ಗಾಂಧಿ ಜಯಂತಿ ವಿಶೇಷ: ಪ್ರಪಂಚದಾದ್ಯಂತ ಇರುವ ಗಾಂಧೀಜಿ ಪ್ರತಿಮೆಗಳು
ಇಂದು ಅಕ್ಟೋಬರ 2, ಮಹಾತ್ಮ ಗಾಂಧೀಜಿಯವರು ಹುಟ್ಟಿದ ದಿನ. ಗಾಂಧೀಜಿಯವರ ತತ್ವಗಳನ್ನು ಸಾರುವ ನಿಟ್ಟಿನಿಂದ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಗಾಂಧೀಜಿಯವರ ಸ್ಮಾರಕಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳಲ್ಲಿ ಕೆಲವು ಪ್ರತಿಮೆಗಳ ಮಾಹಿತಿ ಇಲ್ಲಿದೆ.
● ಉಜ್ವಲಾ ವಿ.ಯು
1. ಗಾಂಧಿ ಮೈದಾನ, ಪಾಟ್ನಾ:
ಪಾಟ್ನಾದ ಗಾಂಧಿ ಮೈದಾನದಲ್ಲಿರುವ ಮಹಾತ್ಮ ಗಾಂಧೀಜಿಯವರ 72 ಅಡಿ ಎತ್ತರದ ಕಂಚಿನ ಪ್ರತಿಮೆಯು ವಿಶ್ವದ ಅತಿ ಎತ್ತರದ ಗಾಂಧೀಜಿ ಪ್ರತಿಮೆಯಾಗಿದೆ. ಈ ಪ್ರತಿಮೆಯನ್ನು 15 ಫೆಬ್ರವರಿ 2013 ರಂದು ಬಿಹಾರದ ಅಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅನಾವರಣಗೊಳಿಸಿದರು. ರಾಮ್‌ಸುತಾರ್ ಆರ್ಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ಶಿಲ್ಪಿ ಅನಿಲ್ ಅವರಿಂದ ಈ ಪ್ರತಿಮೆ ಕೆತ್ತಲ್ಪಟ್ಟಿದೆ. ಪ್ರತಿಮೆಯ ಕೆಳಭಾಗದಲ್ಲಿ ಗಾಂಧಿಯವರ ಜೀವನದ ನಾಲ್ಕು ಹೆಗ್ಗುರುತು ಘಟನೆಗಳಾದ: 1930 ರ ದಂಡಿ ಯಾತ್ರೆ , 1942 ರ ಕ್ವಿಟ್ ಇಂಡಿಯಾ ಚಳುವಳಿ , 1917 ರ ಚಂಪಾರಣ್ ಸತ್ಯಾಗ್ರಹ ಮತ್ತು ಗಾಂಧೀಜಿಯ ಸಂಕೇತವಾದ ಚರಕಾಗಳ ಕುರಿತು ತಿಳಿಸಲಾಗಿದೆ.
2. ಮ್ಯಾಡ್ರಿಡ್, ಸ್ಪೇನ್:
ಸ್ಪೇನ್‌ನ ರಾಣಿ ಸೋಫಿಯಾ ಅವರು ಅಕ್ಟೋಬರ್ 2, 2013 ರಂದು ಗಾಂಧಿಯವರ 144 ನೇ ಜನ್ಮದಿನದಂದು ಈ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಪ್ರತಿಮೆಯನ್ನು ಕಲಾವಿದರಾದ ರಾಮ್ ಸುತಾರ್ ಭಾರತದಲ್ಲಿಯೇ ನಿರ್ಮಿಸಿ, ಸ್ಪೇನ್ ಗೆ ಕೊಂಡೊಯ್ದಿದ್ದರು.
3. ಜಿನೇವಾ, ಸ್ವಿಟ್ಜರ್ಲೆಂಡ್:
ಜಿನೇವಾದಲ್ಲಿರುವ ವಿಶ್ವಸಂಸ್ಥೆಯ ಯುರೋಪಿಯನ್ ಪ್ರಧಾನ ಕಛೇರಿಯ ಹೊರ ಭಾಗದಲ್ಲಿರುವ ಈ ಪ್ರತಿಮೆಯನ್ನು 2007 ರಲ್ಲಿ ಶಾಂತಿಯನ್ನು ಉತ್ತೇಜಿಸುವ ನಿಟ್ಟಿನಿಂದ ಭಾರತವು ಉಡುಗೊರೆಯಾಗಿ ನೀಡಿತು.
4. ವಾಷಿಂಗ್ಟನ್ DC, USA:
2000 ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರವಾಸದ ಸಂದರ್ಭದಲ್ಲಿ, ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯಿಂದ ಈ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಯಿತು. 8 ಅಡಿ 8 ಇಂಚು ಎತ್ತರದ ಈ ಕಂಚಿನ ಪ್ರತಿಮೆಯನ್ನು ಕೋಲ್ಕತ್ತಾದ ಶಿಲ್ಪಿ ಗೌತಮ್ ಪಾಲ್ ಈ ಪ್ರತಿಮೆಯನ್ನು ನಿರ್ಮಿಸಿದ್ದರು.
ನೀವು ಇದನ್ನೂ ಇಷ್ಟಪಡಬಹುದು: ಗಾಂಧಿಯ ಹೆಸರಿನಲ್ಲಿರುವ 9 ವಸ್ತು ಸಂಗ್ರಹಾಲಯಗಳು.
5. ನ್ಯೂಯಾರ್ಕ್, USA:
ಯುಎಸ್‌ಎನ ನ್ಯೂಯಾರ್ಕ್ ನಗರದಲ್ಲೂ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಇದೆ.1986ರ ಅಕ್ಟೋಬರ್ 2 ರಂದು ಗಾಂಧೀಜಿ ಅವರ ಜನ್ಮದಿನದ ಸಂದರ್ಭದಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಕಾಂತಿಲಾಲ್ ಬಿ. ಪಟೇಲ್ ಎಂಬ ಕಲಾವಿದರು ಈ ಪ್ರತಿಮೆಯನ್ನು ನಿರ್ಮಿಸಿದ್ದರು.
6. ಲಂಡನ್, ಯುಕೆ:
ಲಂಡನ್‌ನ ವೆಸ್ಟ್‌ಮಿನಿಸ್ಟರ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯು ಪ್ರಸಿದ್ಧ ಶಿಲ್ಪಿ ಫಿಲಿಪ್ ಜಾಕ್ಸನ್ ಅವರಿಂದ ನಿರ್ಮಿಸಲ್ಪಟ್ಟಿದ್ದು. ಈ ಪ್ರತಿಮೆ 9 ಅಡಿ ಎತ್ತರ ಇದೆ. ಇವರು 1931ರಲ್ಲಿ ಪ್ರಧಾನ ಮಂತ್ರಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಅವರ ಕಚೇರಿಯ ಬಳಿ ಇದ್ದ ಗಾಂಧೀಜಿಯವರ ಛಾಯಾಚಿತ್ರದಿಂದ ಸ್ಫೂರ್ತಿ ಪಡೆದು ಈ ಪ್ರತಿಮೆಯನ್ನು ನಿರ್ಮಿಸಿದರು.
7. ಸುರಿನಾಮ್, ದಕ್ಷಿಣ ಅಮೇರಿಕಾ:
ಸುರಿನಾಮಿನ ರಾಜಧಾನಿ ಪರಮಾರಿಬೋದಲ್ಲಿನ ಹೈಲಿಜೆನ್‌ವೆಗ್ ಬಳಿಯಲ್ಲಿರುವ ಈ ಪ್ರತಿಮೆಯು ಸಾಕಷ್ಟು ಪ್ರಸಿದ್ದಿಯನ್ನು ಹೊಂದಿದೆ. ಏಕೆಂದರೆ, ಗಾಂಧೀಜಿಯವರು ಸುರಿನಾಮ್ ನಲ್ಲಿ ಕಾರ್ಮಿಕರ ಹಕ್ಕುಗಳ ಪರವಾಗಿ ಗಾಂಧೀಜಿ ಧ್ವನಿಯನ್ನು ಎತ್ತಿದ್ದರು.
8. ರಾಜಘಾಟ್, ದೆಹಲಿ:
ಇತ್ತೀಚೆಗಷ್ಟೇ, 2023ರ ಸೆಪ್ಟೆಂಬರ್ 4 ರಂದು ರಾಜ್‌ಘಾಟ್ ಬಳಿ 12 ಅಡಿ ಎತ್ತರದ ಮಹಾತ್ಮ ಗಾಂಧಿ ಪ್ರತಿಮೆ ಮತ್ತು ‘ಗಾಂಧಿ ವಾಟಿಕಾ’ವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು. ಇಲ್ಲಿ ವಿವಿಧ ಭಂಗಿಯ ಗಾಂಧೀಜಿಯವರ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು, ಇವುಗಳನ್ನು ಜೈಪುರದ ಕುಶಲಕರ್ಮಿಗಳು ಕೆತ್ತಿದ್ದಾರೆ.
ನಾವು ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.