ಕೇರಳ ರಾಜ್ಯದ ಸುಂದರ ದ್ವೀಪಗಳಿವು. ಕೇರಳಕ್ಕೆ ಹೋದಾಗ ಈ ದ್ವೀಪಗಳನ್ನು ನೋಡಿಕೊಂಡು ಬನ್ನಿ.
ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ರಾಜ್ಯದ ಸುಂದರ ದ್ವೀಪಗಳ ಮಾಹಿತಿ ಇಲ್ಲಿದೆ. ನೀವು ಕೇರಳ ಕಡೆ ಹೋದಾಗ ಒಮ್ಮೆ ನೋಡಿಕೊಂಡು ಬನ್ನಿ.
- ನವ್ಯಶ್ರೀ ಶೆಟ್ಟಿ
ದೇವರ ಸ್ವಂತ ನಾಡು ಕೇರಳ . ತನ್ನ ವಿಶಿಷ್ಟ ಸಂಸ್ಕೃತಿ , ಭಾಷಾ ಪ್ರೇಮದಿಂದ ಈ ರಾಜ್ಯ ಸದಾ ವಿಭಿನ್ನವಾಗಿ ನಿಲ್ಲುತ್ತದೆ. ಇಲ್ಲಿನ ಹಲವು ಪವಿತ್ರ ದೇವಸ್ಥಾನಗಳು ಜಗತ್ಪ್ರಸಿದ್ಧ. ಅದರ ಜೊತೆಗೆ ಕೇರಳದ ರಾಜ್ಯದ ಸುಂದರ ತಾಣಗಳನ್ನು ನೋಡಲೆಂದೇ ಹಲವು ಪ್ರವಾಸಿಗರು ಕೇರಳ ರಾಜ್ಯಕ್ಕೆ ಬರುತ್ತಾರೆ. ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಇಲ್ಲಿನ ದ್ವೀಪಗಳು. ಹಲವು ಸುಂದರ ತಾಣಗಳ ತವರೂರಿನಂತಿರುವ ಕೇರಳದ ಅದ್ಭುತ ದ್ವೀಪಗಳ ಮಾಹಿತಿ ನಿಮಗಾಗಿ.
ಮುನ್ರೋ ದ್ವೀಪ(Munroe island)
ನೀವು ಕೇರಳಕ್ಕೆ (kerala) ಹೋದಾಗ ನೋಡಬೇಕಾದ ತಾಣಗಳಲ್ಲಿ ಮುನ್ರೋ ದ್ವೀಪ ಕೂಡ ಒಂದು. ಕೊಲ್ಲಂ (kollam) ನಿಂದ 27 ಕಿಮೀ ಅಂತರದಲ್ಲಿದೆ ಈ ದ್ವೀಪ .ಕೇರಳದ ಪ್ರಸಿದ್ದ ಹಬ್ಬ ಓಣಂ ಸಮಯದಲ್ಲಿ ಇಲ್ಲಿಗೆ ಪ್ರವಾಸ ಕೈಗೊಂಡರೆ ನಿಮ್ಮ ಸಂತೋಷ ಇನ್ನಷ್ಟು ದುಪ್ಪಟ್ಟಾಗುತ್ತದೆ. ಕೇರಳದ ಪ್ರಸಿದ್ಧ ಕಲ್ಲಾಡಾ ಬೋಟ್ ರೇಸ್ ಇಲ್ಲಿನ ಆಕರ್ಷಣೆಯಲ್ಲಿ ಒಂದು.
ಕಿರಿದಾದ ಕಾಲುವೆಗಳು ,ಜಲ ಮಾರ್ಗಗಳು, ಹಿನ್ನೀರಿನ ದೋಣಿ ವಿಹಾರ ಇಲ್ಲಿನ ಇತರ ಆಕರ್ಷಣೆ. ಕೊಲ್ಲಂ ಜಿಲ್ಲೆಯಲ್ಲಿರುವ ಈ ದ್ವೀಪ ಅಷ್ಟಮುಡಿ ಸರೋವರ ಮತ್ತು ಕಲ್ಲಾಡಾ ನದಿಯ ಒಳನಾಡಿನ ದ್ವೀಪ. ರಸ್ತೆ ,ಒಳನಾಡಿನ ಸಂಚಾರ ,ರೈಲು ಮಾರ್ಗದ ಮೂಲಕ ತಲುಪಬಹುದಾದ ಈ ದ್ವೀಪ ಹಲವು ಪ್ರವಾಸಿಗರ ಆಕರ್ಷಕ ಸ್ಥಳ.
ಪೂವರ್ ದ್ವೀಪ (poovar island)
ಪೂವರ್ ದ್ವೀಪ ಕೇರಳ ರಾಜ್ಯದ ತಿರುವನಂತಪುರ (Thiruvantapuram) ಜಿಲ್ಲೆಯಲ್ಲಿದೆ. ಸುತ್ತಲೂ ಕಣ್ಣು ಹಾಯಿಸಿದಷ್ಟು ಕಲ್ಪ ವೃಕ್ಷಗಳು. ವರ್ಷದ ಯಾವುದೇ ಕಾಲದಲ್ಲಿ ಹೋದರೂ ಕೂಡ ನಿಮ್ಮ ಕಣ್ಣಿಗೆ ಮುದ ನೀಡುವ ತಾಣ.
ಈ ದ್ವೀಪ ಪ್ರವಾಸಿಗರ ಪಾಲಿಗೆ ಸ್ವರ್ಗವಿದ್ದಂತೆ. ಪೂವರ್ ದ್ವೀಪದ ಹಿನ್ನೀರಿನ ಪ್ರಶಾಂತ ವಾತವರಣ ಸ್ವರ್ಗದ ಅನುಭವ ನೀಡುವುದರ ಜೊತೆಗೆ ಪ್ರಕೃತಿಯನ್ನು ಇಷ್ಟಪಡುವ , ನಿಸರ್ಗ ಸೌಂದರ್ಯವನ್ನು ಆಸ್ವಾದಿಸುವ ಪ್ರಕೃತಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣ.
ವೈಪಿನ್ ದ್ವೀಪ ( vypin island)
ವೈಪಿನ್ ದ್ವೀಪ ಕೇರಳದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಎರ್ನಾಕುಲಂ (ernakulam) ಸಮೀಪದಲ್ಲಿದೆ. ಎರ್ನಾಕುಲಂ ನಗರದಿಂದ 5ಕಿಮೀ ದೂರದಲ್ಲಿದೆ ಈ ದ್ವೀಪ. ಇದೊಂದು ಜನನಿಬಿಡ ಪ್ರದೇಶ. ವಾಸ್ತವ್ಯಕ್ಕೆ ಅನುಕೂಲ ಆಗುವಂತೆ ಅಲ್ಲೊಂದು ಸುಂದರ ಬಂಗಲೆ. ಈ ದ್ವೀಪ ನಿಮಗೆ ಪೋರ್ಚುಗೀಸ್ ಸಂಸ್ಕೃತಿಯ ನೋಟವನ್ನು ಬಿಂಬಿಸುತ್ತದೆ. ಹಲವು ವಿಶೇಷತೆಗಳನ್ನು ಹೊಂದಿರುವ ಈ ದ್ವೀಪಕ್ಕೆ ನೀವೂ ಒಮ್ಮೆ ಹೋಗಿ ಬನ್ನಿ.
ನೀವುಇದನ್ನುಇಷ್ಟಪಡಬಹುದು: ಕಾಸರಗೋಡಿನ ಬೇಕಲದಲ್ಲಿದೆ ಕೇರಳದ ಅತಿ ದೊಡ್ಡ ಕೋಟೆ
ಧರ್ಮದಂ ದ್ವೀಪ (Dharmadam island)
ಕೇರಳದ ಸುಂದರ ದ್ವೀಪಗಳಲ್ಲಿ ಧರ್ಮದಂ ದ್ವೀಪ ಕೂಡ ಒಂದು. ಈ ದ್ವೀಪವನ್ನು ಗ್ರೀನ್ ಐಲ್ಯಾಂಡ್ (green island) ಎಂದು ಕೂಡ ಕರೆಯುತ್ತಾರೆ. ಕಾರಣ ಈ ದ್ವೀಪದ ಸುತ್ತೆಲ್ಲಾ ಹಸಿರು ಆವರಿಸಿದೆ. ಧರ್ಮದಂ ಬೀಚ್ ತೀರದಿಂದ 100ಮೀ ದೂರದಲ್ಲಿದೆ ಈ ಸುಂದರ ದ್ವೀಪ.
ಥಾಲ್ಸೇರಿ ( Thalassery) ಹಾಗೂ ಅಂಜರಕಾಂಡಿ (Anjarakandy) ನದಿಗಳ ಸೊಗಸಾದ ದೃಶ್ಯಗಳನ್ನು ನೀವು ಇಲ್ಲಿ ಕಣ್ತುಂಬಿಕೊಳ್ಳಬಹುದು. ನೀವು ದೋಣಿ ವಿಹಾರ ಕೂಡ ಮಾಡಬಹುದು. ಏಕಾಂತ ಬಯಸುವವರಿಗೆ , ಶಾಂತತೆ ಇಷ್ಟ ಪಡುವವರಿಗೆ ಸೂಕ್ತ ತಾಣ ಕೇರಳದ ಈ ದ್ವೀಪ.
ಬೊಲ್ಗಟ್ಟಿ ದ್ವೀಪ (Bolgatty island)
ಎರ್ನಾಕುಲಂ ಜಿಲ್ಲೆಯಲ್ಲಿರುವ ಇನ್ನೊಂದು ದ್ವೀಪ ಬೊಲ್ಗಟ್ಟಿ ದ್ವೀಪ. ಕೊಚ್ಚಿಯ ಬಂದರು (kocchi fort) ಸಮೀಪದಲ್ಲಿರುವ ಸಮೀಪದಲ್ಲಿರುವ ಈ ಬಂದರು ಹಲವು ವಿಶೇಷಗಳ ಜೊತೆಗೆ ಅತ್ಯಾಕರ್ಷಕ. ಈ ದ್ವೀಪದ ಆಸು ಪಾಸು ನೀವು ಚಂದದ ಕುಟೀರಗಳನ್ನು ಕಾಣಬಹುದು. ಸಮೀಪದಲ್ಲೇ ವಾಸ್ತವ್ಯ ಹೂಡಲು ಕೂಡ ಅವಕಾಶವಿದೆ. ಹಲವು ವಿಶೇಷಗಳ ಜೊತೆಗೆ ಇಲ್ಲಿ ಕೊಚ್ಚಿಯ ಅಂತಾರಾಷ್ಟ್ರೀಯ ಮರೀನಾ ಕೂಡ ನೆಲೆಗೊಂಡಿದೆ.
ಇದು ಭಾರತದಲ್ಲಿರುವ ಏಕೈಕ ಮರೀನಾ(Marina). ಈ ದ್ವೀಪ ಎಲ್ಲಾ ಸೌಲಭ್ಯಗಳ ಜೊತೆಗೆ 34 ವಿಹಾರ ನೌಕೆಗಳ ಆತಿಥ್ಯ ವಹಿಸುವಷ್ಟು ಸಮರ್ಥವಾಗಿದೆ. ಬೊಲ್ಗಟ್ಟಿ ಬ್ರಹತ್ ಅರಮನೆಗೆ ಹೆಸರುವಾಸಿಯಾಗಿದ್ದ ತಾಣ. ಪ್ರಸ್ತುತ ಪಾರಂಪರಿಕ ಹೋಟೆಲ್ ಮತ್ತು ಪ್ರವಾಸಿ ತಾಣವಾಗಿ ಬದಲಾಗಿದೆ.
ಇದು ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ರಾಜ್ಯದ ಸುಂದರ ದ್ವೀಪಗಳು. ನೀವು ಕೇರಳ ಕಡೆ ಹೋದಾಗ ಈ ತಾಣಗಳನ್ನು ಒಮ್ಮೆ ಕಣ್ತುಂಬಿಕೊಳ್ಳಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.