ದೂರದ ಮುರುಡೇಶ್ವರಕ್ಕೆ ನನ್ನ ಮೊದಲ ರೈಲು ಪ್ರಯಾಣ

ಭಾರತೀಯ ಸಂಚಾರಿ ವ್ಯವಸ್ಥೆಯ ನಾಡಿ ರೈಲು. ರೈಲು ಪಯಣ ಎಂದಿಗೂ ರೋಚಕ ಮತ್ತು ಅನುಭವಗಳ ಬುತ್ತಿ! ಅಂತಹದ್ದೇ ಮೊದಲ ರೈಲು ಪ್ರಯಾಣದ ಖುಷಿ ಹಂಚಿಕೊಂಡಿದ್ದಾರೆ, ಉಡುಪಿಯ ಎಂಜಿಎಂ ಕಾಲೇಜಿನ ಮಹಾಲಕ್ಷ್ಮಿ ದೇವಾಡಿಗ.
ನಮ್ಮ ಜೀವನವನ್ನು ನಾವು ಪ್ರತಿಸಲ ಯಾವುದಾದರೂ ಒಂದು ವಸ್ತುವಿಗೋ, ಪ್ರಾಣಿಗೋ, ಗಾಡಿಗಳಿಗೋ ಹೋಲಿಸಿಕೊಂಡು ಮಾತನಾಡುವುದೇ ಜಾಸ್ತಿ.. ಅದೇನೋ ಈ ಬಸ್ಸು, ರೈಲಿಗೆಲ್ಲ ನಮ್ಮನ್ನು ನಾವು ಹೋಲಿಸಿ ಮಾತನಾಡುವುದು ಒಂದು ರೀತಿಯಲ್ಲಿ ನಗು ತರಿಸಿದರೂ ಕೂಡ ಒಂದು ಲೆಕ್ಕ ನಿಜ ಅನಿಸಿದ್ದು ನಾನು ಕೂಡ ರೈಲಿನಲ್ಲಿ ಟ್ರಾವೆಲ್ ಮಾಡಿದಾಗ.

ನಾನು ಉಡುಪಿಯ ಹೆಸರಾಂತ ಕಾಲೇಜೊಂದರಲ್ಲಿ ದ್ವಿತೀಯ ಬಿಎ ಓದ್ತಾ ಇದ್ದೇನೆ. ಕೇವಲ ಸುತ್ತಾಡುವುದು ಅಂತಲ್ಲ. ಪಯಣಿಸುವುದು ಇಷ್ಟ. ಮಧ್ಯಮ ವರ್ಗದ ಪುಟ್ಟ ಕುಟುಂಬ. ಅಜ್ಜಿ, ಅಮ್ಮ, ಮಾವ, ನನ್ನ ತಂಗಿ, ನನ್ನ ಪ್ರೀತಿಯ ಸಾಕು ಪ್ರಾಣಿಗಳು ಮತ್ತೆ ನಾನು ಇದಿಷ್ಟೇ ನನ್ನ ಪ್ರಪಂಚ. ಆದರೆ , ಪ್ರಪಂಚ ಕಟ್ಟಿಕೊಳ್ಳಲು ಇನ್ನೂ ಬೇಕಾದಷ್ಟು ಪಾತ್ರ, ಸ್ಥಳ, ಅನುಭವ ಬೇಕಾಗಿದೆ. ಆದ್ರೆ ನನ್ನ ಪ್ರಪಂಚದ ಅತಿಮುಖ್ಯ ಪಾತ್ರ ಇವರದೇ ಎನ್ನಬಹುದು.
ಅಮ್ಮನ ಜೊತೆ ಉಡುಪಿಯಲ್ಲಿ ಅಲ್ಲಿ ಇಲ್ಲಿ ಅಂತ ಮಾತ್ರ ಸುತ್ತಾಡ್ತಿದ್ದ ನೆನಪು ನನಗೆ, ಉಡುಪಿ ಬಿಟ್ಟು ತುಂಬಾ ದೂರ ಹೋಗಿದ್ದು ಅಂದ್ರೆ ಅದು ಮಾವನ ಜೊತೆ ಮಂದರ್ತಿಗೆ ಅಷ್ಟೇ.. ಮತ್ತೆ ಉಡುಪಿಯಿಂದ ಹೊರಗೆ ಹೋಗಿದ್ದು ಅಂದ್ರೆ ಅದು ನನ್ನ ಡಿಗ್ರಿ ಫ್ರೆಂಡ್ಸ್ ಜೊತೆಗೆ. ಅದರಲ್ಲಿ ನನಗೆ ತುಂಬಾ ಇಷ್ಟವಾದ ಹಾಗೆ ಮನಸ್ಸಿಗೆ ಹತ್ರವಾದ ಪಯಣ ಅಂದ್ರೆ ನನ್ನ ಮೊದಲ ಉಗಿಬಂಡಿ (ರೈಲು) ಪಯಣ.
ಟೈಮ್ ಕೇಳಿ ಎಲ್ಲ ಫಿಕ್ಸ್ ಮಾಡಿ ಆಯ್ತು. ಅಂತೂ ಇಂತು ಹೋಗೊ ದಿನ ಬಂತು. ತುಂಬಾ ಕುತೂಹಲ ನಾನು ನನ್ನ ಲೈಫ್ ನಲ್ಲಿ ಮೊದಲ ಸಲ ಟ್ರೈನ್ ಅಲ್ಲಿ ಟ್ರಾವೆಲ್ ಮಾಡ್ತಾ ಇದೇನೆ ಅಂತ ಸಂತೋಷ . ಅದರ ಜೊತೆಗೆ ನನಗೆ ಸ್ವಲ್ಪ ಟ್ರಾವೆಲ್ ಮಾಡುವಾಗ ವಾಂತಿ ಮಾಡುವ ಅಭ್ಯಾಸ. ಅದೊಂದು ಕಡೆ ಭಯ ಇತ್ತು.
ಅಲ್ದೇ ಹಳೆ ಹಿಂದಿ ಪಿಚ್ಚರ್ ಒಂದು ನೆನಪಾಗಿತ್ತು,, ಅದ್ರಲ್ಲಿ ರೈಲಿಗೆ ಬೆಂಕಿ ಬೀಳೋ ದೃಶ್ಯ, ಬ್ರಿಡ್ಜ್ ಇಂದ ರೈಲ್ ಕೆಳಗೆ ಪಲ್ಟಿ ಹೊಡೆಯೋ ದೃಶ್ಯ ಎಲ್ಲ ಕಣ್ಮುಂದೆ ಬಂದು ಹೋಗಿತ್ತು,, ಏನೇ ಆಗಲಿ ಟ್ರೈನ್ನಲ್ಲಿ ಹೋಗ ಬೇಕು ಅಂತಿದ್ದ ಆಸೆ ಅವತ್ತು ನೆರವೇರಿತು ಅನ್ನೋ ಖುಷಿ.
ನಾವೊಂದು 7 ಜನ ಸೇರಿ ಹೊರಟೆವು. ಬೆಳಿಗ್ಗೆ ಅಂದಾಜು 4ಗಂಟೆಗೆ ಪಯಣ ಶುರು , ಟ್ರೈನ್ ಬಂತು, ಟ್ರೈನ್ ಹತ್ತಿ ಎಲ್ಲ ಕುಳಿತೆವು, ಯಾವಾಗ ಟ್ರೈನ್ ಶುರುವಾದ ಕೂಡಲೇ ಅದೇನೋ ಖುಷಿ, ಅದೇನೋ ಹೊಸ ಅನುಭವ ಪಡೆಯುವ ಆತುರ ಎಲ್ಲರೂ ಬೇಕಾದಷ್ಟು ತಿಂಡಿ , ಓದಲು ಪುಸ್ತಕ, ಎಲ್ಲ ಇಟ್ಕೊಂಡ್ ಇದ್ದೆವು.

ರೈಲು ಮುಂದೆ ಹೋದ ಹಾಗೆ ನಮ್ಗೆ ಹೇಳ್ತಾ ಇತ್ತು ನನ್ನ ಜೊತೆ ಪಯಣ ಮಾಡಲು ಸಿದ್ಧ ಇದಿರಲ್ಲ!? ಅಂತ ರೈಲಿನ ಜೊತೆಗಿನ ನನ್ನ ಮೊದಲ ಪಯಣ ಅದೆಷ್ಟೋ ಆನಂದ, ನೆಮ್ಮದಿಯ , ಜೊತೆ ನೂರಾರು ನೆನಪು ನೀಡಿತ್ತು. ಮುರುಡೇಶ್ವರ ಅಲ್ಲಿಂದ ಮಿರ್ಜಾನ್ ಕೋಟೆಯನ್ನು ಸುತ್ತಿ ಬಂದಿದ್ದೆವು.

ನೀವುಇದನ್ನುಇಷ್ಟಪಡಬಹುದು: ಕೋಲಾರದ ಹುಡುಗಿ ಮೊದಲ ಬಾರಿ ಉತ್ತರ ಕರ್ನಾಟಕ ನೋಡಿದ ಕತೆ: ಚಂದನಾ ರಾವ್ ಬರೆದ ಒಂದೂರಿನ ಕಥನ
ಇದು ನನ್ನ ಪಯಣದ ಕಥೆ…
ನಾನು ಬರವಣಿಗೆಯ ಮೂಲಕ ನನ್ನ ಅನುಭವ ಹಂಚಿಕೊಳ್ಳಬಹುದು, ನಿಮಗೆ ಅರ್ಥ ಮಾಡಿಸ್ಬಹುದಷ್ಟೆ ಆದ್ರೆ ಅದರ ಅನುಭವ ಪಡೆಯಲು ನೀವು ಕೂಡ ಒಮ್ಮೆ ಟ್ರೈನ್ ನಲ್ಲಿ ಪಯಣ ಮಾಡಿ. ರೈಲು ಚಲಿಸುವ ಮುನ್ನ ನೀಡೋ ಸಿಳ್ಳೆಯ ಮುನ್ಸೂಚನೆ, ರೈಲಿನ ಕಿಟಕಿಯ ಮೂಲಕ ನಾವು ನೋಡೋ ನಿಸರ್ಗ, ನಮ್ಮ ಜೊತೆ ಪಿಸುಗುಟ್ಟುತ್ತ ಮಾತಾಡೋ ಗಾಳಿ, ಅಕ್ಕ ಪಕ್ಕದಲ್ಲಿ ಇರೋ ಹೊಸ ಮುಖಗಳು, ರೈಲಿನಲ್ಲಿ ಸಿಗೋ ಚಾ, ತಿಂಡಿ, ಊಟ ಎಲ್ಲವನ್ನೂ ಕೂಡ ಒಮ್ಮೆ ಆದ್ರು ಮನಸಾರೆ ಅನುಭವಿಸಿ..
ತುಂಬಾ ದೊಡ್ಡ ವಿಷಯ ಏನು ಅಲ್ಲ , ನಾನು ಹಲವು ಬಾರಿ ಟ್ರೈನ್ ನಲ್ಲಿ ಹೋಗಿದ್ದೇನೆ ಅದರಲ್ಲೇನಿದೆ ಅಂತ ಹೇಳಬಹುದು . ಆದರೆ ನನ್ನ ಪ್ರಶ್ನೆ ಅದಲ್ಲ, ನಿಮ್ಮ ಪಯಣದ ದಾರಿನ ನೀವು ಎಂದಾದರೂ ಪ್ರೀತಿಸಿದಿರಾ!?, ಅನುಭವಿಸಿದಿರಾ!? ಅನ್ನೋದು ನನ್ನ ಪ್ರಶ್ನೆ. ಉತ್ತರ ನನಗೆ ಹೇಳ್ಬೇಕು ಅಂತೆನ್ನೂ ಇಲ್ಲ ನಿಮ್ಗೆ ನೀವೇ ಹೇಳಿಕೊಂಡರೆ ಸಾಕು.
ಹೆಚ್ಚೇನೂ ಹೇಳೋಲ್ಲ, ಸಂತೋಷ ಅನ್ನೋದು ದೊಡ್ಡ ವಸ್ತು, ವ್ಯಕ್ತಿಯಿಂದ ಮಾತ್ರ ಸಿಗೋದಲ್ಲ. ಸಂತೋಷ ಅನೋದನ್ನ ಪ್ರತಿಬಾರಿಯೂ ಪ್ರತಿಯೊಂದರಲ್ಲೂ ಪಡೆಯಲು ನೋಡಿದ್ರೆ ಸಾಕು ಬದುಕಲ್ಲಿ ಅದೆಂತಾ ಬೇಜಾರು, ಸಮಸ್ಯೆ ಇದ್ರು ಅಷ್ಟೆನ್ನು ದೊಡ್ಡದು ಅನಿಸೋಲ್ಲ.

ನಮ್ಮ ಜೀವನದ ಸಣ್ಣ ಪುಟ್ಟ ವಿಷಯವನ್ನ ಎಲ್ಲಿವರೆಗೆ ಆಸ್ವಾದಿಸುವುದಿಲ್ವೋ, ಪ್ರತಿಯೊಂದರಲ್ಲೂ ಒಳ್ಳೆದನ್ನ, ಪ್ರೀತಿಯನ್ನ, ಸ್ನೇಹವನ್ನ ಗುರುತಿಸುವುದಿಲ್ಲವೋ. ಅಲ್ಲಿವರೆಗೆ ನಮಗೆ ಎಲ್ಲವೂ ದೊಡ್ಡ ಸಮಸ್ಯೆ ಆಗಿಯೇ ಕಾಣ್ತದೆ. ಎಲ್ಲದರಲ್ಲೂ ಕೆಟ್ಟದ್ದೇ ನೋಡಲು ಸಿಗ್ತದೆ.
ಇಟ್ಸ್ ಮೈ ಲೈಫ್, ಇಟ್ಸ್ ಜಸ್ಟ್ ಲೈಫ್ ಅಂತ ಹೇಳಿಕೊಳ್ಳುತ್ತಾ, ಆಲ್ ಇಸ್ ವೆಲ್ ಅಂತ ಹೇಳ್ತಾ ನಮ್ಮ ಬದುಕಿನ ಎಲ್ಲ ತರದ ಅನುಭವ ಪಡೆಯುತ್ತಾ ನಮ್ಮ ಬದುಕನ್ನು ಪ್ರೀತಿಸುತ್ತಾ ಬದುಕುವ…. ಬದುಕನ್ನ ಬದುಕಿನ ಜೊತೆ ಸೇರಿ, ಅನುಭವದ ಹೆಜ್ಜೆ ಹಾಕುತ್ತಾ ಬದುಕೋಣ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ