ವಿಶ್ವದ ಅತ್ಯುತ್ತಮ ಸ್ಟ್ರೀಟ್ ಫುಡ್ ಸಿಹಿತಿಂಡಿ ಪಟ್ಟಿಯಲ್ಲಿ “ಮೈಸೂರು ಪಾಕ್”ಗೆ ಸ್ಥಾನ.

ಮೈಸೂರು ಅರಮನೆಯ ಅಡುಗೆ ಮನೆಯಲ್ಲಿ ಹುಟ್ಟಿದ ಸಿಹಿ ತಿಂಡಿ ಎಂಬ ಹೆಗ್ಗಳಿಕೆ ಹೊಂದಿರುವ “ಮೈಸೂರು ಪಾಕ್” ವಿಶ್ವದ ಅತ್ಯುತ್ತಮ ಸ್ಟ್ರೀಟ್ ಫುಡ್ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದಿದೆ. ಇದರೊಂದಿಗೆ ದೇಶೀಯ ತಿಂಡಿಗಳಾದ ಫಲೂಡಾ ಮತ್ತು ಕುಲ್ಫಿ ಫಲೂಡಾ ಕೂಡಾ ಪಟ್ಟಿಯಲ್ಲಿವೆ.
▪︎ ಉಜ್ವಲಾ. ವಿ. ಯು
ಪ್ರಸಿದ್ಧ ಟೇಸ್ಟ್ ಅಟ್ಲಾಸ್ (Taste Atlas) ಎಂಬುದು ಆಹಾರ-ಆಧಾರಿತ ನಿಯತಕಾಲಿಕವಾಗಿದ್ದು, ಅದು ಪ್ರಪಂಚದಾದ್ಯಂತ ಬೀದಿ ಆಹಾರ (Street Food)ದ ಬಗ್ಗೆ ವಿವರವಾದ ವಿಮರ್ಶೆ ಮತ್ತು ಮಾಹಿತಿಯನ್ನು ನೀಡುತ್ತದೆ. ವಿಶ್ವದಾದ್ಯಂತ ನಡೆಸಿರುವ ಸಂಶೋಧನೆಯ ಆಧಾರದ ಮೇಲೆ, ಟೇಸ್ಟ್ ಅಟ್ಲಾಸ್ ವಿಶ್ವದ 50 ಅತ್ಯುತ್ತಮ ಸ್ಟ್ರೀಟ್ ಫುಡ್ (Best Street Food)ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ನಮ್ಮ ಮೈಸೂರಿನ ಸಿಹಿ ತಿಂಡಿಯಾದ “ಮೈಸೂರು ಪಾಕ್” (Mysore Pak) ಆನ್ ಲೈನ್ ಮಾರುಕಟ್ಟೆಯಲ್ಲಿ 4.4 ರೇಟಿಂಗ್ ಪಡೆಯುವ ಮೂಲಕ 14 ನೇ ಸ್ಥಾನ ಪಡೆದಿದೆ ಎನ್ನುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯ.
ಮೈಸೂರು ಪಾಕ್ ನ ಜೊತೆಗೆ ದೇಶೀಯ ತಿಂಡಿಗಳಾದ “ಕುಲ್ಫಿ ಫಲೂಡಾ” 4.3 ರೇಟಿಂಗ್ ಪಡೆಯುವ ಮೂಲಕ 18 ನೇ ಸ್ಥಾನದಲ್ಲಿದ್ದರೆ, “ಫಲೂಡಾ” 4.0 ರೇಟಿಂಗ್ ಪಡೆಯುವ ಮೂಲಕ 32 ನೇ ಸ್ಥಾನದಲ್ಲಿದೆ.

ಸರಳವಾದ ಮತ್ತು ಶ್ರೀಮಂತ ರುಚಿಯನ್ನು ಹೊಂದಿರುವ ಮೈಸೂರು ಪಾಕ್ ಅನ್ನು ಕೇವಲ ಮೂರು ಮುಖ್ಯ ಪದಾರ್ಥಗಳನ್ನು ಬಳಸಿ ಮಾಡಲಾಗುತ್ತದೆ. ಅದುವೇ ತುಪ್ಪ, ಸಕ್ಕರೆ ಮತ್ತು ಕಡಲೇ ಹಿಟ್ಟು. ಮೈಸೂರು ಪಾಕ್ ಕೃಷ್ಣ ರಾಜ ಒಡೆಯರ್ IV ಅವರ ಆಳ್ವಕೆಯ ಕಾಲದಲ್ಲಿ ಮೈಸೂರಿನ ಪಾಕಶಾಲೆಯಲ್ಲಿ ಹುಟ್ಟಿತು ಎಂದು ಹೇಳಲಾಗುತ್ತದೆ. ಇದರ ಆವಿಷ್ಕಾರದ ಕೀರ್ತಿಯು ರಾಜಮನೆತನದ ಬಾಣಸಿಗ “ಮಾದಪ್ಪ” ಅವರಿಗೆ ಸಲ್ಲುತ್ತದೆ.
ಪ್ರಪಂಚದಾದ್ಯಂತ ಪ್ರಸಿದ್ಧಿ ಹೊಂದಿರುವ “ಮೈಸೂರು ಪಾಕ್” ಭಾರತೀಯ ಬಾಣಸಿಗರ ಕೈಚಳಕದಿಂದಾಗಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯಲ್ಲಿ ಮಾರ್ಪಾಟಾಗಿ ಬೇರೆ ಬೇರೆ ರುಚಿಗಳಲ್ಲಿ ಲಭ್ಯವಾಗುತ್ತಿವೆ. ಅವುಗಳಲ್ಲಿ ಕೆಲವು ಖಾಸಾ ಖಾಸಾ ಮೈಸೂರು ಪಾಕ್, ಕ್ಯಾರೆಟ್ ಮೈಸೂರು ಪಾಕ್, ಬೀಟ್ ರೋಟ್ ಮೈಸೂರು ಪಾಕ್, ಗೋಡಂಬಿ ಮೈಸೂರು ಪಾಕ್, ಮತ್ತು ಖರ್ಜೂರದ ಮೈಸೂರು ಪಾಕ್.

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಹ ಮೈಸೂರು ಪಾಕ್ ವಿಶ್ವದ ಅತ್ಯುತ್ತಮ ಸ್ಟ್ರೀಟ್ ಫುಡ್ ಸಿಹಿತಿಂಡಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಕ್ಕೆ ತಮ್ಮ ಸಂತೋಷವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಮೈಸೂರು ಪಾಕ್ ಮಾತ್ರವಲ್ಲದೇ, ಮೈಸೂರಿನ ವೀಳ್ಯದೆಲೆ, ಮೈಸೂರು ಸಿಲ್ಕ್, ಮೈಸೂರು ಮಲ್ಲಿಗೆ ಕೂಡಾ ದೇಶ-ವಿದೇಶಗಳಿಗೆ ರಫ್ತುಗೊಳ್ಳುತ್ತವೆ. ಮೈಸೂರು ಅರಮನೆ,ಜಂಬೂ ಸವಾರಿ ಉತ್ಸವ, ಚಾಮುಂಡಿ ಬೆಟ್ಟ ಸಹ ವಿಶ್ವ ಪ್ರಸಿದ್ಧ. ಒಟ್ಟಿನಲ್ಲಿ “ಮೈಸೂರು” ಕನ್ನಡಿಗರ ಹೆಮ್ಮೆಯ ತಾಣ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.