ವಿಂಗಡಿಸದ

ದಕ್ಷಿಣ ಭಾರತದ ಅಯೋಧ್ಯೆ ಕನ್ಯಾಡಿ ರಾಮನ ದೇಗುಲ ನೋಡಿ: ರಾಮ ನವಮಿ ವಿಶೇಷ

ಶ್ರೀರಾಮನವಮಿಯ ಈ ಪವಿತ್ರ ದಿನದಂದು ದಕ್ಷಿಣ ಭಾರತದ ಅಯೋಧ್ಯೆ ಎಂದು ಹೆಸರಾಗಿರುವ ಕನ್ಯಾಡಿಯ ಶ್ರೀರಾಮಕ್ಷೇತ್ರದ ಬಗ್ಗೆ ತಿಳಿಯೋಣ.

  • ಸುವರ್ಣಲಕ್ಷ್ಮಿ

ನಾವೆಲ್ಲರೂ ಒಂದಲ್ಲಾ ಒಂದು ಸಲ ದಕ್ಷಿಣ ಕನ್ನಡದಲ್ಲಿರುವ ಧರ್ಮಸ್ಥಳಕ್ಕೆ(Dharmasthala) ಭೇಟಿ ನೀಡಿರುತ್ತೇವೆ. ಅಲ್ಲಿಂದ ಕೇವಲ 4 ಕಿಮೀ ದೂರದಲ್ಲಿರುವ ಶ್ರೀರಾಮ ಕ್ಷೇತ್ರದ ಬಗ್ಗೆ ನಮ್ಮಲ್ಲಿ ಹಲವಾರು ಜನಕ್ಕೆ ತಿಳಿದಿಲ್ಲ. 

Sri Rama Kshetra, Dharmasthala, Karnataka.

ರಾಮನು ವನವಾಸ ಸಂದರ್ಭದಲ್ಲಿ ಇಲ್ಲಿ ಕೆಲ ಕಾಲ ತಂಗಿದ್ದ ಅನ್ನುತ್ತದೆ ಪುರಾಣ. ಹಚ್ಚಹಸುರಿನ ಪ್ರಕೃತಿಯ ನಡುವೆ ಕೆಂಪು ಹಾಗೂ ಬಂಗಾರದ ಬಣ್ಣಗಳಿಂದ ಕಂಗೊಳಿಸುವ ಈ ಶ್ರೀರಾಮಕ್ಷೇತ್ರವನ್ನು ನೋಡುವುದೇ ಒಂದು ಸೊಗಸು. ನಾನು ಇಲ್ಲಿಗೆ ಹಲವಾರು ಸಲ ಭೇಟಿ ನೀಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಯಲ್ಲಿನ ಎಲ್ಲಾ ದೇವಸ್ಥಾನಗಳಂತೆ ಇಲ್ಲಿಯೂ ಉಚಿತ ಊಟದ ಸೌಲಭ್ಯ ಉಂಟು. ಇಲ್ಲಿನ ಪಾಯಸ, ತಿಳಿಸಾರು ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ. 

ನೀವು ಇದನ್ನು ಇಷ್ಟಪಡಬಹುದು: ನಿಮ್ಮ ಗಮನದಲ್ಲಿರಬೇಕಾದ, ಪ್ರಸ್ತುತ ನಿರ್ಮಾಣವಾಗುತ್ತಿರುವ 5 ಬೃಹತ್ ದೇಗುಲಗಳು

1978ರಲ್ಲಿ ನಿರ್ಮಾಣ ಶುರು

ಕೆಲವು ವಿಶೇಷ ಶಕ್ತಿಗಳನ್ನು ಹೊಂದಿದ್ದ ನಿತ್ಯಾನಂದ ಸ್ವಾಮಿ ಅನ್ನುವವರು ಧರ್ಮಸ್ಥಳ ಯಾತ್ರೆಯ ಸಂದರ್ಭದಲ್ಲಿ ರಾಮನು ವನವಾಸ ಕಾಲದಲ್ಲಿ ಸ್ವಲ್ಪ ಕಾಲ ತಂಗಿದ್ದ ಈ ಸ್ಥಳವನ್ನು ಸಂದರ್ಶಿಸಿ ಅಲ್ಲೇ ಒಂದು ದಿನ ತಂಗಿದ್ದರಂತೆ. ಆಗ ಇಲ್ಲಿ ದೇವಾಲಯ ನಿರ್ಮಿಸಲು ರಾಮನ ಪ್ರೇರಣೆ ಆಯಿತೆಂದು ಪ್ರತೀತಿ. ಅವರು ತನ್ನ ಇಚ್ಛೆಯನ್ನು ತನ್ನ ಶಿಷ್ಯರಾದ ಆತ್ಮಾನಂದರಿಗೆ ತಿಳಿಸಿದರು. ಅವರು 1969ರಲ್ಲಿ ಈ ಕ್ಷೇತ್ರಕ್ಕೆ ಬಂದು ಪ್ರಯತ್ನ ಮಾಡಲಾಗಿ 1971ರಲ್ಲಿ ಅಲ್ಲಿನ ಶಾನುಭೋಗರಿಂದ ಈ ಸ್ಥಳ ಬಳುವಳಿಯಾಗಿ ಪಡೆದು, 1978ರಲ್ಲಿ ನಿರ್ಮಾಣ ಪ್ರಾರಂಭವಾಗಿ 2007 ವರವರಿಗೆ ನಿಧಾನಗತಿಯಲ್ಲಿ ಸಾಗಿ 2007ರಲ್ಲಿ ಲೋಕಾರ್ಪಣೆಗೊಂಡಿತು.

Sri Rama Kshetra, Dharmasthala, Karnataka.

ದೇವಾಲಯದ ವಿನ್ಯಾಸ 

ಈ ದೇವಾಲಯವು ಮೂರು ಅಂತಸ್ತಿನದಾಗಿದ್ದು, ದಕ್ಷಿಣ ಭಾರತದ ಹಾಗೂ ಉತ್ತರ ಭಾರತದ ಎರಡೂ ಶೈಲಿಗಳನ್ನು ಬಳಸಿ ಕಟ್ಟಲಾಗಿದೆ. ರಾಜಸ್ಥಾನದ ಉತ್ತಮ ಗ್ರಾನೈಟ್ ಕಲ್ಲುಗಳಿಂದ ಕಟ್ಟಲಾಗಿದ್ದು, ಈ ದೇವಾಲಯಕ್ಕಾಗಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಶಿಲ್ಪಿಗಳು ತಮ್ಮ ಶಿಲ್ಪಕಲೆಯನ್ನು ಮೆರೆದಿದ್ದಾರೆ.

ಗೋಪುರಗಳು ತಮಿಳುನಾಡಿನ(Tamilnadu) ವಾಸ್ತುಶಿಲ್ಪವನ್ನು ಹೋಲುತ್ತದೆ. ಆನೆ ತಲೆಯ ರಚನೆಗಳು ಮನ ಸೆಳೆಯುತ್ತದೆ. ಮೊದಲ ಅಂತಸ್ತಿನಲ್ಲಿ ಭಜನೆ ಮತ್ತು ಸಮಾರಂಭಗಳು ನಡೆಯುತ್ತವೆ. ಎರಡನೇ ಅಂತಸ್ತಿನಲ್ಲಿ 36 ದೇವರ ಗುಡಿಗಳು, ನವದುರ್ಗೆಯರು, ಶಿರಡಿ ಸಾಯಿ, ನವಗ್ರಹಗಳು ನಾರಾಯಣ ಗುರುಗಳು, ದೇವಾಲಯದ ನಿರ್ಮಾಣಕ್ಕೆ ಕಾರಣವಾದ ನಿತ್ಯಾನಂದ ಗುರುಗಳ ದೇವಾಲಯಗಳಿವೆ. ಮೂರನೇ ಅಂತಸ್ತಿನಲ್ಲಿ ಪಟ್ಟಾಭಿರಾಮರ ಗುಡಿ ಇದೆ. ಇದಲ್ಲದೆ ಇಲ್ಲಿ ಎರಡು ಕಲಾತ್ಮಕ  ಭವ್ಯ ರಥಗಳೂ ಮತ್ತು ಒಂದು ಬೆಳ್ಳಿ ರಥ ಇದೆ.

Sri Rama Kshetra, Dharmasthala, Karnataka.

ಹೂದೋಟ ಕಾರಂಜಿ ಬಣ್ಣ ಬಣ್ಣಬಣ್ಣದ ವಿದ್ಯುದ್ದೀಪಗಳು ಗಮನ ಸೆಳೆಯುತ್ತದೆ. ಪ್ರತಿ ವರ್ಷ ಶ್ರೀರಾಮನವಮಿಯ ಸಮಯದಲ್ಲಿ ರಾಮ ಸಪ್ತಾಹ ಜಾತ್ರೆ ನಡೆಯುತ್ತದೆ. ಜನ ಭಯ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಈ ದೇವಾಲಯದ ವತಿಯಿಂದ ಉಚಿತ ಶಾಲೆಯೂ ನಡೆಯುತ್ತದೆ.

ಮನುಷ್ಯನಿಗೆ ಜೀವನದಲ್ಲಿ ಕಷ್ಟ ಬಂದಾಗ, ಬೇಸರವಾದಾಗ ಸಾಂತ್ವನ ನೀಡುವುದು ಪ್ರಕೃತಿ ಸೌಂದರ್ಯ ಹಾಗೂ ದೇವಾಲಯ ಇವೆರಡನ್ನೂ  ಒಟ್ಟಿಗೆ ನೋಡಿದಾಗ ಒಂದು ರೀತಿಯ ತಾದ್ಯಾತ್ಮಕತೆ ಉಂಟಾಗುತ್ತದೆ. ಅದನ್ನು ನಾನು ಪಡೆದಿದ್ದೇನೆ. ಧರ್ಮಸ್ಥಳದಿಂದ ಹೊರಟರೆ ಹೆಚ್ಚೆಂದರೆ ಆರರಿಂದ ಏಳು ನಿಮಿಷದಲ್ಲಿ ಈ ದೇಗುಲಕ್ಕೆ ತಲುಪಬಹುದು. ಈ ಸಲ ಧರ್ಮಸ್ಥಳಕ್ಕೆ ಹೋದಾಗ ನೇತ್ರಾವತಿ ನದಿಯ ಅನತಿ ದೂರದಲ್ಲಿರುವ ಈ ಶ್ರೀರಾಮಕ್ಷೇತ್ರ ಕ್ಷೇತ್ರಕ್ಕೆ ಭೇಟಿ ನೀಡಿ ನೀವೂ ನೆಮ್ಮದಿ ಹೊಂದಿರಿ. 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button