ಕೋಲಾರದ ಹುಡುಗಿ ಮೊದಲ ಬಾರಿ ಉತ್ತರ ಕರ್ನಾಟಕ ನೋಡಿದ ಕತೆ: ಚಂದನಾ ರಾವ್ ಬರೆದ ಒಂದೂರಿನ ಕಥನ
ಒಂದೂರಿಗಿಂತ ಮತ್ತೊಂದೂರು ಭಿನ್ನ. ಈ ಪ್ರದೇಶ ಮತ್ತೊಂದು ಪ್ರದೇಶದಂತೆ ಇರುವುದಿಲ್ಲ. ಭಾಷೆ, ಆಹಾರ, ಸಂಸ್ಕೃತಿ ಎಲ್ಲವೂ ಬದಲಾಗುತ್ತದೆ. ಹಾಗೆ ಕೋಲಾರ ಎಂಬ ಬಯಲುಸೀಮೆಯಲ್ಲಿ ಬೆಳೆದ ಹುಡುಗಿ ಚಂದನಾ ರಾವ್ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟಾಗಿನ ಸುಂದರ ಅನುಭವ ಕಥನ.
ಆಗಿನ್ನೂ ನಮಗೆ ಹದಿನೆಂಟರ ಹರೆಯ. ಆಗಷ್ಟೇ ಬೆಂಗಳೂರಿನಲ್ಲಿ(Bangalore) ಅನಿಮೇಷನ್ ಕಲಿಯಲು ಕಾಲೇಜು ಸೇರಿದ್ದವು . ನಾನು ನನ್ನ ಗೆಳತಿ ಭವಾನಿ ಕೋಲಾರದಿಂದ(Kolar) ಬೆಂಗಳೂರಿಗೆ ಪ್ರತಿದಿನ ಓಡಾಡುತ್ತಿದ್ದೆವು. ಕಾಲೇಜಿನಲ್ಲಿ ಪರಿಚಯವಾದ ಇನ್ನೊಬ್ಬ ಗೆಳತಿ ಭಾಗ್ಯ. ನಾವು ಮೂವರು ಆತ್ಮೀಯರಾದೆವು. ಮೂವರಿಗೂ ಊರು ಸುತ್ತೋದು ಅಂದ್ರೆ ತುಂಬಾ ಇಷ್ಟ. ಆದರೆ ಆಗಿನ ಪರಿಸ್ಥಿತಿ ಬೇರೆಯದೇ ಇತ್ತು. ಒಮ್ಮೆ ಭಾಗ್ಯ ತನ್ನ ಹಳ್ಳಿಗೆ ನಮ್ಮಿಬ್ಬರನ್ನು ಆಹ್ವಾನಿಸಿದಳು, ನಮಗೋ ಭಾರೀ ಖುಷಿ! ಮನೇಲಿ ಎಲ್ಲರನ್ನು ಒಪ್ಪಿಸಿ ಅವಳ ಊರಿಗೆ ಹೊರಟೆವು.
ಬೆಂಗಳೂರಿನಿಂದ ರಾಯಚೂರಿನವರೆಗೆ(Raichur) ಜನರಲ್ ಬೋಗಿಯಲ್ಲಿ ಕುಳಿತು ಹೊರಟೆವು. ಬೆಂಗಳೂರಿನಲ್ಲಿ ಹತ್ತಿದ್ದರಿಂದ ಲೇಡೀಸ್ ಕೋಚ್ ಖಾಲಿ ಇತ್ತು. ಅಲ್ಲಿ ನಾವು ಮೂರ್ ಜನ ಮಜಾ ಮಾಡುತ್ತಾ ಕೇಕೆ ಹಾಕುತ್ತ ಹೊರಟೆವು. ನಾನಗದೋ ಮೊದಲ ಬಾರಿಯ ಜನರಲ್ ಬೋಗಿಯ ಪ್ರಯಾಣ.
ಲಿಂಗಸುಗೂರಿಗೆ ಕೆಂಪು ಬಸ್ಸು ಪಯಣ
ರಾಯಚೂರು ಸೇರುವಷ್ಟರಲ್ಲಿ ಮುಂಜಾನೆ ಏಳು ಗಂಟೆ. ಅಲ್ಲಿಂದ ಲಿಂಗಸ್ಗೂರಿಗೆ ಸುಮಾರು 90 ಕಿಲೋಮೀಟರ್ ಕೆಂಪು ಬಸ್ಸಿನಲ್ಲಿ ಹೊರಟೆವು. ನಮಗೆ ಹೊಟ್ಟೆ ತಾಳ ಹಾಕಲು ಶುರು ಮಾಡಿತ್ತು.
ಲಿಂಗಸುಗೂರಿನಿಂದ ಕರಡಕಲ್ ಸುಮಾರು 2 ಕಿಲೋಮೀಟರ್. ಅಲ್ಲೊಂದು ಎತ್ತಿನ ಬಂಡಿಯಲ್ಲಿ ಹತ್ತಿಕೊಂಡು ಅವಳ ಊರನ್ನು ತಲುಪಿದೆವು. ಮನೆಗೆ ಹೋದ ತಕ್ಷಣ ನಮ್ಮ ಕಣ್ಣು ಸೆಳೆದಿದ್ದು ಅವರ ಅದ್ಭುತವಾದ ಬಾಗಿಲು. ಹಳೆಯ ಕಾಲದ ದೊಡ್ಡ ಮನೆ! ಪಕ್ಕದಲ್ಲೇ ಇದ್ದ ಕೊಟ್ಟಿಗೆ. ಸುಂದರವಾದ ಭಾಗ್ಯಳ ಅಮ್ಮ. ತುಂಬಾ ಹಸಿದಿದ್ದ ನಮಗೆ ಬಿಸಿಬಿಸಿ ರೊಟ್ಟಿ ಊಟ ಕಾಯುತ್ತಿತ್ತು. ಜೋಳದ ರೊಟ್ಟಿ,(jolada rotti) ಹಿಟ್ಟಿನ ಪಲ್ಯ, ಎಣ್ಣೆ ಬದನೆ, ಕೆಂಪು ಚಟ್ನಿ, ನಿಂಬೆ ಉಪ್ಪಿನಕಾಯಿ, ಮಜ್ಜಿಗೆ. ಹೊಟ್ಟೆ ಬಿರಿಯುವಂತೆ ತಿಂದೆವು. ಮತ್ತಷ್ಟು ವಿಶ್ರಾಂತಿ ಪಡೆದು ಸಂಜೆ ಅವರ ಹೊಲದ ಕಡೆಗೆ ಹೊರೆಟೆವು. ಕಾಲುವೆಗಳ ಮೂಲಕ ಕೃಷ್ಣಾ ನದಿಯ(Krishna river) ನೀರನ್ನು ಹೊಲಗಳಿಗೆ ಹರಿಸಲಾಗುತ್ತಿತ್ತು. ಅಲ್ಲಿನ ಹಳ್ಳಿಗಳು ಇನ್ನೂ ಮುಗ್ಧವಾಗಿತ್ತು. ಅಲ್ಲಿನ ಭಾಷೆ, ಉಡುಪು ಎಲ್ಲವೂ ನಮಗೆ ಹೊಸತು.
ಇಳಕಲ್ ಸೀರೆ ಉಟ್ಟ ಸಂಭ್ರಮ
ಮುಂದಿನ ದಿನ ಭಾಗ್ಯಳ ಕುಟುಂಬ ನಮ್ಮನ್ನು ಪ್ರಸಿದ್ಧ ಜಾಗಗಳಿಗೆ ಕರೆದುಕೊಂಡು ಹೋಗುವ ಯೋಜನೆ ಹೇಳಿದರು. ತಕ್ಷಣ ಭಾಗ್ಯಳ ತಾಯಿ ಊಟದ ಬುತ್ತಿಗೆ ತಯಾರಿ ಮಾಡಲು ಶುರು ಮಾಡಿದರು. ಅವರ ವಿಶಾಲವಾದ ಅಡುಗೆ ಮನೆಯ ಒಂದುಮೂಲೆಯಲ್ಲಿ ಕಟ್ಟಿಗೆ ಓಲೆ ಇತ್ತು.ಎಷ್ಟೇ ಗ್ಯಾಸ್ ಸ್ಟವ್ ಹಾಗು ಇತರೇ ಪರಿಕರಗಳಿದ್ದರೂ ಕಟ್ಟಿಗೆ ಒಲೆಯ ರುಚಿಯೇ ಬೇರೆ. ಯಾವತ್ತೂ ಅಡುಗೆ ನಂಗೆ ಅವರು ಅದ್ಭುತವಾಗಿ ಚಪಾತಿ ಲಟ್ಟಿಸುವ ಹಾಗು ಸುಡುವ ಬಗ್ಗೆ ಹೇಳಿಕೊಟ್ಟರು.
ಬುತ್ತಿಗಾಗಿ ನಾವು ಚಪಾತಿ, ಕಾಳಿನ ಪಲ್ಯ, ಹಿಟ್ಟಿನಪಲ್ಯ, ಮೊಸರನ್ನ, ಚಟ್ನಿ ಹೀಗೆ ಎಲ್ಲವನ್ನೂ ರೆಡಿ ಮಾಡಿದೆವು. ಐಹೊಳೆ, ಬಾದಾಮಿ, ಪಟ್ಟದಕಲ್ ಹೀಗೆ ಅನೇಕ ಜಾಗಗಳಿಗೆ ಭೇಟಿ ನೀಡಿದೆವು. ನಾವಂತೂ ಮೈ ಮರೆತು ಆ ಅದ್ಭುತ ಐತಿಹಾಸಿಕ ಜಾಗಗಳನ್ನು ನೋಡಿ ಊರಿಗೆ ಹಿಂತಿರುಗಿದೆವು.
ನನಗಂತೂ ಅಲ್ಲಿನ ಹಳ್ಳಿ ಸೊಗಡು ಬಹಳ ಹಿಡಿಸಿಬಿಟ್ಟಿತು. ನನಗೂ ಅವರಂತೆ ಸೀರೆ ಉಡಿಸಿ ಎಂದು ಭಾಗ್ಯಳ ಅಮ್ಮನಿಗೆ ತಲೆತಿಂದೆ. ಅವರು ತಕ್ಷಣ ತಮ್ಮ ಇಳಕಲ್ ಸೀರೆ ತಂದು ನನಗೆ ಉಡಿಸಿ ಅಲಂಕಾರ ಮಾಡಿದರು. ನನಗೆ ಖುಷಿಯೋ ಖುಷಿ. ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿ ಸಂತೋಷ ಪಟ್ಟಿದಾಯ್ತು.
ಹೀಗೆ ಹಳ್ಳಿಯನ್ನು ಸುತ್ತುತ್ತಾ, ಅಲ್ಲಿನ ತಿಂಡಿಗಳನ್ನು ಮೇಯುತ್ತಾ, ಕುಣಿದು ಕುಪ್ಪಳಿಸುತ್ತಾ ನಮ್ಮ ಪ್ರವಾಸವನ್ನು ಮುಗಿಸಿದೆವು. ಸುಮಾರು ಹನ್ನೆರಡು ವರ್ಷಗಳಾದರೂ ಆ ನೆನಪುಗಳು ಸದಾ ಹಸಿರು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ
ಸೂಪರ್