ಅನ್ ಲಾಕ್ ಬಳಿಕ ಶಿಮ್ಲಾ ಪ್ರವಾಸ ಮಾಡಿದ ಗಗನ್

ಕೈಯಲ್ಲೊಂದು ಸೆಲ್ಫಿ ಸ್ಟಿಕ್ ಹಾಗೂ ಮೊಬೈಲ್, ಹೆಗಲಿಗೊಂದು ಬ್ಯಾಗ್ ಹಾಕಿಕೊಂಡು ಊರಿಂದ ಊರಿಗೆ ಏಕಾಂಗಿ ಸಂಚಾರವನ್ನು ಮಾಡಿ ಅಲ್ಲಿನ ವಿಶೇಷ ಆಹಾರ ತಿಂಡಿ-ತಿನಿಸುಗಳ ಕುರಿತು ಮಾಹಿತಿಯನ್ನು ನೀಡುತ್ತಾ, ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ನಮಗೂ ಆ ಊರಿನ ಪರಿಚಯವನ್ನು ಮಾಡುವ ಇವರೇ ಒಂಟಿ ಪಯಣಿಗ ಗಗನ್ ಶ್ರೀನಿವಾಸ್.
- ಚೈತ್ರಾ ರಾವ್ ಉಡುಪಿ
ಇವರು ಮೂಲತಃ ಬೆಂಗಳೂರಿನವರು. ಡಿ.ಆರ್.ಬ್ರೋ (D.R Bro) ಎಂದೆ ಸಾಮಾಜಿಕ ಜಾಲತಾಣದಲ್ಲಿ ಹೆಸರುವಾಸಿಯಾಗಿದ್ದಾರೆ. ಲಾಕ್ ಡೌನ್ ಅನ್ ಲಾಕ್ ಆದ ಬಳಿಕ ಮತ್ತೆ ತಮ್ಮ ಏಕಾಂಗಿ ಸಂಚಾರವನ್ನು ಶುರುಮಾಡಿದ್ದಾರೆ. ಇತ್ತೀಚೆಗೆ ಹಿಮಾಚಲ್ ಪ್ರದೇಶದ ರಾಜಧಾನಿ ಶಿಮ್ಲಾಗೆ ಪ್ರವಾಸ ಹೋಗಿದ್ದಾರೆ.
ದೆಹಲಿಯಿಂದ ಹಿಮಾಚಲ್ ಪ್ರದೇಶದ ಕಲ್ಕಾ ಊರಿಗೆ ಇವರ ಪ್ರಯಾಣ ನಾಟಾಜಿ ಎಕ್ಸ್ ಪ್ರೆಸ್ ರೈಲಿನ ಮೂಲಕ ಶುರುವಾಯಿತು. ಕೊರೊನಾ ಕಾರಣದಿಂದಾಗಿ ರೈಲಿನಲ್ಲಿ ಪ್ರಯಾಣ ಬೆಳೆಸುವವರು ಸಂಖ್ಯೆಯೂ ಕಡಿಮೆ ಇತ್ತು. ಹಾಗೆ ರೈಲ್ವೆ ನಿಲ್ದಾಣದಲ್ಲಿ ಯಾವುದೇ ಹೋಟೆಲ್ ತೆರೆದಿರದ ಕಾರಣ ರೈಲಿನಲ್ಲಿ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ದುಬಾರಿ ಬೆಲೆ ಆದರೆ ಅಷ್ಟೇ ರುಚಿ ಎನ್ನುತ್ತಾರೆ ಗಗನ್.

ಮುಂಜಾನೆ 9:10ಕ್ಕೆ ಹೊರಟ ರೈಲು ಮಾರನೇ ದಿನ ಮುಂಜಾನೆ ಕಲ್ಕಾ ರೈಲ್ವೆ ನಿಲ್ದಾಣ ತಲುಪುತ್ತದೆ. ಅಲ್ಲಿ ಇಳಿದ ಬಳಿಕ ನಾವು ಶಿಮ್ಲಾ ತಲುಪಬೇಕಾದರೆ ಟಾಯ್ ಟ್ರೈನ್ (Toy Train) ಆಟಿಕೆ ರೈಲು ಎಂದೂ ಕರೆಯುತ್ತಾರೆ. ಈ ಟ್ರೈನ್ ಮೂಲಕ ಅಲ್ಲಿಗೆ ಹೋಗಬೇಕು. ಆ ರೈಲು ಬಣ್ಣ ಬಣ್ಣಗಳಿಂದ ಕೂಡಿರುತ್ತದೆ. ಪೂರ್ತಿ ರೈಲು ಕನ್ನಡಿಯಿಂದ ಆವರಿಸಲ್ಪಟ್ಟಿರುವುದರಿಂದ ಬೆಟ್ಟ-ಗುಡ್ಡಗಳನ್ನು ನೋಡಿಕೊಂಡು ಅಲ್ಲಿನ ಜನರ ಜೀವನವನ್ನು ನೋಡಲು ಹವಾನಿಯಂತ್ರಿತ ಟಾಯ್ ಟ್ರೈನ್ ಉತ್ತಮ.
ರೈಲಿನಲ್ಲಿ ಇವರು ಮರೆಯಲಾಗದ ಸನ್ನಿವೇಶ
ಆಟಿಕೆ ರೈಲಿನಲ್ಲಿ ಹೋಗುತ್ತಿರಬೇಕಾದರೆ ರೈಲಿನೊಳಗೆ ಎ.ಸಿ ಕೆಳಗೆ ಒಂದು ಸಣ್ಣ ಸ್ವಿಚ್ ಇದೆ. ಹಲವಾರು ಜನರು ಅದು ಎ.ಸಿ ಚಾಲು ಮಾಡಬೇಕಾದರೆ ಅದನ್ನು ಒತ್ತಬೇಕು ಎಂದುಕೊಂಡಿರುತ್ತಾರೆ. ಆದರೆ ಆ ಸ್ವಿಚ್ ರೈಲು ನಿಲ್ಲಲು ಇರುವುದು. ನಾವು ಹೋಗುವ ರೈಲಿನಲ್ಲಿ ಯಾರೋ ಒಬ್ಬರು ಎ.ಸಿ ಚಾಲು ಮಾಡಬೇಕೆಂದು ಅದನ್ನು ಒತ್ತಿ ಬಿಟ್ಟಿದ್ದಾರೆ. ತುಂಬಾ ಹೊತ್ತು ರೈಲು ನಿಂತಲ್ಲೇ ನಿಂತಿತ್ತು. ಅದು ಯಾರು ಎಂದು ತಿಳಿಯದೆ ರೈಲು ಮುಂದೆ ಹೋಗುವುದಿಲ್ಲ ಎಂದು ಅಧಿಕಾರಿ ಹೇಳಿದ್ರು. ಅದನ್ನು ಒತ್ತಿದ್ದ ವ್ಯಕ್ತಿ ಮುಜುಗರದಿಂದ ನಾನು ಒತ್ತಿದ್ದು ಎಂದು ಹೇಳಿಕೊಳ್ಳುತ್ತಿರಲಿಲ್ಲ. ಈ ಘಟನೆ ತುಂಬಾ ಹಾಸ್ಯಸ್ಪದವಾಗಿತ್ತು.
ಹಾಗೆ ಇಲ್ಲಿ ಕಾಣಸಿಗುವ ಬಾರೋಗ್ ರೈಲ್ವೆ ನಿಲ್ದಾಣ ಹಳೆಯ ಮತ್ತು ಪ್ರಸಿದ್ಧ ರೈಲು ನಿಲ್ದಾಣವಾಗಿದೆ. ಇಲ್ಲಿ ಹಳೆಯ ಒಂದು ಹೋಟೆಲ್ ಇದೆ. ಅದುವೇ ಸೀತಾರಾಮ ಅಂಡ್ ಸನ್ಸ್ (Sitha Rama & Sons) ಹೋಟೆಲ್. ಇಲ್ಲಿ ಸಿಗುವ ಲುಚ್ಚಿ ಚನ್ನ ಹಾಗೂ ಚೋಲೇ ಚನ್ನ ಅತ್ಯಂತ ರುಚಿಯಾಗಿರುತ್ತದೆ. ಹಾಗೆಯೇ ಈ ಹೋಟೆಲ್ನಲ್ಲಿ ಇವೆರಡು ಮಾತ್ರ ತಿಂಡಿಯಂತೆ. ಈ ಎರಡು ತಿಂಡಿ ತಿನ್ನಲು ಪ್ರವಾಸಿಗರು ಈ ಸ್ಟೇಷನ್ ನಲ್ಲಿ ಇಳಿಯುತ್ತಾರೆ. ಅಷ್ಟು ರುಚಿ ಅಂತೆ. ನಾವು ಇದನ್ನು ಕುಲ್ಚ ಎಂದು ಕರೆಯುತ್ತೇವೆ.

ಇವರು ಶಿಮ್ಲಾ ತಲುಪಿದ ನಂತರ ಅಲ್ಲಿನ ಜನರು, ಮನೆ, ಕೃಷಿಯನ್ನು ನೋಡಿ ಅಚ್ಚರಿಗೊಳಗಾದರಂತೆ. ಬೆಟ್ಟಗಳಲ್ಲಿಯೇ ಮನೆ, ಕಟ್ಟಡ ಹೋಟೆಲ್ ಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಅದೇ ಶಿಮ್ಲಾದ ವೈಶಿಷ್ಟತೆ. ಒಂದು ಮನೆಯಿಂದ ಮೇಲಿನ ಇನ್ನೊಂದು ಮನೆಗೆ ಹೋಗಬೇಕಾದರೆ ಮೆಟ್ಟಿಲುಗಳ ಮೂಲಕವೇ ನಡೆದುಕೊಂಡು ಹೋಗಬೇಕು. ಪೂರ್ತಿ ಬೆಟ್ಟಗಳು ಮೆಟ್ಟಿಲುಗಳಿಂದ ಕೂಡಿರುವುದನ್ನು ನೋಡಲು ತುಂಬಾ ರಮಣೀಯವಾಗಿರುತ್ತದೆ.
ಬಜಾರ್ ವೀಕ್ಷಣೆ
ಶಿಮ್ಲಾದಲ್ಲಿ ಲೋ ಬಜಾರ್ (Low Bazar) ಮಿಡಲ್ ಬಜಾರ್ (Middle Bazar) ಹಾಗೆ ಮಾಲ್ ರೋಡ್ (Mall Road) 3 ಬಜಾರ್ ಗಳಿವೆ. ಲೋ ಬಜಾರ್ ನಲ್ಲಿ ಹೆಚ್ಚಿನ ಎಲ್ಲಾ ವಸ್ತುಗಳು ಮಾರಾಟಕ್ಕಿರುತ್ತವೆ ಹಾಗೆ ಆಹಾರ ಪದಾರ್ಥಗಳು ಹೋಟೆಲ್ಗಳು ಹೆಚ್ಚಾಗಿದೆ. ಮಿಡಲ್ ಬಜಾರ್ ನಲ್ಲಿ ಬಹುಪಾಲು ಬಟ್ಟೆ ಅಂಗಡಿಗಳಿವೆ. ಹಾಗೆ ಇಲ್ಲಿ ಸಾಮಾನ್ಯ ಜನರು ಹೆಚ್ಚು ಓಡಾಡುತ್ತಾರೆ.
ಅತೀ ಹೆಚ್ಚು ಮನೆಗಳು ಇರುವುದು ಮಿಡಲ್ ಬಜಾರ್ ನಲ್ಲಿ. ಹಾಗೆ ಮಾಲ್ ರೋಡ್, ಇಲ್ಲಿ ಐಷಾರಾಮಿ ಕಟ್ಟಡಗಳು, ಮನೆಗಳು, ಚರ್ಚುಗಳನ್ನು ನಾವು ನೋಡಬಹುದು. ಈ ರೊಡ್ ನಲ್ಲಿ ಏನೇ ಕೊಂಡರು ದುಬಾರಿ ಬೆಲೆ. ಹಿಂದೆ ಬ್ರಿಟಿಷರು ಈ ಮಾಲ್ ರೋಡ್ನಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಅವರ ವ್ಯಾಪಾರ ವಹಿವಾಟು ಇಲ್ಲೇ ನಡೆಯುತ್ತಿತ್ತು. ಹಾಗಾಗಿ ಈ ಮಾಲ್ ರೋಡ್ ಶ್ರೀಮಂತರಿಗೆ ಮೀಸಲು ಎಂದು ಹೇಳುತ್ತಾರೆ. ಹೆಚ್ಚು ಶ್ರೀಮಂತರೇ ಇಲ್ಲಿರುವುದು.
ಮಾಲ್ ರೋಡ್ ನಲ್ಲಿರುವ ದೇಸೀ ಹೋಟೆಲ್
ಈ ರೋಡ್ ನಲ್ಲಿ ಒಂದು ದೇಸೀ ಹೋಟೆಲ್ ಇದೆ. ಅದುವೇ “ಹಿಮಾಚಲ್ ರೆಸಿಯೋ ಹೋಟೆಲ್” ಇಲ್ಲಿನ ಆಹಾರ ಪದ್ಧತಿ ದೇಸೀ ಶೈಲಿ ಹಾಗೆ ಹೋಟೆಲ್ ಕೂಡ ದೇಸೀ ಶೈಲಿಯಲ್ಲಿ ಕಟ್ಟಲಾಗಿದೆ. ತಗ್ಗದ ಜಾಗದಲ್ಲಿ ತಲೆಬಾಗಿಕೊಂಡು ಹೋಗಿ ಕೂರಬೇಕು. ಹಾಗೆ ಚಿಕ್ಕದಾದ ಮೇಜಿನ ಮೇಲೆ ಊಟ ಇಡಬೇಕು. ಕೆಳಗೆ ಕೂತು ಊಟ ಮಾಡುವುದು ಈ ದೇಸೀ ಹೋಟೆಲ್ ಪದ್ಧತಿ.
ಇಲ್ಲಿನ ವಿಶೇಷ ಊಟ-ತಿಂಡಿ ಅಂದರೆ ಅದು “ಕಂಗಾರಿ ಧಮ್ ತಾಲಿ”. 200/- ಗೆ ಸಿಗುತ್ತದೆ ಆದರೆ ಪ್ರಮಾಣ ತುಂಬಾ ಕಡಿಮೆ. ಅದ್ಭುತ ರುಚಿ ತಿನ್ನುತ್ತಾ ಇರಬೇಕು ಅನಿಸುತ್ತದೆ ಎನ್ನುತ್ತಾರೆ ಗಗನ್. ಹಾಗೆ ಇನ್ನೊಂದು ಪ್ರಸಿದ್ಧ ತಿಂಡಿ “ಹಾಟ್ ಸಿದ್ದು ಸ್ಟೀಮ್ ಬನ್” ಗಗನ್ ಅವರಿಗೆ ಈ ಎರಡು ಆಹಾರ ತುಂಬಾ ಇಷ್ಟವಾಗಿತ್ತು.
ಮೊದಲ ಬಾರಿ ರೋಪ್ ವೇ ಅನುಭವ
ಶಿಮ್ಲಾದ ಜಾಕ್ ಪರ್ವತದಲ್ಲಿರುವ ಜಾಕು ಹನುಮಾನ್ ದೇವಾಲಯಕ್ಕೆ ಹೋಗಬೇಕೆಂಬ ಆಸೆ ಇವರದಾಗಿತ್ತು. ಇಲ್ಲಿಗೆ ತೆರಳಲು ನಡೆದುಕೊಂಡು, ವಾಹನದ ಮೂಲಕ ಹಾಗೆ ರೋಪ್ ವೇ ವ್ಯವಸ್ಥೆ ಕೂಡ ಇದೆ. ಗಗನ್ ಅವರಿಗೆ ರೋಪ್ ವೇ ಮೂಲಕ ಹೋಗಬೇಕು ಯಾಕೆಂದರೆ ಇವರಿಗೆ ಮೊದಲ ಅನುಭವ. ಹಾಗಾಗಿ ಅಲ್ಲಿ ರೋಪ್ ವೇ ಮೂಲಕ ಹೋಗಲು ನಿರ್ಧರಿಸುತ್ತಾರೆ.
ನೀವು ಇದನ್ನು ಇಷ್ಟಪಡಬಹುದು: ಕರ್ಫ್ಯೂ ಸಡಿಲಗೊಂಡ ಬೆನ್ನಲ್ಲೇ ಹಿಮಾಚಲ ಪ್ರದೇಶಕ್ಕೆ ಹರಿದು ಬಂತು ಜನಸಾಗರ
ಅಲ್ಲಿಗೆ ಹೋಗಿಬರಲು ಮಕ್ಕಳಿಗೆ 450/- ಹಾಗೂ ಇತರರಿಗೆ 550/- ದರ. ಕೇವಲ ಹೋಗಲು ಮಾತ್ರ ಬಳಸಿದರೆ ಮಕ್ಕಳಿಗೆ 236/- ಹಾಗೂ ಇತರರಿಗೆ 295/- ದರ ನಿಗದಿಪಡಿಸಿದ್ದಾರೆ. ರೋಪ್ ವೇ ಬದಲು ವಾಹನದಲ್ಲಿ ಹೋದರೆ ಖರ್ಚು ಕಡಿಮೆ.

ರೋಪ್ ವೇ ತುಂಬಾ ದುಬಾರಿ ಆದರೆ ಈ ಮೂಲಕ ಹೋದರೆ ಪ್ರಕೃತಿಯ ಸೌಂದರ್ಯವನ್ನು ಅತೀ ಎತ್ತರದಿಂದ ಸವಿಯಬಹುದು. ಎಲ್ಲಾ ಬೆಟ್ಟಗಳು ಕಾಣಿಸುತ್ತವೆ. ನಾವು ಊರಿನ ಜಾತ್ರೆ ಸೇರಿದರೆ ಹೇಗೆ ಪುಟ್ಟಪುಟ್ಟದಾಗಿ ಕಾಣುತ್ತೇವೆ ಅಲ್ಲಿನ ಮನೆಗಳನ್ನು ಮೇಲಿನಿಂದ ನೋಡಿದರೆ ಹಾಗೆ ಕಾಣಿಸುತ್ತದೆ.
ರಿಡ್ಜ್ ಮೈದಾನದಲ್ಲೊಂದು ಸೂಪರ್ ತಿಂಡಿ
ಎಲ್ಲಾ ಪ್ರವಾಸಿಗರು ಶಿಮ್ಲಾಕ್ಕೆ ಭೇಟಿ ನೀಡಿದಾಗ ರಿಡ್ಜ್ ಮೈದಾನಕ್ಕೆ ಭೇಟಿ ನೀಡದೆ ಹೋಗುವುದಿಲ್ಲ. ಇಲ್ಲಿ ಕುದುರೆ ಸವಾರಿ ಇದೆ. 10ನಿಮಿಷದ ಸವಾರಿಗೆ 100/- ರೂಪಾಯಿ. ನಾವೇ ಕುದುರೆಯನ್ನು ಆರಿಸಬಹುದಂತೆ. ಹಾಗೆ ಹಿಮಾಚಲಪ್ರದೇಶದ ಸಾಂಪ್ರದಾಯಿಕ ಉಡುಗೆಯನ್ನು ಇಲ್ಲೇ ಧರಿಸಿ ಫೋಟೋಗಳನ್ನು ಕೂಡ ತೆಗೆಸಿಕೊಳ್ಳಬಹುದು. ಜೊತೆಗೆ ಇಲ್ಲಿ ಬಂದರೆ ಒಬ್ಬ ತಾತ “ಮಿಕ್ಸ್ ಮಸಾಲ” ತಿಂಡಿಯನ್ನು ಇಪ್ಪತ್ತು ರೂಪಾಯಿಗೆ ಮಾರುತ್ತಿರುತ್ತಾರೆ. ಆ ರುಚಿಯನ್ನು ಸವಿಯದೆ ಪ್ರವಾಸಿಗರು ವಾಪಸು ಹೋಗೋದಿಲ್ಲ. ರಿಡ್ಜ್ ಮೈದಾನದ ಸೂಪರ್ ತಿಂಡಿಯಂತೆ ಇದು.

ಹಿಮಾಚಲ್ ಪ್ರದೇಶದ ಶಿಮ್ಲಾಕ್ಕೆ ಭೇಟಿ ನೀಡಿದರೆ ಅಲ್ಲಿನ ಮೆಟ್ಟಿಲುಗಳಲ್ಲಿ ಹೋಗುವುದೇ ತುಂಬಾ ಖುಷಿ. ಮೆಟ್ಟಿಲಿನಿಂದ ಹೋಗಿ ಬೆಟ್ಟಗಳ ತುತ್ತತುದಿಗೆ ಹೋಗಬಹುದು. ಆದರೆ ಹೋಗುವಾಗ ಬೆಟ್ಟ ಹತ್ತಿದ್ದೇವೆ ಎಂದೇ ತಿಳಿಯುವುದಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ನಡೆದುಕೊಂಡೇ ಹೋಗುತ್ತಾರೆ. ಯಾಕೆಂದರೆ ಮೆಟ್ಟಲುಗಲ್ಲಿ ಹೋಗುವ ಅನುಭವವೇ ವಿಭಿನ್ನ. ಒಂದಾದ ಮೇಲೆ ಒಂದು ಸಿಗುವ ಸಣ್ಣ ಸಣ್ಣ ಕೇರಿಗಳು, ದೇವಾಲಯ, ಚರ್ಚ್, ಮೈದಾನಗಳ ವೀಕ್ಷಣೆ ಮಾಡಿ, ಸುತ್ತಲಿನ ಪ್ರಕೃತಿಯನ್ನು ನೋಡುವುದೇ ಇಲ್ಲಿನ ಒಂದು ಅದ್ಭುತ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ