ಏಕಾಂಗಿ ಸಂಚಾರಿಕಾಡಿನ ಕತೆಗಳುದೂರ ತೀರ ಯಾನನಡಿಗೆ ನಮ್ಮ ಖುಷಿಗೆಬೆರಗಿನ ಪಯಣಿಗರುಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸ್ಫೂರ್ತಿ ಗಾಥೆಸ್ಮರಣೀಯ ಜಾಗ

40 ಜಲಪಾತ 20 ಬೆಟ್ಟಗಳಿಗೆ ಚಾರಣ ಹೋದ ಯುವಚಾರಣಿಗ ರಾಘವ್

ಓದಿನ ಜೊತೆಜೊತೆಗೆ ಇಲ್ಲಿಯವರೆಗೆ 40ಕ್ಕೂ ಹೆಚ್ಚು ಜಲಪಾತ ಹಾಗೂ 20ಕ್ಕೂ ಹೆಚ್ಚು ಬೆಟ್ಟ ಗುಡ್ಡಗಳಿಗೆ ಚಾರಣ ಹೋದ ಯುವ ಚಾರಣಿಗ ಇವರು. ವಾರದಲ್ಲಿ ಒಂದು ರಜೆ ಸಿಕ್ಕರೆ ಸಾಕು ಚಾರಣಕ್ಕೆ ಹೊರಟು ನಿಲ್ಲುತ್ತಾರೆ. ಬೆಟ್ಟ-ಗುಡ್ಡಗಳು, ನಿಗೂಢ ಹಾಗೂ ವಿಸ್ಮಯಗಳಿಂದ ಕೂಡಿದ ಜಲಪಾತಗಳನ್ನು ಹುಡುಕಿಕೊಂಡು ಹೋಗುವುದೇ ಇವರ ಹವ್ಯಾಸ. ಅವರೇ ಚಾರಣಪ್ರಿಯ ರಾಘವ್ ಜಿ ಭಟ್.

  • ಚೈತ್ರಾ ರಾವ್ ಉಡುಪಿ

ರಾಘವ್ ಜಿ ಭಟ್, ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಸ್ತುತ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ದ್ವಿತೀಯ ಎಂ.ಎಸ್.ಸಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಟ್ರಕ್ಕಿಂಗ್ ಮಾಡುವುದರಲ್ಲಿ ಎಲ್ಲಿಲ್ಲದ ಪ್ರೀತಿ. ಇನ್ನೊಂದು ಆಸಕ್ತಿಯ ಕ್ಷೇತ್ರವಾದ ಕ್ರಿಕೆಟ್ ನಲ್ಲಿ ಬಂದ ಬಹುಮಾನದ ಮೊತ್ತವನ್ನು ಕೂಡಿಟ್ಟು ಚಾರಣಕ್ಕಾಗಿ ಬಳಸಿಕೊಳ್ಳುತ್ತಾರೆ.

ಚಾರಣದಲ್ಲಿ ಆಸಕ್ತಿ ಹುಟ್ಟಿಕೊಂಡ ಬಗೆ

ಉತ್ತರಕನ್ನಡ ಜಲಪಾತಗಳ ನಾಡೆಂದೇ ಪ್ರಸಿದ್ಧ. ಸುಮಾರು 60ರಿಂದ 70 ಜಲಪಾತಗಳಿವೆ. ಇಲ್ಲಿಯೇ ಹುಟ್ಟಿ ಬೆಳೆದ ಇವರು ಅಲ್ಲಿನ ಬಹುತೇಕ ಜಲಪಾತಗಳನ್ನು ನೋಡಿದ್ದಾರೆ. ಸಾತೊಡ್ಡಿ,ಮಾಗೋಡು, ಕುಳಿ ಮಾಗೋಡು ಜಲಪಾತ ಹೀಗೆ ಅವರ ಅಜ್ಜಿ ಮನೆಯಿಂದ 20ನಿಮಿಷ ದೂರದಲ್ಲಿ 3 ರಿಂದ 4 ಸುಂದರ ಜಲಪಾತಗಳಿವೆ. ಅಲ್ಲಿನ ಜಲಪಾತಗಳಿಗೆ ಭೇಟಿ ನೀಡುತ್ತಾ ಇವರಿಗೆ ಉಳಿದ ಕರ್ನಾಟಕದ ಹಾಗೂ ಇತರ ರಾಜ್ಯದ ಜಲಪಾತಗಳನ್ನು ನೋಡಲೇಬೇಕೆಂದು ಆಸೆ ಹುಟ್ಟಿತು.

ಮೊದಲ ಚಾರಣದ ಅನುಭವ

ರಾಘವ್ ಮೊದಲು ಚಾರಣ ಮಾಡಿದ್ದು ಶಿವಮೊಗ್ಗ ಜಿಲ್ಲೆಯಲ್ಲಿರುವ ಕೊಡಚಾದ್ರಿ ಬೆಟ್ಟಕ್ಕೆ. ತನ್ನ ಗೆಳೆಯರೊಡನೆ ಯೋಜನೆ ನಿರೂಪಿಸಿಕೊಂಡು ಚಾರಣದ ಖುಷಿಯನ್ನು ಅನುಭವಿಸಲು ಮೊದಲ ಪ್ರಯತ್ನ ಮಾಡಿದರು. ಅಲ್ಲಿನ ತುತ್ತತುದಿಯಲ್ಲಿ ನಿಂತು ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕೆಂಬ ಆಸೆ ಇವರದಾಗಿತ್ತು. ಮನುಷ್ಯ ಎಂದಿಗೂ ಪ್ರಕೃತಿಯ ಜೊತೆ ಬೆರೆತು ಕಲಿಯಬೇಕು, ಕಾಡುಮೇಡು ಸುತ್ತುವುದು ಅನುಭವಕ್ಕಾಗಿ ಮತ್ತು ಜ್ಞಾನಕ್ಕಾಗಿ. ಎಲ್ಲದಕ್ಕಿಂತ ಹೆಚ್ಚು ಉತ್ತಮ ಆರೋಗ್ಯಕ್ಕಾಗಿ ಎನ್ನುತ್ತಾರೆ ರಾಘವ್.

Kodachadri hill

ಹಾಗೆ ಉತ್ತರ ಕನ್ನಡ ಜಿಲ್ಲೆಯ ಸಾತೊಡ್ಡಿ ಜಲಪಾತ ಇವರು ನೋಡಿದ ಮೊದಲ ಜಲಪಾತವಾಗಿದೆ. ಇಲ್ಲಿಂದಲೇ ಅವರಿಗೆ ಚಾರಣದಲ್ಲಿ ಆಸಕ್ತಿ ಹುಟ್ಟಿಕೊಂಡದ್ದು.

ಇಲ್ಲಿಯವರೆಗಿನ ಚಾರಣಗಳಲ್ಲಿ ಇವರಿಗೆ ಇಷ್ಟವಾದ ಚಾರಣ ಸುಮಾರು 14 ಜನ ಗೆಳೆಯರೊಡನೆ ಕೊಡಗು ಜಿಲ್ಲೆಯಲ್ಲಿರುವ ಕುಮಾರಪರ್ವತ ಬೆಟ್ಟ ಹತ್ತಿದ್ದು. ಅದು ಎರಡು ದಿನಗಳ ಚಾರಣವಾಗಿತ್ತು ಹಾಗೂ ರಾಘವ್ ಮತ್ತು ಅವರ ತಂಡ ಚಾರಣ ಹೋಗುವಾಗ ಗೈಡ್ ಜೊತೆಗೆ ಹೋಗುತ್ತಾರೆ. ಯಾಕೆಂದರೆ ಇವರು ಹೋಗುವ ಕೆಲವೊಂದು ಚಾರಣ ತೀರಾ ನಿಗೂಢ ಕಾಡು ಪ್ರದೇಶವಾಗಿರುತ್ತದೆ.

ಹಾಗೇ ಬ್ಯಾಗ್, ಟೆಂಟ್, ಮೆಡಿಕಲ್ ಕಿಟ್, ಆಹಾರ ಹಾಗೂ ಇತರ ವಸ್ತು, ಮುಖ್ಯವಾಗಿ ಚೂರಿ ಕೊಂಡೊಯ್ಯುತ್ತಾರೆ. ಯಾಕೆಂದರೆ. ಪ್ರಾಣಿಗಳು ಅಥವಾ ತೀರಾ ಕಾಡು ಪ್ರದೇಶವಾಗಿದ್ದರೆ ತಮ್ಮ ಸುರಕ್ಷತೆಗಾಗಿ ಚೂರಿಯನ್ನು ಇಟ್ಟುಕೊಂಡಿರುತ್ತಾರೆ.

Kumara Parvatha hill

ಕಠಿಣವಾದ ಚಾರಣ

ರಾಘವ್ ಅವರ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂಬತ್ತು ಗುಡ್ಡ ಹಾಗೂ ಹೊನ್ನಾವರದಲ್ಲಿರುವ ಮುಕ್ತಿಹೊಳೆ ಜಲಪಾತ ತುಂಬಾ ಕಠಿಣ ಹಾಗೂ ಭಯಾನಕ ಚಾರಣವಾಗಿದೆ. ಅಲ್ಲಿಗೆ ತೆರಳಲು ಅನುಮತಿ ಸಿಗುವುದು ತೀರಾ ಅಪರೂಪ. ಒಂಬತ್ತು ಗುಡ್ಡಕ್ಕೆ ಚಾರಣ ಹೋಗಬೇಕಾದರೆ ಅರಣ್ಯ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ. ವರ್ಷಕ್ಕೆ ಒಂದು ತಂಡಕ್ಕೆ ಹೋಗಲು ಅನುಮತಿ ಸಿಗುತ್ತದೆ ಅಷ್ಟೇ.

ಮುಂಜಾನೆ 7 ರಿಂದ 4 ಗಂಟೆಯವರೆಗೆ ಮಾತ್ರ ಹೋಗಲು ಅವಕಾಶ. ಉಳಿದ ಹೊತ್ತಿನಲ್ಲಿ ಆನೆ ಮುಳ್ಳುಹಂದಿ ಹುಲಿ ಇತರ ಪ್ರಾಣಿಗಳ ಓಡಾಟವಿರುತ್ತದೆ. ಇವರು ಹೋದಾಗ ಹುಲಿ ಕಾಲಚ್ಚು, ಆನೆಯ ಸದ್ದು ಕೇಳಿತ್ತಂತೆ. ವಾಪಾಸ್ ಹೋಗೋಣ ಎಂದು ಮನಸ್ಸಲ್ಲಿ ಬಂದರೂ, ಒಂಬತ್ತು ಗುಡ್ಡದ ತುತ್ತತುದಿಯ ನೆನಪಾಗಿ ಹಠದಿಂದ ಟ್ರಕ್ಕಿಂಗ್ ಮಾಡಿದ್ದಾರೆ.

9 ಗುಡ್ಡಗಳನ್ನು ಹತ್ತಿ ಇಳಿದು, ಹತ್ತಿ ಇಳಿದು ಹೋಗಬೇಕಾದ್ದರಿಂದ ಇದಕ್ಕೆ ಒಂಬತ್ತು ಗುಡ್ಡ ಎಂದು ಕರೆಯುತ್ತಾರೆ. ಗುಡ್ಡದ ತುತ್ತತುದಿಯಲ್ಲಿ ನಿಂತರೆ ದೀಪದಕಲ್ಲು, ಜೇನುಕಲ್ಲು, ರೋಟಿಕಲ್ಲು, ಅಮೇದಿಕಲ್ಲು, ಎತ್ತಿನಭುಜ ಹಾಗೂ ಪಾಂಡವರ ಬೆಟ್ಟ ಈ 6 ಬೆಟ್ಟಗಳನ್ನು ನೋಡಬಹುದು.

ಹಾಗೇ ಹೊನ್ನಾವರದಲ್ಲಿರುವ ಮುಕ್ತಿಹೊಳೆ ಜಲಪಾತ ತೀರಾ ಭಯಾನಕ ಹಾಗೂ ವಿಸ್ಮಯಗಳಿಂದ ಕೂಡಿದೆ. ಮುಕ್ತಿ ಎಂಬ ಹೊಳೆಯಲ್ಲಿ ಸುಮಾರು 12 ಕಿಲೋಮೀಟರ್ ನಡೆದುಕೊಂಡೇ ಹೋಗಬೇಕು. ಯಾವುದೇ ಬೋಟ್ ವ್ಯವಸ್ಥೆ ಇಲ್ಲ. ಆದ್ದರಿಂದ ಹೊಳೆಯಲ್ಲೇ ಹೋಗಿಬರಬೇಕು. ಆಳ ಮತ್ತು ಜಲಚರಗಳ ಭಯ ತುಂಬಾ ಕಾಡುತ್ತದೆ. ಈ ಜಲಪಾತಕ್ಕೆ ಹೋಗಬೇಕಾದರೆ ಅಷ್ಟೇ ಧೈರ್ಯ ಹಾಗೂ ಶಕ್ತಿ ಬೇಕು.

ನೀವುಇದನ್ನುಇಷ್ಟಪಡಬಹುದು: ಅದ್ಭುತ ಅನುಭವಗಳ ಮೂಟೆ ದೇವರ ಕಾಡು ಚಾರಣ

Muktihole Falls Chikkamagalore

ರಾಘವ್ ಮತ್ತು ಗೆಳೆಯರು ಇಲ್ಲಿಗೆ ಹೋಗಬೇಕಾದರೆ ಹೊಳೆಯಲ್ಲಿ ಹೋದಾಗ ತುಂಬಾ ಭಯವಾಗಿತ್ತು, ಅದರ ಜೊತೆಗೆ ಸ್ವಲ್ಪ ಬೇರೇನಾದರೂ ಸದ್ದು ಆದ್ರೆ ಜೀವ ಕೈಯಲ್ಲಿ ಬಂದಂತೆ ಆಗುತ್ತದೆ. ಆ ರೀತಿಯ ವಾತಾವರಣ ಮುಕ್ತಿ ಹೊಳೆಯಲ್ಲಿ ಹೋಗಬೇಕಾದರೆ ಅನುಭವವಾಗುತ್ತದೆ ಎಂದರು. ಆದರೆ 12 ಕಿ.ಮೀ ಬಳಿಕ ಕಾಣಸಿಗುವ ಮುಕ್ತಿಹೊಳೆ ಜಲಪಾತ ನೋಡಲು ತುಂಬಾ ರಮಣೀಯವಾಗಿದೆ.

ವಿದ್ಯಾಭ್ಯಾಸ ಹಾಗೂ ಚಾರಣವನ್ನು ನಿಭಾಯಿಸುವ ರೀತಿ

ಪ್ರತಿ ಶನಿವಾರ, ಭಾನುವಾರ ಅಥವಾ ಇತರ ರಜಾದಿನಗಳಲ್ಲಿ ಇವರು ಟ್ರಕ್ಕಿಂಗ್ ಹೋಗುತ್ತಾರೆ. ರಾಘವ್ ಹೆಚ್ಚಾಗಿ ಒಂದು ದಿನದ ಚಾರಣ ಹೋಗುತ್ತಾರೆ. ಗೆಳೆಯರೊಂದಿಗೆ ಬೈಕಿನಲ್ಲಿ ಹೋಗಿ ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳದೆ ಕತ್ತಲಾಗುವ ಒಳಗೆ ಚಾರಣ ಮುಗಿಸುತ್ತಾರೆ.

ಹೆಚ್ಚಾಗಿ ವಾರಕ್ಕೆ ಎರಡು ಚಾರಣ ಹೋಗುತ್ತಾರೆ. ಇವರು ಜೂನ್ ತಿಂಗಳಿನಿಂದ ಜನವರಿವರೆಗೆ ಮಾತ್ರ ಚಾರಣ ಹೋಗುವುದು. ಯಾಕೆಂದರೆ ಉಳಿದ ತಿಂಗಳಲ್ಲಿ ಹಸಿರು ಮತ್ತು ನೀರು ಕಡಿಮೆಯಾಗುತ್ತದೆ.

ಹಾಗೆ ತನ್ನ ಹವ್ಯಾಸದ ಜೊತೆಜೊತೆಗೆ ಓದಿನಲ್ಲೂ ಇವರು ಮುಂದೆ. ವಿದ್ಯೆಗೆ ಯಾವುದೇ ಸಮಸ್ಯೆ ಆಗದ ಹಾಗೆ ಚಾರಣದ ಹವ್ಯಾಸವನ್ನು ನಿಭಾಯಿಸುತ್ತಿದ್ದಾರೆ.

ಇವರ ಮುಂದಿನ ಚಾರಣದ ಪಟ್ಟಿ

ಲಾಕ್ ಡೌನ್ ಮುಗಿದ ಬಳಿಕ ಕುದುರೆಮುಖ, ಕುರಿಂಜಲ್ ಪೀಕ್ ಹಾಗೂ ನರಸಿಂಹ ಪರ್ವತಕ್ಕೆ ಚಾರಣ ಹೋಗಲೇಬೇಕೆಂದು ಇವರು ನಿರ್ಧರಿಸಿದ್ದಾರೆ ಹಾಗೆ ನೆಟ್ ಗೋಡ್, ಬಾಳೆಕಟ್ಟೆ, ಒನಕೆ ಅಬ್ಬಿ, ಮತ್ತಿಘಟ್ಟ ಹಾಗೂ ವಿಭೂತಿ ಜಲಪಾತವನ್ನು ನೋಡಬೇಕೆಂದುಕೊಂಡಿದ್ದಾರೆ. ಸದ್ಯಕ್ಕೆ ಒಟ್ಟು 8 ತಾಣಗಳಿಗೆ ಟ್ರಕ್ಕಿಂಗ್ ಹೋಗಲು ಈಗಲೇ ತಯಾರಿ ಮಾಡಿಕೊಂಡಿದ್ದಾರೆ ರಾಘವ್.

ಟ್ರಕ್ಕಿಂಗ್ ಗೈಡ್ ಆಗಿ ಹಲವು ಪ್ರವಾಸಿ ಕಂಪನಿಗಳಿಂದ ಉದ್ಯೋಗ ಇವರನ್ನರಸಿ ಬಂದಿದೆ. ಇವರು ಚಾರಣ ಮಾಡುವುದಷ್ಟೇ ಅಲ್ಲದೆ ಇತರ ತಂಡಗಳಿಗೆ ಗೈಡಾಗಿಯೂ ಹೋಗುತ್ತಾರೆ. ಹಾಗಾಗಿ ಇವರ ಚಾರಣದ ಆಸಕ್ತಿಗೆ ಮೂರರಿಂದ ನಾಲ್ಕು ಪ್ರವಾಸಿ ಕಂಪನಿಗಳು ಉದ್ಯೋಗದ ಆಫರ್ ಕೊಟ್ಟಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button