ಕಾಡಿನ ಕತೆಗಳುಮ್ಯಾಜಿಕ್ ತಾಣಗಳುವಿಂಗಡಿಸದ

ಅಂತರಾಷ್ಟ್ರೀಯ ಹುಲಿ ದಿನ ವಿಶೇಷ; ಭಾರತದ ಹತ್ತು ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶಗಳು

ಭಾರತವು ವಿಶ್ವದ ಶೇಕಡ 70 ರಷ್ಟು ಹುಲಿಗಳಿಗೆ ನೆಲೆಯಾಗಿದೆ. ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಕೂಡ “ಹುಲಿ”. ಭಾರತದ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಅಭಿವೃದ್ಧಿಪಡಿಸುವಲ್ಲಿ ಹುಲಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ಈ ಹುಲಿಗಳ ರಕ್ಷಣೆಗಾಗಿ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ “ಹುಲಿ ಸಂರಕ್ಷಿತ ಪ್ರದೇಶ”ಗಳನ್ನು ಸ್ಥಾಪಿಸಲಾಗಿದೆ.

• ಉಜ್ವಲಾ ವಿ.ಯು

ಅವುಗಳಲ್ಲಿ ಹತ್ತು ಸುಪ್ರಸಿದ್ಧ ಮತ್ತು ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶಗಳ ಸಂಕ್ಷಿಪ್ತ ವಿವರ ಇಲ್ಲಿದೆ.

1. ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಕರ್ನಾಟಕ:

Bandipura Tiger Reserve, Karnataka

ಬಂಡೀಪುರ ರಾಷ್ಟ್ರೀಯ ಉದ್ಯಾನವನ, ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, 874 ಚದರ ಕಿಲೋಮೀಟರ್‌ಗಳಷ್ಟು ಪ್ರದೇಶವನ್ನು ಇದು ವ್ಯಾಪಿಸಿದೆ. ಆರಂಭದಲ್ಲಿ, ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸಿದಾಗ ಬಂಡೀಪುರದಲ್ಲಿ 12 ಹುಲಿಗಳು ಇದ್ದವು, ರಕ್ಷಣಾ ಕ್ರಮಗಳ ಪರಿಣಾಮವಾಗಿ, ಪ್ರಸ್ತುತ ಸುಮಾರು 173 ಹುಲಿಗಳು ಈ ಪ್ರದೇಶದಲ್ಲಿವೆ. ಭಾರತದ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಹಲವಾರು ಜಾತಿಗಳನ್ನು ರಕ್ಷಿಸುವ ಬಂಡೀಪುರವು ದಕ್ಷಿಣ ಏಷ್ಯಾದಲ್ಲಿ ಕಾಡು ಪ್ರಾಣಿಗಳ ಅತಿದೊಡ್ಡ ಆವಾಸಸ್ಥಾನವಾಗಿದೆ ಹಾಗೂ ಭಾರತದ ಅತ್ಯುತ್ತಮ ನಿರ್ವಹಣೆಯ ಉದ್ಯಾನವನಗಳಲ್ಲಿ ಒಂದೆಂದು ಕೂಡ ಪರಿಗಣಿಸಲ್ಪಟ್ಟಿದೆ. ಇದು ಹುಲಿಗಳು ಮಾತ್ರವಲ್ಲದೇ ಭಾರತೀಯ ಆನೆಗಳು, ಗೌರ್‌ಗಳು, ನರಿಗಳು ಮತ್ತು ಹೆಬ್ಬಾವು, ಕಪ್ಪು ಕರಡಿಗಳಂತಹ ಇತರೆ ಪ್ರಾಣಿಗಳ ಸುಂದರವಾದ ವಾಸಸ್ಥಾನವಾಗಿದೆ. ಹಾಗೇ ಪ್ರವಾಸಿಗರು ಕ್ಯಾಂಪಿಂಗ್, ಜೀಪ್ ಸಫಾರಿ ಮತ್ತು ರಿವರ್ ರಾಫ್ಟಿಂಗ್‌ನಂತಹ ಸಾಹಸ ಚಟುವಟಿಕೆಗಳನ್ನು ಕೂಡ ಇಲ್ಲಿ ಮಾಡಬಹುದಾಗಿದೆ.

2. ಜಿಮ್ ಕಾರ್ಬೆಟ್ ಟೈಗರ್ ರಿಸರ್ವ್, ಉತ್ತರಾಖಂಡ:

Jim Corbett Tiger Reserve, Uttarakhand

ಹಿಮಾಲಯದ ತಪ್ಪಲಿನಲ್ಲಿ ನೆಲೆಸಿರುವ ಜಿಮ್ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪೌರಾಣಿಕ ಬೇಟೆಗಾರ “ಜಿಮ್ ಕಾರ್ಬೆಟ್” ಎಂಬ ಸಂರಕ್ಷಣಾಕಾರನ ಹೆಸರನ್ನು ಇಡಲಾಗಿದೆ, ಈ ರಾಷ್ಟ್ರೀಯ ಉದ್ಯಾನವನ್ನು 1936 ರಲ್ಲಿ ಸ್ಥಾಪಿಸಲಾಯಿತು. ಇದನ್ನು ಭಾರತದ ಮೊದಲ ಮತ್ತು ಅತ್ಯುತ್ತಮ ರಾಷ್ಟ್ರೀಯ ಉದ್ಯಾನವನವೆಂದು ಪರಿಗಣಿಸಲಾಗುತ್ತದೆ. ಜಿಮ್ ಕಾರ್ಬೆಟ್ 585 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು, ಏಳು ಜಾತಿಯ ಉಭಯಚರಗಳು, 33 ಜಾತಿಯ ಸರೀಸೃಪಗಳು, ಏಳು ಜಾತಿಯ ಮೀನುಗಳು ಮತ್ತು 37 ಜಾತಿಯ ಡ್ರ್ಯಾಗನ್‌ಫ್ಲೈಗಳಿಗೆ ನೆಲೆಯಾಗಿದೆ. ಇಲ್ಲಿ ಕಂಡುಬರುವ ಕೆಲವು ಪ್ರಾಣಿಗಳಲ್ಲಿ ಬಂಗಾಳ ಹುಲಿಗಳು, ಮೊಸಳೆಗಳು, ಚಿರತೆಗಳು ಮತ್ತು ಆನೆಗಳು ಪ್ರಸಿದ್ಧವಾಗಿದೆ. ಆನೆ ಸಫಾರಿ, ಜೀಪ್ ಸಫಾರಿ, ರೋಮಾಂಚಕ ಟ್ರೆಕ್ ಗಳಿಗೆ ಈ ಪ್ರದೇಶ ಹೆಸರುವಾಸಿಯಾಗಿದೆ.

3. ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶ, ರಾಜಸ್ಥಾನ:

Ranthambore Tiger Reserve, Rajasthan

ಹಿಂದೆ ಜೈಪುರ ಮಹಾರಾಜರ ಬೇಟೆಯ ತಾಣವಾಗಿದ್ದ ರಣಥಂಬೋರ್ ಈಗ ಭಾರತದ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಇದನ್ನು ವಿಶೇಷವಾಗಿ “ಬಂಗಾಲಿ ಹುಲಿಗಳ ವಾಸಸ್ಥಾನ” ಎಂದು ಕರೆಯಲಾಗುತ್ತದೆ. ಪದಮ್ ತಲಾವ್, ರಾಜ್ ತಲಾವ್ ಮತ್ತು ಮಲಿಕ್ ತಲಾವ್ ಮೂರು ಪ್ರಶಾಂತವಾದ ಮೂರು ಸರೋವರಗಳನ್ನು ಈ ಪ್ರದೇಶ ಹೊಂದಿದೆ. ಹುಲಿಗಳ ಹೊರತಾಗಿ, ಕಪ್ಪು ಕರಡಿಗಳು, ಕತ್ತೆಕಿರುಬಗಳು, ಭಾರತೀಯ ನರಿಗಳು ಮತ್ತು ನರಿಗಳು ಸೇರಿದಂತೆ ಇತರ ಜಾತಿಗಳನ್ನು ಸಹ ಇಲ್ಲಿ ವೀಕ್ಷಿಸಬಹುದಾಗಿದೆ. ಹಲವು ವೈವಿಧ್ಯಮಯ ಜೀವಿಗಳ ತಾಣವಾಗಿರುವ ಈ ಪ್ರದೇಶದಲ್ಲಿ ಜೀಪ್ ಸಫಾರಿಯನ್ನು ಮಿಸ್ ಮಾಡಿಕೊಳ್ಳಲೇಬಾರದು.

4. ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶ, ಮಧ್ಯಪ್ರದೇಶ:

Bandhavgarh Tiger Reserve, Madhya Pradesh

ಇದು ರಾಯಲ್ ಬೆಂಗಾಲಿ ಹುಲಿಗಳ ಅತಿ ಹೆಚ್ಚು ಸಾಂದ್ರತೆಯನ್ನು ಮತ್ತು ಪ್ರಾಚೀನ ಬಾಂಧವ್‌ಗಢ್ ಕೋಟೆಯನ್ನು ಹೊಂದಿರುವುದರಿಂದ ಈ ಪ್ರದೇಶವು ಅತ್ಯಂತ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿರುವ ಬಾಂಧವಗಢ ರಾಷ್ಟ್ರೀಯ ಉದ್ಯಾನವನವು 820 ಚ.ಕಿ.ಮೀ. ವಿಸ್ತೀರ್ಣ ವ್ಯಾಪ್ತಿಯಲ್ಲಿ ವಿಸ್ತರಿಸಿದೆ. ಹೆಚ್ಚಿನ ಸಂಖ್ಯೆಯ ಹುಲಿಗಳ ಹೊರತಾಗಿ, ಬಾಂಧವಗಢವು ಚಿರತೆಗಳು ಮತ್ತು ವಿವಿಧ ಜಾತಿಯ ಜಿಂಕೆಗಳಿಗೆ ಪ್ರಸಿದ್ಧವಾಗಿದೆ. ಉದ್ಯಾನವನವನ್ನು ಮಗ್ಡಿ, ತಾಲಾ ಮತ್ತು ಬಮೇರಾ ಎಂದು ಮೂರು ಪ್ರಮುಖ ವಲಯಗಳಾಗಿ ವಿಂಗಡಿಸಲಾಗಿದೆ, ಅದರಲ್ಲಿ “ತಾಲಾ” ಹಲವಾರು ಹುಲಿ ವೀಕ್ಷಣೆ ಅವಕಾಶಗಳನ್ನು ನೀಡುವ ಮೂಲಕ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಪ್ರದೇಶದ “ಸೀತಾ” ಎಂಬ ಹೆಸರಿನ ಹುಲಿ ಒಮ್ಮೆ ನ್ಯಾಷನಲ್ ಜಿಯಾಗ್ರಫಿಕ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು, ವಿಶ್ವದ ಎರಡನೇ ಅತಿ ಹೆಚ್ಚು ಛಾಯಾಚಿತ್ರ ತೆಗೆದ ಹುಲಿ ಎಂದು ಪ್ರಸಿದ್ಧಿ ಹೊಂದಿತ್ತು. ಬಾಂಧವಗಢ ಕೋಟೆಯ 39 ಐತಿಹಾಸಿಕ ಗುಹೆಗಳನ್ನೂ ಇಲ್ಲಿ ಕಾಣಬಹುದಾಗಿದೆ.

5. ಸುಂದರಬನ್ ಹುಲಿ ಸಂರಕ್ಷಿತ ಪ್ರದೇಶ, ಪಶ್ಚಿಮ ಬಂಗಾಳ:

Sundarban Tiger Reserve, West Bengal

ಈ ಹುಲಿ ಸಂರಕ್ಷಿತ ಪ್ರದೇಶವು ‘ಸುಂದರಿ’ ಮರದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಭಾರತೀಯ ಉಪಖಂಡದ ಅತಿದೊಡ್ಡ ಹುಲಿ ಸಂರಕ್ಷಿತ ಪ್ರದೇಶ ಮತ್ತು ರಾಷ್ಟ್ರೀಯ ಉದ್ಯಾನವನವಲ್ಲದೆ, ಇದು ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯವನ್ನು ಹೊಂದಿದೆ. 2585 ​​ಚದರ ಕಿಲೋಮೀಟರ್‌ಗಳಷ್ಟು ಬೃಹತ್ ಪ್ರದೇಶವನ್ನು ಆವರಿಸಿರುವ ಈ ಉದ್ಯಾನವನವು “ರಾಯಲ್ ಬೆಂಗಾಲಿ ಹುಲಿ”ಗಳಿಗೆ ನೆಲೆಯಾಗಿದೆ. ಇದು ಜಲವಾಸಿ ಸಸ್ತನಿಗಳು ಮತ್ತು ಸರೀಸೃಪಗಳನ್ನು ಒಳಗೊಂಡು ಹೆಚ್ಚಿನ ಸಂಖ್ಯೆಯ ಅಳಿವಿನಂಚಿನಲ್ಲಿರುವ ಜಾತಿಗಳನ್ನು ಸಹ ಹೊಂದಿದೆ. ಈ ಹುಲಿ ಸಂರಕ್ಷಿತ ಪ್ರದೇಶವು ಗಂಗಾ, ಬ್ರಹ್ಮಪುತ್ರ ಮತ್ತು ಮೇಘನಾ ಎಂಬ ಮೂರು ನದಿಗಳಿಂದ ಬರುವ ಹಲವಾರು ತೊರೆಗಳು ಮತ್ತು ಉಪನದಿಗಳನ್ನು ಹೊಂದಿದೆ. ಇದು 400 ಹುಲಿಗಳಿಗೆ ನೆಲೆಯಾಗಿದೆ. ಜಲಪ್ರಾಣಿಗಳಾದ ವೈವಿಧ್ಯಮಯವಾದ ಮೀನು, ಏಡಿಗಳು, ಮೊಸಳೆಗಳು ಮತ್ತು ಸಮುದ್ರ ಆಮೆಗಳನ್ನು ಸಹ ಒಳಗೊಂಡಿದೆ. ಹಾಗೂ ಸುಮಾರು 248 ಪಕ್ಷಿ ಪ್ರಭೇದಗಳನ್ನು ಸಹ ಇಲ್ಲಿ ಕಾಣಬಹುದು.

6. ನಾಗಾರ್ಜುನಸಾಗರ್-ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶ, ಆಂಧ್ರ ಪ್ರದೇಶ:

Nagarjunsagar-Srisailam Tiger Reserve, Andhra Pradesh

1983 ರಲ್ಲಿ ಸ್ಥಾಪಿತವಾದ ನಾಗಾರ್ಜುನಸಾಗರ್-ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶವು 3,728 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಭಾರತದ “ಅತಿದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ”. ಬಂಗಾಳ ಹುಲಿಗಳಿಗೆ ನೆಲೆಯಾಗುವುದರ ಜೊತೆಗೆ, ತನ್ನ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ.  ಪ್ರವಾಸಿಗರು ಕರಡಿಗಳು ಮತ್ತು ಭಾರತೀಯ ಚಿರತೆಗಳಂತಹ ಇತರ ಸಸ್ತನಿಗಳನ್ನು ಜೀಪ್ ಸಫಾರಿಯ ಮೂಲಕ ಆನಂದಿಸಬಹುದು. ಈ ಹುಲಿ ಸಂರಕ್ಷಿತ ಪ್ರದೇಶವು ಪ್ರಸಿದ್ಧ ಮಲ್ಲಿಕಾರ್ಜುನ ಭವ್ಯವಾದ ದೇವಾಲಯವನ್ನು ಹೊಂದಿದ್ದು, ಇದಕ್ಕೆ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ.

7. ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶ, ಕೇರಳ:

Periyar Tiger Reserve, Kerala

ಈ ಮೀಸಲು ಅರಣ್ಯವು ಮುಖ್ಯವಾಗಿ ತನ್ನ ನೈಸರ್ಗಿಕ ಸೌಂದರ್ಯ ಮತ್ತು ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ. ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶವು 777 ಚ.ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. 1895 ರಲ್ಲಿ ಬ್ರಿಟಿಷರು ರಚಿಸಿರುವ ಕೃತಕ ಸರೋವರ ಕೂಡ ಇಲ್ಲಿದೆ. ಅರಣ್ಯವು ದೊಡ್ಡಜಿಂಕೆಯ ತಳಿಗಳು, ಕಾಡುಹಂದಿ, ಲಾಂಗುರ್, ಹಾಗೂ ಸುಮಾರು 1000 ಆನೆಗಳಿಗೆ ನೆಲೆಯಾಗಿದೆ. ಇಲ್ಲಿ 35 ರಿಂದ 40 ಹುಲಿಗಳು ಕಾಣಸಿಗುತ್ತವೆ. ಇಲ್ಲಿ ಬೆಂಗಾಲಿ ಮತ್ತು ಬಿಳಿ ಜಾತಿಯ ಹುಲಿಗಳನ್ನು ಕಾಣಬಹುದು.

8. ಮನಸ್ ರಾಷ್ಟ್ರೀಯ ಉದ್ಯಾನವನ, ಅಸ್ಸಾಂ:

Manas Tiger reserve, Assam

ಪಟ್ಟಿಯಲ್ಲಿರುವ ಮತ್ತೊಂದು UNESCO ವಿಶ್ವ ಪರಂಪರೆಯ ತಾಣವಾದ ಮನಸ್ ರಾಷ್ಟ್ರೀಯ ಉದ್ಯಾನವನವು ಆಕರ್ಷಕ ಭೂದೃಶ್ಯಗಳು ಮತ್ತು ಸೊಗಸಾದ ವನ್ಯಜೀವಿಗಳ ನಿಧಿಯಾಗಿದೆ. 500 ಚದರ ಕಿ.ಮೀ ವಿಸ್ತೀರ್ಣದ ಪ್ರದೇಶದೊಂದಿಗೆ, ಇದು ಹುಲಿಗಳ ಸಮೃದ್ಧ ಜನಸಂಖ್ಯೆಗೆ ಹೆಸರುವಾಸಿಯಾಗಿದೆ. ಇದಲ್ಲದೆ, ಉದ್ಯಾನವನವು ಆನೆ ಮೀಸಲು ಪ್ರದೇಶವನ್ನು ಕೂಡ ಹೊಂದಿದೆ. ಪ್ರವಾಸಿಗರು ಇಲ್ಲಿ ಆನೆ ಸವಾರಿ ಮತ್ತು ದೋಣಿ ವಿಹಾರದಂತಹ ಮೋಜಿನ ಚಟುವಟಿಕೆಗಳನ್ನು ಆನಂದಿಸಬಹುದು. ಮನಸ್ ರಾಷ್ಟ್ರೀಯ ಉದ್ಯಾನವನವು ಬಹುಶಃ ವನ್ಯಜೀವಿಗಳನ್ನು ಅನ್ವೇಷಿಸಲು ರಾತ್ರಿ ವಿಹಾರಗಳನ್ನು ಒದಗಿಸುವ ಏಕೈಕ ರಾಷ್ಟ್ರೀಯ ಉದ್ಯಾನವನವಾಗಿದೆ.

9. ತಡೋಬಾ ರಾಷ್ಟ್ರೀಯ ಉದ್ಯಾನವನ, ಮಹಾರಾಷ್ಟ್ರ:

Tadoba Tiger Reserve, Maharashtra

ಮಹಾರಾಷ್ಟ್ರದ ಅತ್ಯಂತ ಹಳೆಯ ಮತ್ತು ದೊಡ್ಡ ರಾಷ್ಟ್ರೀಯ ಉದ್ಯಾನವನ, “ತಡೋಬಾ ರಾಷ್ಟ್ರೀಯ ಉದ್ಯಾನವನ”, ಇದನ್ನು “ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ” ಎಂದೂ ಸಹ ಕರೆಯಲಾಗುತ್ತದೆ. ಇದರ ಉಷ್ಣವಲಯದ ಒಣ ಎಲೆಯುದುರುವ ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಕನಿಷ್ಠ 80 ಹುಲಿಗಳನ್ನು ಹೊಂದಿದೆ ಮತ್ತು ದೊಡ್ಡ ಭೂದೃಶ್ಯದಲ್ಲಿ 200 ಕ್ಕೂ ಹೆಚ್ಚು ಹುಲಿಗಳನ್ನು ಹೊಂದಿದೆ. ಇದು ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹುಲಿ ಜನಸಂಖ್ಯೆಯ ಪ್ರದೇಶ ಎಂದು ತಿಳಿದು ಬಂದಿದೆ. ತಡೋಬಾವು ಚಿರತೆ ಮತ್ತು ಢೋಲ್ ಸೇರಿದಂತೆ ಹಲವಾರು ಇತರ ಮಾಂಸಾಹಾರಿ ಜಾತಿಗಳನ್ನು ಬೆಂಬಲಿಸುತ್ತದೆ, ಸಾಂಬಾರ್, ಚಿತಾಲ್, ಕಾಡು ಹಂದಿ ಮತ್ತು ಗೌರ್ ಅತ್ಯಂತ ಸಾಮಾನ್ಯ ಬೇಟೆಯ ಜಾತಿಗಳಾಗಿವೆ. ಇಲ್ಲಿಯ ಸರೋವರವು ವಿವಿಧರೀತಿಯ ನೀರಿನಪಕ್ಷಿಗಳು ಮತ್ತು ರಾಪ್ಟರ್‌ಗಳನ್ನು ಒಳಗೊಂಡಿದೆ. ಹಾಗೂ ಈ ಪ್ರದೇಶದಲ್ಲಿ ಮೂರು ಅಳಿವಿನಂಚಿನಲ್ಲಿರುವ ಜಾತಿಗಳನ್ನು ಒಳಗೊಂಡಂತೆ 195 ಜಾತಿಯ ಪಕ್ಷಿಗಳನ್ನು ದಾಖಲಿಸಲಾಗಿದೆ.

10. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಕರ್ನಾಟಕ

Nagarahole Tiger Reserve, Karnataka

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವನ್ನು ಹಿಂದೆ ರಾಜೀವ್ ಗಾಂಧಿ (ನಾಗರಹೊಳೆ) ರಾಷ್ಟ್ರೀಯ ಉದ್ಯಾನವನ ಎಂದು ಕರೆಯಲಾಗುತ್ತಿತ್ತು. ಮೈಸೂರು ಮತ್ತು ಕೊಡಗಿನಾದ್ಯಂತ ಹರಡಿರುವ ನಾಗರಹೊಳೆ 847.981 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ನಾಗರಹೊಳೆಯು ಕಾರ್ಬೆಟ್ ಮತ್ತು ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶಗಳ ನಂತರ ದೇಶದಲ್ಲಿ ಹೆಚ್ಚಿನ ಸಾಂದ್ರತೆಯ ಹುಲಿ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ನಾಗರಹೊಳೆ ಕರ್ನಾಟಕದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶವಾಗಿದೆ ಮತ್ತು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ಸಂರಕ್ಷಣೆಯ ಪ್ರಮುಖ ಕೇಂದ್ರವಾಗಿದೆ. ಇದು ಹುಲಿ, ಚಿರತೆ, ಏಷ್ಯಾಟಿಕ್ ಕಾಡು ನಾಯಿ ಮತ್ತು ಕರಡಿ, ಏಷ್ಯಾಟಿಕ್ ಆನೆ, ಗೌರ್, ಸಾಂಬಾರ್, ಚಿಟಾಲ್, ಮುಂಟ್ಜಾಕ್, ನಾಲ್ಕು ಕೊಂಬಿನ ಹುಲ್ಲೆ, ಕಾಡು ಹಂದಿ, ಇಲಿ ಜಿಂಕೆ ಮತ್ತು ನೈಋತ್ಯ ಲಾಂಗೂರ್ ಗಳ ಆವಾಸಸ್ಥಾನವಾಗಿದೆ.

ಹುಲಿ ಸಂರಕ್ಷಣೆಯಾದರೆ ಕಾಡೂ ಸಮೃದ್ಧವಾಗಿರುತ್ತದೆ. ಪ್ರಾಕೃತಿಕ ಸಮತೋಲನಕ್ಕೂ ಇದು ಸಹಕಾರಿ. ನಮ್ಮ ದೇಶದಲ್ಲಿ ಹುಲಿಗಳ ಸಂಖ್ಯೆಯು ಸುಧಾರಿಸಿದ್ದು, ಈಗಿರುವ ಹುಲಿಗಳ ಸಂಖ್ಯೆ 3,167. ಕಳೆದ ನಾಲ್ಕು ವರ್ಷಗಳಲ್ಲಿ ಇವುಗಳ ಸಂಖ್ಯೆಯಲ್ಲಿ 200 ರಷ್ಟು ಹೆಚ್ಚಳವಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button