ಅಳಿವಿನಂಚಿನಲ್ಲಿದ್ದಾನೆ ಕಾಡಿನ ರಾಜ; ಇಂದು ವಿಶ್ವ ಸಿಂಹ ದಿನ
“ಕಾಡಿನ ರಾಜ” ಎಂದು ಕರೆಯಲ್ಪಡುವ ಸಿಂಹದ ಪ್ರಾಮುಖ್ಯತೆಯನ್ನು ಸಾರಲು ಪ್ರತಿವರ್ಷ ಆಗಸ್ಟ್ 10 (August 10)ರಂದು ವಿಶ್ವ ಸಿಂಹ ದಿನ (World Lion Day) ವೆಂದು ಆಚರಿಸಲಾಗುತ್ತದೆ. ಈ ದಿನವು ಅರಣ್ಯನಾಶ, ಮಾನವರೊಂದಿಗಿನ ಸಂಪರ್ಘ, ಹವಾಮಾನ ಬದಲಾವಣೆ, ಕಾಡಿನ ಸವಕಳಿ, ಬೇಟೆ ಹೀಗೆ ಹಲವು ಕಾರಣಗಳಿಂದ ಸಿಂಹಗಳು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಅರಿವನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ.
• ಉಜ್ವಲಾ ವಿ. ಯು.
ವರ್ಷ ಕಳೆದಂತೆ ಸಿಂಹಗಳ ಸಂಖ್ಯೆ ಕ್ಷೀಣಿಸುತ್ತಿದೆ. ಐದು ದಶಕಗಳ ಅವಧಿಯಲ್ಲಿ, ಇಡೀ ವಿಶ್ವದಲ್ಲಿ ಸಿಂಹಗಳ ಸಂಖ್ಯೆಯು ಸುಮಾರು 80% ರಷ್ಟು ಕಡಿಮೆಯಾಗಿದೆ. ಸಿಂಹಗಳು ಮತ್ತು ಅವುಗಳ ವಾಸಸ್ಥಾನಗಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಹೆಚ್ಚಿದೆ. ಇದೇ ಉದ್ದೇಶದಿಂದ ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ.
ಸುಮಾರು ಮೂರು ಮಿಲಿಯನ್ ವರ್ಷಗಳ ಹಿಂದೆ, ಸಿಂಹಗಳು ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಯೂರೋಪ್ನಲ್ಲಿ ಮುಕ್ತವಾಗಿ ಕಾಣಸಿಗುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಿಂಹಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಹಾಗಾಗಿ ಪರಿಸರ ವ್ಯವಸ್ಥೆ ಮತ್ತು ಆಹಾರ ಸರಪಳಿಗೆ ಸಿಂಹಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುವ ನಿಟ್ಟಿನಿಂದ ಸಿಂಹಗಳಿಗೆಂದೇ ಮೀಸಲಾಗಿರುವ ವಿಶ್ವದ ಅತಿದೊಡ್ಡ ಅಭಯಾರಣ್ಯ ಬಿಗ್ ಕ್ಯಾಟ್ ರೆಸ್‌ಕ್ಯೂನಲ್ಲಿ 2013ರಲ್ಲಿ ಮೊದಲ ಬಾರಿಗೆ “ವಿಶ್ವ ಸಿಂಹ ದಿನ”ವನ್ನು ಆಚರಿಸಲಾಯಿತು. ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಈ ದಿನದ ಆಚರಣೆಗೆ ಕರೆ ಕೊಟ್ಟರು.
ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಸಿಂಹಗಳನ್ನು ಅಪಾಯಕ್ಕೊಳಗಾದ ಪ್ರಾಣಿಗಳ “ಕೆಂಪು ಪಟ್ಟಿ”ಯಲ್ಲಿ ಸೇರಿಸಿದೆ. ಪ್ರಪಂಚದಲ್ಲಿ ಪ್ರಸ್ತುತ 30,000 ರಿಂದ 100,000 ಸಿಂಹಗಳು ಉಳಿದಿವೆ. ಆಫ್ರಿಕಾವನ್ನು ಹೊರತುಪಡಿಸಿ, ಪ್ರಪಂಚದಾದ್ಯಂತ ಕಾಡು ಸಿಂಹಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಭಾರತದಲ್ಲಿಯೂ ಗುಜರಾತ್ನ ಗಿರ್ ಅರಣ್ಯ ಪ್ರದೇಶವನ್ನು ಹೊರತು ಪಡಿಸಿ, ಇನ್ನುಳಿದ ಅರಣ್ಯಗಳಲ್ಲಿ ಸಿಂಹಗಳ ವಿಸ್ತರಣೆ ಸಾಧ್ಯವಾಗಿಲ್ಲ. ಸುಪ್ರೀಂ ಕೋರ್ಟ್ ಸಿಂಹಗಳ ಸ್ಥಳಾಂತರಕ್ಕೆ ಆದೇಶ ನೀಡಿ ದಶಕ ಕಳೆದರೂ, ಅದಿನ್ನೂ ಜಾರಿಯಾದಂತೆ ಕಾಣುತ್ತಿಲ್ಲ.
ನೀವು ಇದನ್ನೂ ಇಷ್ಟಪಡಬಹುದು: ಆಸ್ಟ್ರೇಲಿಯಾದಲ್ಲಿದ್ದು ಕರ್ನಾಟಕದ ಕಾಡು ಉಳಿಸಲು ಶ್ರಮಿಸುತ್ತಿರುವ ವೈಲ್ಡ್ ಲೈಫ್ ಫೋಟೋಗ್ರಾಫರ್
ಪ್ರಸ್ತುತ ಗುಜರಾತಿನ ಗಿರ್ ಅರಣ್ಯದಲ್ಲಿ ಸುಮಾರು 400 ಸಿಂಹಗಳಿವೆ. ಇನ್ನೂ 300 ಸಿಂಹಗಳು ಗುಜರಾತಿನ ಉಳಿದ ಅರಣ್ಯ ಭಾಗಗಳಲ್ಲಿ ಕಂಡು ಬರುತ್ತದೆ. ವಿಶ್ವದಾದ್ಯಂತ ಸಿಂಹಗಳು ಅಳಿವಿನಂಚಿನಲ್ಲಿದ್ದರೂ, ಗುಜರಾತಿನ ಭಾಗದಲ್ಲಿ ಮಾತ್ರ ಇವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಸ್ಥಳದ ಅಭಾವದಿಂದಾಗಿ ಸಿಂಹಗಳು ಕೃಷಿ ಪ್ರದೇಶಗಳಲ್ಲಿ ಓಡಾಡಲು ಆರಂಭಿಸಿದ್ದು, ಮಾನವ ಸಿಂಹಗಳ ಸಂಘರ್ಷಕ್ಕೆ ಕಾರಣವಾಗಿದೆ.
ಹಿಂದೆ ಬ್ರಿಟಿಷ್ರ ಬಂದೂಕು ಬಳಕೆಯಿಂದಾಗಿ ಸಿಂಹಗಳ ದನಿ ಅಡಗಲು ಶುರುವಾಯಿತು. ಪ್ರಸ್ತುತ ಬೇಟೆ, ಕಳ್ಳಸಾಗಣೆ, ಅರಣ್ಯ ನಾಶ ಹಾಗೂ ಆವಾಸ ಸ್ಥಾನಗಳ ಕಣ್ಮರೆಯಿಂದಾಗಿ ಸಿಂಹ ಅಳಿವಿನಂಚಿನ ಪಟ್ಟಿಗೆ ಸೇರುವಂತಾಗಿದೆ. ಸಿಂಹಗಳ ಮೂಳೆ ಔಷಧ ಹಾಗೂ ಅಲಂಕಾರಕ್ಕೆ ಬಳಕೆಯಾಗುತ್ತಿರುವುದರಿಂದ ಈ ಪ್ರಾಣಿಯ ಬೇಟೆ, ಕಳ್ಳಸಾಗಣೆ ಹೆಚ್ಚುತ್ತಿವೆ. ಜೀವವೈವಿಧ್ಯತೆಯಲ್ಲಿ ಸಿಂಹಗಳ ಪಾತ್ರದ ಪ್ರಾಮುಖ್ಯತೆ ಅರಿತು ಕೇಂದ್ರ ಸರ್ಕಾರ 2020ರಲ್ಲಿ ‘ಪ್ರಾಜೆಕ್ಟ್ ಲಯನ್’ ಕಾರ್ಯಕ್ರಮ ಘೋಷಿಸಿದೆ.
ಭೂಮಿ ಮೇಲಿರುವ ಜೀವಿಗಳಲ್ಲಿ ಅತ್ಯಂತ ಬಲಿಷ್ಠ ಹಾಗೂ ಧೈರ್ಯವಂತ ಪ್ರಾಣಿ “ಸಿಂಹ”. ಗಂಭೀರ ನಡಿಗೆ, ಗರ್ಜನೆಯಿಂದಾಗಿ ಎಲ್ಲರ ಗಮನ ಸೆಳೆಯುವ ಈ ಪ್ರಾಣಿ ಅಳಿವಿನಂಚಿನಲ್ಲಿರುವುದು ದುಃಖದ ಸಂಗತಿ. ಇವುಗಳ ಅಳಿವಿಗೆ ಮನುಷ್ಯನೇ ಹೆಚ್ಚು ಜವಾಬ್ದಾರನಾಗಿದ್ದಾನೆ. ತನ್ನ ಸ್ವಾರ್ಥ ಸಾಧನೆಗಾಗಿ ಮೂಕ ಪ್ರಾಣಿಗಳನ್ನು ಉಪಯೋಗಿಸುವ ತನ್ನ ಸಣ್ಣ ಬುದ್ಧಿಯನ್ನು ಇನ್ನಾದರೂ ಮಾನವ ಬಿಡಬೇಕಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ