ಕಾಡಿನ ಕತೆಗಳುವಿಂಗಡಿಸದ

ಆನೆಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ಬಂಡೀಪುರಕ್ಕೆ ಪ್ರಥಮ ಸ್ಥಾನ; ವಿಶ್ವ ಆನೆ ದಿನ ವಿಶೇಷ

ಅತಿ ಹೆಚ್ಚು ಹುಲಿಗಳ ವಾಸಸ್ಥಾನವಾಗಿರುವ “ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ” (Bandipur Tiger Reserve) ವು ಈಗ ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳನ್ನೂ ಹೊಂದಿರುವ ಪ್ರದೇಶವಾಗಿ ಹೊರಹೊಮ್ಮಿದೆ.

• ಉಜ್ವಲಾ ವಿ ಯು

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಪ್ರತೀ ಐದು ವರ್ಷಕ್ಕೊಮ್ಮೆ ಆನೆಗಣತಿ (Elephant census Karnataka) ನಡೆಸಲಾಗುತ್ತದೆ. ಆನೆಗಳ ನೇರ ಎಣಿಕೆ, ಲದ್ದಿ ಎಣಿಕೆ ಹಾಗೂ ವಾಟರ್ ಹೋಲ್ ಎಣಿಕೆ ಮೂಲಕ ಗಣತಿ ಪ್ರಕ್ರಿಯೆ ನಡೆಯುತ್ತದೆ. ಅಂತೆಯೇ 2023ರ ಮೇ 17 ರಿಂದ 19ರವರೆಗೆ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಏಕಕಾಲದಲ್ಲಿ ಮೂರು ವಿಧಾನಗಳಲ್ಲಿ ಆನೆ ಗಣತಿ ಆರಂಭವಾಯಿತು. ಗಣತಿಗೆ ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ನೆರವನ್ನು ಪಡೆಯಲಾಯಿತು.

 ಆನೆ ಗಣತಿ (Elephant Census) ಪ್ರಕಾರ, ರಾಜ್ಯದ 32 ವನ್ಯಜೀವಿ ಅರಣ್ಯ ವಿಭಾಗಗಳ ಪೈಕಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸರಾಸರಿ 1,116 ಆನೆಗಳಿದ್ದು, ರಾಜ್ಯದಲ್ಲೇ “ಅತಿ ಹೆಚ್ಚು ಆನೆಗಳಿರುವ ಪ್ರದೇಶ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Bandipur Tiger Reserve

ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಬಿಡುಗಡೆ ಮಾಡಿರುವ ಆನೆ ಗಣತಿ ಪ್ರಕಾರ, ರಾಜ್ಯದಲ್ಲಿ ಒಟ್ಟು “6,395 ಆನೆ”ಗಳಿವೆ. ಈ ಪೈಕಿ, ಚಾಮರಾಜನಗರ ಜಿಲ್ಲೆಯ ಬಂಡೀಪುರ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳು, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಧಾಮಗಳಲ್ಲಿ ಒಟ್ಟು 2,677 ಆನೆಗಳು ಇವೆ.

ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ 831 ಆನೆಗಳಿವೆ. ಯಲ್ಲಾಪುರದಲ್ಲಿ 2, ಹಳಿಯಾಳದಲ್ಲಿ 3, ಕುದುರೆಮುಖದಲ್ಲಿ 5 ಮತ್ತು ಭದ್ರಾವತಿಯಲ್ಲಿ 8 ಆನೆಗಳಿದ್ದು ಅತಿ ಕಡಿಮೆ ಆನೆಗಳನ್ನು ಹೊಂದಿರುವ ಪ್ರದೇಶವಾಗಿದೆ.

ನೀವು ಇದನ್ನೂ ಇಷ್ಟಪಡಬಹುದು: ಎಳೆಯ ಪಕ್ಷಿಗಳ ಅಂತರಾಳ ಕೇಳಿಸಿಕೊಂಡ ದೈತ್ಯ ಆನೆ: ಮನುಷ್ಯತ್ವಕ್ಕೆ ಕೈಗನ್ನಡಿಯಾದ ಸನ್ನಿವೇಶ

ಚಾಮರಾಜನಗರ ಜಿಲ್ಲೆಯಲ್ಲಿ ಆನೆಗಳ ಸಂಖ್ಯೆ ಹೆಚ್ಚಿರುವುದರಿಂದ, ಅವುಗಳ ಸಾವಿನ ಪ್ರಮಾಣವೂ ಹೆಚ್ಚೇ ಇದೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 12 ಆನೆಗಳು ಮೃತಪಟ್ಟಿವೆ. ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ ಅವರ ಮಾಹಿತಿಯ ಪ್ರಕಾರ, ಅರಣ್ಯ ಪ್ರದೇಶಗಳಲ್ಲಿ ಸಾವಿನ ಜೊತೆ ಜನನ ಪ್ರಮಾಣವೂ ಹೆಚ್ಚಿದೆ. ಬಂಡೀಪುರದಲ್ಲಿ ಸಾಮಾನ್ಯವಾಗಿ ಪ್ರತಿ ಆನೆ ಹಿಂಡಿನಲ್ಲೂ ಎರಡು ಮೂರು ಮರಿಗಳು ಇರುವುದು ಕಾಣಿಸುತ್ತವೆ.

ಮುಂದುವರೆದು ರಮೇಶ್‌ ಕುಮಾರ್‌ ಅವರು ಗಣತಿ ವರದಿಯ ಕುರಿತು ಸಂತಸ ವ್ಯಕ್ತಪಡಿಸುತ್ತಾ, ಆನೆಗಳ ಸಂಖ್ಯೆ ಹೆಚ್ಚಳವಾಗಿರುವುದು, ಆನೆಗಳ ಬೆಳವಣಿಗೆಗೆ ಪೂರಕ ವಾತಾವರಣ ಇದೆ ಎಂಬುದನ್ನು ತೋರಿಸುತ್ತದೆ. ಇದು ರಾಜ್ಯ ಮಟ್ಟದಲ್ಲಿ ನಡೆಸಿದ ಸಮೀಕ್ಷೆಯಾಗಿದೆ. ರಾಷ್ಟ್ರೀಯ ಮಟ್ಟದಲ್ಲಿಯೂ, ಎನ್‌ಟಿಸಿಎ ಹುಲಿ ಗಣತಿ ಮಾಡುವಾಗ ಆನೆಗಳ ಸಂಖ್ಯೆಯನ್ನೂ ಲೆಕ್ಕಹಾಕಿದೆ. ಅದರ ವಿವರಗಳನ್ನು ವಿಶ್ವ ಆನೆ ದಿನ (ಆ.12) ಪ್ರಕಟವಾಗಲಿದೆಯೇ ಎಂದು ಕಾದು ನೋಡಬೇಕಿದೆ ಎಂದರು.

ಕರ್ನಾಟಕದಲ್ಲಿ ಆನೆಗಳ ಸಂಖ್ಯೆ ಹೆಚ್ಚುತ್ತಿರುವಂತೆ, ಮಾನವ ಮತ್ತು ಆನೆಗಳ ಸಂಘರ್ಷ, ಆನೆಗಳ ಬೇಟೆ, ಕಳ್ಳಸಾಗಾಣಿಕೆ, ಆನೆಗಳ ವಾಸಸ್ಥಾನದ ಕೊರತೆ ಈ ರೀತಿಯ ಸಮಸ್ಯೆಗಳು ಹಲವು ಪ್ರದೇಶಗಳಲ್ಲಿ ಕಂಡುಬರುತ್ತಿವೆ. ಇವೆಲ್ಲಾ ಸಮಸ್ಯೆಗೆ ಮಾನವನೇ ಒಂದಲ್ಲಾ ಒಂದು ರೀತಿಯಲ್ಲಿ ಕಾರಣನಾಗಿದ್ಡಾನೆ. ಆದ ಕಾರಣ ವಿಶ್ವ ಆನೆ ದಿನ (World Elephant Day) ವಾದ ಇಂದು ನಾವೆಲ್ಲರೂ ಆನೆಗಳಿಗೆ ಜೀವನ ನಡೆಸಲು ಅನುವು ಮಾಡಿಕೊಡುವುದು, ಅಗತ್ಯವಿರುವ ಪ್ರದೇಶ ಸುರಕ್ಷತೆಯನ್ನು ಒದಗಿಸಿಕೊಡುವುದು, ಮತ್ತು ಸ್ವಾರ್ಥ ಸಾಧನೆಗಾಗಿ ಆನೆಗಳನ್ನು ಬೇಟೆಯಾಡದೇ ಇರುವ ಸಂಕಲ್ಪ ತೊಡುವ ಅಗತ್ಯವಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲ ತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button