ಕೋವಿಡ್ ನೆಗೆಟಿವ್ ವರದಿ ಇಲ್ಲದೆಯೂ ಭೇಟಿ ನೀಡಬಹುದಾದ 7 ಜಾಗಗಳು
ಕೋವಿಡ್ -19 ಅಟ್ಟಹಾಸ, ಭಯದಿಂದ ಮನೆಯಲ್ಲಿಯೇ ಕುಳಿತುಕೊಳ್ಳುವಂತೆ ಮಾಡಿದೆ. ನೀವು ಮನೆಯಿಂದ ಹೊರಬಂದು ಸುರಕ್ಷಿತವಾದ ಹಾಗೂ ಸುಂದರವಾದ, ಜನರು ಕಡಿಮೆ ಇರುವ ತಾಣಗಳಿಗೆ ಭೇಟಿ ನೀಡಲು ಯೋಚಿಸುತ್ತಿದ್ದರೆ, ನಮ್ಮ ಈ ಲೇಖನ ನಿಮಗೆ ಸಹಾಯವಾಗಬಹುದು.
- ಉಜ್ವಲಾ ವಿ. ಯು.
ಅನೇಕ ರಾಜ್ಯ ಸರ್ಕಾರಗಳು ಪ್ರವಾಸೋದ್ಯಮಕ್ಕೆ ಬಾಗಿಲು ತೆರೆದಿವೆ. ಈ ಸ್ಥಳಗಳಿಗೆ ಪ್ರಯಾಣಿಸಲು ನಿಮಗೆ ಕೋವಿಡ್ -19 ನಕಾರಾತ್ಮಕ ವರದಿ ಅಥವಾ ಬೇರೆ ಯಾವುದೇ ದಾಖಲೆಗಳ ಅಗತ್ಯವಿರುವುದಿಲ್ಲ.ಅವುಗಳು ಇಂತಿವೆ,
- ಥಾನೇದಾರ್, ಹಿಮಾಚಲ ಪ್ರದೇಶ:
ಪ್ರಯಾಣಿಕರ ಹೃದಯಭಾಗ ಮತ್ತು ಸಮೃದ್ಧವಾದ ಹಿಮಾಲಯ ಶಿಖರಗಳನ್ನು ಹೊಂದಿರುವ ಹಿಮಾಚಲ ಪ್ರದೇಶವು ಅತಿಹೆಚ್ಚು ಪ್ರವಾಸಿಗರಿಂದ ಆಕರ್ಷಿತರವಾದ ತಾಣ. ಥಾನೇದಾರ್ ಎಂಬುದು ಹಿಮಾಚಲ ಪ್ರದೇಶದಲ್ಲಿರುವ ಒಂದು ಪುಟ್ಟ ಹಳ್ಳಿ. 8000 ಅಡಿಗಳಷ್ಟು ಎತ್ತರದಲ್ಲಿರುವ ಈ ಸಣ್ಣ ಹಳ್ಳಿಯು ದೇಶದ ಮೊದಲ ಸೇಬು ತೋಟಗಳನ್ನು ಹೊಂದಿರುವ ಸ್ಥಳಗಳಲ್ಲಿ ಒಂದಾಗಿದೆ.
ಶಿಮ್ಲಾದಿಂದ ಕೇವಲ 80 ಕಿ. ಮೀ ದೂರದಲ್ಲಿರುವ ಇದು ಸುವಾಸನೆಯ ಸೇಬು, ಚೆರ್ರಿ ಮತ್ತು ಸ್ಟ್ರಾಬೆರಿ ತೋಟಗಳಿಗೆ ಹೆಸರುವಾಸಿಯಾಗಿದೆ. ನೀವು ಜನಸಂದಣಿಯಿಂದ ಸ್ವಲ್ಪ ಸಮಯ ದೂರಾಗಿ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಬಯಸಿದರೆ ಆಫ್ ಬೀಟ್ ತಾಣವಾದ ಥಾನೇದಾರ್ ಯೋಗ್ಯವಾದ ಸ್ಥಳ.
2. ಹೋಪ್ ದ್ವೀಪ, ಆಂಧ್ರಪ್ರದೇಶ:
ಕೋವಿಡ್-೧೯ ಪ್ರಕರಣಗಳು ಇಳಿಕೆಯಾಗುತ್ತಿದ್ದಂತೆ, ಆಂಧ್ರಪ್ರದೇಶ ಸರ್ಕಾರ ಪ್ರವಾಸೋದ್ಯಮಕ್ಕಾಗಿ ರಾಜ್ಯವನ್ನು ತೆರೆದಿದೆ. ಆಂಧ್ರಪ್ರದೇಶದ ಪ್ರವಾಸಕ್ಕಾಗಿ ಸ್ಥಳಗಳನ್ನು ಹುಡುಕುತ್ತಿದ್ದರೆ, ನೀವು ಹೋಪ್ ದ್ವೀಪದಲ್ಲಿ ಪ್ರವಾಸವನ್ನು ಯೋಜಿಸಬಹುದು. ಹೋಪ್ ದ್ವೀಪವು ಬಂಗಾಳಕೊಲ್ಲಿಯಲ್ಲಿರುವ ಭಾರತದ ಕಾಕಿನಾಡ ಕರಾವಳಿಯಲ್ಲಿರುವ ಒಂದು ಗೊದಮೊಟ್ಟೆ ಆಕಾರದ ದ್ವೀಪವಾಗಿದೆ.
ಕಾಕಿನಾಡ ಕರಾವಳಿ ಮತ್ತು ಹೋಪ್ ದ್ವೀಪದ ನಡುವಿನ ಪ್ರದೇಶವನ್ನು “ಕಾಕಿನಾಡ ಕೊಲ್ಲಿ” ಎಂದು ಕರೆಯಲಾಗುತ್ತದೆ. ಈ ದ್ವೀಪವು ಕಾಕಿನಾಡ ನಗರವನ್ನು ಬಂಗಾಳಕೊಲ್ಲಿಯಿಂದ ಬರುವ ಚಂಡಮಾರುತವನ್ನು ರಕ್ಷಿಸುತ್ತದೆ.
ಹೋಪ್ ದ್ವೀಪವನ್ನು ತಲುಪಲು ನೀವು ಕಾಕಿನಾಡದಿಂದ ದೋಣಿ ಬಾಡಿಗೆಗೆ ಪಡೆಯಬಹುದು. ನಿಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಚಂದದ ತಾಣ ಇದು. ಶಾಂತವಾದ ಮ್ಯಾಂಗ್ರೋವ್ ಕಾಡುಗಳು, ಗಂಭೀರವಾದ ಕಡಲತೀರ, ನಿಮ್ಮ ಪ್ರವಾಸವನ್ನು ಮನಸ್ಸಲ್ಲೇ ಉಳಿಯುವಂತೆ ಮಾಡುವುದರಲ್ಲಿ ಸಂಶಯವಿಲ್ಲ.
3. ರಾವಂಗ್ಲಾ, ಸಿಕ್ಕಿಂ:
ಸಿಕ್ಕಿಂ ರಾಜ್ಯದ ದಕ್ಷಿಣ ಸಿಕ್ಕಿಂ ಜಿಲ್ಲೆಯಲ್ಲಿರುವ ರಾವಂಗ್ಲಾ ಎಂದೂ ಸಹ ಪ್ರವಾಸಿಗರನ್ನು ಆಕರ್ಷಿಸುವ ಚಂದದ ತಾಣ. ಮೇನಂ ಮತ್ತು ಟೆಂಡಾಂಗ್ ಬೆಟ್ಟಗಳ ನಡುವೆ ಇರುವ ಈ ತಾಣವು 8000 ಅಡಿ ಎತ್ತರದಲ್ಲಿದೆ. ಇಲ್ಲಿಯ ಸುಂದರವಾದ ಚಹಾ ತೋಟಗಳು, ಸ್ಮಾರಕಗಳು, ಹಿಮದಿಂದ ಆವೃತವಾದ ಶಿಖರಗಳು, ಜಲಪಾತಗಳು, ಮೇನಂ ಅಭಯಾರಣ್ಯದ ವಿಲಕ್ಷಣ ಸಸ್ಯಗಳು ಮತ್ತು ಪ್ರಾಣಿಗಳು, ಹಳೆಯ ಮಠಗಳು ಮತ್ತು ವಿಶಿಷ್ಟ ಸಾಂಸ್ಕೃತಿಕ ವಾತಾವರಣವು ಜನರನ್ನು ಹೆಚ್ಚಾಗಿ ಈ ಸ್ಥಳಕ್ಕೆ ಆಕರ್ಷಿಸುತ್ತದೆ.
ನೀವುಇದನ್ನುಇಷ್ಟಪಡಬಹುದು: ಅನ್ ಲಾಕ್ ಬಳಿಕ ಶಿಮ್ಲಾ ಪ್ರವಾಸ ಮಾಡಿದ ಗಗನ್
ರಾವಂಗ್ಲಾ ದಲ್ಲಿರುವ ಮತ್ತೊಂದು ಆಕರ್ಷಣೆ ಎಂದರೆ ಬುದ್ಧ ಉದ್ಯಾನವನ. ಇದನ್ನು “ತಥಾಗತ ತ್ಸಾಲ್” ಎಂದು ಕರೆಯುತ್ತಾರೆ. 130 ಅಡಿಯ ಎತ್ತರವಾದ ಬುದ್ಧ ಪ್ರತಿಮೆ ಇಲ್ಲಿದೆ. ಟಿಬೆಟಿಯನ್ ಮತ್ತು ಬೌದ್ಧ ಧರ್ಮದ ಪ್ರಮುಖ ಮಠಗಳನ್ನು ಇಲ್ಲಿ ಕಾಣಬಹುದು. ಚಾರಣಕ್ಕೆ ಅತಿ ಯೋಗ್ಯವಾದ ಸ್ಥಳ. ಜುಲೈ ತಿಂಗಳಲ್ಲಿ ತಂಪಾದ ವಾತಾವರಣ ಇರುವ ಕಾರಣ ನೀವು ಪ್ರವಾಸ ಆಯೋಜಿಸಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು.
4. ಭೀಮಕುಂಡ್, ಮಧ್ಯಪ್ರದೇಶ:
ವಿಪತ್ತುಗಳನ್ನು ಊಹಿಸಬಲ್ಲ ನೈಸರ್ಗಿಕ ಮೂಲವಿದೆ ಎಂದು ನೀವು ನಂಬಬಹುದೇ? ಮಧ್ಯಪ್ರದೇಶದ ಛತ್ತರಪುರದಲ್ಲಿ ಅಂತಹ ಒಂದು ಜಲಾಶಯವಿದೆ. ಇದೊಂದು ಪವಿತ್ರವಾದ ತಾಣವಾಗಿದೆ. ಇದು ಛತ್ತರಪುರದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಈ ತೊಟ್ಟಿಯಲ್ಲಿನ ನೀರು ನೀಲಿ ಬಣ್ಣದ್ದಾಗಿದ್ದು, ಈ ತೊಟ್ಟಿಯ ಆಳವು ಅನಂತವೆಂದು ನಂಬಲಾಗಿದೆ. ನೈಸರ್ಗಿಕ ವಿಕೋಪಗಳು ಉಂಟಾದಾಗ ಇಲ್ಲಿಯ ನೀರಿನ ಪ್ರಮಾಣ ಹೆಚ್ಚಾಗುತ್ತದೆ.
2004ರ ಸುನಾಮಿ ಅಪ್ಪಳಿಸಿದಾಗಲೂ ಭೀಮಕುಂಡಿನ ನೀರಿನ ಮಟ್ಟ ಸುಮಾರು 30 ಮೀಟರ್‌ಗೆ ಏರಿತು ಎಂದು ಸ್ಥಳೀಯರು ಹೇಳುತ್ತಾರೆ. ಬಿಸಿಲಿನಿಂದಾಗಿ ದ್ರೌಪದಿ ಬಾಯಾರಿಕೆಯನ್ನು ಅನುಭವಿಸಿದಾಗ, ಪಾಂಡವರಲ್ಲಿ ಅತ್ಯಂತ ಶಕ್ತಿಶಾಲಿ ಭೀಮನು ತನ್ನ ಕೋಲಿನಿಂದ ನೆಲಕ್ಕೆ ಬಡಿದು ನೀರು ಹೊರಬರಲು ಪ್ರಾರಂಭಿಸುತ್ತಾನೆ ಮತ್ತು ಹೀಗೆ ಈ ಜಲಾಶಯವು ಹುಟ್ಟುತ್ತದೆ.
ನಾಲ್ಕು ಕಡೆಗಳಲ್ಲಿ ಕೆಲವು ಗುಹೆಗಳಿವೆ ಎಂಬ ಪ್ರತೀತಿ ಇದೆ ಆದರೆ ಗುಹೆಗಳು ಎಲ್ಲಿಗೆ ಹೋಗುತ್ತಿವೆ ಎಂದು ಕಂಡುಹಿಡಿಯಲು ಯಾರೂ ಧೈರ್ಯ ಮಾಡಿಲ್ಲವಂತೆ. ನೀವು ಮಧ್ಯಪ್ರದೇಶಕ್ಕೆ ಪ್ರವಾಸವನ್ನು ಯೋಜಿಸುತ್ತಿದ್ದರೆ, ಈ ರಹಸ್ಯ ಸ್ಥಳವನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಬಹುದು.
5. ಪಟಾನ್, ಗುಜರಾತ್:
ಮಧ್ಯಕಾಲೀನ ಅವಧಿಯಲ್ಲಿ 650 ವರ್ಷಗಳ ಕಾಲ ರಾಜ್ಯದ ರಾಜಧಾನಿಯಾಗಿದ್ದ ಪಟಾನ್ ಸಾಕಷ್ಟು ಐತಿಹಾಸಿಕ ಮೌಲ್ಯವನ್ನು ಹೊಂದಿದೆ ಮತ್ತು ಈ ಹಿಂದೆ ಪುರಾತತ್ತ್ವಜ್ಞರ ಸಂಶೋಧನೆಯ ಒಂದು ಭಾಗವಾಗಿದೆ. ಇದು ದೇವಾಲಯಗಳನ್ನು ಹೊಂದಿರುವಂತೆಯೇ, ದರ್ಗಾ ಮತ್ತು ಜೈನ ದೇವಾಲಯಗಳನ್ನು ಸಹ ಹೊಂದಿದೆ.
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಇತ್ತೀಚೆಗೆ ಪ್ರವೇಶ ಪಡೆದ “ರಾಣಿ ಕಾ ವಾವ್” ನ ನೆಲೆ ಕೂಡಾ ಇದಾಗಿದೆ. ಜುಲೈನಲ್ಲಿ ನೀವು ಗುಜರಾತ್‌ಗೆ ಭೇಟಿ ನೀಡುತ್ತಿದ್ದರೆ, ಪಟಾನ್ ನಿಸ್ಸಂದೇಹವಾಗಿ ನಿಮ್ಮ ಪಟ್ಟಿಯಲ್ಲಿರಲಿ.
6. ಲೋಲಬ್ ಕಣಿವೆ, ಕಾಶ್ಮೀರ:
ಪ್ರವಾಸ ಪ್ರಿಯರಿಗೆ ಕಾಶ್ಮೀರ ಒಂದು ಸ್ವರ್ಗ ಎಂದೇ ಹೇಳಬಹುದು. ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿರುವ ಲೋಲಬ್ ಕಣಿವೆ ಅದರ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದನ್ನು “ ಪ್ರೀತಿ ಮತ್ತು ಸುಂದರವಾದ ಭೂಮಿ” ಎಂದೂ ಕರೆಯುತ್ತಾರೆ. ಲೋಲಬ್ ಕಣಿವೆ 5 ಕೀಮಿ ಅಗಲ ಮತ್ತು 26 ಕೀ. ಮಿ ಉದ್ದ ಇರುವ ಪುಟ್ಟ ಕಣಿವೆ.
ಇದು ಕಾಶ್ಮೀರ ಕಣಿವೆ ಮತ್ತು ನೀಲಂ ಕಣಿವೆಯ ನಡುವೆ ಇದೆ. ಇಲ್ಲಿ ಸೇಬು, ಚೆರ್ರಿ, ಪೀಚ್, ಅಳಲೆಕಾಯಿಯಂತಹ ಹಣ್ಣುಗಳು ಸಮೃದ್ಧವಾಗಿರುವುದರಿಂದ ಇದನ್ನು “ಜಮ್ಮುಕಾಶ್ಮೀರದ ಹಣ್ಣಿನ ಪಾತ್ರೆ” ಎಂದೂ ಕರೆಯುತ್ತಾರೆ. ಇಲ್ಲಿನ ಹಣ್ಣುಗಳ ತೋಟ, ಸರೋವರ, ಹಚ್ಚಹಸಿರಿನ ಭತ್ತದ ಗದ್ದೆಗಳು ಎಂಬವರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ. ಶಾಂತವಾದ ಮತ್ತು ಸುಂದರವಾದ ತಾಣ ಕ್ಕಾಗಿ ನೀವು ಈ ಕಣಿವೆಯನ್ನು ಆರಿಸಿಕೊಳ್ಳಲೇಬೇಕು.
7. ಆಗುಂಬೆ, ಕರ್ನಾಟಕ:
ದಕ್ಷಿಣದ ಚಿರಾಪುಂಜಿ ಎಂದೇ ಪ್ರಸಿದ್ಧವಾಗಿರುವ ಆಗುಂಬೆ,ಅತಿಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಯ ಹಚ್ಚಹಸಿರಿನ ಮಳೆಕಾಡುಗಳು, ಹೊಳೆವ ಜಲಪಾತಗಳು, ವನ್ಯಜೀವಿಗಳ ಸಮೃದ್ಧತೆ ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳದಂತೆ ಭಾಸವಾಗುತ್ತದೆ.
ಸಾಂಕ್ರಾಮಿಕತೆಯ ಮಧ್ಯದಲ್ಲಿ ಕಡಿಮೆ ಜನರಿರುವ ಮತ್ತು ಸುರಕ್ಷಿತ ತಾಣಕವನ್ನು ಪ್ರವಾಸಕ್ಕಾಗಿ ಹುಡುಕುತ್ತಿದ್ದರೆ ಈ ಸ್ಥಳವನ್ನು ಆರಿಸಿಕೊಳ್ಳಬಹುದು. ನೀವು ಇಲ್ಲಿಂದ ಗೋಪಾಲಕೃಷ್ಣ ದೇವಸ್ಥಾನ, ಕುಂದಾದ್ರಿ ಬೆಟ್ಟ, ಹಾಗೂ ಹಲವಾರು ಜಲಪಾತಗಳಿಗೆ ಭೇಟಿ ನೀಡಬಹುದು.
ಈ ಮೇಲಿನ ಪ್ರವಾಸಿತಾಣಗಳು ಈ ಸಮಯದಲ್ಲಿ ಪ್ರಯಾಣ ಮಾಡಲು ಯೋಗ್ಯವಾದ ಮತ್ತು ಕೋವಿಡ್-೧೯ ವರದಿ ಇಲ್ಲದೆಯೂ ಪ್ರಯಾಣ ಮಾಡಬಹುದಾದ ತಾಣಗಳು. ಈ ತಾಣಗಳ ಪಟ್ಟಿಯು ನಿಮ್ಮ ಪ್ರವಾಸವನ್ನು ಇನ್ನೂ ಸುಂದರಗೊಳಿಸಲಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ