ವಿಜಯ್ ಬರೆದ ಹ್ಯಾಪಿ ಸೋಲ್ ಸ್ನೇಹಿತರ ಜೊತೆಗಿನ ಪ್ರವಾಸದ ಕಥೆ.
ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಮನಸ್ಸಿಗೆ ಹತ್ತಿರದ ಸ್ನೇಹಿತರ ಭೇಟಿ ಹಾಗು ಕುಟುಂಬದ ಜೊತೆ ನಾವು ವಾಸಿಸುವ ಪ್ರದೇಶದಿಂದ ಒಂದಿಷ್ಟು ದೂರದ ಪ್ರವಾಸಿ ಸ್ಥಳಗಳಿಗೋ, ದೇವಸ್ಥಾನಕ್ಕೋ, ಬೆಟ್ಟ ಗುಡ್ಡ ಅರಣ್ಯದಂತಹ ಪ್ರಕೃತಿಯೊಡಲಿನ ಪ್ರದೇಶಗಳಿಗೆ ಹೋಗಿ ಬರುವುದರಿಂದ ಮನಸ್ಸಿಗೆ ಮತ್ತು ದೇಹಕ್ಕೆ ಹೊಸ ಚೈತನ್ಯದ ಹುರುಪು ಸಿಗುವುದರಲ್ಲಿ ಕಿಂಚಿತ್ತೂ ಸಂದೇಹವಿಲ್ಲ. ಅಂತಹದೇ ಒಂದು ಪ್ರವಾಸ ಕಥೆಯಿದು. ಹ್ಯಾಪಿ ಸೋಲ್ ಸ್ನೇಹಿತರ ಜೊತೆಗಿನ ಒಂದು ಸೊಗಸಾದ ಪ್ರವಾಸ ಕಥೆ.
.ವಿಜಯ್
ಸಾಮಾನ್ಯವಾಗಿ ನಾನು ತಿಂಗಳಿಗೆ ಕನಿಷ್ಠ ಒಂದೆರಡು ಬಾರಿಯಾದರೂ ಹಚ್ಚ ಹಸುರಿನ ಸ್ವಚ್ಛಂದದ ನಿಸರ್ಗ ತಾಣಗಳಿಗೆ ಸ್ನೇಹಿತರೊಂದಿಗೆ ಅಥವಾ ಸಂಗಾತಿಯೊಂದಿಗೆ ಭೇಟಿ ಕೊಟ್ಟು ಅಲ್ಲಿ ಒಂದೆರಡು ದಿನಗಳನ್ನು ಬದುಕಿ ಬರೋದು ನನ್ನ ಅಭ್ಯಾಸ. ನನ್ನ ಪ್ರಕಾರ ಇಂದಿನ ಬದುಕಿನ ಜಂಜಾಟ ಮತ್ತು ಜಂಗಮಗಂಟೆಯೇ (ಮೊಬೈಲ್) ಎಲ್ಲರಿಗೂ ಪ್ರಪಂಚವಾಗಿರುವ ಸಮಯದಲ್ಲಿ, ಮನಸ್ಸಿಗೆ ಇಷ್ಟವಾದದ್ದನ್ನು ಬಿಡುವಿನ ಸಮಯ ಸಿಕ್ಕಾಗ ಮಾಡುವುದಕ್ಕೆ ಹವ್ಯಾಸವೆಂದೂ, ಬಿಡುವು ಸಿಗಲಿ ಸಿಗದೇ ಇರಲಿ ಸಮಯ ಮಾಡಿಕೊಂಡು ಇಷ್ಟವಾದದ್ದನ್ನು ಮಾಡುವುದಕ್ಕೆ ಅಭ್ಯಾಸ ಎಂಬುದು ನನ್ನ ವ್ಯಾಖ್ಯಾನ !!!!
ಕಳೆದ ತಿಂಗಳು ನಾನು ನನ್ನ ದೀರ್ಘ ಕಾಲದ ಸ್ನೇಹಿತರಾದಂತಹ ಸತೀಶ್ ಹಾಗೂ ಮತ್ತೊಬ್ಬ ಸಹೃದಯಿ ಸೋಮಶೇಖರ್ ಭೇಟಿಯಾದಾಗ ಅವರು “ವಿಜಯ್ ಎಲ್ಲಾದರೂ ಬ್ಯೂಟಿಫುಲ್ ನೇಚರ್ ಪ್ಲೇಸ್ ಕಡೆ ಲಾಂಗ್ ಡ್ರೈವ್ ಹೋಗಿಬರೋಣ” ಅಂತ ಕೇಳಿದಾಗ ನನ್ನ ಮನಸ್ಸಿನಲ್ಲಿ ಹೊಳೆದದ್ದು ನನ್ನ ಪುಟ್ಟ ಸಂಸಾರದ ಜೊತೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬಳಿಗೆ ಹೋಗಿ ಕೋವಿಡ್ ಕಾರಣದಿಂದ ಬೆಟ್ಟದ ಮೇಲಕ್ಕೆ ಹೋಗಲಾರದೆ ಬಂಡೀಪುರ ಅರಣ್ಯ ಮತ್ತು ಮೈಸೂರು ಸುತ್ತಿ ಹಿಂದುರಿಗಿದ್ದು ನೆನಪಾಯಿತು. ಸಾಮಾನ್ಯವಾಗಿ ಗೋಪಾಲಸ್ವಾಮಿ ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ ವಾರಾಂತ್ಯದಲ್ಲಿ ಬಹಳ ಪ್ರವಾಸಿಗರು ಹಾಗು ಭಕ್ತರು ಭೇಟಿಕೊಡುವುದರಿಂದ ಸರ್ಕಾರ ಬೆಟ್ಟದ ಮೇಲೆ ಹಾಗು ದೇವಸ್ಥಾನಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಹಾಗಾಗಿ ನಾವು ವಾರದ ದಿವಸ ಅಲ್ಲಿಗೆ ಭೇಟಿ ಕೊಡೋದು ನಿಶ್ಚಯವಾಯಿತು.
“ಒನ್ ಪೀಸ್ ಫುಲ್ ಆಕ್ಟಿವ್ ಡೇ ಔಟಿಂಗ್ !!!” ವಾಟ್ಸಾಪ್
ನಾವು ಅಂದುಕೊಂಡಂತೆ ದಿನಾಂಕ ಹಾಗೂ ದಿವಸ ನಿಗದಿಯಾದ್ದರಿಂದ ಇನ್ನೂ ಕೆಲವು ಆತ್ಮೀಯ ಸ್ನೇಹಿತರನ್ನು ನಮ್ಮ ಜೊತೆ ಎಳೆದುಕೊಂಡು ಹೋಗೋದು ನನ್ನ ಮನಸ್ಸಿನಲ್ಲಿ ಫಿಕ್ಸ್ ಆಗಿತ್ತು !!! ನಾನು ತಡಮಾಡದೆ ಮದುವೆಯಾದವರಿಗೆ ಜೀವನದ ಅವಿಭಾಜ್ಯ ಅಂಗವೂ ಹಾಗೂ ಮದುವೆಯಾಗದವರಿಗೆ ಜೀವನ ಸಂಗಾತಿಯಾಗಿರುವ ಜಂಗಮಗಂಟೆಯಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆದು “ಒನ್ ಪೀಸ್ ಫುಲ್ ಆಕ್ಟಿವ್ ಡೇ ಔಟಿಂಗ್ !!!” ಎಂಬ ಗುಂಪು ಕಟ್ಟಿ ಅದರಲ್ಲಿ ಮತ್ತಿಬ್ಬರು ಸ್ನೇಹಿತರನ್ನು ಸೌಜನ್ಯಕ್ಕಾದರೂ ನಮ್ಮ ಜೊತೆ ಬರುತ್ತೀರಾ ಎಂದು ಕೇಳುವ ಗೋಜಿಗೂ ಹೋಗದೆ ಅವರನ್ನು ಸೇರಿಸಿಯಾಗಿತ್ತು. ನಮ್ಮ ಪಂಚ ಪಾಂಡವರ ಗುಂಪಿನ ನಾಲ್ಕನೇ ಸದಸ್ಯ ನಮ್ಮಿಂದ ತಪ್ಪಿಸಿಕೊಳ್ಳಲು “ಸದಾ ಸಂಸಾರದ ಕಾರಣಕೊಡುವ” ಮಹದೇವ್ ಹಾಗೂ ಐದನೇ ಸದಸ್ಯ “ಸದಾ ಹಸನ್ಮುಖಿ ಇಂಡಿಯನ್ ಲಾಫಿಂಗ್ ಬುದ್ಧ” ವಿಶ್ರಾಂತ್.
“ಒನ್ ಪೀಸ್ ಫುಲ್ ಆಕ್ಟಿವ್ ಡೇ ಔಟಿಂಗ್ !!!” ಗುಂಪಿನ ಮೊದಲ ಸಂದೇಶವೇ “ದಿನಾಂಕ 14 ಮಂಗಳವಾರ ಬೆಳಿಗ್ಗೆ ಐದು ಗಂಟೆಗೆ ಸತೀಶ್ ತಮ್ಮ ಮನೆಯಿಂದ ಹೊರಟು 5.30ಕ್ಕೆ ಸರ್ಜಾಪುರ ರಸ್ತೆಯಲ್ಲಿ ಸೋಮಶೇಖರ್, 5.45ಕ್ಕೆ ಜೆ ಪಿ ನಗರದಲ್ಲಿ ಮಹದೇವ್, 6 ಗಂಟೆಗೆ ಪದ್ಮನಾಭನಗರದಲ್ಲಿ ವಿಶ್ರಾಂತ್ ಹಾಗೂ ನನ್ನನ್ನು ಕರೆದುಕೊಂಡು ಅಲ್ಲಿಂದ ಪ್ರಯಾಣ ಆರಂಭಿಸಿ ಮಧ್ಯ ದಾರಿಯಲ್ಲಿ ಬೆಳಗ್ಗಿನ ಉಪಹಾರ ಸೇವಿಸಿ ನೇರವಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ಕೊಟ್ಟು ನಂತರ ಬಂಡೀಪುರ ಅರಣ್ಯ ಪ್ರದೇಶದ ಪ್ರದಕ್ಷಿಣೆ ಹಾಕಿ ನೇರವಾಗಿ ಮೈಸೂರಿಗೆ ಮುಖ ತೋರಿಸಿ ಅಲ್ಲಿಂದ ಹೊರಟು ರಾತ್ರಿ ಸುಮಾರು ಹತ್ತು ಗಂಟೆಯೊಳಗೆ ನಾವುಗಳು ನಮ್ಮ ನಮ್ಮ ಮನೆ ಸೇರಿಕೊಳ್ಳುವುದು ಎಂಬ ಸಂದೇಶ ಹರಿಬಿಟ್ಟು ಎಲ್ಲರ ಹೊಟ್ಟೆ ಮತ್ತು ತಲೆಗೆ ಸ್ವಲ್ಪ ಹುಳ ಬಿಟ್ಟಾಯಿತು. ಕೆಲವೇ ನಿಮಿಷಗಳಲ್ಲಿ ಮಹದೇವ್ ಕಡೆಯಿಂದ ನೇರ ಪ್ರಶ್ನೆ”ಎನ್ರೋ ಹೇಳದೆ ಕೇಳದೆ ಟ್ರಿಪ್ ಪ್ಲಾನ್ ಮಾಡ್ತೀರಾ” ಅದೂ ಮಂಗಳವಾರ!!! ನಮ್ಮ ಉತ್ತರ ಅವನಿಗೆ ಹೇಳುವುದಕ್ಕಿಂತಲೂ ಮುಂಚೆಯೇ ಗೊತ್ತು.
ಸೆಪ್ಟೆಂಬರ್ ತಿಂಗಳು ಸ್ವಲ್ಪ ಮಳೆಯೊಟ್ಟಿಗಿನ ಚಳಿಗಾಲದ ಆರಂಭವಾದ್ದರಿಂದ ಮುಂಜಾನೆ 5 ಗಂಟೆಗೆ ಹೊರಡೋದು ಅಂದರೆ ಕನಿಷ್ಠ 4 ಗಂಟೆಗೆ ಹಾಸಿಗೆಯಿಂದ ಏಳಲೇಬೇಕಾದ ಪ್ರಮೇಯವಾದ್ದರಿಂದ ಕೆಲವರಿಗೆ ತುಸು ಸಂಕಷ್ಟವಾದರೂ ಅವರಿಗೆಲ್ಲ ಗೊತ್ತು ನನ್ನಿಂದ ತಪ್ಪಿಸಿಕೊಳ್ಳೋದು ಅಷ್ಟು ಸಲೀಸಲ್ಲವೆಂದು. ಹೇಗೋ ಎಲ್ಲರನ್ನು ಒಲ್ಲದ ಒಪ್ಪಿಗೆಯ ಮನಸ್ಸಿಗೆ ತಂದು ಅಂದುಕೊಂಡದ್ದಕ್ಕಿಂತ ಐದು ನಿಮಿಷ ಮುಂಚಿತವಾಗಿಯೇ ಬೆಳಿಗ್ಗೆ 5.55 ಗಂಟೆಗೆ ಎಲ್ಲರು ಸೇರಿ ಪದ್ಮನಾಭನಗರದಿಂದ ಹೊರಟು ನೇರವಾಗಿ ಬೆಳಿಗ್ಗೆ 7 ಗಂಟೆಗೆ ಚನ್ನಪಟ್ಟಣದ ನಂತರ ಸಿಗುವ ಶಿವಳ್ಳಿ ಹೋಟೆಲ್ ತಲುಪಿ ಬಿಸಿ ಬಿಸಿ ಪೊಂಗಲ್, ಇಡ್ಲಿ, ವಡೆ ಹಾಗೂ ಕೇಸರಿಬಾತ್ ತಿಂದು, ಸೌತ್ ಇಂಡಿಯನ್ ಸಂಪ್ರದಾಯದಂತೆ ಬೆಳಗಿನ ಉಪಹಾರದ ನಂತರ ಕಾಫಿ ಸವಿದು ಇತಿಶ್ರೀ ಹಾಡೋಣವೆಂದು ಕಾಫಿ ತರಿಸಿಕೊಂಡು ಕುಡಿಯಲಾರಂಭಿಸಿದ ಕೆಲವೇ ಕ್ಷಣದಲ್ಲಿ ಮಹದೇವ್ ಬಗ್ಗೆ ಗುಂಪಿನಲ್ಲಿ ಬಂದ ಹಾಸ್ಯ ಚಟಾಕಿಗೆ ನಮ್ಮ ಲಾಫಿಂಗ್ ಬಾಯ್ ವಿಶ್ರಾಂತ್ ಕಾಫಿ ಕುಡಿಯುವ ಬದಲು ಅದರಲ್ಲಿ ಸ್ನಾನ ಮಾಡಿಕೊಂಡಾಗಿತ್ತು !!!!
ಮೊದಲು ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಕ್ಕೆ ಭೇಟಿ
ಅಲ್ಲಿಂದ ಹೊರಡುವವರೆಗೂ ಯಾರಿಗೂ ತಿಳಿದಿರಲಿಲ್ಲ ನಮ್ಮ ಪ್ರಯಾಣದ ಯೋಜನೆ ವಾಟ್ಸಪ್ ಸಂದೇಶದಿಂದ ಸ್ವಲ್ಪ ತಿರುವು ಪಡೆದು ಮೊದಲು ಶಿಂಷಾ/ಶಿವನಸಮುದ್ರದ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಕ್ಕೆ ಭೇಟಿ ಕೊಟ್ಟು ನಂತರ ಮುಂದಿನ ಪ್ರಯಾಣ. ನಾನು ಸ್ನೇಹಿತರಿಂದ ಕೇಳಲ್ಪಟ್ಟಿರುವ ಪ್ರಕಾರ ಶಿವನಸಮುದ್ರ ಅಂದರೆ ಕಾವೇರಿ ನದಿ ತಮಿಳುನಡಿಗೆ ಹರಿಯುವ ಪ್ರದೇಶ. ಆದರೆ ನಮ್ಮಲ್ಲಿ ಸಾಕಷ್ಟು ಜನಕ್ಕೆ ತಿಳಿಯದಿರೋ ವಿಷಯವೆಂದರೆ ಶಿಂಷಾ ನದಿಯು ಮೂಲತಃ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಹುಟ್ಟಿ ಕುಣಿಗಲ್ ಬಳಿಯ ಮಾರ್ಕೋನಹಳ್ಳಿ ಜಯಶಾಯದ ಮಾರ್ಗವಾಗಿ ಮಂಡ್ಯ ತಲುಪಿ ಅಲ್ಲಿಂದ ಮಳವಳ್ಳಿಯ ಶಿಂಷಾಪುರ/ಶಿವನಸಮುದ್ರದಲ್ಲಿ ಕಾವೇರಿ ನದಿಯ ಜೊತೆ ಸಂಗಮವಾಗುವ ಸ್ಥಳ. ಕಾವೇರಿ ನದಿಯು ತಲಕಾವೇರಿಯಲ್ಲಿ ಹುಟ್ಟಿ ಕೊಡಗಿನಲ್ಲಿ ಮೈತಳೆದು, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ರೈತರನ್ನು ತಣಿಸಿ, ಚಾಮರಾಜನಗರ ಜಿಲ್ಲೆಯ ಅಂಚಿನ ಬೆಟ್ಟಗುಡ್ಡ ಹಾಗೂ ದಟ್ಟ ಅರಣ್ಯದ ನಡುವಿನಲ್ಲಿ ಮೈತುಂಬಿಕೊಂಡು ಹರಿದು ಸುಮಾರು ನೂರು ಮೀಟರ್ ಎತ್ತರದಿಂದ ಹಾಲಿನ ಹೊಳೆಯಂತೆ ಜಿಗಿದು ನಮ್ಮ ಕರ್ನಾಟಕದಿಂದ ಪಕ್ಕದ ತಮಿಳುನಾಡಿನೆಡೆಗೆ ಪ್ರಯಾಣ ಬೆಳೆಸುವ ಮಧ್ಯಸ್ಥಳ ಶಿವನಸಮುದ್ರ.
ಈ ಸ್ಥಳಕ್ಕೆ ಶಿವನಸಮುದ್ರವೆಂದು ಹೆಸರು ಬರಲು ಕಾರಣ ಜಲಪಾತಕ್ಕೂ ಆದಿಯಾಗಿ ನಮಗೆ ಸಿಗುವ ಸುಮಾರು 12 / 13 ನೇ ಶತಮಾನದಲ್ಲಿ ಚೋಳರ ಶೈಲಿಯಲ್ಲಿ ನಿರ್ಮಿಸಲಾಗಿರುವ ಸೋಮೇಶ್ವರ (ಶಿವ) ಹಾಗೂ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಸುತ್ತಲೂ ಕಾವೇರಿ ನದಿಯು ಪೂರ್ವ ಹಾಗು ಪಶ್ಚಿಮಾಭಿಮುಖವಾಗಿ ಸುತ್ತುವರಿದಿರುವುದೇ ವಿಶೇಷತೆ. ಈ ಜೋಡಿ ಜಲಪಾತವು ನಮ್ಮ ಕರ್ನಾಟಕದ ಹೆಮ್ಮೆ ಯಾಕೆಂದರೆ 1902 ರಲ್ಲಿ ಏಷ್ಯಾದಲ್ಲಿನ ಪ್ರಥಮ ಜಲವಿದ್ಯುತ್ ಸ್ಥಾವರ ಭಾರತದಲ್ಲಿ ಸ್ಥಾಪನೆಯಾಗಿ 1905 ನೇ ಆಗಸ್ಟ್ 5 ರಂದು ಪ್ರಥಮಬಾರಿಗೆ ನಮ್ಮ ಬೆಂಗಳೂರಿನ ಕೃಷ್ಣ ರಾಜ ಮಾರುಕಟ್ಟೆಯಲ್ಲಿ ಸುಮಾರು ಸಂಜೆ 7 ಗಂಟೆಗೆ ವಿದ್ಯುತ್ ದೀಪ ಬೆಳಗಿದ್ದು ವಿಶೇಷ.
ಬೆಳಿಗ್ಗೆ 8.50ಕ್ಕೆ ಜಲಪಾತದ ಗೇಟ್ ತೆಗೆಯುವುದಕ್ಕಿಂತ ಮುಂಚೆಯೇ ನಾವು ಅಲ್ಲಿಗೆ ತಲುಪಿದ್ದೆವು ಆದರೆ 9 ಗಂಟೆಯ ನಂತರವೇ ಪ್ರವಾಸಿಗರಿಗೆ ಒಳಗಡೆ ಹೋಗುವ ಅವಕಾಶ. ಮಂಗಳವಾರವಾದ್ದರಿಂದ ಅತಿ ವಿರಳವಾಗಿ ಅಲ್ಲಿ ಇಲ್ಲಿ ಕಣ್ಣಿಗೆ ಕಾಣುವ ಕೆಲವೇ ಜನರಿದ್ದಿದ್ದು ಒಂಥರಾ ವಿಶೇಷ ವ್ಯಕ್ತಿಗಳ ಖಾಸಗಿ ವೀಕ್ಷಣೆಯ ಅನುಭವ ಮತ್ತು ಕೋವಿಡ್ ಭಯದಿಂದ ಮುಕ್ತಿ. ಹಚ್ಚ ಹಸಿರಿನ ಕಾಡಿನ ಮಧ್ಯದಲ್ಲಿ ಬೃಹದಾಕಾರದ ಬೆಟ್ಟ ಗುಡ್ಡಗಳ ಕಲ್ಲು ಬಂಡೆಗಳ ಸಾಲನ್ನು ಕೊರೆದುಕೊಂಡು ನಾನು ನಡೆದದ್ದೇ ರಹದಾರಿ ಎಂಬಂತೆ ಹಾಲಿನ ಹೊಲೆಯಂತಹ ಜಲಪಾತದ ಸೌಂದರ್ಯವನ್ನು ಸ್ನೇಹಿತರೊಟ್ಟಿಗೆ ನೋಡಿ ಅಲ್ಲೇ ಎಲ್ಲರಿಗೂ ಒಂದು ಫೋಟೋ ಶೂಟ್ ಮಾಡಿ ಅಲ್ಲಿಂದ ಕೊಳ್ಳೇಗಾಲ ಮತ್ತು ಚಾಮರಾಜನಗರದ ಮಾರ್ಗವಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತಲುಪುವಷ್ಟರಲ್ಲಿ ಸುಮಾರು ಮಧ್ಯಾಹ್ನ 12.30.
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮಧ್ಯಾಹ್ನದ ಸಮಯದಲ್ಲಿ ಮನೆ ಅಥವಾ ಆಫೀಸಿನಿಂದ ಹೊರಗೆ ಹೋಗುವುದಾದರೆ ನಮಗೆ ನೆನಪಾಗುವುದು ನೆತ್ತಿಯ ಮೇಲೆ ಸುಡುವ ಸೂರ್ಯನ ಬಿಸಿಲು ಆದರೆ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅದು ವ್ಯತಿರಿಕ್ತವಾದ ವಾತಾವರಣ. ತಂಪಾದ ಗಾಳಿ ಹಾಗೂ ಹಿತವಾದ ಬಿಸಿಲು ಅದರ ಮಧ್ಯೆ ಹಾಗೆಯೇ ಸದ್ದಿಲ್ಲದೇ ಬಂದು ಹೋಗುವ ಜಡಿಮಳೆ. ನನ್ನ ಅನುಭವದ ಪ್ರಕಾರ ಗೋಪಾಲಸ್ವಾಮಿ ಬೆಟ್ಟದ ಮೇಲೆ ವರ್ಷದ ಮುಕ್ಕಾಲು ಸಮಯ ಅಲ್ಲಿ ಜಡಿ ಮಳೆ ಹಾಗೂ ಹಿಮ ಖಾಯಂ ಆದ್ದರಿಂದಲೇ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಪ್ರಸಿದ್ದಿ. ದೇವಸ್ಥಾನದ ಗರ್ಭಗುಡಿಯಲ್ಲಿ ವರ್ಷದ ಎಲ್ಲ ದಿನವೂ ದೇವರಮೇಲೆ ಹಿಮದ ಸಿಂಚನವಾಗುವುದು ಅಲ್ಲಿಯ ವಿಶೇಷ ಮತ್ತು ಅರ್ಚಕರು ಎಲ್ಲ ಪ್ರವಾಸಿಗರಿಗೆ ಆ ಹಿಮದ ಹನಿಗಳ ನೀರನ್ನು ಹೂವಿನಿಂದ ಸಿಂಪಡಿಸುವುದು ಪ್ರತೀತಿ. ಬೆಟ್ಟದ ಹಾದಿಯಲ್ಲಿ ವನರಾಜ ಆನೆಯ ಲದ್ದಿಗಳು ರಸ್ತೆಯುದ್ದಕ್ಕೂ ಕಾಣಸಿಗೋದು ನಮಗೆ ಬೆಂಗಳೂರಿನಲ್ಲಿ ಸಿಗುವ ರಸ್ತೆ ಗುಂಡಿಗಳಂತೆ ಗೋಚರಿಸಿ ನಮ್ಮ ನಗರದ ರಸ್ತೆಗಳ ಅವ್ಯವಸ್ಥೆಯನ್ನು ಅಲ್ಲಿಯೂ ನೆನಪಿಸುತ್ತೆ.
ನೀವುಇದನ್ನುಇಷ್ಟಪಡಬಹುದು: ಬಂಡೀಪುರ ಗಡಿಯಲ್ಲಿ ಕಳೆದ 12 ಗಂಟೆಗಳು: ಟ್ರಾವೆಲರ್ ನಟಿ ಸೋನು ಗೌಡ ಪ್ರವಾಸ ಕಥನ
ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶದ ಮಧ್ಯೆ ಇರುವುದರಿಂದ ಕಾಡುಮೃಗಗಳ ವಾಸಸ್ಥಾನ ಹಾಗಾಗಿ ದಾರಿಯುದ್ದಕ್ಕೂ ಒಂತರ ಭಯದ ಖುಷಿ ಹಾಗಾಗಿ ಗೋಪಾಲಸ್ವಾಮಿ ಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳಿಗೆ ಅನುಮತಿಯಿಲ್ಲ. ನಿಗದಿತ ಸಮಯಕ್ಕೆ ಒಂದು ಗಂಟೆಗೆ ಒಂದರಂತೆ ಸರ್ಕಾರೀ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಅದಾಗಲೇ ಮಟ ಮಟ ಮಧ್ಯಾಹ್ನ, ಬೆಟ್ಟದ ಮೇಲೆ ಯಾವುದೇ ಅಂಗಡಿ ಮುಂಗಟ್ಟುಗಳಿಲ್ಲ ತಿನ್ನಲು ಏನೂ ಸಿಗೋದಿಲ್ಲವಾದ್ದರಿಂದ, ಬಸ್ಸು ಹೊರಡುವ ಮುಂಚೆ ಹಾಗೆ ನಮ್ಮ ಹೊಟ್ಟೆಗೆ ಏನಾದರು ತುಂಬಿಸಿ ಹೊರಡೋ ಯೋಚನೆ ಮಾಡಿ ಅಲ್ಲೇ ಮುಖ್ಯ ದ್ವಾರದ ಇಕ್ಕೆಲಗಳಲ್ಲಿ ತಮ್ಮ ಹೊಟ್ಟೆ ಪಾಡಿಗಾಗಿ ಸ್ಥಳೀಯ ಮಂದಿ ಅಂಗಡಿಗಳಲ್ಲಿ ಬೋಂಡಾ ಬಜ್ಜಿ ಚುರುಮುರಿ ಸೌತೆಕಾಯಿ ನೀರಿನ ಬಾಟಲಿಗಳನ್ನು ಮಾರಾಟ ಮಾಡುವವರ ಹತ್ತಿರ ನಮ್ಮ ಹೊಟ್ಟೆ ತುಂಬಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಸದ್ದಿಲ್ಲದೇ ಬಸ್ಸು ನಮ್ಮನ್ನು ಛೇಡಿಸಿ ಹೊರಟಾಗಿತ್ತು. ಬಸ್ ಕಂಡಕ್ಟರ್ ಜೊತೆ ಸ್ನೇಹಿತ ಸತೀಶ್ ಮಾಡಿದ್ದ ಸೆಟ್ಟಿಂಗ್ ವರ್ಕೌಟ್ ಆಗಲಿಲ್ಲ!!!
ಅಂಗಡಿಯ ಮಂದಿ “ಅಯ್ಯೋ ಬಸ್ ಹೋದರೇನಂತೆ ಜೀಪ್ ಬಂದಮೇಲೆ ಅದರಲ್ಲಿ ಹೋಗಿ” ಅಂದಿದ್ದು ಸ್ವಲ್ಪ ಸಮಾಧಾನ ತಂದ ವಿಚಾರ. ಅರಣ್ಯ ಇಲಾಖೆಯ 1970ರ ದಶಕದ ಏಳರಿಂದ ಎಂಟು ಜನ ಕುಳಿತುಕೊಳ್ಳಬಹುದಾದ ಮಹಿಂದ್ರಾ ಜೀಪ್ ಪ್ರವಾಸಿಗರಿಗಾಗಿ ಮೇಲೆ ಕರೆದುಕೊಂಡು ಹೋಗಿ ಅಲ್ಲಿ ಸುಮಾರು ಅರ್ಧ ಮುಕ್ಕಾಲು ಗಂಟೆ ನಮಗೆ ದೇವರ ದರ್ಶನ ಹಾಗು ಪ್ರಕೃತಿಯ ಸೌಂದರ್ಯದ ಜೊತೆ ಕೊರೆವ ಚಳಿ ಮಳೆ ಗಾಳಿಯನ್ನು ಅನುಭವಿಸಲು ಅವಕಾಶ ಕೊಟ್ಟು ಮತ್ತೆ ಕೆಳಗೆ ಕರೆದುಕೊಂಡು ಬರುವ ವ್ಯವಸ್ಥೆಯಿದೆ ಆದರೆ ಅದಕ್ಕೆ ನಾವು ಸುಮಾರು 800 ರೂಪಾಯಿ ಪಾವತಿಸಬೇಕು. ಬೆಟ್ಟದ ತುದಿ ತಲುಪಲು ಸರಿಸುಮಾರು ಆರು ಕಿಲೋ ಮೀಟರ್ ಕಾಡಿನ ತಳುಕು ಬಳುಕಿನ ಹಾವಿನ ದೇಹದ ರಸ್ತೆಯಲ್ಲಿ ಹದಿನೈದು ನಿಮಿಷದ ಪ್ರಯಾಣ. ಬಸ್ಸಿಗೆ ಹೋಲಿಸಿದರೆ ಜೀಪ್ ಡ್ರೈವ್ ದುಪ್ಪಟ್ಟು ಖುಷಿ ಜಾಸ್ತಿ ಹಾಗಾಗಿ ನಾವು ಜೀಪ್ ಹತ್ತಿ ಅಲ್ಲಿಂದ ಹೋರಾಟ ಕೆಲವೇ ನಿಮಿಷಗಳಲ್ಲಿ ತಂಪಾದ ಗಾಳಿಯ ಜೊತೆ ಮಳೆಯೂ ನಮ್ಮನ್ನು ಗೋಪಾಲಸ್ವಾಮಿ ದೇವಸ್ಥಾನದ ಮುಂಬಾಗಿಲಿಗೆ ಸ್ವಾಗತಿಸಿತು.
ಬಂಡೀಪುರ ರಾಷ್ಟೀಯ ಉದ್ಯಾನವನದೆಡೆಗೆ
ಸುಮಾರು ಹತ್ತು ನಿಮಿಷಗಳ ಕಾಲ ದೇವರ ದರ್ಶನ ಪಡೆದು ಅಲ್ಲಿಂದ ಹೊರಬಂದು ಅಲ್ಲಿನ ನಿಸರ್ಗದ ಸೌಂದರ್ಯ ಹಾಗು ಒಂದು ಬದಿಗೆ ಕೇರಳ ಮತ್ತೊಂದು ಬದಿಗೆ ತಮಿಳುನಾಡು ಬೆಟ್ಟದ ಸಾಲುಗಳ ವೀಕ್ಷಣೆ ಮಾಡಿ ಫೋಟೋ ತೆಗೆಯುವಷ್ಟರಲ್ಲಿ ಸೋಮಶೇಖರ್ ಕಡೆಯಿಂದ ಸತೀಶ್ ಕುದುರಿಸಿದ್ದ ದೇವರ ಪ್ರಸಾದ ತಿನ್ನಲು ಅಹ್ವಾನ ಬಂತು. ಗೋಪಾಲಸ್ವಾಮಿ ಬೆಟ್ಟದ ಅರ್ಚಕರ ತಂಡದ ಅಯ್ಯರ್ ಸಂಪ್ರದಾಯದ ಪುಳಿಯೋಗರೆ ಮತ್ತು ಮೊಸರನ್ನ ಪ್ರಸಾದ ಸವಿದು ಅಲ್ಲಿಂದ ಹೊರಬಂದು ಜೀಪ್ ಡ್ರೈವರ್ ಛಾಯಾಗ್ರಹಣದ ಪರೀಕ್ಷೆ ಮಾಡಿ ನಮ್ಮ ತಂಡದ ಫೋಟೋ ತೆಗೆಸಿಕೊಂಡು ಅಲ್ಲಿಂದ ಹೊರಟು ಕೆಳಗಡೆ ಬಂದು ಮನೆಯಿಂದ ತೆಗೆದುಕೊಂಡು ಹೋಗಿದ್ದ ತಿಂಡಿ ತಿನಿಸುಗಳನ್ನು ಮೆಲುಕಿ ಬಂಡೀಪುರ ರಾಷ್ಟೀಯ ಉದ್ಯಾನವನದೆಡೆಗೆ ಮುಖ ಮಾಡಿದಾಗ ನಮಗೆ ಮಹದೇವ್ ಬಾಯಿಂದ ಕೇಳಿಸಿದ್ದು “ಲೋ ವಿಜಿ ಮೈಸೂರ್ ಆ ಕಡೆ ಕಣೋ” ಅದಕ್ಕೆ ನನ್ನಿಂದ ಬರುವ ಉತ್ತರವೂ ಅವನಿಗೆ ಗೊತ್ತಿತ್ತು !!!.
ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಕೇವಲ ಹದಿನೈದು ನಿಮಿಷದಲ್ಲಿ ಬಂಡೀಪುರ ಅರಣ್ಯ ಪ್ರವಾಸಿಗರಿಗೆ ಸ್ವರ್ಗದ ಬಾಗಿಲು ತೆರೆದಂತೆ ಕಾಣಸಿಗುವುದು. ಆರಂಭದಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ಕಣ್ಣಿಗೆ ಸಿಗುವ ಜಿಂಕೆಗಳು ಹಾಗು ಅದೃಷ್ಟವೆಂಬಂತೆ ಗೋಚರಿಸುವ ಒಂದೋ ಎರೆಡೋ ಆನೆಗಳನ್ನು ನೋಡಿ ಸುಮಾರು ಇಪ್ಪತ್ತು ಕಿಲೋಮೀಟರು ಕಾಡಿನ ಮಧ್ಯೆ ಕಾರಿನ ಕಿಟಕಿಯ ಗಾಜನ್ನು ತೆರೆದು ಆ ಸ್ವಚ್ಛವಾದ ತಂಪು ಗಳಿಗೆ ಮುಖ ಒಡ್ಡಿ ಆನಂದಿಸುವುದರ ಭಾವನೆ ವರ್ಣಿಸುವದಕ್ಕಿಂತ ಅನುಭವಿಸುವುದರಲ್ಲಿನ ಆನಂದವೇ ಬೇರೆ.
ಅಲ್ಲಿಂದ ನಮ್ಮ ಪ್ರಯಾಣ ಮೈಸೂರಿನೆಡೆಗೆ ಶುರುಮಾಡಿ ಗುಂಡ್ಲುಪೇಟೆ ಮಾರ್ಘವಾಗಿ ಸಾಗುವಾಗ ನೆನಪಾಗಿದ್ದೆ ಹೇಗಿದ್ದರೂ ನಂಜನಗೂಡು ಅದೇ ದಾರಿಯಲ್ಲಿ ಸಿಗುವುದರಿಂದ ಶ್ರೀಕಂಠೇಶ್ವರನ ದರ್ಶನ ಮಾಡಿಯೇ ಹೋಗೋಣ ಎನ್ನುತ್ತಿದ್ದಂತೆ ನಮ್ಮ ಮಹಾದೇವನ ವಚನ ಶುರು “ಎನ್ರೋ ನಾವು ದೇವಸ್ಥಾನಗಳ ದರ್ಶನಕ್ಕೆ ಬಂದಿರೋದಾ !!!”. ಕೆಲವೇ ನಿಮಿಷಗಳಲ್ಲಿ ದೇವರ ದರ್ಶನ ಮಾಡಿ ಇನ್ನುಳಿದಿರುವುದು ಮೈಸೂರು ದರ್ಶನ ಅಷ್ಟೇ ಅಂತ ಹೇಳಿ ಅವನಿಗೆ ಸಮಾಧಾನಮಾಡಿ ಅಲ್ಲಿಂದ ಹೊರಟು ಮೈಸೂರು ಹೊರ ವರ್ತುಲ ರಸ್ತೆ ತಲುಪಿದ ತಕ್ಷಣ ನಾನು ಮೆಲ್ಲಗೆ ಸತೀಶ್ ಸಿಗ್ನಲ್ನಲ್ಲಿ ಎಡಕ್ಕೆ ತಿರುಗಿ ಸ್ವಲ್ಪ ಮುಂದೆ ಹೋದಮೇಲೆ ಎಡಕ್ಕೆ ಅಂದ ತಕ್ಷಣ ಎಲ್ಲರ ಕಿವಿ ಚುರುಕಾಗಿ ಮತ್ತೆ ಎಲ್ಲಿಗೋ !!! ನಾವು ಹೊರಟಿದ್ದು ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ !!! ಕೇವಲ ಹತ್ತು ನಿಮಿಷದಲ್ಲಿ ದರ್ಶನ ಮುಗಿಸಿ ಆಚೆಗೆ ಬಂದಾಗಿತ್ತು. ನನ್ನ ಇಷ್ಟು ವರ್ಷಗಳ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನದಲ್ಲಿ ಇಷ್ಟೊಂದು ಸುಲಭ ಹಾಗೂ ಕನಿಷ್ಠ ಸಮಯದಲ್ಲಿ ಮುಗಿಸಿದ ಅನುಭವವಿರಲಿಲ್ಲ. ಬಹುಶ್ಯಹ ಕೆಲಸದ ದಿವಸ ಮತ್ತು ಕೋವಿಡ್ ಭಯ ಇವೆರಡರ ಕೊಡುಗೆಯೆಂದರೆ ತಪ್ಪಾಗಲಾರದು.
ಚಾಮುಂಡಿ ಬೆಟ್ಟದಿಂದ ಹೊರಟು ಮೈಸೂರು ನಗರದ ಒಂದು ಭಾಗದ ದರ್ಶನ ಮಾಡಿ, ನೇರವಾಗಿ ವಿಜಯನಗರದ ಎರಡನೇ ಹಂತದಲ್ಲಿರುವ “ಸಿಂಪ್ಲಿ ಕೊಡವಾಸ್” ಎಂಬ ಕೊಡಗು ಶೈಲಿಯ ಊಟವನ್ನು ಸವಿದು ರಾತ್ರಿ ಸುಮಾರು 7.30ಕ್ಕೆ ನಾವು ಅಲ್ಲಿಂದ ಹೊರಟು 9 ಗಂಟೆಗೆ ಮದ್ದೂರು ಬಳಿಯ ಅಡಿಗಾಸ್ ಹೋಟೆಲ್ನಲ್ಲಿ ಕಾಫಿ ಕುಡಿದು 10.30ರ ಹೊತ್ತಿಗೆ ನಮ್ಮ ಮನೆ ಸೇರಿಕೊಂಡೆವು.
ಸ್ನೇಹಿತರೆ ನಾವು ಒಂದೇ ದಿವಸದಲ್ಲಿ ಬೆಳ್ಳಂ ಬೆಳಿಗ್ಗೆ 4 ಗಂಟೆಗೆ ಎದ್ದು ಸುಮಾರು 16 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 500 ಕಿಲೋಮೀಟರು ಪ್ರಯಾಣ ಮಾಡಿ, ಐದು ಪ್ರಸಿದ್ಧ ದೇವಸ್ಥಾನಗಳ ದರ್ಶನ ಪಡೆದು, ಎರಡು ಜಲಪಾತಗಳ ವೀಕ್ಷಣೆ ಮಾಡಿ, ರಾಷ್ಟ್ರೀಯ ಉದ್ಯಾನವನದ ಒಳಗಡೆ ಡ್ರೈವ್ ಮಾಡಿ ಗೋಪಾಲಸ್ವಾಮಿ ಬೆಟ್ಟದ ಜೀಪ್ ಡ್ರೈವ್, ಕಾಫಿ, ತಿಂಡಿ, ಊಟ, ಹುಡುಗಾಟದ ಹರಟೆ, ಉದ್ಯೋಗ ಹಾಗೂ ಸಂಸಾರದ ಚರ್ಚೆ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಗಳು, ಇಷ್ಟೆಲ್ಲಾ ಆದಮೇಲೂ ನಮಗೆ ಯಾವುದೇ ಆಲಸ್ಯದ ಅರಿವಾಗಲಿಲ್ಲ. ಇಷ್ಟಕ್ಕೆಲ್ಲ ಕಾರಣ ಸಮಾನ ಮನಸ್ಸಿನ ಸ್ನೇಹಿತರ ಜೊತೆ ಇದ್ದದ್ದು ಮತ್ತು ಹಿರಿಯರು ಹೇಳಿರುವಂತೆ “ನಾವು ಎಷ್ಟೇ ಕಷ್ಟದ ಕಾರ್ಯಗಳನ್ನು ಇಷ್ಟಪಟ್ಟು ಮಾಡಿದಾಗ ನಮಗೆ ಆ ಕಷ್ಟದ ಅರಿವೂ ಕೂಡ ಇರುವುದಿಲ್ಲ”.
ನಾವು ಹಿಂತಿರುಗಿದ ಮರುದಿನ ಬೆಳಿಗ್ಗೆ ವಾಟ್ಸಪ್ ಗುಂಪಿನಲ್ಲಿ ಸ್ನೇಹಿತ ಸೋಮಶೇಖರ್ ಕಳುಹಿಸಿದ “ಶುಭೋದಯಗಳು ಎಲ್ಲರು ಕೆಲಸಕ್ಕೆ ಹಾಜರಾಗಿದ್ದೀರಾ” ಎಂಬ ಸಂದೇಶಕ್ಕೆ ವಿಶ್ರಾಂತ್ “ಎಸ್ ಎಸ್ ವಿಥ್ ಜೋಶ್” ಎಂದು ಉತ್ತರಿಸಿದ್ದು ನನ್ನ ಮನಸ್ಸಿಗೆ ಒಂಥರಾ ನೆಮ್ಮದಿ ಕೊಟ್ಟಿದ್ದಂತೂ ನಿಜ. ನಮ್ಮ ಜೀವನದಲ್ಲಿ ಪ್ರತಿಯೊಂದು ದಿವಸವು ಏರುಮುಖದ ಜವಾಬ್ಧಾರಿಗಳನ್ನು ಸೇರಿಸುವುದೇ ವಿನಃ ಇಳಿಮುಖವಲ್ಲ. ನಮ್ಮ ಇಂದಿನ ಬವಣೆಯ ಬದುಕಿನ ಜೀವನಶೈಲಿಯಲ್ಲಿ ಸ್ನೇಹ, ಸಂಬಂಧ, ಪ್ರಕೃತಿ, ಸಮಾಜಮುಖಿ ಕೆಲಸಗಳಿಗೆ ನಮ್ಮ ಬಳಿ ಸಮಯದ ಅಭಾವವನ್ನು ನಮ್ಮಷ್ಟಕ್ಕೆ ನಾವೇ ಬೇಲಿ ನಿರ್ಮಿಸಿಕೊಂಡು ಬದುಕುತ್ತಿರೋದು ಬೇಸರದ ಸಂಗತಿಯಾದರೂ ಕಟು ಸತ್ಯ !!!
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.