ವಿಂಗಡಿಸದಸಂಸ್ಕೃತಿ, ಪರಂಪರೆ

ನವರಾತ್ರಿಯ ದಿನ ಕರಾವಳಿಯಲ್ಲಿ ಹೊಸ್ತಿನ ಸಂಭ್ರಮ.

ನಾಡಹಬ್ಬ ದಸರಾ ಆರಂಭವಾಗಿದೆ. ನಾಡ ಹಬ್ಬ ದಸರಾದಷ್ಟೇ ಅದ್ದೂರಿಯಾಗಿ ಕರಾವಳಿಯ ಬಹುತೇಕ ಮನೆಗಳಲ್ಲಿ ಹೊಸ್ತು ಎನ್ನುವ ವಿಶೇಷ ಆಚರಣೆ ಮಾಡುತ್ತಾರೆ . ಗದ್ದೆಯಲ್ಲಿ ಫಸಲು ಬಿಡಲು ಆರಂಭಿಸಿದ ಭತ್ತದ ತೆನೆಗಳು ಈ ಹಬ್ಬಕ್ಕೆ ಬಹು ಮುಖ್ಯ. ಸಾಂಪ್ರದಾಯಿಕ ಆಚರಣೆಯಲ್ಲಿ ನಡೆಯುವ ಈ ಹೊಸ್ತಿನ ದಿನ ಕುಟುಂಬದ ಸದಸ್ಯರೆಲ್ಲ ಒಗ್ಗೂಡುತ್ತಾರೆ.

ನವ್ಯಶ್ರೀ ಶೆಟ್ಟಿ

ದಸರಾ ಆರಂಭವಾಗಿದೆ. ಅರಮನೆ ನಗರಿ ಸೇರಿದಂತೆ ಕರುನಾಡು ನಾಡ ಹಬ್ಬ ದಸರಾದ ಖುಷಿಯಲ್ಲಿದೆ . ಇಡೀ ನಾಡಿಗೆ ದಸರಾ ಒಂದು‌ ರೀತಿಯ ದೊಡ್ಡ ಹಬ್ಬ. ಆ ದಸರಾ ಸಮಯದ ಒಂಬತ್ತು ದಿನಗಳು ಕರಾವಳಿಯ ಮಂದಿಗೆ ಇನ್ನೂ ವಿಶೇಷ.

Karavali tradition

ಕರಾವಳಿಯಲ್ಲಿ ಹೊಸ್ತು ಎನ್ನುವ ಸಂಪ್ರದಾಯ

ಕರಾವಳಿಯಲ್ಲಿ ನವರಾತ್ರಿಯ ಆ ಒಂಬತ್ತು‌ ದಿನಗಳು ವಿಶಿಷ್ಟ ಆಚರಣೆಗೆ ಸಾಕ್ಷಿಯಾಗುತ್ತದೆ. ಒಂಬತ್ತು ದಿನಗಳು ಕರಾವಳಿಯ ಮಂದಿ ವಿಶಿಷ್ಟ ಸಂಸ್ಕೃತಿ,ಸಂಪ್ರದಾಯ, ಆಚರಣೆಗೆ ಮುನ್ನುಡಿ ಬರೆಯುತ್ತಾರೆ. ಅದುವೇ ಮೌಲ್ಯಯುತ ಸಂಪ್ರದಾಯದ ಹಬ್ಬ’ ಹೊಸ್ತು’. ತುಳು ಮಾತನಾಡುವ ಮಂದಿ ಕೋರಲ್ ಕಟ್ಟುವುದು ಎನ್ನುತ್ತಾರೆ. ಕುಂದಾಪುರ ಭಾಗದಲ್ಲಿ ಹೊಸ್ತು ಎನ್ನುತ್ತಾರೆ. ಪಿತೃ ಪಕ್ಷ ಮುಗಿದ ಬಳಿಕ ಹೊಸ್ತಿನ ಆಚರಣೆ ಮಾಡುತ್ತಾರೆ ಕರಾವಳಿಯ ಮಂದಿ.

Navaratri time culture
ಚಿತ್ರ ಕೃಪೆ: Manjunath Kamath


ನವರಾತ್ರಿಯ ಆರಂಭಕ್ಕೂ ಮುನ್ನ ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ಸ್ವಚ್ಚ ಮಾಡಿ ,ಕಿಟಕಿ , ಬಾಗಿಲುಗಳಿಗೆ ಶೇಡಿಯನ್ನು ಹಚ್ಚುತ್ತಾರೆ. ನವರಾತ್ರಿಯ ಒಂಬತ್ತು ದಿನಗಳು ಯಾವುದಾದರೂ ಒಂದು ದಿನ ಹೊಸ್ತಿನ ಆಚರಣೆ ಮಾಡುತ್ತಾರೆ.

ಹೊಸ್ತಿನ ಬೆಳಗಿನ ಜಾವ ಮುಸುಕಿನಲ್ಲಿ ಗದ್ದೆಗೆ ಹೋಗಿ ಕದಿರನ್ನು ತಂದು,ಮನೆಯ ಅಂಗಳದಲ್ಲಿ ಪೂಜೆ ಮಾಡಿ, ಮುಳ್ಳು ಸೌತೆ,ತೆಂಗಿನ ಸಾಂತ,ಮಾವಿನ ಮತ್ತು ಹಲಸಿನ ಎಲೆ.ಹಲ್ಕತ್ತಿಯನ್ನು ಹರಿವಾಣದಲ್ಲಿಟ್ಟುಕೊಂಡು ಮನೆಯ ಯಜಮಾನ ತಲೆಗೆ ಮುಂಡಾಸು ಕಟ್ಟಿಕೊಂಡು ಜಾಗಂಟಿ ಬಾರಿಸುತ್ತಾ ಕದಿರನ್ನು ಪೂಜೆ ಮಾಡುತ್ತಿರುತ್ತಾನೆ. ಕದಿರನ್ನು ತೆಗೆದುಕೊಂಡು ಬರುವಾಗ ತಮ್ಮ ಮನೆಯ ಕದಿರನ್ನು ತೆಗೆದುಕೊಂಡು ಬರುವಂತಿಲ್ಲ. ಬೇರೆಯವರ ಮನೆಯ ಕದಿರನ್ನು , ಅವರಿಗೆ ಗೊತ್ತಾಗದ ರೀತಿಯಲ್ಲಿ
ತೆಗೆದುಕೊಂಡು ಬರಬೇಕು. ಬಹುತೇಕರ ಮನೆಯಲ್ಲಿ ಇದೇ ರೀತಿ ಆಚರಿಸುತ್ತಾರೆ. ಗದ್ದೆಯಿಲ್ಲದ ಮನೆಗಳಲ್ಲಿ ಊರಿನ ದೇವಸ್ಥಾನದಲ್ಲಿ ಕೊಡುವ ಕದಿರನ್ನು ಮನೆಗೆ ತಂದು ಕಟ್ಟುತ್ತಾರೆ.

ನೀವು ಇದನ್ನು ಇಷ್ಟ ಪಡಬಹುದು:ಕುಂದಾಪುರದಲ್ಲಿದೆ ‘ಅಜ್ಜಿ’ ಎನ್ನುವ ವಿಶೇಷ ಆಚರಣೆ

Hostu
ಚಿತ್ರ ಕೃಪೆ: Manjunath Kamath

ಮನೆಯಲ್ಲಿ ಕದಿರನ್ನು ತಂದು ಕಟ್ಟುವ ಸಮಯದಲ್ಲಿ, ಮನೆಯ ಯಜಮಾನನನ್ನು ಮನೆಯ ಹೆಣ್ಣು ಮಗಳು ಕಾಲು ತೊಳೆದು ಒಳಗೆ ಬರ ಮಾಡಿಕೊಳ್ಳುತ್ತಾಳೆ. ತದನಂತರ ಯಜಮಾನ ಮನೆಯ ಕಿಟಿಕಿ ,ಬಾಗಿಲು ,ವಾಹನ ,ಮೋಟಾರ್ ಸೇರಿದಂತೆ ಮನೆಯ ಉಪಕರಣಗಳಿಗೆ ಕದಿರು ಕಟ್ಟುತ್ತಾನೆ. ಇದು ಹೊಸ್ತಿನ ದಿನದ ಆರಂಭದ ಸಂಪ್ರದಾಯ.

ತದನಂತರ ಆರಂಭವಾಗುವುದೇ ಮಧ್ಯಾಹ್ನದ ವಿಶೇಷ ಭೋಜನದ ತಯಾರಿ ಕಾರ್ಯಕ್ರಮ. ಅಂದಿನ‌ ದಿನ ಒಂಬತ್ತು ವಿಧದ ಪಲ್ಯ ಮಾಡುವ ಪದ್ಧತಿ ರೂಢಿಯಲ್ಲಿದೆ. ಕೆಸುವಿನ ದಂಟು ಹೊಸ್ತಿನ ಅಡುಗೆಯಲ್ಲಿ ಇರಲೇಬೇಕಾದ ಖಾದ್ಯ. ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಖಾದ್ಯಗಳ ಸಂಖ್ಯೆಯಲ್ಲಿ ಏರಿಕೆ ,ಇಳಿಕೆ ಮಾಡಿಕೊಳ್ಳುತ್ತಾರೆ. ಬೇರೆ ಬೇರೆ ತರಕಾರಿಯ ಪಲ್ಯ, ಹಪ್ಪಳ, ಕೋಸುಂಬರಿ,ಉಪ್ಪಿನಕಾಯಿ, ಅನ್ನ,ಸಾರು,ಹುಳಿ,ಪಾಯಸ ಮಜ್ಜಿಗೆ ಇವುಗಳೆಲ್ಲವೂ ಅಂದಿನ ಊಟದ ಮೆನ್ಯೂ. ಹೆಚ್ಚಾಗಿ ಊರಿನ ಎಲ್ಲಾ ಮನೆಗಳಲ್ಲಿ ನವರಾತ್ರಿಯ ಸಮಯದಲ್ಲಿ ಹೊಸ್ತನ್ನು ಮಾಡುತ್ತಾರೆ. ಆ ದಿನ ದೂರದೂರಿನ ಸಂಬಂಧಿಕರು ಮನೆಗೆ ಬರುತ್ತಾರೆ.

ಸೊಸೆಗೆ ಹೆಚ್ಚಿನ ಪ್ರಾತಿನಿಧ್ಯ

ವಿಶೇಷವಾಗಿ‌ ಹೊಸ್ತಿನ ದಿನ ಮನೆಯ‌ ಸೊಸೆಗೆ ಆದ್ಯತೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿನೆ ಇರುತ್ತದೆ. ಆಕೆ ತನ್ನ ಅತ್ತೆ ಮಾವನ ಕಾಲಿಗೆ ನಮಸ್ಕರಿಸಿ ,ಮನೆಯ ಹಿರಿಯರೆಲ್ಲರ ಬಳಿ ‘ಹೊಸ್ತು ಊಟ ಮಾಡುತ್ತೇನೆ’ಎಂದು ಹೇಳಿ ಊಟ ಮಾಡುವ ಪದ್ದತಿ ರೂಢಿಯಲ್ಲಿದೆ. ಹೊಸದಾಗಿ ಮದುವೆಯಾದ ಜೋಡಿಗಳಿಗೆ ಹೆಣ್ಣಿನ ಮನೆ ಕಡೆಯಿಂದ ಗಂಡನ ಮನೆಗೆ ವಿವಿಧ ಸಿಹಿ ತಿಂಡಿ ಸೇರಿದಂತೆ ವಿವಿಧ ಉಡುಗೊರೆ ನೀಡುವ ಹೊರೆ ಕೊಡುವುದು ಎನ್ನುವ ಪದ್ಧತಿ ರೂಡಿಯಲ್ಲಿದೆ. ನವ ಜೋಡಿ ಗಳಿರುವ ಮನೆಯಲ್ಲಿ ಮದುವೆ ಹೊಸ್ತು ಎನ್ನುವುದೇ ಒಂದು ವಿಶೇಷ. ಅದ್ಧೂರಿಯಾಗಿ ನಡೆಯುತ್ತದೆ ಆ ವರ್ಷದ ಹೊಸ್ತು.

Coastal karanataka region festival
ಚಿತ್ರ ಕೃಪೆ: Manjunath Kamath

ಮನೆಯ ಮಂದಿಯೆಲ್ಲ ಒಟ್ಟಿಗೆ ಕುಳಿತು ಊಟ ಮಾಡುತ್ತಾ ,ಹಾಲಿಗೆ ಭತ್ತ ಮಿಶ್ರಣ ಮಾಡಿರುವುದನ್ನು ಊಟದ ಮಧ್ಯ ಹಾಕಿದಾಗ ಅದನ್ನು ಸೇವಿಸಿದ ನಂತರ ಹೊಸ್ತಿನ ಊಟಕ್ಕೆ ಒಂದು ಪರಿಪೂರ್ಣತೆಯಿರುತ್ತದೆ. ಭರ್ಜರಿಯಾಗಿ ಊಟ ಮುಗಿದ ನಂತರ ಮನೆಯ ಹಿರಿಯ ಕಿರಿಯರು ಎನ್ನುವ ಯಾವುದೇ ಭೇದ ಭಾವವಿಲ್ಲದೆ ಎಲೆ ಅಡಿಕೆ ತಿನ್ನುವುದು ವಾಡಿಕೆ. ಊಟ ಮಾಡಿ ಎಲೆ ಅಡಿಕೆ ಜಗಿಯುತ್ತಾ ,ಮನೆ ಮುಂದಿನ ಗದ್ದೆಯತ್ತ ಒಂದು ಕಣ್ಣಾಡಿಸಿ ಗದ್ದೆಯ ಬಳಿ ಸ್ವಲ್ಪ ಹೊತ್ತು ತಿರುಗಾಡಿ ಬರಬೇಕು ಆಗ ಹೊಸ್ತಿಗೆ ಪರಿಪೂರ್ಣ ಸಿಗುವುದು ಎನ್ಮುವುದು ಇಲ್ಲಿನ ನಂಬಿಕೆ. ಇನ್ನೂ ವಿಶೇಷವಾಗಿ ಆ ದಿನ ಊರಿನ 7 ಮನೆಯಲ್ಲಿ ಊಟ ಮಾಡಿದರೆ ಒಳಿತು ಎನ್ನುವುದು ಹಿರಿಯ ನಂಬಿಕೆ.

ಹೀಗೆ ಸಂಪ್ರದಾಯದ ಆಚರಣೆಯಲ್ಲಿ ಆರಂಭವಾದ ಹೊಸ್ತು, ಸಂಬಂದಿಕರನ್ನು ಒಗ್ಗೂಡಿಸಿ, ಸಂಬಂಧಗಳನ್ನು ಗಟ್ಟಿಗೊಳಿಸುವ ಆಚರಣೆಯಾಗಿದೆ.ಅದಕ್ಕಾಗಿಯೇ ಕರಾವಳಿಗರು ದಸರಾ ಹಬ್ಬಕ್ಕೆ ಕಾತೂರದಿಂದ ಕಾಯುತ್ತಿರುತ್ತಾರೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ 

Related Articles

Leave a Reply

Your email address will not be published. Required fields are marked *

Check Also
Close
Back to top button