ವಿಂಗಡಿಸದಸೂಪರ್ ಗ್ಯಾಂಗುಸ್ಮರಣೀಯ ಜಾಗ

ಸಂಜೋತಾ ಪುರೋಹಿತ್ ಬರೆದ ಕರಡಿಯ ಭೇಟಿ ಮತ್ತು ಫಜೀತಿ ಬರಹ

ವಾಷಿಂಗ್ಟನ್ ಡಿಸಿ ವಸಂತ ಕಾಲದಲ್ಲಿ ಅರಳುವ ಬಗೆ ಬಗೆಯ ಹೂವುಗಳು , ಟೈಡಲ್ ಬೇಸಿನ್ ಪ್ರದೇಶದ ಸಾಲು ಸಾಲು ಚೆರ್ರಿ ಹೂವುಗಳ ಸೊಬಗು ಸೀರೆಯುಟ್ಟ ತರುಣಿಯಂತೆ ಕಂಗೊಳಿಸುತ್ತದೆ. ಜೊತೆಗೆ ವಾಷಿಂಗ್ಟನ್ ಡಿಸಿಯ ಬಹು ಜನರ ಆಕರ್ಷಣೀಯ ಪ್ರಸಿದ್ದ ಸ್ಮೋಕಿಸ್ ಸ್ಥಳ, ಕರಡಿ ಫಜೀತಿ ಬಗ್ಗೆ ಸಂಜೋತಾ ಪುರೋಹಿತ್ ಬರೆದ ಬರಹ

ಸಂಜೋತಾ ಪುರೋಹಿತ್

(sanjotapurohit.com)

ತಿಂಗಳಿಗೊಮ್ಮೆ ಪ್ರವಾಸಕ್ಕೆ ಹೊರಡುವ ನಾವು ಈ ಲಾಕಡೌನ್ ಶುರುವಾದಾಗಿನಿಂದ ಮನೆಯಲ್ಲಿಯೇ ಬಂಧಿಯಾಗಿದ್ದೆವು. ಮುದ್ದಣ ಮನೋರಮೆಯರ ಸರಸ ಸಲ್ಲಾಪದಂತೆ ಮೊದಲಿನ ಕೆಲವು ದಿನಗಳು ರಮಣೀಯವಾಗಿ ಕಂಡರೂ ದಿನಗಳುರುಳಿದಂತೆ ಖಾಲಿತನ ಅಟ್ಟಹಾಸಗೈಯ್ಯತೊಡಗಿ ಬೇಸರಿಕೆ ಕಾಡಹತ್ತಿತು. ಏನು ಮಾಡುವುದು, ಎಲ್ಲಿ ಹೋಗುವುದು ಎಂದು ನಮಗಿದ್ದ ಆಯ್ಕೆಗಳನ್ನು ಹರಡಿಕೊಂಡು ಕೂತಿದ್ದಾಗಲೇ ಸ್ನೇಹಿತನೊಬ್ಬ ಕರೆ ಮಾಡಿ ತನ್ನ ಮನೆಗೆ ಆಹ್ವಾನವಿತ್ತ. ಅವನಿದ್ದುದು ದೂರದ ವಾಷಿಂಗ್ಟನ್ ಡಿ.ಸಿ ನಲ್ಲಿ. ನಮ್ಮ ಹಾಗೆಯೇ ಅವರು ಗಂಡ ಹೆಂಡತಿ ಮಾತ್ರ ಮನೆಯಲ್ಲಿ. ನಮ್ಮ ಆತ್ಮೀಯ ಸ್ನೇಹಿತರಾಗಿದ್ದರಿಂದ ಒಂದು ವಾರದ ಮಟ್ಟಿಗೆ ಅವರ ಮನೆಗೆ ಹೋಗುವ ಯೋಜನೆ ಹಾಕಿಕೊಂಡೆವು. ಹೇಗೂ ಮನೆಯಿಂದ ಕೆಲಸ ಮಾಡುವ ಸೌಕರ್ಯ ಇದೆಯಲ್ಲ, ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದೆನ್ನುವ ಸೌಲಭ್ಯ, ಸಾಲು ಸಂಕಷ್ಟಗಳ ಮಧ್ಯದಲ್ಲಿಯೂ ಕೋರೊನಾ ನಮಗಿತ್ತ ವರ ಎಂದೇ ಭಾವಿಸಬಹುದೆನೋ. 

Cherry blossom

ನಮ್ಮ ಊರಿನಿಂದ ವಾಷಿಂಗ್ಟನ್ ಡಿ.ಸಿ 12 ಗಂಟೆಗಳ ದಾರಿ. ಅಷ್ಟು ದೂರ ಡ್ರೈವ್ ಮಾಡಿಕೊಂಡು ಹೋಗುವುದು ನಮಗೇನೂ ಕಷ್ಟವಲ್ಲ. ಅದೂ ಅಲ್ಲದೇ ದಾರಿಯಲ್ಲಿ ಸಂಬಂಧಿಕರ ಮನೆಯೊಂದು ಸಿಗುತ್ತಾದ್ದರಿಂದ ಹಾಗೇ ಅವರನ್ನು ಭೇಟಿ ಮಾಡಬಹುದೆಂಡುಕೊಂಡು ಹೊರಟೆವು. ಶುಕ್ರವಾರ ಸಂಜೆ ಪ್ರಯಾಣ ಶುರು ಮಾಡಿ ಸಂಬಂಧಿಕರ ಮನೆ ತಲುಪಿದಾಗ ರಾತ್ರಿಯಾಗಿತ್ತು. ಮಾರನೇ ದಿನ ತಿಂಡಿ ಮುಗಿಸಿ ಹೊರಡಬೇಕೆಂದುಕೊಂಡ ನಮ್ಮನ್ನು ಅವರು ಬಿಡದೇ ಇದ್ದುದರಿಂದ ಭಾನುವಾರ ಬೆಳಿಗ್ಗೆ ಹೊರಡಬೇಕಾಯಿತು. 

ವಸಂತ ಕಾಲದಲ್ಲಿ ಅಂದರೆ ಇಲ್ಲಿಯವರು ಹೇಳುವ ಹಾಗೆ ಸ್ಪ್ರಿಂಗ್ ಕಾಲದಲ್ಲಿ ಇಲ್ಲಿ ಬಗೆಬಗೆಯ ಹೂವುಗಳು ಅರಳಿ ಇಡೀ ಪರಿಸರ ಹೂವಿನ ಸೀರೆಯುಟ್ಟ ತರುಣಿಯಂತೆ ಕುಣಿಯುತ್ತಿರುತ್ತದೆ. ಅಷ್ಟೇ ಅಲ್ಲದೆ ಈ ವಾಷಿಂಗ್ಟನ್ ಡಿ.ಸಿ ಯಲ್ಲಿ ಟೈಡಲ್ ಬೇಸಿನ್ ಎಂಬ ಹೆಸರಿನ ಪ್ರದೇಶದಲ್ಲಿ ಸಾಲು ಸಾಲು ಚೆರ್ರಿ ಹೂಗಳ ಮರಗಳಿವೆ. ಈ ಚೆರ್ರಿ ಗಿಡಗಳು ಜಪಾನ್ ಮೂಲದವಾಗಿದ್ದು ಪುಟ್ಟ ಹೂಗಳು ವಸಂತ ಕಾಲದಲ್ಲಿ ಗಿಡದ ತುಂಬ ಅರಳಿ ಭೂಮಿಗಿಳಿದ ಗುಲಾಬಿ ನಕ್ಷತ್ರಗಳಂತೆ ಹೊಳೆಯುತ್ತವೆ. ಈ ಹೂವುಗಳ ಆಯುಷ್ಯ ಬಹಳ ಕಡಿಮೆ. ಒಂದೇ ವಾರದಲ್ಲಿ ಮೊಗ್ಗು ಹೂವಾಗಿ, ಹೂವು ಪೂರ್ಣ ಚಂದಿರನಂತೆ ಅರಳಿ ಬಣ್ಣ ತುಂಬಿಕೊಂಡು, ನಂತರ ಪಕಳೆಗಳು ಉದುರಲು ಶುರುವಾಗುತ್ತದೆ. ಹಾಗಾಗಿ ಬೇಗ ಹೋದರೂ ಈ ಸೌಂದರ್ಯ ರಾಶಿಯನ್ನು ಕಣ್ಣು ತುಂಬಿಸಿಕೊಳ್ಳಲು ಆಗುವುದಿಲ್ಲ. ಹಾಗಂತ ತಡವಾಗಿ ಹೋದರೆ ಬಣ್ಣ ಕಳೆದುಕೊಂಡ, ಮುದುಡಿದ, ಉದುರಿದ, ಶೋಚನಿಯ ಸ್ಥಿತಿಯಲ್ಲಿರುವಂತೆ ಕಾಣಿಸುವ ಹೂಗಳನ್ನು ನೋಡಿ ನಾವು ಮನಸನ್ನು ಮುದುಡಿಸಿಕೊಂಡು ಬರಬೇಕಾಗುತ್ತದೆ. ಹಾಗಾಗಿ ಇಲ್ಲಿ ಹೂವುಗಳು ಪೂರ್ಣಪ್ರಮಾಣವಾಗಿ ಅರಳುವ ದಿನಾಂಕವನ್ನು ಪತ್ತೆ ಹಚ್ಚಿ ಆ ಒಂದು ದಿನವನ್ನು ‘National cherry blossom festival’ ಎಂದು ಆಚರಿಸುತ್ತಾರೆ. ಸಾವಿರಾರು ಜನ ಈ ಹೂವುಗಳನ್ನು ನೋಡಲೆಂದೇ ಇಲ್ಲಿಯವರೆಗೆ ಪಯಣಿಸಿಕೊಂಡು ಬರುತ್ತಾರೆ. ಈ ದಿನಾಂಕ ಸಂಪೂರ್ಣವಾಗಿ ಪರಿಸರದ ಮೇಲೆ ಅವಲಂಬಿತವಾಗಿರುವುದರಿಂದ ಪ್ರತಿ ವರ್ಷ ಸುಮಾರಾಗಿ ಮಾರ್ಚ್ ನಲ್ಲಿಯೇ ಬಂದರೂ ದಿನಾಂಕ ಹೆಚ್ಚು ಕಡಿಮೆಯಾಗುತ್ತಿರುತ್ತದೆ. 

National cherry blossom festival

ನಾವು ಹೇಗೂ ಅಲ್ಲಿಯೇ ಹೋಗುತ್ತಿದ್ದರಿಂದ ಈ ವರ್ಷ ಈ ಚೆರ್ರಿ ಹೂಗಳನ್ನು ನೋಡಿಕೊಂಡು ಬಂದರಾಯಿತು ಎಂದು ನಮ್ಮ ಪ್ರಯಾಣದಲ್ಲಿ ಅದನ್ನೂ ಸೇರಿಸಿಕೊಂಡಿದ್ದೆವು. ಅದರ ವೆಬಸೈಟಿನಲ್ಲಿ ಮುಂದಿನ ಭಾನುವಾರದ ದಿನಾಂಕ ತೋರಿಸುತ್ತಿತ್ತು, ಅಂದರೆ ನಮಗಿನ್ನೂ ಒಂದು ವಾರದ ಸಮಯವಿತ್ತು. ರವಿವಾರ ಸಂಜೆ ನಾವು ನಮ್ಮ ಸ್ನೇಹಿತರ ಮನೆಗೆ ತಲುಪಿದೆವು. ಮಾರನೇ ದಿನದಿಂದ ಕೆಲಸವಿದ್ದುದರಿಂದ ಮನೆಯಲ್ಲಿಯೇ ಊಟ ಮಾಡಿ ಮಲಗಿದರಾಯಿತು ಎಂದುಕೊಳ್ಳುತ್ತಿರುವಾಗಲೇ ನಮ್ಮ ಸ್ನೇಹಿತ ಮೊಬೈಲ್ ನೋಡಿ ಉಸಿರುಗಟ್ಟಿದವನಂತೆ ಸ್ತಬ್ಧನಾದ. ಏನಾಯಿತು ಎಂದು ನಾವೆಲ್ಲ ಅವನದೇ ಮೊಬೈಲಿನಲ್ಲಿ ಇಣುಕಿ ನೋಡಿದಾಗ Cherries Bloom Date Today ಎಂದು ತೋರಿಸುತ್ತಿತ್ತು. ಅಂದರೆ ಅವತ್ತೇ ಚೆರ್ರಿ ಹೂಗಳು ಸಂಪೂರ್ಣವಾಗಿ ಅರಳಿದ್ದವು.

ನಮ್ಮ ಯೋಜನೆಯ ಪ್ರಕಾರ ಮುಂದಿನ ಭಾನುವಾರ ಹೋದರೆ ಅಲ್ಲಿ ಪಕಳೆಗಳ ಅವಶೇಷ ಬಿಟ್ಟರೆ ಬೇರೆ ಏನೂ ಇರುವುದಿಲ್ಲ. ಈಗೇನು ಮಾಡುವುದು? ಮಾರನೇ ದಿನ ಹೋಗಬೇಕೆಂದರೆ ರಜೆ ಇಲ್ಲ. ಕೆಲಸ ಮುಗಿಸಿ ಸಂಜೆ ಹೋಗಬೇಕೆಂದರೆ ಒಬ್ಬರ ಕೆಲಸ ಆರಕ್ಕೆ ಮುಗಿದರೆ ಇನ್ನೊಬ್ಬರ ಕೆಲಸ ಏಳಕ್ಕೆ. ಕತ್ತಲಿನಲ್ಲಿ ನೋಡಿ ಏನು ಪ್ರಯೋಜನ? ಅದಕ್ಕೆ ನಾವು ಸೋಮವಾರ ಬೆಳಿಗ್ಗೆ ಹೋಗಬೇಕೆಂದು ನಿರ್ಧರಿಸಿ ಮುಂಜಾನೆ ಏಳಕ್ಕೆ ಎದ್ದು ಹೊರಟೆವು. ಗಡ ಗಡ ಚಳಿ ಮತ್ತು ನಮ್ಮನ್ನೇ ಕೊಚ್ಚಿಕೊಂಡು ಹೋಗುವಂತಿದ್ದ ಗಾಳಿ! ಟೈಡಲ್ ಬೇಸಿನ್ (ಚೆರ್ರಿ ಹೂಗಳ ಗಿಡಗಳಿರುವ ಜಾಗ) ಸುತ್ತ  ವಾಯುವಿಹಾರದಲ್ಲಿರುವವರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ.

ಮೈಲುಗಟ್ಟಲೇ ದೂರಕ್ಕೆ ಚಾಚಿಕೊಂಡು ನಿಂತ ಹೂಗಿಡಗಳು. ಒಂದು ಬದಿಗೆ ನೀರು. ನೀರಿನಾಚೆ ದೊಡ್ಡ ದೊಡ್ಡ ಕಟ್ಟಡಗಳು. ಗಾಳಿಗೆ ಮೈ ಕುಲುಕುತ್ತ ನಿಂತ ಮರಗಳು. ಸುಂಯ್ಯನೇ ಬೀಸುತ್ತಿದ್ದ ಗಾಳಿಗೆ ಕೋಪಗೊಂಡವರಂತೆ ಕೆನ್ನೆ ತಿರುಗಿಸುತ್ತಿದ್ದ ಹೂವುಗಳು. ಈ ಸಲ್ಲಾಪವನ್ನು ನೋಡುವುದೇ ಹಬ್ಬವಾಗಿತ್ತು. ಅಲ್ಲೊಂದು ದೃಶ್ಯಕಾವ್ಯ ತಂತಾನೇ ಹೆಣೆದುಕೊಂಡು ಮನಸಲ್ಲಿ ತುಂಬಿಕೊಳ್ಳುತ್ತಿತ್ತು. ನೀರಿನ ಪ್ರತಿಬಿಂಬದಲ್ಲಿ ಕಾಣುತ್ತಿದ್ದ ಹೂಮರಗಳನ್ನು ಎಷ್ಟು ನೋಡಿದರೂ ತೃಪ್ತಿಯಿಲ್ಲ. ಸ್ಲೋ ಮೋಷನ್, ಹೈಪರಲ್ಯಾಪ್ಸ್, ಸೆಲ್ಫಿ, ಪ್ಯಾರನೋಮಾ ಹೀಗೆ ಗೊತ್ತಿದ್ದ ಎಲ್ಲ ಫೋಟೊಗ್ರಾಫಿ ಕಲೆಗಳನ್ನು ಬಳಸಿ ಈ ಚೆಲುವನ್ನು ಹಿಡಿದಿಡಲು ಪ್ರಯತ್ನ ಪಟ್ಟರೂ ಪ್ರತ್ಯಕ್ಷ ಕಣ್ಣಿಗೆ ಕಂಡಷ್ಟು ಚೆಂದವಾಗಿ ಗಾಜಿನ ಪರದೆಯ ಮೇಲೆ ಕಾಣಿಸಲೇ ಇಲ್ಲ. 

tidal basin cherry blossom Washington

ಇನ್ನೂ ನೋಡುತ್ತಿರಲೇಬೇಕೆಂಬ ಹಂಬಲದಲ್ಲಿಯೇ ಮನೆಗೆ ಮರಳಿದಾಗ ಹತ್ತು ಗಂಟೆಯಾಗಿತ್ತು. ಮತ್ತೆ ಎಂದಿನಂತೆ ಕೆಲಸ ಶುರು. ಆ ಇಡೀ ವಾರ ಬೆಳಿಗ್ಗೆ ಕೆಲಸ ಮಾಡಿ ಸಂಜೆಯ ಸಮಯದಲ್ಲಿ ವಾಷಿಂಗ್ಟನ್ ಡಿ.ಸಿಯಲ್ಲಿರುವ ನೋಡಬೇಕಾದಂತಹ ಸ್ಥಳಗಳನ್ನು ನೋಡುವುದು ಮತ್ತು ವಾರಾಂತ್ಯದಲ್ಲಿ ಅಲ್ಲಿಂದ ಎಂಟು ಗಂಟೆಗಳ ದೂರದಲ್ಲಿದ್ದ ಸ್ಮೋಕಿ ಮೌಂಟೇನ್ ನೋಡಲಿಕ್ಕೆ ಹೋಗುವುದು ಎಂದಾಗಿತ್ತು. ಎಷ್ಟೋ ದಿನಗಳ ನಂತರ ಹೀಗೆ ಆತ್ಮೀಯರೊಬ್ಬರ ಮನೆಗೆ ಬಂದ, ಅತ್ಮೀಯರೊಡನೆ ಇರುವ, ಸಂಭಾಷಿಸುವ ಸುಯೋಗ ನಮಗೆ.  

ಅಂದುಕೊಂಡಂತೆ ಶುಕ್ರವಾರ ಮಧ್ಯಾಹ್ನ ಸ್ಮೋಕಿಸ್ ಗೆ ಹೊರಟೆವು. ಇದು ಸಾಲು ಪರ್ವತಗಳ ಶ್ರೇಣಿ. ಹದಿನೈದಕ್ಕೂ ಹೆಚ್ಚು ಗಿರಿ ಶಿಖರಗಳನ್ನು ಒಟ್ಟಿಗೆ ಕಾಣಬಹುದು. ಇಡೀ ಅಮೆರಿಕಾದಲ್ಲಿಯೇ ಹೆಚ್ಚು ಜನರು ಭೇಟಿ (ಮೋಸ್ಟ್ ವಿಸಿಟೆಡ್) ನೀಡುವ ಜಾಗ. ಸದಾ ಮಂಜನ್ನು ಹೊದ್ದು ಮಲಗಿದಂತೆ ಕಾಣುವ ಈ ಪರ್ವತಗಳಿಗೆ ಸ್ಮೋಕಿಸ್ ಎಂದು ಕರೆಯಲು ಮಂಜೇ ಕಾರಣ. ಒಂದೆರಡು ದಿನಗಳಲ್ಲಿ ನೋಡಿ ಮುಗಿಸಬಹುದೆನ್ನುವ ಜಾಗ ಖಂಡಿತ ಇದಲ್ಲ. ದೊಡ್ಡ ಕಾಡಿನ ಒಳಗಡೆ ಹೋಗಲು ನೂರಾರು ಸಣ್ಣ ಸಣ್ಣ ಕಾಲುದಾರಿಗಳಿವೆ (ಟ್ರೈಲ್ಸ್ ಎಂದು ಇಲ್ಲಿ ಸಾಮನ್ಯವಾಗಿ ಕರೆಯುತ್ತಾರೆ). ಅಲ್ಲಲ್ಲಿ ಸಣ್ಣ ಮತ್ತು ದೊಡ್ಡದಾದ ಜಲಪಾತಗಳಿವೆ.

ಹೈಕಿಂಗ್ ಆಸಕ್ತಿಯಿರುವವರು ಇಲ್ಲಿ ತಿಂಗಳುಗಟ್ಟಲೇ ವಾಸವಿದ್ದು ಕಾಡಿನ ಸುಖ ಪಡೆದುಕೊಳ್ಳುತ್ತಾರೆ. ಹಾಗೇ ಇಲ್ಲಿ ಕರಡಿಗಳು ಸಾಮಾನ್ಯವಾದ್ದರಿಂದ ಇಲ್ಲಿ ಬರುವವರಿಗೆ ಕಾಡಿನ ಮಧ್ಯದಲ್ಲಿ ಕರಡಿಯನ್ನು ಗುರುತಿಸಿ ನೋಡುವುದು ಹೆಮ್ಮೆಯ ಸಂಗತಿ. ಕೊಂಬೆಯ ಮೇಲೆ ಕುಳಿತು ನಿದ್ರಿಸುವ, ಮರ ಹತ್ತಿ ಕೂರುವ, ಕಾಡಿನ ಮಧ್ಯೆ ಓಡಾಡುವ ಈ ಕಪ್ಪು ದೈತ್ಯಗಳು ಕಂಡರೆ ಜನ ರಸ್ತೆಯ ಮೇಲೆಲ್ಲ ಗಾಡಿ ನಿಲ್ಲಿಸಿ ಅಲ್ಲೆಲ್ಲೋ ದೂರದಲ್ಲಿರುವ ಕರಡಿಯ ವೀಕ್ಷಣೆಯಲ್ಲಿ ಮೈಮರೆಯುತ್ತಾರೆ. ರಸ್ತೆಯ ಮೇಲೆ, ಗಾಡಿಯ ಅಕ್ಕ ಪಕ್ಕದಲ್ಲಿ ಬಂದರಂತೂ ನೋಡುವವರ ಭಾಗ್ಯ ಎಂದೇ ಹೇಳಬಹುದು. ಕೆಲವೊಮ್ಮೆ ಪುಟ್ಟ ಪುಟ್ಟ ಮರಿಗಳ ಜೊತೆ ರಸ್ತೆ ದಾಟುತ್ತಿರುತ್ತವೆ. ಆಗೆಲ್ಲ ಅವುಗಳು ದಾಟುವವರೆಗೂ ಕಾಯುತ್ತ ನಿಲ್ಲುವ ವಾಹನಗಳ ಸಾಲು ಉದ್ದಕ್ಕೆ ಬೆಳೆದು ಟ್ರಾಫಿಕ್ ನಿಯಂತ್ರಿಸಲು ಪೋಲಿಸ್ ಬರಬೇಕಾದ ಪರಿಸ್ಥಿತಿ ಉಂಟಾಗುತ್ತದೆ.

Smokiees in USA

ಈ ಕಾಡಿನಲ್ಲಿರುವ ಪ್ರತಿ ಕರಡಿಯ ಮೇಲೂ ಅರಣ್ಯ ಅಧಿಕಾರಿಗಳು ನಿಗಾ ವಹಿಸಿರುತ್ತಾರೆ. ಅದರ ಮೈ ಮೇಲೆ ಅಂಟಿಸಿದ ಜಿಪಿಎಸ್ ಮಾಹಿತಿಯಿಂದ ಅದು ಕಾಡು ಬಿಟ್ಟು ರಸ್ತೆಗೆ ಬಂದಿರುವ ಸುದ್ದಿ ಗೊತ್ತಾಗುತ್ತದೆ ಅವರಿಗೆ. ಆಗೆಲ್ಲ ತಕ್ಷಣ ಗಾಡಿಯಲ್ಲಿ ಬರುವ ಅಧಿಕಾರಿಗಳು, ಜನರು ಅದರ ಬಳಿ ಹೋಗದಂತೆ ನೋಡಿಕೊಂಡು, ಕರಡಿಗೂ ಮತ್ತು ಮನುಷ್ಯರಿಗೂ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತಾರೆ. 

ನೀವು ಇದನ್ನು ಇಷ್ಟ ಪಡಬಹುದು:ಹಿಮಾಲಯದ ಮಡಿಲಿನ “ಗ್ಯಾಂಗಟಾಕ್”

ನಾವು ಇಲ್ಲಿಗೆ ಹೋದ ಮೂರು ದಿನಗಳಲ್ಲಿ ಒಂದು ಕರಡಿ ಸಹ ನಮಗೆ ಕಾಣಿಸಲಿಲ್ಲ. ಮೈಲುಗಟ್ಟಲೇ ಟ್ರೆಲ್ಸ್ ನಡೆದ್ದಿದ್ದಾಯ್ತು, ಸಣ್ಣ ಪುಟ್ಟ ಬೆಟ್ಟ ಹತ್ತಿದ್ದಾಯ್ತು.. ಊಹುಂ ಕಾಣಿಸಲೇ ಇಲ್ಲ. ಎರಡನೆಯ ದಿನ ಹೀಗೆ ಹೋಗುವಾಗ ದಾರಿಯಲ್ಲಿ ನಿಂತಿದ್ದ ಜನರ ಗುಂಪನ್ನು ಕಂಡು ಕರಡಿಯಿದೆ ಎಂದು ಹರ್ಷದಿಂದ ನಾವು ಸಹ ಗಾಡಿ ನಿಲ್ಲಿಸಿ ನೋಡಿದರೆ ಅಲ್ಲೆಲ್ಲೋ ಪರ್ವತದ ತುದಿಯಲ್ಲಿ ಒಂದು ಕರಡಿ ಹೋಗುವ ದೃಶ್ಯ ಕಂಡಿತು. ಅದೂ ಕ್ಯಾಮೆರಾದಲ್ಲಿ ಝೂಮ್ ಮಾಡಿ ನೋಡಿದರೆ ಮಾತ್ರ ಕಾಣಿಸುತ್ತಿತ್ತು. ‘ಇಷ್ಟೊತ್ತು ಕೆಳಗೆ ಇತ್ತು, ಈಗ ಮೇಲೆ ಹೋಯ್ತು’ ಎಂದು ಅಲ್ಲಿನವರು ಹೇಳಿದಾಗ ನಮಗೆ ‘ಛೇ ಒಂದೊಳ್ಳೆ ಕರಡಿ ನೋಡುವ ಅವಕಾಶ ತಪ್ಪಿಸಿಕೊಂಡೆವಲ್ಲ’ ಎಂಬ ಹಳಹಳಿ. ಒಮ್ಮೊಮ್ಮೆ ಜನರಿಗೆ ಕಾಟ  ಕೊಡಲೆಂದೇ ‘ಕರಡಿ ಕಾಣಿಸ್ತು ಕರಡಿ’ ಆಟ ಆಡುತ್ತಿದ್ದೆವು. ಸುಮ್ಮನೆ ರಸ್ತೆ ಬದಿಗೆ ಗಾಡಿ ನಿಲ್ಲಿಸಿ, ಕಿಟಕಿಯ ಗಾಜನ್ನು ತೆಗೆದು ದೂರ ಕೈ ಮಾಡಿ ತೋರಿಸಿ ಒಂದೆರಡು ನಿಮಿಷ ನಿಂತಂತೆ ಮಾಡಿ ಅಲ್ಲಿಂದ ಹೊರಟು ಬಿಡುವುದು. ನಮ್ಮ ಹಿಂದೆ ಇರುವವರು ನಮಗೆ ಎಲ್ಲಿಯೋ ಕರಡಿ ಕಂಡಿರಬೇಕು ಎಂದು ಭಾವಿಸಿ ತಾವೂ ಗಾಡಿ ನಿಲ್ಲಿಸಿ ಹುಡುಕಾಡುತ್ತಿದ್ದರು. ಅವರ ಹಿಂದೆ ಮತ್ತಷ್ಟು ಗಾಡಿಗಳು. ಹೀಗೆ ಜನರಿಗೆ ಉಪದ್ರವ ಕೊಡುವುದು ಮಜವಾಗಿದ್ದಾಗ ಮುಂದೆ ಇದೇ ಕರಡಿ ನಮಗೆ ಉಪದ್ರವ ಕೊಡಲಿದೆ ಎಂದು ನಮಗರಿವಿರಲಿಲ್ಲ. 

ನಾವು ಮರಳಿ ಊರಿಗೆ ಹೊರಡುವ ದಿನ ಬಂತು. ಅಕ್ಕ ಪಕ್ಕ ಹಬ್ಬಿಕೊಂಡಿದ್ದ ಕಾಡು ಮರಗಳ ಮಧ್ಯದಲ್ಲಿ ಎಲ್ಲಾದರೂ ಕರಡಿ ಕಂಡಿತೇ ಎಂದು ನಾವು ಸಾಧ್ಯವಾದಷ್ಟು ಕಣ್ಣಲಗಿಸಿ ನೋಡುತ್ತಾ, ಕೆಲವೊಮ್ಮೆ ದೊಡ್ಡ ಮರದ ದಿಮ್ಮೆಗಳನ್ನೇ ಕರಡಿ ಎಂದು ಭಾವಿಸಿ ಮೋಸ ಹೋಗುತ್ತಾ, ಕೊನೆಗೂ ಕರಡಿ ಎಲ್ಲಿಯೂ ಕಾಣಿಸದೇ ನಾವೆಲ್ಲ ಅತೀವ ಬೇಸರದಲ್ಲಿ ಸಾಗುತ್ತಿದ್ದಾಗಲೇ ರಸ್ತೆಯ ಪಕ್ಕ ಗಾಡಿಗಳು ನಿಂತದ್ದು ಕಾಣಿಸಿತು. ರಸ್ತೆಯ ಆ ಕಡೆಯಲ್ಲಿದ್ದ ಮರಗಳ ಹತ್ತಿರ ನಿಂತು ಜನ ನೋಡುತ್ತಿದ್ದರು. ಪಕ್ಕಾ ಇದು ಕರಡಿಯೇ ಎಂದು ಸಂಭ್ರಮದಿಂದ ನಾವು ಸಹ ರಸ್ತೆಯ ಪಕ್ಕದಲ್ಲಿಯೇ ಕಾರು ನಿಲ್ಲಿಸಿ, ದೊಡ್ಡ ದೊಡ್ಡ ಕ್ಯಾಮರಾಗಳನ್ನು ತೆಗೆದುಕೊಂಡು ಆ ಬದಿಗೆ ಓಡಿದೆವು. ಅಲ್ಲಿಯೇ ತೀರಾ ಹತ್ತಿರದಲ್ಲಿದ್ದ ಮರದ ಮೇಲೆ ಕುಳಿತಿತ್ತು ಆ ಕಾಡಿನ ಜೀವಿ. ಅಲುಗಾಡುತ್ತಿರಲಿಲ್ಲ. ಮಲಗಿತ್ತೋ, ಆಲಸ್ಯವೋ ಅಥವಾ ಊಟದ ನಂತರದ ವಿಶ್ರಾಂತಿಯಲ್ಲಿತ್ತೋ.. ನಮ್ಮ ಪ್ರಶ್ನೆಗಳಿಗೆ ಅಲ್ಲಿ ಯಾರಿಗೂ ಉತ್ತರ ಗೊತ್ತಿರಲಿಲ್ಲ. ಜನ ಸದ್ದು ಮಾಡಿದರೆ ಎಲ್ಲಿ ಅದರ ತಪಸ್ಸಿಗೆ ಭಂಗವಾಗುವುದೋ ಎಂಬಂತೆ ಸುಮ್ಮನೆ ನೋಡುತ್ತಾ ಪಿಸುನುಡಿಯುತ್ತ ನಿಂತಿದ್ದರು. ಎಷ್ಟೊತ್ತು ನೋಡಿದ ಮೇಲೆ ತೃಪ್ತಿಯಾಯಿತು ನಮಗೆ. ಅಂತೂ ದೇವರು ನಮಗೆ ಕರಡಿಯ ದರ್ಶನ ಮಾಡಿಸಿದನಲ್ಲ ಎಂದು ಕೃತಾರ್ಥರಾಗುತ್ತ ಕಾರಿನ ಬಳಿ ಮರಳಿದೆವು.

ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರಿಂದ ಒಂದು ಬದಿಯ ಬಾಗಿಲನ್ನು ತೆಗೆಯುವ ಹಾಗಿರಲಿಲ್ಲ. ಡ್ರೈವರ್ ನನ್ನೂ ಸೇರಿಸಿ ಎಲ್ಲರೂ ಗಾಡಿಯ ಬಲಕ್ಕಿದ್ದ ಬಾಗಿಲುಗಳಿಂದ ಒಳ ಹೊಕ್ಕೆವು. ಮುಂದಿನವರು ಬೇಗ ಕುಳಿತರು. ಹಿಂದಿನ ಸೀಟಿನಲ್ಲಿ ತಹರೇವಾರಿ ತಿಂಡಿಗಳು, ಜಾಕೆಟ್ಟುಗಳು, ನೀರನ್ನು ಬಾಟಲಿ ಇತ್ಯಾದಿ ಯಥೇಚ್ಛವಾಗಿ ಹರಡಿಕೊಂಡಿದ್ದರಿಂದ ಮೊದಲು ಕಾರು ಹತ್ತಿದ ನಾನು ಅವುಗಳೆಲ್ಲವನ್ನು ಸರಿಸುತ್ತ ಜಾಗ ಮಾಡಿಕೊಂಡು ಮುಂದೆ ಸರಿಯುತ್ತಿದ್ದೆ. ನನ್ನ ಪಕ್ಕ ಕೂರಬೇಕಾಗಿದ್ದ ನನ್ನ ಸ್ನೇಹಿತೆ ಪ್ರಿಯಾ ಬಾಗಿಲಿನ ಬಳಿಯೇ ಕಾಯುತ್ತಿದ್ದಳು. ಕಾರು ಓಡಿಸುತ್ತಿದ್ದವನು ಅವಳ ಗಂಡ ಪ್ರೀತಮ್. ನಾನಿನ್ನೂ ನನ್ನ ಜಾಗದಲ್ಲಿ ಕೂತಿರಲಿಲ್ಲ. ಅಷ್ಟರಲ್ಲಿ ಹಿಂದೆಯಿಂದ ಪ್ರಿಯಾ ಜೋರಾಗಿ ಕಿರುಚಿದ ಸದ್ದು. ಮುಂದಿನವರು ಕುಳಿತ ತಕ್ಷಣ ಎಲ್ಲರೂ ಕುಳಿತಿರಬಹುದು ಎಂದೆಣಿಸಿದ ಪ್ರೀತಮ್ ಕಾರಿನ ಬ್ರೇಕ್ ಬಿಟ್ಟು ಬಿಟ್ಟಿದ್ದ.

Bear

ಇಳಿಜಾರಿನಲ್ಲಿ ನಿಂತಿದ್ದ ಕಾರಿನ ಟೈರ್ ಅಲ್ಲಿಯೇ ಅದರ ಪಕ್ಕ ನಿಂತಿದ್ದ ಪ್ರಿಯಾಳ ಕಾಲಿನ ಮೇಲೆ ಹರಿಯಿತು. ಅವಳು ಕಿರುಚಿದ ತಕ್ಷಣ ಗಾಬರಿಯಲ್ಲಿ ಏನು ಮಾಡಬೇಕೆಂದು ತಿಳಿಯದ ಅವನು ಕಾರನ್ನು ಹಿಂದಕ್ಕೆ ತೆಗೆದುಕೊಳ್ಳುವ ಬದಲು ಮುಂದೆ ಓಡಿಸಿದ. ಅಲ್ಲಿಗೆ ಕಾರಿನ ಟೈರ್ ಸಂಪೂರ್ಣವಾಗಿ ಒಂದು ಸುತ್ತು ಪ್ರಿಯಾಳ ಕಾಲಿನ ಮೇಲೆ ಹಾಯ್ದಿತ್ತು. ನಮಗೆಲ್ಲ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಮೂರ್ನಾಲ್ಕು ಸೆಕೆಂಡುಗಳಲ್ಲಿ ಈ ಘಟನೆ ನಡೆದಿತ್ತು. ಕಾರಿನ ಪಕ್ಕ ಇದ್ದ ಪ್ರಿಯಾ ಇನ್ನೂ ಕಿರುಚುತ್ತಲೇ ಇದ್ದಳು. ನಾವೆಲ್ಲ ದಡಬಡಿಸಿ ಇಳಿದಾಗ ಅವಳು ಕಾಲನ್ನು ಹಿಡಿದುಕೊಂಡು ಅಳಲು ಶುರು ಮಾಡಿದಳು. ಅವಳನ್ನು ಎತ್ತಿ ಕಾರಿನಲ್ಲಿ ಕೂಡಿಸಿ, ಕಾಲಿಗೆ ಹಾಕಿದ್ದ ಶೂ, ಸಾಕ್ಸ್ ಬಿಚ್ಚಿದೆವು. ಕಾಲಿನ ಮೇಲೆ ಟೈರ್ ಮಾರ್ಕ್ ಬಿದ್ದಿತ್ತು. ತಣ್ಣೀರು ಹಾಕಿದೆವು. ಒಳಪೆಟ್ಟಾದರೆ ಅವಳಿಗೆ ಅಪಾಯ ಎಂದರಿತು ಅಲ್ಲಿಯೇ ಯಾವುದಾದರೂ ಆಸ್ಪತ್ರೆಗೆ ಹೋಗಬೇಕೆಂದುಕೊಂಡು ಎಲ್ಲರೂ ಕಾರು ಹತ್ತಿ ಹೊರಟೆವು. ಅದು ಪ್ರವಾಸಿ ಸ್ಥಳವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ, ಹತ್ತಿರದಲ್ಲಿ ಆಸ್ಪತ್ರೆಗಳು ಇರಲಿಲ್ಲ. ಇಲ್ಲಿ ಪ್ರತಿ ಕಾಡಿಗೂ ವಿಸಿಟರ್ ಸೆಂಟರ್ ಎಂಬ ಹೆಸರಿನ ಅಗತ್ಯ ಮಾಹಿತಿ ನೀಡುವ ಕೆಂದ್ರವಿರುತ್ತದೆ. ಅಲ್ಲಿ ಹೋಗಿ ವಿಚಾರಿಸಿದಾಗ ಆಕೆ ಅವರ ಬಳಿ ಫಸ್ಟ್ ಏಡ್ ಬಿಟ್ಟರೆ ರೋಗಿಗಳನ್ನು ಪರೀಕ್ಷಿಸುವ ಡಾಕ್ಟರ್ ಇಲ್ಲವೆಂದೂ ಇಪ್ಪತ್ತು ಮೈಲಿ ದೂರದ ಸಿಟಿಗೆ ಹೋಗಬೇಕೆಂದು ಹೇಳಿದಳು.

ಇಷ್ಟೊತ್ತಿಗೆ ಪ್ರಿಯಾ ತುಸು ಚೇತರಿಸಿಕೊಂಡಿದ್ದಳು. ಟೈರ್ ಹತ್ತಿದ ಭಾಗದಲ್ಲಿ ತುಸು ನೋವಿದ್ದುದು ಬಿಟ್ಟರೆ ಆಕೆಯ ಕಾಲು ನಂಬ್ ಅಥವಾ ಕಾಲು ಬೆರಳುಗಳನ್ನು ಒತ್ತಿದಾಗ ಯಾವುದೇ ತರಹದ ನೋವು ಕಾಣಿಸಲಿಲ್ಲ. ಸಿಟಿಗೆ ಹೋಗುವ ದಾರಿಯಲ್ಲಿ ಭಯಂಕರ ಟ್ರಾಫಿಕ್ಕು. ಕಾರಿನಲ್ಲಿರುವವರಾರು ಮಾತನಾಡುತ್ತಿರಲಿಲ್ಲ. ಪ್ರೀತಮ್ ಪಶ್ಚಾತ್ತಾಪದಲ್ಲಿ ಮುಖ ಸಣ್ಣ ಮಾಡಿಕೊಂಡು ಕೂತಿದ್ದರೆ ನಾವಿಬ್ಬರು ಅಲ್ಲಿರುವ ಆಸ್ಪತ್ರೆಗಳ ಮಾಹಿತಿ, ಹೀಗೆ ಕಾರು ಕಾಲಿನ ಮೇಲೆ ಹತ್ತಿದರೆ ಏನಾಗುತ್ತದೆ ಎಂಬುದರ ಬಗ್ಗೆ ಗೂಗಲ್ ನಲ್ಲಿ ಹುಡುಕುವುದರಲ್ಲಿ ನಿರತರಾಗಿದ್ದೆವು. ಅಂತೂ ಸುಮಾರು ನಲವತ್ತು ನಿಮಿಷಗಳ ನಂತರ ನಾವು ಆಸ್ಪತ್ರೆ ತಲುಪಿದೆವು. ಅಲ್ಲಿ ಪ್ರಿಯಾಳನ್ನು ಪರೀಕ್ಷಿಸಿದ ಡಾಕ್ಟರ್ ಸಧ್ಯಕ್ಕೆ ಎಲ್ಲವೂ ಸರಿಯಿದೆಯೆಂದೂ ಮತ್ತೆನಾದರೂ ನೋವು ಕಾಣಿಸಿದರೆ ಸ್ಕ್ಯಾನಿಂಗ್ ಮಾಡಲು ಹೇಳಿ ಕಳುಹಿಸಿದರು. 

ಪ್ರಿಯಾಳ ಮುಖ ನೋಡಿದಾಗಲೆಲ್ಲ ನಮಗೆ ಸಂಕಟವಾಗುತ್ತಿತ್ತು. ಎಲ್ಲವೂ ಸರಿಯಾಗಿ ನಡೆದು ಕೊನೆಯ ದಿನ ಹೀಗಾಯಿತಲ್ಲ ಎನ್ನುವ ಬೇಸರ. ಅವತ್ತೇ ಸಂಜೆ ಮರಳಬೇಕಿದ್ದ ನಾವು ಅವಳಿಗೆ ವಿಶ್ರಾಂತಿ ಇರಲೆಂದು ಮಾರನೆಯ ದಿನದ ಬೆಳಿಗ್ಗೆ ಅಲ್ಲಿಂದ ಹೊರಡಲು ನಿರ್ಧರಿಸಿದೆವು. ಮರುದಿನದ ಹೊತ್ತಿಗೆ ಪ್ರಿಯಾ ಸಂಪೂರ್ಣ ಗುಣಮುಖವಾಗಿದ್ದಳು. ಅಲ್ಲಿಗೆ ನಮಗೆಲ್ಲ ನಿರಾಳ. ಕರಡಿಯನ್ನು ನೋಡಲು ಹೋಗಿ ಫಜೀತಿಗೆ ಒಳಗಾಗಿದ್ದಲ್ಲದೇ ಹೆಂಡತಿಯ ಕಾಲ ಮೇಲೆ ಕಾರು ಹತ್ತಿಸಿದವ ಎನ್ನುವ ಬಿರುದು ಸಹ ಪ್ರೀತಮನಿಗೆ ಅಂಟಿಕೊಂಡಿತು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ,

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿCategories: ವಿಂಗಡಿಸದ, ಸಂಸ್ಕೃತಿ, ಪರಂಪರೆ

Related Articles

Leave a Reply

Your email address will not be published. Required fields are marked *

Back to top button