ಬಂಡೀಪುರ ಗಡಿಯಲ್ಲಿ ಕಳೆದ 12 ಗಂಟೆಗಳು: ಟ್ರಾವೆಲರ್ ನಟಿ ಸೋನು ಗೌಡ ಪ್ರವಾಸ ಕಥನ

ಸೋನು ಗೌಡ ಕನ್ನಡ ಚಿತ್ರ ರಂಗದ ಪ್ರತಿಭಾನ್ವಿತ ನಟಿ. ಸೋನು ಸಿನಿಮಾದ ಜೊತೆಗೆ ಬಿಡುವು ಸಿಕ್ಕಿದಾಗಲೆಲ್ಲ ಪ್ರವಾಸ ಹೊರಡುತ್ತಾರೆ. ಸ್ನೇಹಿತರು ,ಕುಟುಂಬದ ಜೊತೆಗೆ ಟ್ರಿಪ್ ಹೋಗುವ ಸೋನು ಗೌಡ , ಸೋಲೋ ಟ್ರಿಪ್ ಕೂಡ ಮಾಡುತ್ತಾರೆ. ಸೋನು ತಮ್ಮ ಪ್ರವಾಸದ ಕೆಲವು ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಪ್ರವಾಸಿಗರ ಹೊಣೆಗಾರಿಕೆ ಜೊತೆಗೆ ಪ್ರವಾಸಿಗರಿಗೆ ಕೆಲವು ಸಲಹೆ ನೀಡಿದ್ದಾರೆ ಸೋನು.
- ನವ್ಯಶ್ರೀ ಶೆಟ್ಟಿ
ನಟಿ ಸೋನು ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ತಮ್ಮ ಸಿನಿಮಾ ಕುರಿತಾದ ಮಾಹಿತಿಯ ಜೊತೆಗೆ ತಾವು ಪ್ರವಾಸ ಹೋದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಮೂಲಕ ಸೋನು ಅಭಿಮಾನಿಗಳಿಗೆ ಸೋನು ಪ್ರವಾಸ ಪ್ರೇಮಿ ಎನ್ನುವುದು ತಿಳಿದೇ ಇರುವ ವಿಷಯ. ಪ್ರವಾಸ ಹೊರಡುವ ಪ್ಲಾನಿಂಗ್ ,ಸಲಹೆ , ಜವಾಬ್ದಾರಿ ಜೊತೆಗೆ ತಾವು ಹೋದ ಪ್ರವಾಸದ ಅನುಭವ ಸೇರಿದಂತೆ ಪ್ರವಾಸ ಪ್ರಿಯರಿಗೆ ಕುತೂಹಲ ಮೂಡಿಸುವ ನಿಟ್ಟಿನಲ್ಲಿ ಹಲವು ವಿಷಯಗಳನ್ನು ಸೋನು ಹಂಚಿಕೊಂಡಿದ್ದಾರೆ.

ಹೋಗುವ ಪ್ರತಿಯೊಂದು ಜಾಗವು ಇಷ್ಟ.
ಪ್ರವಾಸ ಹೊರಡಬೇಕು ಎನ್ನುವ ಮನಸಾದಾಗಲೆಲ್ಲ ಹೊರಟು ಬಿಡುವ ಸೋನುಗೆ ತಾವು ಹೋಗುವ ಪ್ರತಿಯೊಂದು ಜಾಗ ಇಷ್ಟ. ಪ್ರತಿಯೊಂದು ಜಾಗಕ್ಕೂ ಅದರದೇ ಆದ ವೈಶಿಷ್ಟ್ಯ ಇರುತ್ತದೆ. ಪ್ರತಿಯೊಂದು ಜಾಗಕ್ಕೂ ಒಂದು ಇತಿಹಾಸ ಇರುತ್ತದೆ. ತಾವು ಹೋಗುವ ಜಾಗದ ಇತಿಹಾಸ ತಿಳಿದುಕೊಳ್ಳುವುದು, ಅಲ್ಲಿನ ಸಂಸ್ಕೃತಿ, ಉಡುಗೆ ತೊಡುಗೆ,ಖಾದ್ಯ ಹೀಗೆ ಪ್ರತಿಯೊಂದು ಜಾಗಕ್ಕೆ ಹೋದಾಗ ಹೊಸ ವಿಷಯ ಕಲಿಯುವುದು ಸೋನುಗೆ ಇಷ್ಟ.
ಕುಟುಂಬದವರ ಜೊತೆಗಿನ ಪ್ರವಾಸ ಇಷ್ಟ.
ಟ್ರಾವೆಲಿಂಗ್ ಇಷ್ಟ ಪಡುವ ಸೋನು ಗೆ ಸ್ನೇಹಿತರು ,ಕುಟುಂಬ ,ಸೋಲೋ ಎಲ್ಲ ರೀತಿಯ ಟ್ರಾವೆಲಿಂಗ್ ಇಷ್ಟ . ಆದರೆ , ಬಾಲ್ಯದಿಂದಲೂ ಬೇಸಿಗೆ ರಜೆ ಬಂದರೆ ಕುಟುಂಬದ ಜೊತೆ ಪ್ರವಾಸ ಹೋಗುತ್ತಿದ್ದ ಸೋನುಗೆ ಕುಟುಂಬದವರ ಜೊತೆಗಿನ ಪ್ರವಾಸ ಕೊಂಚ ಜಾಸ್ತಿ ಇಷ್ಟ. ಆದರೆ ಫ್ಯಾಮಿಲಿ ಜೊತೆಗೆ ಪ್ರವಾಸ ಹೊರಡುವ ಪ್ಲಾನಿಂಗ್ ಮಾಡಿ ಅದನ್ನು ಕಾರ್ಯರೂಪಕ್ಕೆ ತರುವುದು ಸುಲಭವಲ್ಲ. ಕೆಲವೊಮ್ಮೆ ಎಲ್ಲರನ್ನೂ ಸೇರಿಸಿ ಪ್ರವಾಸ ಹೊರಡುವುದು ಒಂದು ಸವಾಲು ಎನ್ನುತ್ತಾರೆ ಸೋನು. ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗುವ ಸಂದರ್ಭ ಪ್ರತಿಯೊಬ್ಬರೂ ಸಂತ್ರಪ್ತರಾಗುವ ರೀತಿಯಲ್ಲಿ ಯೋಜನೆ ಹಾಕಿಕೊಳ್ಳುವುದು ಒಳ್ಳೆಯದು ಎನ್ನುವುದು ಸೋನು ಟ್ರಾವೆಲಿಂಗ್ ನಲ್ಲಿ ಕಲಿತ ವಿಷಯ.

ಸೋಲೋ ಟ್ರಿಪ್ ಮಾಡುವಾಗ ಸಮಯದ ಅರಿವಿರಬೇಕು
ಸೋಲೋ ಟ್ರಿಪ್ ಹೆಣ್ಣು ಮಕ್ಕಳಿಗೆ ಅಷ್ಟೊಂದು ರಕ್ಷಣೆಯಿಲ್ಲ ಅನ್ನುವ ಮಾತಿದೆ. ಆದರೆ ಸೋನು ಪ್ರಕಾರ ,ತಮ್ಮ ಪಾಡಿಗೆ ತಾವಿದ್ದರೆ ಸೋಲೋ ಟ್ರಿಪ್ ಗಳಿಂದ ಯಾವುದೇ ತೊಂದರೆ ಕೂಡ ಇಲ್ಲ. ಕೆಲವೊಮ್ಮೆ ಅನಾಹುತಗಳು ಸಂಭವಿಸುವುದು ಅದೊಂದು ಕೆಟ್ಟ ಗಳಿಗೆ. ಆದರೆ ,ಸೋಲೋ ಟ್ರಿಪ್ ಮಾಡುವ ಪ್ರತಿಯೊಬ್ಬರಿಗೂ ಸಮಯದ ಕುರಿತು ಪರಿಜ್ಞಾನ ಇರಬೇಕು.
ಸೋಲೋ ಟ್ರಿಪ್ ಹೋದಾಗ ನೀವು ಒಂದೇ ಕಡೆ ಇರುವುದು ಅಷ್ಟೊಂದು ಸುರಕ್ಷಿತವಲ್ಲ. ನೀವು ಹೋಗುವ ಜಾಗ ,ವಾಸಿಸುವ ಸ್ಥಳ ಬದಲಾಯಿಸುತ್ತಿರಬೇಕು. ಅದು ಸೋಲೋ ಟ್ರಾವೆಲರ್ ಗೆ ಸುರಕ್ಷಿತ ಎನ್ನುವುದು ಸೋನು ಅಭಿಪ್ರಾಯ.
ಸೋನು ಹೋಗಿರುವ ಸೋಲೋ ಟ್ರಿಪ್ ಜಾಗಗಳಲ್ಲಿ ಗೋವಾ ಕೂಡ ಒಂದು. ಅವರಿಗೆ ಯಾವುದೇ ಕೆಟ್ಟ ಅನುಭವ ಆಗಿಲ್ಲ. ಅಲ್ಲಿ ರಾತ್ರಿ ಸಮಯ ಕಳೆದಿದ್ದಾರೆ ,ಅಲ್ಲಿನ ಸೌಂದರ್ಯ ಅನುಭವಿಸಿದ್ದಾರೆ. ಆದರೆ ಎಂದೂ ಕಹಿ ಘಟನೆ ಆಗಿಲ್ಲ ಎನ್ನುತ್ತಾರೆ ನಟಿ ಸೋನು ಗೌಡ.

ಪ್ರವಾಸಿಗರಿಗೆ ಕೆಲವೊಂದು ಸಲಹೆಗಳು
ಪ್ರವಾಸ ಅಂದರೆ ಕೇವಲ ಚೆಂದದ ಉಡುಗೆ ಹಾಕಿಕೊಂಡು ಫೋಟೋ ತೆಗೆಯುವುದಲ್ಲ . ಹೋಗುವ ಸ್ಥಳದ ಸವಿಯನ್ನು ಅನುಭವಿಸುವುದು ಪ್ರವಾಸ. ನೀವು ಪ್ರವಾಸಕ್ಕೆ ಹೋದ ಜಾಗಗಳಲ್ಲಿ ಅಲ್ಲಿನ ಸ್ಥಳೀಯರು ಹೇಳುವ ಸಲಹೆಗಳನ್ನು ತಪ್ಪದೇ ಪಾಲಿಸಿ. ಒಂದು ವೇಳೆ ನೀವು ಅವರ ಸಲಹೆ ,ಎಚ್ಚರಿಕೆ ಮೀರಿ ನಡೆದುಕೊಂಡರೆ ಕೆಲವೊಮ್ಮೆ ಅನಾಹುತಗಳಿಗೆ ನಾವೇ ದಾರಿ ಮಾಡಿ ಕೊಟ್ಟಂತೆ ಆಗುತ್ತದೆ.
ಪ್ರವಾಸಿಗರು ಪ್ರವಾಸಕ್ಕೆ ಹೋದ ಸಮಯದಲ್ಲಿ ಫೋಟೋ ತೆಗೆಯುವ ಮೋಹದಲ್ಲಿ ಎತ್ತರದ ಜಾಗದಲ್ಲಿ ,ಸಮುದ್ರದ ಅಲೆಗಳ ನಡುವೆ ನಿಂತು ಫೋಟೋ ತೆಗೆಯುವುದು ಒಳ್ಳೆಯದಲ್ಲ.ಅದು ನಿಮ್ಮ ಜೀವಕ್ಕೆ ತೊಂದರೆ ಆಗ ಬಹುದು.
ನಾವು ಕಾರಿನಲ್ಲಿ ಪ್ರವಾಸ ಹೊರಡುವಾಗ ಎರಡು ಕೀ ಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ. ನೀವು ಉಪಯೋಗಿಸಿದ ಪ್ಲಾಸ್ಟಿಕ್ , ಬೇರೆ ಯಾವುದೇ ಅನುಪಯುಕ್ತ ವಸ್ತುಗಳನ್ನು ಪ್ರವಾಸಿ ತಾಣಗಳಲ್ಲಿ ಎಸೆಯದಿರಿ. ಒಬ್ಬರು ಎಸೆದರೆ ಅವರನ್ನು ನೋಡಿದ ಇನ್ನೊಬ್ಬರು ಕೂಡ ಕಸ ಎಸೆಯುತ್ತಾರೆ. ಇದರಿಂದ ಆ ಪ್ರವಾಸಿ ತಾಣದ ಸೌಂದರ್ಯವೇ ಹಾಳಾಗುತ್ತದೆ . ನಾವು ಹೋಗುವ ಜಾಗದ ಸ್ವಚ್ಛತೆಯನ್ನು ಕಾಪಾಡುವ ಅರಿವು ನಮಗೆ ಮನೆಯಿಂದಲೇ ಪ್ರಾರಂಭ ಆಗಬೇಕು. ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಇದರ ಬಗ್ಗೆ ಕಲಿಸಿ ಕೊಡಬೇಕು.

ಹಣವಿದ್ದಾಗ ಮಾತ್ರ ಪ್ರವಾಸ ಹೋಗಬಹುದು ಎನ್ನುವ ಭಾವನೆಗಳು ತಪ್ಪು ಎನ್ನುವುದು ಇವರ ಭಾವನೆ. ಕೆಲಸದ ಒತ್ತಡದ ನಡುವೆ ಮನಸಿನ ವಿರಾಮಕ್ಕೆ ಲಾಂಗ್ ಡ್ರೈವ್ ಹೋಗುತ್ತಾರೆ ಸೋನು.
ಜೀವನದಲ್ಲಿ ಒಮ್ಮೆಯಾದರೂ ಐಫೆಲ್ ಟವರ್ ನೋಡಬೇಕು ಎನ್ನುವ ಆಸೆ ಇವರಿಗೆ. ಕೆಲವೊಂದು ಹೋಗಬೇಕೆಂದು ಅಸೆಯಿರುವ ತಾಣಗಳಿವೆ. ಪ್ಯಾರಿಸ್ ,ವೆನಿಸ್ ,ಕನ್ಯಾಕುಮಾರಿ ,ರಾಮೇಶ್ವರಂ ,ಹಲವು ತಾಣಗಳು ಇವರು ನೊಡಬೇಕೆಂದು ಬಯಸುವ ಜಾಗಗಳ ಪಟ್ಟಿಯಲ್ಲಿದೆ. ಹಲವು ಬಾರಿ ಪ್ಲಾನ್ ಮಾಡಿದ್ದರೂ ಕಾರಣಾಂತರಗಳಿಂದ ಸಾಧ್ಯವಾಗದ ನಮ್ಮ ರಾಜ್ಯದ ಹಂಪಿ ಕೂಡ ಹೋಗಬೇಕೆಂದು ಬಯಸುವ ತಾಣಗಳ ಪಟ್ಟಿಯಲ್ಲಿದೆ.
ಅಚ್ಚರಿಯ ಟ್ರಿಪ್ ಭೂತಾನ್
ಹಲವು ಕಡೆ ಪ್ರವಾಸ ಹೋಗಿದ್ದ ಸೋನು ಗೆ ಭೂತಾನ್ ಪ್ರವಾಸ ಒಂದು ಅಚ್ಚರಿ . ಭೂತಾನ್ ತನಕ ವಿಮಾನದಲ್ಲೇ ಹೋಗುವ ಅವಕಾಶಗಳಿತ್ತು. ಆದರೆ ಅಲ್ಲಿನ ಪ್ರಕೃತಿ ಮತ್ತು ಭಾರತ – ಭೂತಾನ್ ಗಡಿ ನೋಡುವ ಆಸೆಯಿಂದ ಆ ಅವಕಾಶವನ್ನು ತಪ್ಪಿಸಿಕೊಂಡಿದ್ದರು. ಆ ಗಡಿಗಳಲ್ಲಿ ಜನ ಸಂದಣಿ ಜಾಸ್ತಿ .ಒಂದು ರೀತಿಯಲ್ಲಿ ಬ್ಯುಸಿ ಏರಿಯಾ. ಚಿಕ್ಕ ಚಿಕ್ಕ ರಸ್ತೆಗಳು ,ಅದನ್ನು ದಾಟಿ ಮುಂದೆ ಸಾಗಿದರೆ ಬಹು ಉದ್ದದ ರಸ್ತೆಗಳು. ಗಡಿ ಪ್ರದೇಶ ದಾಟಿ ಕೊಂಚ ಮುಂದೆ ಸಾಗಿದರೆ ನಿಮಗೆ ಚೆಂದದ ರಸ್ತೆಗಳು, ಪ್ರಶಾಂತ ವಾತಾವರಣ ಎಲ್ಲವೂ ಕಾಣ ಸಿಗುತ್ತದೆ .
ಭೂತಾನ್ ನಲ್ಲಿ ಉಳಿದುಕೊಂಡಿದ್ದ ಹೋಟೆಲ್ ನಿಂದ ಭಾರತ ಭೂತಾನ್ ಗಡಿಗೆ ಕೆಲವೇ ನಿಮಿಷಗಳ ಹಾದಿ. ಹಾದಿಯಲ್ಲಿ ಭಾರತ, ಭೂತಾನ್ ನಡುವೆ ಒಂದೇ ರಸ್ತೆ . ಹೋಟೆಲ್ ನಲ್ಲಿದ್ದಾಗ ಅ ರಸ್ತೆಯಲ್ಲಿ ನಡೆಯುತ್ತಾ ಭಾರತ,ಭೂತಾನ್ ರಾಷ್ಟ್ರ ಓಡಾಡಿ ಖುಷಿ ಪಡುತ್ತಿದ್ದೆ ಎನ್ನುತ್ತಾರೆ ನಟಿ ಸೋನು ಗೌಡ.

ಭೂತಾನ್ ಗೆ ಸೋನು ಹಾಗೂ ಸ್ನೇಹಿತೆ ಇಬ್ಬರೇ ಹೋಗಿದ್ದು. ಗೊತ್ತಿಲ್ಲದ ಊರಿನಲ್ಲಿ ಹೇಗೆ ಹೋಗುವುದು ಅನ್ನುವ ಭಯ ಕಾಡಿತ್ತು. ಆದರೆ ಭೂತಾನ್ ದೇಶದ ಜನ ಸಹೃದಯಿಗಳು. ಅಲ್ಲಿ ಇದ್ದಷ್ಟು ದಿನ ಬೇರೆ ದೇಶದಲ್ಲಿ ಇದ್ದೇವೆ ಅನ್ನುವ ಭಾವನೆಗಳು ಕಾಡಿರಲಿಲ್ಲ ಎನ್ನುತ್ತಾರೆ ಸೋನು ಗೌಡ.
ನೀವು ಇದನ್ನು ಇಷ್ಟ ಪಡಬಹುದು: ಕೋವಿಡ್ ನೆಗೆಟಿವ್ ವರದಿ ಇಲ್ಲದೆಯೂ ಭೇಟಿ ನೀಡಬಹುದಾದ 7 ಜಾಗಗಳು
ಭೂತಾನ್ ನಲ್ಲಿ ಟೈಗರ್ ನೆಸ್ಟ್ ಅನ್ನುವ ಜಾಗವಿದೆ. ಟ್ರಿಕ್ಕಿಂಗ್ ಪ್ರಿಯರಿಗೆ ಇಷ್ಟವಾಗುವ ತಾಣ. ಭೂತಾನ್ ನಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಈ ಜಾಗಕ್ಕೆ ನೀವು ತಲುಪಲು ಯಾವುದೇ ಸುಸಜ್ಜಿತ ರಸ್ತೆ, ಮೆಟ್ಟಿಲುಗಳಿಲ್ಲ. ನೀವು ನಡೆದುಕೊಂಡೇ ತಲುಪಬೇಕು. ಟೈಗರ್ ನೆಸ್ಟ್ ನಲ್ಲಿ ಪವಿತ್ರ ಬುದ್ಧನ ವಿಗ್ರಹ ಇದೆ. ಅದನ್ನು ಕೆಳಗಡೆ ನಿಂತು ಕೂಡ ನೋಡಬಹುದು.
ಆದರೆ ಅಲ್ಲಿಗೆ ಹೋಗುವುದು ಅಷ್ಟೊಂದು ಸುಲಭದ ಪ್ರಯಾಣ ಅಲ್ಲ. ಬಹಳ ಪ್ರಾಮುಖ್ಯತೆ ಇರುವ ಈ ಜಾಗಕ್ಕೆ ಗಂಟೆಗಳ ಕಾಲ ಜನ ನಡೆದುಕೊಂಡು ಸಾಗುತ್ತಾರೆ. ಕೆಲವರು ಕತ್ತೆ ಮೇಲೆ ಕುಳಿತುಕೊಂಡು ಹೋಗಿ ಬುದ್ಧನ ಕಣ್ತುಂಬಿಕೊಳ್ಳುತ್ತಾರೆ. ವಿದೇಶ ಪ್ರವಾಸಿಗರು ಕೂಡ ಟೈಗರ್ ನೆಸ್ಟ್ ನೋಡಲು ಭೂತಾನ್ ರಾಷ್ಟ್ರಕ್ಕೆ ಬರುತ್ತಾರೆ.

ಲಾಕ್ ಡೌನ್ ಇಲ್ಲದಿದ್ದರೆ ಹಿಮಾಚಲ ಪ್ರದೇಶಕ್ಕೆ ಟ್ರೆಕ್ಕಿಂಗ್ ಹೋಗುವ ಯೋಚನೆ ಹಾಕಿಕೊಂಡಿದ್ದರು. ಆದರೆ ಸೋನು ಆ ಯೋಚನೆ ಸದ್ಯದ ಮಟ್ಟಿಗೆ ಕೈ ಬಿಟ್ಟಿದ್ದಾರೆ. ಒಂದು ಕಡೆ ಪ್ರವಾಸ ಹೋದಾಗ ಅಲ್ಲಿನ ಫೋಟೋ ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಅದನ್ನು ನೋಡಿ ಇನ್ನೊಬ್ಬರು ಪ್ರವಾಸ ಹೊರಡುವ ಸಾಧ್ಯತೆಗಳು ಇರುತ್ತದೆ. ಇದು ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನೆ ಆಗುತ್ತದೆ. ವೈರಸ್ ಕಾಲದಲ್ಲಿ ಪ್ರವಾಸ ಹೋಗದೆ ನಿಯಮ ಪಾಲಿಸುವುದು ಒಳಿತು ಎನ್ನುವುದು ಸೋನು ಅಭಿಪ್ರಾಯ.
ಊಟಿಯಿಂದ ಬೆಂಗಳೂರು ಮಾರ್ಗದಲ್ಲಿ ರಾತ್ರಿ ಕಳೆದ ಅನುಭವ
ಊಟಿಯಿಂದ ಬೆಂಗಳೂರು ಮಾರ್ಗವಾಗಿರುವ ಬಂಡೀಪುರದ ಬಾರ್ಡರ್ ನಲ್ಲಿ 9 ಗಂಟೆಯ ಮೇಲೆ ಯಾರಿಗೂ ಪ್ರವೇಶ ಇರುವುದಿಲ್ಲ. ಈ ವಿಷಯ ಗೊತ್ತಿರದ ಸೋನು ಮತ್ತು ಅವರ ತಾಯಿ ಬಾರ್ಡರ್ ತಲುಪುವಾಗ 5 ನಿಮಿಷ ತಡವಾಗಿತ್ತು. ಇವರಿಗೆ ಬಾರ್ಡರ್ ದಾಟಲು ಅನುಮತಿ ನೀಡಿರಲಿಲ್ಲ. ಜೊತೆಗಿದ್ದ ಡ್ರೈವರ್ ಕೂಡ ಭಯಬೀತರಾಗಿದ್ದರು.
ಸೋನು ಮತ್ತೆ ಅಮ್ಮ ಬಂಡೀಪುರ ದಲ್ಲೆ ರಸ್ತೆಯ ಮಧ್ಯ, ಕಾರಿನಲ್ಲೇ ಇಡೀ ರಾತ್ರಿ ಕಳೆಯುವ ಸನ್ನಿವೇಶ . ಅದೇ ಮಾರ್ಗದಲ್ಲಿ ಬಂದ ಕೆ ಎಸ್ ಆರ್ ಟಿ.ಸಿ ಬಸ್ ಹತ್ತಿ ಬೆಂಗಳೂರು ತಲುಪುವ ಆಲೋಚನೆ ಇಬ್ಬರದ್ದೂ, ಆದರೆ ಬಸ್ ಪ್ರಯಾಣಿಕರಿಂದ ಅದಾಗಲೇ ತುಂಬಿ ಹೋಗಿತ್ತು. ಹೋಗುವುದು ಕೂಡ ಸಾಧ್ಯ ಆಗಲಿಲ್ಲ . ಭಯ, ಚಳಿ ನಡುವೆ ಬಂಡೀಪುರದಲ್ಲಿ 12 ಗಂಟೆ ಕಳೆದಿದ್ದರು ಸೋನು.
ಸಡನ್ ಪ್ಲಾನ್ ಮಾಡಿ ಪ್ರವಾಸ ಹೊರಡುವ ಸೋನು ಗೆ ಬಸ್ ಪ್ರಯಾಣ ಇಷ್ಟ. ಬಸ್ ಪ್ರಯಾಣದ ಮೇಲಿನ ಖುಷಿ ಯಿಂದ ಕೇರಳದ ಮುನ್ನಾರ್ ಗೆ 17 ಗಂಟೆಗಳ ಕಾಲ ಬೆಂಗಳೂರಿನಿಂದ ಪ್ರಯಣಿಸಿದ್ದರು.
ನಾವು ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡುವ ಮೊದಲೇ ಆ ಸ್ಥಳ ದ ಕುರಿತು ಪೂರ್ವಾಗ್ರಹ ಪೀಡಿತರಾಗಿ ನಿರ್ಧಾರಕ್ಕೆ ಬರಬಾರದು. ಗೂಗಲ್ ಫೋಟೋಸ್ ನೋಡಿ ಸ್ಥಳದ ಸೌಂದರ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಾರದು. ಕೆಲವೊಮ್ಮೆ ಅದು ನಮ್ಮ ನಿರೀಕ್ಷೆಯಂತೆ ಇರಬಹುದು. ಇನ್ನು ಕೆಲವೊಮ್ಮೆ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಕೂಡ ಆ ಜಾಗ ಇರಬಹುದು. ಹೋಗುವ ಮುನ್ನವೇ ನಿರ್ಧಾರಕ್ಕೆ ಬರುವ ಬದಲು , ಹೋಗಬೇಕೆಂದು ಬಯಸುವ ಸ್ಥಳಕ್ಕೆ ಹೋಗಿ ಅಲ್ಲಿನ ಅನುಭವಗಳನ್ನು ಪಡೆದುಕೊಳ್ಳಬೇಕು.

ಟ್ರಾವೆಲಿಂಗ್ ಮಾಡುವ ಸಮಯದಲ್ಲಿ ಸದಾ ಹುಮ್ಮಸ್ಸಿನಲ್ಲಿ ಇರಬೇಕು. ಒಂದು ವೇಳೆ ನೀವು ಹುಮ್ಮಸ್ಸು ಕಳೆದುಕೊಂಡರೆ ಅಷ್ಟು ದೂರ ಪ್ರಯಾಣಿಸಿದ್ದು ಕೂಡ ವ್ಯರ್ಥ . ಗೂಗಲ್ ಮ್ಯಾಪ್ ನಮ್ಮ ಪ್ರವಾಸಕ್ಕೆ ಹಲವು ಬಾರಿ ಸಹಾಯ ಆದರೆ ಕೆಲವೊಮ್ಮೆ ಗೂಗಲ್ ಮ್ಯಾಪ್ ನಿಂದ ಹಾದಿ ತಪ್ಪುವ ಸಾಧ್ಯತೆಗಳು ಕೂಡ ಇರುತ್ತದೆ.
ಪ್ರಸಿದ್ಧ ಜಾಗಕ್ಕೆ ನಾವು ಪ್ರವಾಸ ಹೋಗುವುದರ ಜೊತೆಗೆ ನಮ್ಮ ಸುತ್ತ ಮುತ್ತ ಇರುವ ಪ್ರವಾಸಿ ತಾಣಗಳಿಗೆ ಪ್ರವಾಸ ಮಾಡುವುದು ಒಳ್ಳೆಯದು. ಪ್ರತಿಯೊಂದು ಜಾಗಕ್ಕೂ ಅದರದೇ ವಿಶೇಷತೆ, ಇತಿಹಾಸವಿದೆ. ಅದನ್ನು ನಾವು ತಿಳಿದುಕೊಳ್ಳಬೇಕು .ಪ್ರತಿ ಜಾಗದಲ್ಲಿ ಕಲಿಯುವ ವಿಷಯಗಳಿದೆ. ಅದನ್ನು ಕಲಿಯಬೇಕು. ಮನಸ್ಸಿನ ನೆಮ್ಮದಿಗೆ ಮಾತ್ರ ನಮ್ಮ ಪ್ರವಾಸ ಸೀಮಿತ ಆಗದಿರಲಿ. ನಮ್ಮ ಜ್ಞಾನ ಹೆಚ್ಚಿಸಿಕೊಳ್ಳುವ ಕಡೆಗೆ ಕೂಡ ನಮ್ಮ ಪ್ರವಾಸದ ವ್ಯಾಪ್ತಿ ವಿಸ್ತಾರವಾಗಿರಲಿ ಎನ್ನುತ್ತಾರೆ ನಟಿ ಸೋನು ಗೌಡ.
ನಟಿ ಸೋನು ಗೌಡ ಸದಾ ಲವಲವಿಕೆಯಿಂದ ಇರುವ ನಟಿ. ಪ್ರವಾಸದ ಅನುಭವಗಳ ಜೊತೆಗೆ ಪ್ರವಾಸಿಗರ ಕರ್ತವ್ಯ, ಸಲಹೆಗಳ ಕುರಿತಾಗಿ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನೀವು ಕೂಡ ಪ್ರವಾಸ ಹೊರಡುವಾಗ ಸೋನು ಹೇಳಿರುವ ಟಿಪ್ಸ್ ಗಳನ್ನು ಪಾಲಿಸಿ. ನಿಮ್ಮ ಪ್ರವಾಸ ಇನ್ನಷ್ಟು ಆನಂದವಾಗಿರಲಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ