ಅದ್ಭುತ ಅನುಭವಗಳ ಮೂಟೆ ದೇವರ ಕಾಡು ಚಾರಣ
ನಮಗೋ ಚಾರಣದ ಹುಚ್ಚು. ಸ್ವಲ್ಪ ದೂರ ಹೋಗುತ್ತೇವೆ ಎಂದು ಬಾಯಿ ಮಾತಿಗೆ ಹೇಳಿ ಹೊರಡುವ ನಾವು, ಪೂರಾ ಚಾರಣವನ್ನು ಮುಗಿಸಿಯೇ ಬರುವುದು! ಸುಬ್ರಹ್ಮಣ್ಯದ ಮಡಿಲಿನಲ್ಲಿರುವ ‘ದೇವರ ಕಾಡು’ ಎಂಬ ಹಸಿರಿನ ಆಗರಕ್ಕೆ ಚಾರಣ ಹೋದ ನಮಗೆ ಅದ್ಭುತ ಅನುಭವಗಳು ಎದುರಾದವು!
- ಸ್ಕಂದ ಪ್ರಸಾದ್
ಕಾಡೊಳಗಿನ ವಿಸ್ಮಯಕ್ಕೆ ಸಾಕ್ಷಿಯಾಗಲು ಅಣ್ಣ ತಮ್ಮ ಬೆಳ್ಳಂಬೆಳಗ್ಗೆ ತಿಂಡಿ ತಿಂದು ಕುಕ್ಕೆ ಸುಬ್ರಹ್ಮಣ್ಯದ ದೇವರ ಕಾಡು ಎಂದು ಕರೆಯುವ ಅದ್ಭುತ ಲೋಕಕ್ಕೆ ಕಾಲಿಡಲು ತಯಾರಾಗುತ್ತಿದ್ದೆವು. ಸುಮಾರು 7:30 ಕ್ಕೆ ಹೊರಟು ನಾವು ಸುಮಾರು 10-11 ಗಂಟೆ ಒಳಗಾಗಿ ಹಿಂದಿರುಗುವ ಭರವಸೆ ಹೇಳಿ ಮನೆಯಿಂದ ಹೊರಟೆವು.
ಮನೆಯವರಿಗೆ ಗೊತ್ತಿರುವ ಸಂಗತಿ ಏನೆಂದರೆ ಹೇಳಿದ ಸಮಯಕ್ಕಿಂತ ತಡವಾಗಿ ಮತ್ತು ಹೇಳಿದ್ದಕ್ಕಿಂತ ಹೆಚ್ಚು ದೂರ ಚಾರಣ ಮಾಡುವುದು ನಮ್ಮದು ವಾಡಿಕೆ. ಆದ್ದರಿಂದ ನಮಗಾಗಿ ದಾರಿ ನೋಡುವ ಅಭ್ಯಾಸ ಬಿಟ್ಟು ಹೋಗಿತ್ತು.
ಈ ಮೊದಲು ಸುಮಾರು 10 ಬಾರಿ ಒಂದೆರಡು ಕಿಮೀ ಕ್ರಮಿಸಿದ್ದೆವು. ಅದಕ್ಕೂ ಮುಂದೆ ಹೋಗುವ ಧೈರ್ಯ ಈವರೆಗೆ ಇರಲಿಲ್ಲ. ಈ ಬಾರಿ ಜಿಗಣೆ(ಲೀಚ್) ಗಳ ಕೈಯಿಂದ ಪಾರಾಗಲು ಡೆಟಾಲನ್ನು ಕಾಲಿಗೆ, ಬೆರಳೆಡೆಗೆ, ಚಪ್ಪಲಿಗೆ ಸವರಿ ಚಾರಣ ಶುರು ಮಾಡಿದೆವು.
ನಿತ್ಯ ಹರಿದ್ವರ್ಣದ ಕಾಡೊಳಗೆ ಬಾಯಾರಿಕೆ ಕಮ್ಮಿ ಹಾಗಾಗಿ ಅರ್ಧ ಲೀಟರಿನ 3 ಬಾಟಲಿ, 4 ಪೇರಳೆ ಹಣ್ಣು, ಒಂದು ಬಿಸ್ಕತ್ತಿನ ಪ್ಯಾಕು, ಒಂದು ಡೆಟಾಲು ಬಾಟಲಿ ಹಾಗೂ ಒಬ್ಬೊಬ್ಬನಿಗೆ ಒಂದೊಂದು ಪ್ರತ್ಯೇಕವಾದ ಸಣ್ಣ ಬಟ್ಟೆ ತುಂಡಲ್ಲಿ 4 ಚಮಚ ಕಲ್ಲು ಉಪ್ಪು ಕಟ್ಟಿ, ಜಿಗಣೆ ಹತ್ತಿದಾಗ ಕೈ ಬಳಸುವಾಗ ಹೇಸಿಗೆ ತಪ್ಪಿಸಲು ಮತ್ತು ಉಪ್ಪಿನ ಅಂಶದಿಂದ ಜಿಗಣೆಯನ್ನು ಬೇಗನೆ ಬಲಹೀನಗೊಳಿಸಿ ನೆಲಕ್ಕಪ್ಪಳಿಸುವ ತಂತ್ರ ಹೂಡಿದ್ದೆವು.
ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಅತ್ಯಂತ ಭಯಾನಕ ಜೀವಿ ಎಂದರೆ ಜಿಗಣೆ. ಇದರಿಂದ ಕಚ್ಚಿಸಿ ರಕ್ತದಾನ ಮಾಡಿದವರಿಗೆ ಮಾತ್ರ ತಿಳಿಯುವುದು ಇದರ ಕಷ್ಟ. ಮನುಷ್ಯ ಕಾಡೊಳಗೆ ಸಲೀಸಾಗಿ ಹೋಗಿ ದುಷ್ಕೃತ್ಯ ಮಾಡದಂತೆ ಇರುವ ಕಾಡಿನ ಕಾಲಾಳು ಸೈನಿಕರಿರಬೇಕು ಈ ಜಿಗಣೆಗಳು.
ಹೆಚ್ಚಿನ ಸಮಯ ಸುತ್ತಮುತ್ತಲಿನ ಮರ, ಕಾಡಿನ ಸೌಂದರ್ಯ ಅನುಭವಿಸುವುದಕ್ಕಿಂತ ಜಿಗಣೆ ತೆಗೆಯುವುದೇ ಒಂದು ಸಾಹಸ.
ಸುಮಾರು 2ಕಿಮೀ ವರೆಗೆ ಡೆಟಾಲ್ ತಂತ್ರ ಕೆಲಸ ಮಾಡಿತಾದರೂ, ನಂತರ ಹಾಲಿವುಡ್ ಸಿನಿಮಾದ zombie ಗಳಂತೆ ಹತ್ತಲಾರಂಭಿಸಿದವು. ಪುನಃ ಡೆಟಾಲ್ ಹಾಕಲು ನಿಲ್ಲಲೂ ಸಾಧ್ಯವಿಲ್ಲ, ಕೊನೆಗೆ ಒಂದು ಬಿದ್ದ ಮರದ ಮೇಲೆ ಕೂತು ಸಮಾಧಾನದಿಂದ ನೀರು ಕುಡಿದು, ಹಣ್ಣು ತಿಂದು, ಪುನಃ ಡೆಟಾಲ್ ಕಾಲಿಗೆಲ್ಲಾ ಸುರಿದು ಚಾರಣ ಮುಂದುವರೆಸಿದೆವು.
ಕ್ರಮೇಣ ಬೆಟ್ಟ ಏರುತ್ತಿದ್ದಂತೆ ನೀರಿನ ತೇವಾಂಶ ಕಮ್ಮಿ ಆಗಿ ಜಿಗಣೆಗಳ ಪ್ರಮಾಣ ಕಮ್ಮಿಯಾಯಿತು. ದೈತ್ಯ ಮರಗಳು, ಅಪರೂಪದ ಹೂಗಳು, ಹೆಸರು ತಿಳಿಯದ ಹಣ್ಣುಗಳು ದಾರಿ ಉದ್ದಕ್ಕೂ ಇತ್ತು. ಪಕ್ಷಿಗಳು, ಪ್ರಾಣಿಗಳು ಆಗಂತುಕರೀರ್ವರ ಆಗಮನಕ್ಕೆ ಚಿತ್ರ ವಿಚಿತ್ರ ಶಬ್ದಗಳನ್ನು ಮಾಡಿ ಇತರ ಜೀವಿಗಳಿಗೆ ಸುದ್ದಿ ಪ್ರಸಾರ ಮಾಡುತ್ತಿತ್ತು. ಆಗಸದೆತ್ತರಕ್ಕೆ ಬೆಳೆದು ನಿಂತ ಮರಗಳ ಕೊಂಬೆಯಲ್ಲಿ ಕೂತ ಪಕ್ಷಿಗಳನ್ನು ಹುಡುಕಲು ತಲೆಯೆತ್ತಿ ನೋಡುತ್ತಿದ್ದಂತೆ ಕಾಲಾಳುಗಳು ಮೇಲೇರತೊಡಗುತ್ತಿದ್ದವು.
ಮುಂದೆ ಹೋಗುತ್ತಿದ್ದಂತೆ ಒಂದು ಕಡೆ ಬಿದಿರುಗಳು ಲಟಪಟನೆ ಮುರಿಯುವ ಶಬ್ದ ಕೇಳುತ್ತಿದ್ದಂತೆ ಇಬ್ಬರೂ ಸ್ತಬ್ಧವಾಗಿ ನಿಂತೆವು. ಆನೆಯ ಆವಾಸ ಸ್ಥಾನವಿರಬಹುದೆಂದು ನಿಶಬ್ದವಾಗಿ ಬೇಗ ಮುಂದುವರೆದೆವು. ಮುಂದಿನ ತಿರುವಲ್ಲಿ ಆನೆ ಲದ್ದಿ ಕಂಡಾಗ ಆನೆಯ ಇರುವಿಕೆಯ ಸೂಚನೆ ದೊರೆಯಿತು. ಎದುರಿರುವ ಮನುಷ್ಯ ಅಪಾಯಕಾರಿ ಎಂದೆನಿಸುವವರೆಗೂ ಯಾವುದೇ ಪ್ರಾಣಿ ತೊಂದರೆ ಕೊಡುವುದಿಲ್ಲ. ಹಾಗಾಗಿ ಸದ್ದಿಲ್ಲದೆ ಮುಂದುವರೆದೆವು.
ಸುಮಾರು 5ಕಿಮೀ ಕ್ರಮಿಸಿದಾಗ ಒಂದು ಸಣ್ಣ ಜಲಪಾತದ ಕಂಡೆವು. ಆದರೆ ಮುಂದೆ ಕಾಲುದಾರಿಯೂ ಕಾಣದಾಯಿತು. ಮುಂದೇನು ಎಂದು ಯೋಚಿಸುತ್ತಿದ್ದಾಗ ಬ್ಯಾಗಿನಲ್ಲಿದ್ದ ಬಾಟಲಿಯ ಮುಚ್ಚಳ ಸರಿಹಾಕದೆ, ನೀರೆಲ್ಲ ಚೆಲ್ಲಿ ಬಾಟಲಿ ಖಾಲಿಯಾದದ್ದು ಕಂಡಿತು. ಇನ್ನು ಇರುವುದು ಒಂದು ಬಾಟಲಿಯಲ್ಲಿ ಮನೆವರೆಗೆ ಸುಧಾರಿಸಬಹುದು ಎಂದು ಅಂದಾಜು ಮಾಡುತ್ತಿದ್ದಾಗ ಅದೆಲ್ಲಿಂದಲೋ ಮೊಬೈಲ್ ನೆಟ್ವರ್ಕ ಬಂದದ್ದೇ ತಡ ಮ್ಯಾಪ್ ಹಾಕಿ ಮುಂದೆ ಹೋಗಲು ಸಾಧ್ಯವೇ ಎಂದು ಯೋಚಿಸುತಿದ್ದೆವು ಆಗ ನೆನಪಾದದ್ದು ರಾಮಚಂದ್ರ ಭಟ್ರು ಹೇಳಿದ ಕಥೆ.
ಇಲ್ಲಿಂದ ಗಿರಿಗದ್ದೆ ಭಟ್ರ ಮನೆಗೆ ಹೋಗಲು ಕೇವಲ ಒಂದು ಕಿಮೀ ದಾರಿ, ಸರಿಯಾದ ದಾರಿ ಇಲ್ಲದಿದ್ದರೂ ಹೋಗಲು ಸಾಧ್ಯ ಎಂದಿದ್ದರು. ಗೂಗಲ್ ಮ್ಯಾಪಿನಲ್ಲಿ ಸ್ಯಾಟೆಲೈಟ್ ವ್ಯೂನಲ್ಲಿ ಹತ್ತಿರದಲ್ಲೇ ಭಟ್ರ ಮನೆ ಇದೆ ಇದೊಂದು ಒಳ್ಳೆಯ ಅವಕಾಶ ಈ ಬಾರಿ ಪ್ರಯತ್ನ ಮಾಡಿ ನೋಡೋಣ ಎಂದು ಈರ್ವರು ಇತ್ಯರ್ಥ ಮಾಡಿದಾಗ ಸಮಯ 10:30 ಆಗಿತ್ತು.
ನೀವು ಇದನ್ನು ಇಷ್ಟಪಡಬಹುದು: ರಜಾದಿನ ಬೆಂಗಳೂರಿನಿಂದ ಎದ್ದು ಟ್ರೆಕ್ಕಿಂಗ್ ಹೋಗಬಹುದಾದ ಒಂದೊಳ್ಳೆ ಜಾಗ ನಾರಾಯಣ ಗಿರಿ ಬೆಟ್ಟ: ಪ್ರಿಯಾ ಕೆರ್ವಾಶೆ
ಹನ್ನೊಂದು ಗಂಟೆಯವರೆಗೆ, ಹೋಗುವ ದಾರಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದೆವು. ಈ ದಟ್ಟಡವಿಯ ಮಧ್ಯದಲ್ಲಿ ಗೂಗಲ್ ಮ್ಯಾಪ್ ಡೈರೆಕ್ಷನ್ಸ್ ತೋರಿಸುವುದು ಅಸಂಭವ. ಹಾಗಾಗಿ ಮ್ಯಾಪಿನಲ್ಲಿ ಮೆಷರ್ ಡಿಸ್ಟೆನ್ಸ್ ಎನ್ನುವ ಫೀಚರ್ ಬಳಸಿದಾಗ ಭಟ್ರ ಮನೆಗೆ ಒಂದು ಕಿಮೀ ಎಂದು ತೋರಿಸುತ್ತಿತ್ತು. ಹೆಚ್ಚೆಂದರೆ ಒಂದೂವರೆ ಕಿಮೀ ಆಗಬಹುದು, ಯಾಕೆಂದರೆ ಅದು ಗಾಳಿಯಲ್ಲಿನ ದೂರ (air distance) ತೋರಿಸುತ್ತಿತ್ತು.
ಜಲಪಾತದ ಪಕ್ಕದಲ್ಲೇ ಕಾಡಿನ ದಾರಿಯಾಗಿ ನಡೆಯಲು ಆರಂಭಿಸಿದೆವು. ಆದರೆ ಇದು ಬಹಳ ಕಷ್ಟದ ದಾರಿ, ಮ್ಯಾಪಲ್ಲಿ ನೇರವಾಗಿ ಮುಂದುವರೆಯಲು ತೋರಿಸಿದರೂ ಮುಂದೆ ಸಾಗಲು ಅಸಾಧ್ಯವಾದ ಅಭೇದ್ಯವಾದ ಕಾಡು. ತರಗೆಲೆಗಳು ತುಂಬಿದ್ದರಿಂದ ಎಲ್ಲಿ ಆಳ ಇದೆ, ಎಲ್ಲಿ ಕಲ್ಲು ಇದೆ ಎಂಬುದು ಊಹಿಸಲಸಾಧ್ಯವಾಗದೆ ಒಂದೆರಡು ಬಾರಿ ಎಡವಿ ಬಿದ್ದೆವು.
ಈ ಕಾಡು ಒಂದು ಗುಡ್ಡದ ರೀತಿಯ ಭೂ ಪ್ರದೇಶವಾದ್ದರಿಂದ ಅತಿಯಾದ ಇಳಿಜಾರಿನ ನೆಲ, ಪ್ರತಿಯೊಂದು ಹೆಜ್ಜೆಯೂ ಬಹಳ ದುಸ್ತರವಾಗಿತ್ತು. ಮ್ಯಾಪಿನಲ್ಲಿ ಈ ಏರಿಳಿತ ಕಾಣದಿದ್ದರೂ, ಚಾರಣದ ಅತಿ ಕಠಿಣ ದಾರಿ ಎಂದು ಗ್ರಹಿಸಿದ್ದೆವು. ಗಂಟೆ ಹನ್ನೊಂದುವರೆ ಆದರೂ ಸಂಜೆ ಏಳರಂತೆ ಭಾಸವಾಗಿತ್ತು. ಹಿಂದಿರುಗಿ ಈ ದಾರಿಯಲ್ಲಿ ಬರುವ ಯೋಚನೆಗೆ ಎಳ್ಳು ನೀರು ಬಿಟ್ಟೆವು. ಆದಷ್ಟು ಬೇಗ ದಟ್ಟಡವಿ ದಾಟಿ ಹುಲ್ಲುಗಾವಲಿನ ಪ್ರದೇಶ ತಲುಪಬೇಕೆಂದು ವಿಶ್ರಾಂತಿ ಪಡೆಯದೆ ಮುನ್ನಡೆದೆವು.
ಇಬ್ಬರೂ ಸಮ್ಮತಿಸಿ ಈ ದುಸ್ಸಾಹಸಕ್ಕೆ ಹೊರಟದ್ದರಿಂದ, ಇನ್ನೊಬ್ಬನ ಮೇಲೆ ಆರೋಪ ಮಾಡುವ ಅವಕಾಶ ಕಳೆದುಕೊಂಡು, ಮುಖ ಮುಖ ನೋಡಿತ್ತ ತೆಪ್ಪಗೆ ನಿಂತೆವು.
ಇಬ್ಬರೂ ಗಳಗಳನೆ ನೀರು ಕುಡಿದು, ಮ್ಯಾಪ್ ನೋಡಿದಾಗ ಭಟ್ರ ಮನೆಗೆ ಕೇವಲ ಏಳುನೂರೈವತ್ತು ಮೀಟರ್ ಇರುವುದು ತಿಳಿದು ಮನಸ್ಸಿಗೆ ಕೊಂಚ ಸಮಾಧಾನವಾಯಿತು.
ಹವಾಯಿ ಚಪ್ಪಲ್ ಧರಿಸಿ ಚಾರಣ ಮಾಡುತ್ತಿದ್ದ ನನಗೆ ಅದಾಗಲೇ ಸುಮಾರು ಗಾಯಗಳಾಗಿದ್ದವು, ಒಣಗಿದ ತರಗೆಲೆ ಮೇಲೆ ಕಾಲಿಟ್ಟಾಗ ಹಟಾತ್ತನೆ ಅದ್ಯಾವುದೋ ಸರಿಸೃಪದ ಬಿಲದೊಳಗೆ ಕಾಲಿಟ್ಟಂತಾಯಿತು, ರಪ್ಪನೆ ಕಾಲು ಹೊರಗೆ ತೆಗೆದು ಹೆಜ್ಜೆ ಮುಂದೆ ಹಾಕಿದೆ. ಇಂತಹ ದುಸ್ಸಾಹಸಗಳಲ್ಲಿ ನಮ್ಮ ಹಣೆಬರಹ ಚೆನ್ನಾಗಿದ್ದರೆ ಮಾತ್ರ ಸರಿಯಾಗಿ ಮನೆಗೆ ಹಿಂದಿರುಗಬಹುದು ಎಂಬುದು ನೂರಕ್ಕೆ ನೂರರಷ್ಟು ಸತ್ಯ.
ಇಲ್ಲದ ದಾರಿಯಲ್ಲಿ ಮ್ಯಾಪ್ ನಂಬಿ ಸಾಹಸ(ದುಸ್ಸಾಹಸ) ಮಾಡಿದ ಕಥೆ ಮುಂದಿನ ಭಾಗದಲ್ಲಿ ಚಿತ್ರಗಳೊಂದಿಗೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ