ಓದುಗರ ವಲಯದಲ್ಲಿ ಹಲವಾರು ಪ್ರಶಂಸೆಯ ಮಾತುಗಳು ಬರಹಗಳನ್ನು ನೋಡಿದ್ದೇನೆ. ಮುಂದಿನ ಓದಿಗೆ ಇದೇ ಪುಸ್ತಕ ಎಂದು ಈಗಲೇ ಫಿಕ್ಸ್ ಆಗಿದ್ದೇನೆ. 

ಲೇಖಕ ಅರ್ನೆಸ್ಟ್ ಹೆಮಿಂಗ್ವೇಯ ಜನಪ್ರಿಯ ಸಣ್ಣ ಕಾದಂಬರಿ‌‌, ನೋಬೆಲ್ ಪಾರಿತೋಷಕ ಪಡೆದ The Old Man And The Sea ಕೂಡ ಒಂದು ರೀತಿಯಲ್ಲಿ ಪಯಣದ ಕಥೆಯೇ. 

ನಿಜ ಬದುಕಿನಲ್ಲಿ ಕೂಡಾ ಸುಮಾರು ಏಳುಬೀಳುಗಳನ್ನು ಕಂಡಿದ್ದ ಹೆಮಿಂಗ್ವೇ ಬರೆದ ಈ ಪುಸ್ತಕ, ಸಮುದ್ರದಲ್ಲಿ ಗಾಳ ಹಾಕುತ್ತಾ ಮೀನು ಹಿಡಿಯುವ ವೃದ್ಧನ ಕಥೆ.

ಎಂಬತ್ತನಾಲ್ಕು ದಿನ ಸತತವಾಗಿ ಮೀನು ಸಿಗದೇ ಇದ್ದಾಗ ಒಂಟಿಯಾಗಿ ಸಾಗರದ ಮಧ್ಯೆ ಮೀನು ಹಿಡಿಯಲು ಹೋಗುವ ವೃದ್ಧ ಮತ್ತು ಅವನು ಹಿಡಿದ ಮೀನು ದಡ ಸೇರುವುದರೋಳಗೆ ಬೇರೆ ಮೀನುಗಳಿಗೆ ಆಹಾರವಾಗಿ ಅಸ್ಥಿಪಂಜರ ಮಾತ್ರ ಉಳಿದಿರುತ್ತದೆ. ಒಮ್ಮೆಗೆ ವಿಷಾದವಾಗಿ ಇನ್ನೊಮ್ಮೆ ಜೀವನೋತ್ಸಾಹದ ಜಲಪಾತದಂತೆ ಕಾಣುವ ಈ ಕಥೆ, ಗುರಿಯೆಡೆಗೆ ವೃದ್ಧನ ಪಯಣದ ಕಥೆ.

ಇದೇ ಹೆಮಿಂಗ್ವೇ ಹೇಳಿದ ಮಾತು, “ಪುಸ್ತಕಕ್ಕಿಂತ ಪ್ರಾಮಾಣಿಕ ಗೆಳೆಯ ಮತ್ತೊಬ್ಬನಿಲ್ಲ”.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button