ನಟ ಶಠಮರ್ಷಣ ಅವಿನಾಶ್ ಸಂಚಾರದ ಕಥೆ
ದಯವಿಟ್ಟು ಗಮನಿಸಿ ಸಿನಿಮಾದ ಸಂಚಾರಿ ಹಾಡನ್ನು ನಾವೆಲ್ಲರೂ ಕೇಳಿದ್ದೇವೆ, ನಿನ್ನ ದಾರಿ ಎಲ್ಲಿಂದ ಶುರು ಎಂದು ಹೇಳುತ್ತಾ ಅಲೆಮಾರಿಯಾಗಿ ಸಾಗುವ ವ್ಯಕ್ತಿಯೇ ಈ ಚಿತ್ರದ ನಾಯಕ ಶಠಮರ್ಷಣ ಅವಿನಾಶ್.ಈ ಹಾಡಿನ ಸಾಲುಗಳಿಗೂ ಇವರ ಕಥೆಗೂ ಅಷ್ಟೇನು ವ್ಯತ್ಯಾಸವಿಲ್ಲ ಅಂತಹದ್ದೇ ಒಂದು ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಸಿಂಧೂ ಪ್ರದೀಪ್
ಶಠಮರ್ಷಣ ಅವಿನಾಶ್ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಆದರೆ ತಮ್ಮ ಬಹಳಷ್ಟು ದಿನಗಳನ್ನು ಕಳೆದಿದ್ದು ಶಿವಮೊಗ್ಗ ದ ಪೂರಾಣ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ, ಆದರಿಂದ ಇವರು ಅಪ್ಪಟ ರಾಮ ಭಕ್ತರೆಂದೇ ಹೇಳಬಹುದು.
ಪ್ರಯಾಣವೆಂದರೆ ನಿಮ್ಮ ಪ್ರಕಾರ ಏನು ಎಂದು ಕೇಳಿದ ನನ್ನ ಪ್ರಶ್ನೆಗೆ ಅವರ ಮೊದಲ ಉತ್ತರವೇ ಅದ್ಭುತ!
” ಪ್ರಯಾಣವು ಒಂದು ಜೀವನ” ಯಾವುದರಲ್ಲೂ ತೃಪ್ತಿ ಪಡದ ಮನುಷ್ಯ ಈ ಪ್ರಯಾಣದಿಂದ ತೃಪ್ತಿ ಅನುಭವಿಸುತ್ತಾನೆ, ತನ್ನ ಮನೆ ತನ್ನವರ ಬೆಲೆ ತಿಳಿಯಲು ಪ್ರಯಾಣ ಮಾಡಲೇಬೇಕು, ತನ್ನ ಜಾಗವನ್ನು ಬಿಟ್ಟು ಬೇರೆಡೆಗೆ ಹೋದರೆ ಮಾತ್ರ ತನ್ನ ಮೂಲ ಸ್ಥಾನದ ಮೌಲ್ಯ ತಿಳಿಯುತ್ತದೆ ಎಂದು ಹೇಳುತ್ತಾ ಒಂದು ರೋಚಕ ಪ್ರಯಾಣದ ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ..
ಒಮ್ಮೆ ಜೀವನವೇ ನಶ್ವರ ಎಂದೆನಿಸಿ ಎಲ್ಲಾದರು ಹೋಗಿಬಿಡಬೇಕೆಂದುಕೊಂಡವರಿಗೆ ಮೊದಲಿಗೆ ಅನಿಸಿದ್ದು ಇದೇ ವರ್ಷ ಜನವರಿ ತಿಂಗಳಲ್ಲಿ ನಡೆಯುತ್ತಿದ್ದ ಕುಂಭಮೇಳ. ನಾನು ಎಲ್ಲವನ್ನೂ ತೊರೆದು ದೂರ ಹೋಗಬೇಕು ಎಂದು ತಮ್ಮ ಮನಸಿನ ತೊಳಲಾಟವನ್ನು ಹೆಂಡತಿ ಪ್ರಿಯಾಗೆ ಹೇಳಿ ಈ ಯುಗಾದಿ ಹಬ್ಬದ ಮುಂಚೆ ನಾನು ಬರುತ್ತೇನೆ, ಇಲ್ಲವಾದರೆ ಇನ್ನು ಯಾವತ್ತೂ ನಾನು ಮರಳಿ ಬರುವುದಿಲ್ಲ ಎಂದು ಹೇಳಿ ತಮ್ಮ ಪ್ರಯಾಣಕ್ಕೆ ಸಿದ್ದರಾಗುತ್ತಾರೆ.
ಹೆಂಡತಿಯನ್ನು ಮೈಸೂರಿಗೆ ತವರು ಮನೆಗೆ ಕಳಿಸುತ್ತಾರೆ ನಂತರ ತಾವು ಸಾಕಿದ್ದ ರಾಧೆ ಮತ್ತು ಕೃಷ್ಟ ಎಂಬ ಎರಡು ನಾಯಿಗಳನ್ನು ಹೆಂಡತಿಗೆ ಒಪ್ಪಿಸಲು ಒಂದು ರಾತ್ರಿ ಪ್ರಯಾಣ ಬೆಳಸುತ್ತಾರೆ. ಮೈಸೂರಿಗೆ ತೆರೆಳುವಾಗಲೆಲ್ಲಾ ಬಿಡದಿಯ ಬಳಿ ಸಿಗುವ ಒಂದು ಆಂಜನೇಯ ದೇವಾಲಯದ ಬಳಿ ಕಾರು ನಿಲ್ಲಿಸಿ ನಮಸ್ಕರಿಸುವುದು ಇವರ ವಾಡಿಕೆ, ಅಂದು ಕೂಡ ಅದೇ ದೇವಾಲಯದ ಬಳಿ ಕಾರು ನಿಲ್ಲಿಸಿ ರಾಧೆ ಕೃಷ್ಣ ಎರಡೂ ನಾಯಿಗಳನ್ನು ಕಾರಿನಿಂದ ಇಳಿಸಿದರು, ದೇವಾಲಯ ನೋಡುತ್ತಾ ಎಲ್ಲವನ್ನು ತೊರೆದು ಹೊರಟಿರುವ ನಾನು ಈ ದೇವರಿಗೆ ಏಕೆ ನಮಸ್ಕರಿಸಬೇಕು, ಯಾವುದಕ್ಕಾಗಿ ಬೇಡಿಕೊಳ್ಳಬೇಕು ಎಂದು ಮನಸ್ಸಿನಲ್ಲೇ ಯೋಚಿಸುತ್ತಿದ್ದ ಸಮಯದಲ್ಲಿ ಅಚಾನಕ್ಕಾಗಿ ರಾಧೆ ರಸ್ತೆಯ ಮಧ್ಯ ನಿಂತಿತ್ತು.
ಒಂದೇ ಸಮನೆ ಬಂದ ಲಾರಿಯೊಂದು ರಾಧೆಯನ್ನು 20 ಅಡಿಗಳಷ್ಟು ದೂರಕ್ಕೆ ಏಳೆದು ಹೋಗಿತ್ತು, ಅದೃಷ್ಟವಶಾತ್ ರಾಧೆಗೆ ಸಣ್ಣ ಪುಟ್ಟ ಗಾಯಗಳಿಂದ ನರಳಾಡುತಿತ್ತೇ ಹೊರತು ಪ್ರಾಣಕ್ಕೆ ಯಾವುದೇ ಹಾನಿಯಾಗಿರಲಿಲ್ಲ, ಏನಾಗುತ್ತಿದೆ ಎಂಬ ಅರಿವೇ ಇಲ್ಲದ ಅವಿನಾಶ್ ಅವರಿಗೆ ಆ ಕ್ಷಣ ಅನಿಸಿದ್ದು ದೇವರಿಗೆ ನಾನು ಪ್ರಶ್ನೆ ಮಾಡಬಾರದಾಗಿತ್ತು ಈ ಘಟನೆ ನನಗೆ ಒಂದು ಎಚ್ಚರಿಕೆ ಎಂದು ಭಾವಿಸಿ ರಾಧೆಯನ್ನು ತಮ್ಮ ಪತ್ನಿಗೆ ಒಪ್ಪಿಸಿ ಕೈ ಅಲ್ಲಿ ಒಂದೂ ರೂಪಾಯಿ ಕೂಡ ಇಲ್ಲದೆ ಕೇವಲ ಉಟ್ಟ ಬಟ್ಟೆಯಲ್ಲಿ ಕೈ ಅಲ್ಲಿ ಒಂದು ಮೊಬೈಲ್ ಹಿಡಿದು ಹೊರಟರು.
ಹರಿದ್ವಾರದ ರೈಲು ಸಿಗದ ಕಾರಣ ಸ್ನೇಹಿತನ ಸಹಾಯ ಪಡೆದು ಗೋಕರ್ಣಕ್ಕೆ ಹೊರಟರು..
• ಇಲ್ಲಿಂದ ಅಲೆಮಾರಿಯ ಸಂಚಾರ ಶುರು..
ಗೋಕರ್ಣದಲ್ಲಿ ತಾವು ಹೋದಾಗೆಲ್ಲಾ ತಂಗುತ್ತಿದ್ದ ಹೋಟೆಲ್ ಒಂದರ ಮಾಲಿಕನಿಗೆ ಕರೆಮಾಡಿ ನಾನು ಎಲ್ಲವನ್ನೂ ತೊರೆದು ಬರುತ್ತಿದ್ದೇನೆ ನನ್ನ ಬಳಿ 1 ಪೈಸೆ ಕೂಡ ಇಲ್ಲ, ಸ್ವಲ್ಪ ದಿನಗಳಿಗೆ ನೀವೇ ನನಗೆ ಆಶ್ರಯ ನೀಡಬೇಕೆಂದು ಕೇಳುತ್ತಾರೆ.
ಮಾಲಿಕ ಆಶ್ಚರ್ಯದಿಂದ ಇವರನ್ನು ಬರಮಾಡಿಕೊಳ್ಳುತ್ತಾರೆ, ಕೆಲವು ದಿನಗಳು ಇಲ್ಲೇ ಬೇರೆ ಪ್ರವಾಸಿಗರೊಂದಿಗೆ ಕಳೆಯುತ್ತಾರೆ, ಅಲ್ಲಿನ ಸ್ನೇಹಿತರಿಗೆ ಹರಿದ್ವಾರದ ಬಗ್ಗೆ ಹೇಳಿ ನನಗೆ ಯಾವುದಾದರೂ ಒಂದು ಲಾರಿ ಇದ್ದರೆ ಹತ್ತಿಸಿ ಕಳುಹಿಸಿ ಎಂದು ಕೇಳುತ್ತಾರೆ, ಹೋದ ಕಡೆಗಳಲೆಲ್ಲ ಒಳ್ಳೆಯ ಸಂಬಂಧ ಗಳಿಸಿದ ಇವರಿಗೆ ಸಿಕ್ಕವರೆಲ್ಲಾ ಸ್ನೇಹಿತರೇ, ಅವರೇ ದೆಹಲಿಗೆ ಒಂದು ರೈಲನ್ನು ಬುಕ್ ಮಾಡಿ ಕೈ ಯಲ್ಲಿ 500 ರೂ ಕೊಟ್ಟು ಅಲ್ಲಿಂದ ಹರಿದ್ವಾರಕ್ಕೆ ಹೊರಡಿ ಎಂದು ಕಳುಹಿಸುತ್ತಾರೆ.
ನೀವು ಇದನ್ನುಇಷ್ಟಪಡಬಹುದು :ಬಂಡೀಪುರ ಗಡಿಯಲ್ಲಿ ಕಳೆದ 12 ಗಂಟೆಗಳು: ಟ್ರಾವೆಲರ್ ನಟಿ ಸೋನು ಗೌಡ ಪ್ರವಾಸ ಕಥನ
ರೈಲಿನಲ್ಲಿ ಮಥುರಾಗೆ ಹೊರಟಿದ್ದ ಇಬ್ಬರು ಆಧ್ಯಾತ್ಮಿಕ ಪ್ರಯಾಣಿಕರ ಪರಿಚಯವಾಗುತ್ತದೆ, ಚೆಸ್ ಆಟದಲ್ಲಿ ಪರಿಣಿತರಾದ ಅವಿನಾಶ್ ಅವರು ಆಟ ಆಡುತ್ತ ಅವರಿಗೆ ಇನ್ನಷ್ಟು ಹತ್ತಿರವಾಗಿ ಇವರ ಮಾತಿನಿಂದ ಪ್ರೇರೇಪಿತರಾಗಿ ಅವರು ತಮ್ಮ ಮಥುರಾ ಪ್ರಯಾಣವನ್ನು ಮೊಟಕುಗೊಳಿಸಿ ಹರಿದ್ವಾರಕ್ಕೆ ಹೊರಡುತ್ತಾರೆ, ಆದರೆ ಹರಿದ್ವಾರಕ್ಕೆ ಹೋಗಬೇಕಿದ್ದ ಅವಿನಾಶ್ ಅವರು ಚಲಿಸುತ್ತಿದ್ದ ರೈಲಿನಿಂದ ಇಳಿದು ಮಥುರಾ ಸೇರುತ್ತಾರೆ.
ಇರುವುದು ಒಂದೇ ಬಟ್ಟೆ, ಕೈ ಅಲ್ಲಿ 500 ರೂ, ಮಥುರಾದಲ್ಲಿ ನಾಲ್ಕರಿಂದ ಐದು ದಿನ ಸುತ್ತಿದ ನಂತರ ಇದ್ದ 500 ರೂ ಕೂಡ ಮುಗಿದು ಹೋಗಿದೆ. ಶಿವರಾತ್ರಿಯ ದಿನ ಹರಿದ್ವಾರದಲ್ಲಿ ಶಾಹಿ ಸ್ಥಾನವನ್ನು ಮಾಡಬೇಕು ಏನು ಮಾಡುವುದು ಎಂದು ಯೋಚಿಸುತ್ತಿಬೇಕಾದರೆ ಇವರು ತಂಗಿದ್ದ ಸ್ಥಳದಲ್ಲೇ ಇದ್ದ ಒಬ್ಬರು ಬೈಕ್ ನಲ್ಲಿ ಋಷಿಕೇಶಕ್ಕೆ ಹೊರಡುತ್ತಿರುತ್ತಾರೆ ಅವರ ಸಹಾಯ ಪಡೆದು ಬಹಳಷ್ಟು ಕಷ್ಟ ಪಟ್ಟು ಋಷಿಕೇಶಕ್ಕೆ ತೆರಳುತ್ತಾರೆ. ಅಲ್ಲಿಯೂ ಕೂಡ ತಮಗೆ ಪರಿಚಯವಿದ್ದ ಕೆಲವು ಸ್ನೇಹಿತರು ಸಿಗುತ್ತಾರೆ.
ಅಲ್ಲಿ ನಡೆಯುವ ವಿಶ್ವ ಪ್ರಸಿದ್ಧ ಗಂಗಾರತಿಯ ಅನುಭವನ್ನು ತಾವೇ ಆರತಿ ಮಾಡಿ ತೃಪ್ತಿ ಪಡುತ್ತಾರೆ, ಇಷ್ಟಾದರೂ ಹರಿದ್ವಾರಕ್ಕೆ ಹೋಗಲೇ ಬೇಕು ಕೈ ಅಲ್ಲಿ ಹಣ ಇಲ್ಲ ಏನು ಮಾಡುವುದು ಎಂದು ಯೋಚಿಸುತ್ತಾ ತಮಗೆ ಪರಿಚಯ ವಿರುವ ಒಬ್ಬರು ಬಾಬಾ ಗುರುಗಳಿಗೆ ಕರೆಮಾಡಿ ಅವರ ಸಹಾಯ ಪಡೆದು ಹರಿದ್ವಾರಕ್ಕೆ ತೆರಳುತ್ತಾರೆ. ಅಲ್ಲಿನ ಕುಂಭಮೇಳದಲ್ಲಿ ಭಾಗವಹಿಸಿ ಸಮಾಧಾನ ಪಡುವಷ್ಟರಲ್ಲಿ ತಮ್ಮ ಮೊಬೈಲ್ ಕಳೆದು ಕೊಳ್ಳುತ್ತಾರೆ,
ಮರಳಿ ಬೆಂಗಳೂರಿಗೆ ಬರಲು ವಿಮಾನ ಬುಕ್ ಮಾಡಲು ಯಾವುದೇ ದಾಖಲೆಗಳು ಇವರ ಬಳಿ ಇರುವುದಿಲ್ಲ, ತಮ್ಮ ಸ್ನೇಹಿತರಾದ ಬಾಬಾ ಅವರ ಸಹಾಯದಿಂದ ಡೆಹರಡೂನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಈ ಎಲ್ಲಾ ಸಾಹಸದ ನಂತರ ಬೆಂಗಳೂರಿನ ವಿಮಾನ ಏರಿಕುಳಿತರೆ ಅಲ್ಲಿ ಒಬ್ಬ ವ್ಯಕ್ತಿಯ ಪರಿಚಯವಾಗುತ್ತದೆ, ವಿಮಾನ ಇಳಿದು ಆ ವ್ಯಕ್ತಿಗೆ ತಮ್ಮ ಈ ಪ್ರಯಾಣದ ಕಥೆಯನ್ನೆಲ್ಲ ವಿವರಿಸಿ ಅವರ ಸಹಾಯದಿಂದ ತಮ್ಮ ಮನೆ ಸೇರುತ್ತಾರೆ.
ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಒಂದಷ್ಟು ದುಡ್ಡು ಕೊಟ್ಟು ಪ್ಯಾಕೇಜ್ ಟೂರ್ ಬುಕ್ ಮಾಡಿಕೊಂಡು ನೆಮ್ಮದಿಯಿಂದ ಪ್ರಯಾಣ ಮಾಡುವವರ ಮಧ್ಯ ಈ ರೀತಿ ಪ್ರಯಾಣ ಮಾಡುವಾಗ ಅದರ ಅನುಭವ ನಿಜಕ್ಕೂ ಅದ್ಭುತ. ಮಾನವ ಒಂದು ಸಂಘಜೀವಿ ಎನ್ನುವುದಕ್ಕೆ ಇವರ ಕಥೆ ಒಂದು ಉದಾಹರಣೆ. ಪ್ರಯಾಣದಲ್ಲಿ ಪರಿಚಯವಾಗುವ ಎಲ್ಲರೂ ಸ್ನೇಹಿತರೆ, ಎಲ್ಲವೂ ಸಂಬಂಧಗಳೇ, ಆಗುವ ಅನುಭವಗಳೆಲ್ಲವೂ ಜೀವನ ಪಾಠಗಳೇ ..ಹಾಗೆಯೇ ‘ಪ್ರಯಾಣವು ಒಂದು ಜೀವನ’ ವೇ ಅಲ್ಲವೇ???
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.