ನಿಮ್ಮ ಗಮನದಲ್ಲಿರಬೇಕಾದ, ಪ್ರಸ್ತುತ ನಿರ್ಮಾಣವಾಗುತ್ತಿರುವ 5 ಬೃಹತ್ ದೇಗುಲಗಳು
ಭಾರತದಲ್ಲಿ ಮತ್ತು ಹೊರದೇಶದಲ್ಲಿ ನಿರ್ಮಾಣವಾಗುತ್ತಿರುವ ಐದು ಬೃಹತ್ ದೇಗುಲಗಳ ಪರಿಚಯವನ್ನು ಶಿಕ್ಷಕಿ ಸುವರ್ಣಲಕ್ಷ್ಮಿಯವರು ಮಾಡಿದ್ದಾರೆ. ಇದನ್ನು ಓದಿ ಬೆರಗಾಗುವುದಷ್ಟೇ ನಮ್ಮ ಪಾಲಿನ ಭಾಗ್ಯ.
ವಿಶ್ವದಾದ್ಯಂತ ವಿವಿಧ ರೀತಿಯ, ವಿವಿಧ ಗಾತ್ರದ, ವಿವಿಧ ದೇವರುಗಳ ದೇವಾಲಯಗಳ ನಿರ್ಮಾಣಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ನಿರ್ಮಾಣವಾಗುತ್ತಿರುವ ಕೆಲವು ಬೃಹತ್ ದೇವಾಲಯಗಳ ಪರಿಚಯ ಇದೋ ನಿಮ್ಮ ಮುಂದಿದೆ.
ಅಯೋಧ್ಯೆಯಲ್ಲಿ ರಾಮಮಂದಿರ
ಮೊದಲಿಗೆ ಭಾರತದ ಹೆಮ್ಮೆ ರಾಮಮಂದಿರ(ram mandir) ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಯೋಣ. ಇತ್ತೀಚೆಗೆ ಈ ಮಂದಿರದ ಭೂಮಿಪೂಜೆ ನಡೆದದ್ದು ನಮಗೆ ತಿಳಿದ ವಿಷಯವೇ, ಈ ಭೂಮಿಪೂಜೆಗಾಗಿ 150 ಪವಿತ್ರ ಜಲವನ್ನೂ(ನದಿಗಳು, ಸಮುದ್ರಗಳು ಹಾಗೂ ಮಾನಸ ಸರೋವರ) 2587 ಪವಿತ್ರ ಸ್ಥಳಗಳಿಂದ ಪವಿತ್ರ ಮಣ್ಣನ್ನು ಸಂಗ್ರಹಿಸಿ ಅವುಗಳನ್ನು ಬಳಸಿ ಅಡಿಪಾಯ ಹಾಕಲಾಯಿತು.
ಈ ದೇವಾಲಯವು 161 ಅಡಿ ಎತ್ತರ ಇರಲಿದ್ದು, 28,000 ಚದರಡಿಗಳಷ್ಟು ವಿಸ್ತೀರ್ಣ ಇರಲಿದೆ. ಈ ದೇವಾಲಯದ ವಿನ್ಯಾಸವನ್ನು 30 ವರ್ಷಗಳ ಹಿಂದೆಯೇ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಪುರ(chandrakant sompura) ಸಿದ್ಧ ಮಾಡಿದ್ದು ಅವರ ಪ್ರಕಾರ ಇದು ಭಾರತದ ಅತಿ ದೊಡ್ಡ ದೇವಾಲಯವಾಗಿದೆ. ಇದರ ನಿರ್ಮಾಣಕ್ಕೆ ಕಲ್ಲು, ಬಿಳಿ ಸಿಮೆಂಟ್, ತಾಮ್ರಗಳನ್ನು ಬಳಸುವುದಾಗಿ ಮತ್ತು ಕಬ್ಬಿಣವನ್ನು ಬಳಸುವುದಿಲ್ಲವೆಂದು ಅಲ್ಲಿನ ನಿರ್ವಾಹಕರು ಹೇಳಿದ್ದಾರೆ. ಈ ಭವ್ಯ ದೇವಾಲಯದ ನೋಟಕ್ಕೆ ಸ್ವಲ್ಪ ಸಮಯ ಕಾಯಬೇಕಾಗಿದೆ.
ಹೂಗ್ಲಿ, ಜಲಂಗಿ ನದಿಗಳ ನಡುವಿನ ಪ್ರದೇಶದಲ್ಲಿ ಕೃಷ್ಣ ದೇಗುಲ
ಎರಡನೆಯದಾಗಿ 1972ರಲ್ಲಿ ಇಸ್ಕಾನ್(iscon) ಸಂಸ್ಥಾಪಕರಾದ ಪ್ರಭುಪಾದರು(Swami Prabhupada) ಅಡಿಪಾಯ ಹಾಕಿದ್ದ ಚಂದ್ರೋದಯ ಮಂದಿರದ ಹೆಸರಿನ ಕೃಷ್ಣನ ದೇವಸ್ಥಾನ ವಿವರಗಳನ್ನು ಈಗ ತಿಳಿಯೋಣ. ಕೋಲ್ಕತ್ತಾದಿಂದ 130 ಕಿಮೀ ದೂರದಲ್ಲಿ ಹೂಗ್ಲಿ(hooghly) ಹಾಗೂ ಜಲಂಗಿ(Jalangi) ನದಿಗಳ ನಡುವಿನ ಪ್ರದೇಶದಲ್ಲಿ ಆರು ಲಕ್ಷ ಚದರಡಿ ಪ್ರದೇಶದಲ್ಲಿ 350 ಅಡಿ ಎತ್ತರವಾಗಿ ನಿರ್ಮಾಣವಾಗಲಿದೆ. ಇದರ ವೆಚ್ಚ 500ಕೋಟಿಗಳಾಗಿದ್ದು, ಚೈತನ್ಯ ಮಹಾಪ್ರಭು ಅವರ ನವದ್ವೀಪಗಳಲ್ಲಿ ಇದೂ ಒಂದು. ಇಲ್ಲಿ ಆಧ್ಯಾತ್ಮಿಕ ತಾರಾಲಯ ನಿರ್ಮಾಣವಾಗಲಿದೆ. ಒಂದೂವರೆ ಎಕರೆ ಪ್ರದೇಶದಲ್ಲಿ ಸಭಾಂಗಣ ನಿರ್ಮಾಣವಾಗುತ್ತಿದೆ. ಇಲ್ಲಿ 10000 ಜನ ಒಮ್ಮೆಗೇ ಸಭೆ ಸೇರಲು ಅವಕಾಶವಿದ್ದು, ಈ ದೇವಾಲಯ 2022ಕ್ಕೆ ಲೋಕಾರ್ಪಣೆ ಆಗಬಹುದೆಂದು ನಿರೀಕ್ಷೆ.
ಮಥುರಾದಲ್ಲಿ ಬೃಂದಾವನ ಚಂದ್ರೋದಯ
ನೀವು ಇದನ್ನು ಇಷ್ಟಪಡಬಹುದು: ಮುಂಡರಗಿಯಲ್ಲೊಂದು ಪುರಾತನ ದೇಗುಲ ಡಂಬಳ
ಮೂರನೆಯದಾಗಿ ನಾವು ಮಥುರಾದಲ್ಲಿ ಇಸ್ಕಾನ್ ಅವರು 700 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 700 ಅಡಿ ಎತ್ತರದ ಬೃಂದಾವನ ಚಂದ್ರೋದಯ(ಕೃಷ್ಣನ)(vrindavan chandrodaya mandir) ಮಂದಿರದ ಬಗ್ಗೆ ತಿಳಿದುಕೊಳ್ಳೋಣ. ಈ ದೇಗುಲದಲ್ಲಿ ಬಹಳ ವಿಶಿಷ್ಟತೆಗಳನ್ನು ಒಳಗೊಂಡಿದೆ 26 ಎಕರೆಯಲ್ಲಿ ದೇವಾಲಯದ ಸಂಕೀರ್ಣ ಇದ್ದು, ಐದು ಎಕರೆಯಲ್ಲಿ ದೇವಾಲಯ ಮಿಕ್ಕ ಸ್ಥಳದಲ್ಲಿ 12 ವನ ನಾಲ್ಕು ದೇವಸ್ಥಾನ ವಸತಿಗಳು ಇರಲಿವೆ. 12ವನಗಳನ್ನು ಕೃಷ್ಣನ ಕಥೆಗಳಲ್ಲಿ ನಾವು ಕೇಳಿರುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇದರ ಅಡಿಪಾಯ 55 ಮೀ ಆಳದಲ್ಲಿದೆ. ಇಲ್ಲಿಯ ವೀಕ್ಷಣಾ ಮಂದಿರದಿಂದ ಯಮುನಾ ನದಿ ಹಾಗೂ ವೃಂದಾವನ ನಗರದ ವಿಹಂಗಮ ನೋಟ ಸವಿಯಬಹುದು. ಪಾರಂಪರಿಕ ಮ್ಯೂಸಿಯಂ ಸಹ ನಿರ್ಮಾಣ ವಾಗುತ್ತಿದೆ.
ಬೃಹ್ಮಪುತ್ರ ನದಿ ದಡದಲ್ಲಿ ಶ್ರೀಕೃಷ್ಣ
ನಾಲ್ಕನೇ ದೇವಸ್ಥಾನದ ಬಗ್ಗೆ ಹೇಳುವುದಾದರೆ ಇದೊಂದು ತೇಲುವ ದೇವಾಲಯ 20 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಈ ದೇವಾಲಯ ಬ್ರಹ್ಮಪುತ್ರ ನದಿಯ ದಡದಲ್ಲಿ ನಿರ್ಮಾಣವಾಗಲಿದೆ. ನದಿಯಲ್ಲಿ ಪ್ರವಾಹ ಬಂದರೂ ನೀರಿನ ಮಟ್ಟ ಏರಿದರೂ ಮುಳುಗದೆ ತೇಲದಂತೆ ಇದನ್ನು ನಿರ್ಮಿಸಲಾಗುತ್ತಿದೆ.ಇದೂ ಸಹ ಇಸ್ಕಾನ್ ನ ಕೃಷ್ಣ ದೇಗುಲವಾಗಿದೆ.
ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ
ನಾವು ನಿಮಗೆ ಪರಿಚಯಿಸುತ್ತಿರುವ ಐದನೇ ಬೃಹತ್ ದೇಗುಲ ನಿರ್ಮಾಣವಾಗುತ್ತಿರುವುದು ಭಾರತದಲ್ಲಲ್ಲ ದುಬೈನ ಅಬುಧಾಬಿಯ(abudhabi) ಅಬು ಮುರೈಕಾ ಎಂಬ ಸ್ಥಳದಲ್ಲಿ, ಈಗಿನ ದಿನಮಾನದಲ್ಲಿ ಜನರು ಹಣ ಸಂಪಾದನೆ ಹಾಗೂ ವೃತ್ತಿಯಲ್ಲಿ ಬೆಳೆಯಲು ಬೇರೆ ಬೇರೆ ದೇಶಗಳಿಗೆ ಹೋಗುವುದು ಅನಿವಾರ್ಯ ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಭಾರತೀಯರು ಇದ್ದಾರೆ. ಹಾಗೂ ನಮ್ಮ ಸನಾತನ ಸಂಸ್ಕೃತಿಯನ್ನು ಪಾಲಿಸಲು ಉಳಿಸಿಕೊಳ್ಳಲು ಅಲ್ಲಿಯೇ ದೇಗುಲಗಳನ್ನು ನಿರ್ಮಿಸಿ ಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಬುದಾಬಿಯಲ್ಲಿ BAPS ಸ್ವಾಮಿನಾರಾಯಣ ಸಂಸ್ಥೆ ವತಿಯಿಂದ ಸ್ವಾಮಿ ನಾರಾಯಣ ಮಂದಿರ ನಿರ್ಮಿಸುತ್ತಿದ್ದು ಇದರ ವಿಸ್ತೀರ್ಣ 55,000 ಚದರ ಮೀಟರ್ ಆಗಿರುತ್ತದೆ.
ಇಲ್ಲಿ ಪ್ರಾರ್ಥನಾ ಮಂದಿರ, ಪುಡ್ ಕೋರ್ಟ್, ಆಟದ ಪ್ರದೇಶ, ಪುಸ್ತಕ ಮಳಿಗೆ, ಹೋಟೆಲ್ ಗಳನ್ನು ನಿರ್ಮಿಸುವ ಆಲೋಚನೆ ಇದೆ. 2019 ಏಪ್ರಿಲ್ ನಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸಿ ಮಧ್ಯಪ್ರಾಚ್ಯದ ಮೊದಲ ಹಿಂದೂ ದೇವಾಲಯಕ್ಕೆ ಸ್ಥಳ ನೀಡಿದ್ದಕ್ಕಾಗಿ ಆ ದೇಶದ ಅಧ್ಯಕ್ಷರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ನಾವೇನಾದರೂ 2022ರಲ್ಲಿ ಅಬುಧಾಬಿಗೆ ಭೇಟಿ ನೀಡಿದರೆ ಈ ದೇವಾಲಯ ನೋಡಿಕೊಂಡು ಬರೋಣ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ