ಆಹಾರ ವಿಹಾರನಮ್ಮೂರ ತಿಂಡಿವಿಂಗಡಿಸದ

ಕಲ್ಲಡ್ಕ ಕೆಟಿ ರುಚಿ ನೋಡಿದ್ದೀರಾ: ಕಲ್ಲಡ್ಕ ಕೆಟಿ ಕುರಿತ ಪೂರ್ತಿ ವಿವರ

#ವಿಶ್ವ ಚಹಾ ದಿನ ವಿಶೇಷ (World Tea Day 2021)

ಕಲ್ಲಡ್ಕ ಕೆಟಿ ಅಂದ್ರೆ ಚಹಾ ಪ್ರಿಯರ ಕಿವಿ ನೆಟ್ಟಗಾಗುತ್ತದೆ. ಅಷ್ಟರ ಮಟ್ಟಿಗೆ ಕಲ್ಲಡ್ಕ ಕೆಟಿ ಫೇಮಸ್ಸು. ಪುತ್ತೂರಿನ ಶಿವರಾಮ ಹೊಳ್ಳರು ತಮ್ಮ ಕಲ್ಲಡ್ಕ ಲಕ್ಷ್ಮಿ ನಿವಾಸ ಹೋಟೆಲಿನಲ್ಲಿ ಕೊಡುವ ಈ ಕೆಟಿ ಎಷ್ಟು ರುಚಿಕರ ಎನ್ನುವುದು ಹೇಳಿ ಪ್ರಯೋಜನವಿಲ್ಲ. ಈ ಕುರಿತ ಚಂದದ ವಿವರಣಾತ್ಮಕ ಬರಹ ಇಲ್ಲಿದೆ.

–          ಪ್ರಜ್ಞಾ ಹೆಬ್ಬಾರ್, ಪುತ್ತೂರು

ರಾಷ್ಟ್ರೀಯ ಹೆದ್ದಾರಿ 75ರಲ್ಲಿ(NH 75) ಹಾದುಹೋಗುವ ಪ್ರಯಾಣಿಕರು ವಾಹನ ನಿಲ್ಲಿಸಿ ದಣಿವಾರಿಸಿಕೊಳ್ಳುವ ಸ್ಥಳವೆಂದರೆ ಕಲ್ಲಡ್ಕದ ಲಕ್ಷ್ಮೀ ನಿವಾಸ ಹೋಟೆಲ್. ಸುಮಾರು 70 ವರ್ಷಗಳಷ್ಟು ಹಳೆಯದಾದ ಈ ಹೋಟೆಲನ್ನು ಮೂರು ತಲೆಮಾರಿನಿಂದ ನಡೆಸಿಕೊಂಡು ಬಂದಿದ್ದಾರೆ. ಈ ಹೋಟೆಲ್ ಬಗ್ಗೆ ನಾನು ಬರೆಯುತ್ತಿರುವುದಕ್ಕೂ ಇಂದಿನ ದಿನಕ್ಕೂ ಸಂಬಂಧವಿದೆ! ಅದೇನು ಗೊತ್ತಾ?

ಸೆಲೆಬ್ರಿಟಿಗಳೂ ಚಹಾ ಕುಡಿದ ಪುಟ್ಟ ಹೋಟೆಲು

ಇಂದು ವಿಶ್ವ ಚಹಾ ದಿನ. ಕಲ್ಲಡ್ಕ ಲಕ್ಷ್ಮೀ ನಿವಾಸ(Kalladka Lakshmi Nivas Hotel) ಹೋಟೇಲಿನ‌ ಚಹಾವನ್ನು ಚಪ್ಪರಿಸಿ ಕುಡಿಯದವರು ಇಲ್ಲ. ಕೆಟಿ ಆಲಿಯಾಸ್ ಕಲ್ಲಡ್ಕ ಟೀ ಎಷ್ಟರ ಮಟ್ಟಿಗೆ ಪ್ರಸಿದ್ಧವೆಂದರೆ, ಸೆಲೆಬ್ರೆಟಿಗಳು ಕೂಡ ಇಲ್ಲಿನ ಚಹಾ ಸವಿದಿದ್ದಾರೆ. ಮಂಗಳೂರಿಗೆ ಆಗಮಿಸಿದ್ದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೂಡ ಕಲ್ಲಡ್ಕಕ್ಕೆ ಬಂದು ಕೆಟಿ ಸವಿದಿದ್ದರು. ಈ ಚಂದದ ಹೋಟೆಲಿನ ಒಳಗೆ ಒಮ್ಮೆ ಹೋಗಿ ಕುಳಿತರೆ ಅದೇ ದೊಡ್ಡ ಖುಷಿ.

ಆಮೇಲೆ ತಂದು ಕೊಡುವ ಕೆಟಿ ಕುಡಿದರೆ ಸಂತೋಷ ದ್ವಿಗುಣವಾಗುತ್ತದೆ. ದಪ್ಪನೆಯ ಬಿಸಿ ಹಾಲಿಗೆ ಬಿಸಿಯಾದ ಚಹಾ ಡಿಕಾಕ್ಷನ್ ಹಾಕಿದಾಗ ಅದು ನೊರೆ‌ ಸಮೇತ ಪದರದಂತೆ ಹಾಲಿನ ಮೇಲೆ‌ ನಿಲ್ಲುತ್ತದೆ. ಇದುವೇ ಇಲ್ಲಿನ ವಿಶೇಷತೆ. ಹಲವು ವರ್ಷಗಳಾದರೂ ಇಲ್ಲಿನ ರುಚಿ ಬದಲಾಗಲಿಲ್ಲ. ಚಹಾಕ್ಕೆ ಬಳಸುವ ವಸ್ತುಗಳ ಸರಿಯಾದ ಪ್ರಮಾಣವೇ ಇದಕ್ಕೆ ಕಾರಣ ಎನ್ನುತ್ತಾರೆ ಹೋಟೆಲ್ ಮಾಲೀಕ ಶಿವರಾಮ ಹೊಳ್ಳ.

ಶಿವರಾಮ ಹೊಳ್ಳರ ತಾತ ಲಕ್ಷ್ನೀನಾರಾಯಣ ಹೊಳ್ಳರು ಈ ಕೆಟಿಯನ್ನು ಕಲ್ಲಡ್ಕ ಕೆಟಿ ಎಂದು ಪರಿಚಯಿಸಿದ ಖ್ಯಾತಿ ಹೊಂದಿದ್ದಾರೆ.

ನೀವು ಇದನ್ನು ಇಷ್ಟಪಡಬಹುದು: ಸೊಗಸಾದ ಟೀ ಎಂಬ ರೂಪಕ ಅಲಂಕಾರ: ವಿಶ್ವ ಚಹಾ ದಿನ ನಿಮಿತ್ತ ಜೋಗಿಯವರ ವಿಶೇಷ ಬರಹ

ಕಲ್ಲಡ್ಕ ಕೆಟಿ ಇತಿಹಾಸ

1952ರಲ್ಲಿ ಲಕ್ಷ್ಮೀ ನಾರಾಯಣ ಹೊಳ್ಳ ಈ ಹೋಟೆಲನ್ನು ಪ್ರಾರಂಭಿಸಿದರು. ಜನರಿಗೆ ಏನಾದರೂ ಹೊಸತನ್ನು ನೀಡಬೇಕೆಂಬುದು ಅವರ ಮನದಲ್ಲಿ ಇತ್ತು. ಆಗ ಕೆಳಗೂರು ಚಹಾ(Kelagur Tea)ದಿಂದ ಅವರು ಮಾಡಿದ ಕರಾಮತ್ತು “ಕಲ್ಲಡ್ಕ ಟೀ”. ತದನಂತರ ದೇವಗಿರಿ ಚಾ ಪುಡಿ ಬಳಸಿಕೊಂಡು ಕಲ್ಲಡ್ಕ ಟೀ ಮಾಡಲು ಆರಂಭಿಸಿದರು. ಅದುವೇ ನಂತರ ವಿಶ್ವ ವಿಖ್ಯಾತಿ ಪಡೆಯಿತು.

ತಯಾರಿ ಹೇಗೆ?

ದೇವಗಿರಿ ಚಹಾದಿಂದ(Devagiri Tea Powder) ತಯಾರಿಸಿದ ಬಿಸಿ ಡಿಕಾಕ್ಷನ್ ಬಟ್ಟೆಯಿಂದ ಸೋಸಲಾಗುತ್ತದೆ.

ಒಂದು ಚೊಂಬು ಹಾಲಿಗೆ ನಾಲ್ಕು ಚಮಚ ಸಕ್ಕರೆ ಹಾಕಿ ಬಿಸಿ ಮಾಡಲಾಗುತ್ತದೆ.  ಚಹಾ ಬಿಸಿಯಾಗಿರಲು, ಗಾಜಿನ ಗ್ಲಾಸಿಗೆ ಬಿಸಿ ನೀರು ಹಾಕಿಡಲಾಗುತ್ತದೆ. ನಂತರ ಅದನ್ನು ಚೆಲ್ಲಿ, ಗ್ಲಾಸಿಗೆ ಬಿಸಿಯಾದ ಹಾಲು ಹಾಕಿ, ಅದರೊಳಗೆ ಚಮಚವನ್ನು ಇರಿಸಿ ಡಿಕಾಕ್ಷನ್ ಹಾಕಲಾಗುತ್ತದೆ. ಈಗ ಸಿದ್ಧವಾಯ್ತು layered KT.

ಬೈಕ್ ರೈಡ್, ಲಾಂಗ್ ಡ್ರೈವ್ ಗಾಗಿ ಈ ದಾರಿಯಲ್ಲಿ ತೆರಳುವವರು ಇಲ್ಲಿನ ಚಹಾ ಕುಡಿಯದೇ ಹೋಗುವ ಮಾತೇ ಇಲ್ಲ. ಪುತ್ತೂರು ಮಾರ್ಗವಾಗಿ ಬೆಂಗಳೂರು ಸಾಗುವವರು ಕೂಡ ಹೆಚ್ಚಾಗಿ ಇಲ್ಲಿ ಕೇಟಿ ಕುಡಿದೇ ಮುಂದೆ ಸಾಗುತ್ತೀರಿ. ಅಷ್ಟರ ಮಟ್ಟಿಗೆ ನಮ್ಮ ಕಲ್ಲಡ್ಕ ಕೆಟಿ ಫೇಮಸ್ಸು. ಆ ದಾರಿಯಲ್ಲಿ ಯಾವತ್ತಾದರೂ ಓಡಾಡಿದರೆ ನೀವೂ ಸವಿಯಿರಿ ಕಲ್ಲಡ್ಕ ಚಾ!

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button