“50” ವರ್ಷಗಳನ್ನು ಪೂರೈಸಿದ ಕರ್ನಾಟಕ; ನವೆಂಬರ 1 ರಿಂದ ಒಂದು ವರ್ಷ ಸಂಭ್ರಮಾಚರಣೆ
ಮೈಸೂರು ರಾಜ್ಯ “ಕರ್ನಾಟಕ” ವಾಗಿ ನಾಮಕರಣಗೊಂಡು ಇಂದಿಗೆ “50” ವರ್ಷ. ಈ ಹಿನ್ನೆಲೆಯಲ್ಲಿ ನ.1 ರಿಂದ ಅ.31.2024 ರವರೆಗೆ “ಕರ್ನಾಟಕ ಸಂಭ್ರಮ-50” ಎಂಬ ಹೆಸರಿನಲ್ಲಿ ವರ್ಷ ಪೂರ್ತಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
● ಉಜ್ವಲಾ ವಿ ಯು
ಇಂದು ನ.1 ರಂದು ಮನೆ ಮನೆಗಳಲ್ಲಿ ಕನ್ನಡ ಬಾವುಟ ಹಾರಲಿ,ಕನ್ನಡದ ರಂಗುಗಳು ಮನೆಯ ರಂಗೋಲಿಗಳಲ್ಲಿ ರಾರಾಜಿಸಲಿ, ಮತ್ತು ಕನ್ನಡದ ಜ್ಯೋತಿ ಬೆಳಗಲಿ ಎಂದು ರಾಜ್ಯ ಸರ್ಕಾರ ಜನರಿಗೆ ಕರೆ ನೀಡಿದೆ. ಈ ಬಗ್ಗೆ ಅರಿವು ಮೂಡಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸುತ್ತೋಲೆಯನ್ನು ಕೂಡಾ ಹೊರಡಿಸಿದ್ದಾರೆ.
ಈ ಸುತ್ತೋಲೆಯಲ್ಲಿ ರಾಜ್ಯದ ಜನರು ಈ ವರ್ಷ ಹೇಗೆ ಕನ್ನಡ ರಾಜ್ಯೋತ್ಸವ ಆಚರಿಸಬೇಕೆಂಬ ಮಾಹಿತಿ ನೀಡಲಾಗಿದೆ:
1. ರಾಜ್ಯದ ಪ್ರತೀ ಮನೆಯಲ್ಲಿಯೂ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯದೊಂದಿಗೆ ಮನೆಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಯಲ್ಲಿ 50ರ ಸಂಭ್ರಮದ ಚಿತ್ತಾರವನ್ನು ಬಿಡಿಸುವಂತೆ ಮನವಿ ಮಾಡಲಾಗಿದೆ.
2. ಇಂದು ಬೆಳಗ್ಗೆ 9ಗಂಟೆಗೆ ರಾಜ್ಯದ ಎಲ್ಲಾ ಆಕಾಶವಾಣಿಯಲ್ಲಿ ನಾಡಗೀತೆ ಪ್ರಸಾರವಾಗಲಿದ್ದು, ನಾಡ ಗೀತೆ ಸಂದರ್ಭದಲ್ಲಿ ರಾಜ್ಯದ ಜನ ಎದ್ದು ನಿಂತು ನಾಡಗೀತೆಗೆ ಗೌರವ ಸಮರ್ಪಣೆ ಮಾಡುವಂತೆ ಕೋರಲಾಗಿದೆ.
3. ಇಂದು ನವೆಂಬರ್ 1 ರಂದು ಸಂಜೆ ಐದು ಗಂಟೆಗೆ ನಾಡಿನ ಜನರು ತಮ್ಮ ತಮ್ಮ ಗ್ರಾಮಗಳಲ್ಲಿ ಕನ್ನಡ ಬಾವುಟವುಳ್ಳ ಗಾಳಿಪಟ ಹಾರಿಸುವಂತೆ ಕರೆ ನೀಡಲಾಗಿದೆ.
4. ಸಂಜೆ 7 ಗಂಟೆಗೆ ಎಲ್ಲಾ ಮನೆಗಳು, ಅಂಗಡಿ, ಕಚೇರಿಗಳ ಮುಂದೆ ದೀಪ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗುವಂತೆ ಮನವಿ ಮಾಡಲಾಗಿದೆ.
ಈ ವರ್ಷ 68 ಮಂದಿ ಸಾಧಕರಿಗೆ ಪ್ರಶಸ್ತಿಯನ್ನು ವಿತರಿಸಲು ಸರ್ಕಾರ ಯೋಜನೆಯನ್ನು ರೂಪಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸುತ್ತೋಲೆ ಈಗಾಗಲೇ ಹೊರಡಿಸಿದ್ದಾರೆ.
ವರ್ಷ ಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸುವ ನಿಟ್ಟಿನಿಂದ ರಾಜ್ಯ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ:
ಸರ್ಕಾರದ ಯೋಜನೆಯಲ್ಲಿ “ಕರ್ನಾಟಕ ರಥ ಯಾತ್ರೆ”ಯು ಸಹ ಒಳಗೊಂಡಿದೆ, ಇದು ವರ್ಷ ಪೂರ್ತಿ ರಾಜ್ಯದಾದ್ಯಂತ ಪ್ರತಿ ಹೋಬಳಿ, ತಾಲ್ಲೂಕು ಮತ್ತು ಹಳ್ಳಿಗಳಿಗೆ ಸಂಚರಿಸುತ್ತದೆ. ರಥದಲ್ಲಿ ಕರ್ನಾಟಕದ ಏಕೀಕರಣ, ಕನ್ನಡ ಸಾಹಿತ್ಯ, ಕರ್ನಾಟಕದ ಐತಿಹಾಸಿಕ ಸ್ಥಳಗಳು, ಭುವನೇಶ್ವರಿ ದೇವಿಯ ಪ್ರತಿಮೆ ಮತ್ತು 31 ಜಿಲ್ಲೆಗಳ ವಿವರಗಳು ಇರುತ್ತವೆ. ಈ ಯಾತ್ರೆಯಲ್ಲಿ ಸ್ಥಳೀಯ ಕಲಾವಿದರು ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಮಾರ್ಗ ನಕ್ಷೆಯನ್ನು ಸಹ ರೂಪಿಸಲಾಗಿದೆ.
ಇದಲ್ಲದೇ, ಭಾರತದ ಹೊರಗಿನ ಕನ್ನಡ ಸಂಘಟನೆಗಳೊಂದಿಗೆ ವರ್ಚುವಲ್ ಸಭೆಗಳನ್ನು ನಡೆಸುವ ಮೂಲಕ ಸರ್ಕಾರವು ವರ್ಷಪೂರ್ತಿ ನಡೆಯುವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ.
ಸರ್ಕಾರ ಐಟಿ-ಬಿಟಿ ಉದ್ಯೋಗಿಗಳಿಗೂ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದು, ಕಂಪನಿಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲು ಸಹ ಯೋಜನೆಗಳನ್ನು ರೂಪಿಸಿದೆ. ಕನ್ನಡದ ಹೆಸರಾಂತ ಲೇಖಕರು ಬರೆದ ಐದು ಜನಪ್ರಿಯ ಹಾಡುಗಳನ್ನು ರಾಜ್ಯಾದ್ಯಂತ ಕನ್ನಡ ಕಾರ್ಯಕ್ರಮಗಳಲ್ಲಿ ಹಾಡಲಾಗುತ್ತದೆ.
ಹೀಗೆ 50 ರ ಕನ್ನಡ ರಾಜ್ಯೋತ್ಸವ (Kannada Rajyotsava 2023) ವನ್ನು ಅದ್ದೂರಿಯಿಂದ ಆಚರಿಸಲು ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ನಾವೂ ಅದರಲ್ಲಿ ಭಾಗಿಯಾಗೋಣ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.