ಬೆಂಗಳೂರು ಹುಡುಗಿ ಸಾಹಿತಿ ಹೇಳಿದ ಕಾರ್ಕಳದ ಮಣ್ಣ ಪಾಪು ಹೋಂ ಸ್ಟೇ ಕಥೆ.
ಸಾಹಿತಿ ,ಬೆಂಗಳೂರಿನ ಹುಡುಗಿ. ಪ್ರವಾಸವೆಂದರೆ ಅಚ್ಚು ಮೆಚ್ಚು .ಕರ್ನಾಟಕದ ಜಾಗಗಳನ್ನು ಸುತ್ತುವುದು ಬಹು ಇಷ್ಟ. ಕರ್ನಾಟಕದ ಹಲವು ಜಾಗಗಳು ಇವರಿಗೆ ಪ್ರಿಯ . ಅದರಲ್ಲಿ ಕಾರ್ಕಳ ತಾಲೂಕಿನಲ್ಲಿರುವ ಮಾಳದ ಮಣ್ಣ ಪಾಪು ಹೋಂ ಸ್ಟೇ ಕೂಡ ಒಂದು. ಮಣ್ಣ ಪಾಪು ಹೋಂ ಸ್ಟೇ ಇವರಿಗೆ ಅಜ್ಜಿ ಮನೆಯಿದ್ದಂತೆ . ಮಣ್ಣ ಪಾಪು ಮನೆ ತನ್ನ ವಿಶೇಷತೆಗಳಿಂದ ಇವರಿಗೆ ಅತ್ಯಾಪ್ತ. ಸಾಹಿತಿ ಹೇಳಿದ ಚೆಂದದ ಹೋಂ ಸ್ಟೇ ಕತೆ ನಿಮಗಾಗಿ.
- ನವ್ಯಶ್ರೀ ಶೆಟ್ಟಿ
ಕರ್ನಾಟಕದಲ್ಲಿ ಪ್ರವಾಸ ಮಾಡುವುದನ್ನು ಇಷ್ಟ ಪಡುವ ಸಾಹಿತಿಗೆ ಕರ್ನಾಟಕದ ಎಲ್ಲ ಜಾಗಗಳು ಇಷ್ಟ . ಅದರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದ ಒಂದು ಹೋಂ ಸ್ಟೇ ಬಹು ಇಷ್ಟ. ಕಾರ್ಕಳದ ಮಾಳದಲ್ಲಿರುವ ಮಣ್ಣ ಪಾಪು ಹೋಂ ತನ್ನ ವಿಭಿನ್ನತೆಗಳಿಂದ ಬೆಂಗಳೂರಿನ ಹುಡುಗಿ ಸಾಹಿತಿಗೆ ನೆಚ್ಚಿನ ಜಾಗವಾಗಿದೆ. ಕರಾವಳಿಗೆ ಬಂದಾಗ ಸಾಹಿತಿ ಮಣ್ಣ ಪಾಪುವಿನಲ್ಲಿ ಉಳಿದುಕೊಳ್ಳುತ್ತಾರೆ. ಈ ಹೋಂ ಸ್ಟೇಯನ್ನು ಸಾಹಿತಿ ಅಜ್ಜಿ ಮನೆ ಎಂದು ಕರೆಯುವಷ್ಟು ಆತ್ಮೀಯತೆ.
ಎರಡು ಶತಮಾನ ಪೂರೈಸಿದ ಹೋಂ ಸ್ಟೇ
ಕಾರ್ಕಳ ತಾಲೂಕಿನ ಮಾಳ ಒಂದು ಪುಟ್ಟ ಊರು. ಈ ಊರಲ್ಲೊಂದು ಚಂದದ ಹೋಂ ಸ್ಟೇ ಮಣ್ಣ ಪಾಪು. 200 ವರ್ಷಗಳಷ್ಟು ಹಳೆಯದಿರುವ ಈ ಪುಟ್ಟ ಹೋಂ ಸ್ಟೇ ನಿಮಗೆ ಮನೆಯ ಅನುಭೂತಿ ಕೊಡುತ್ತದೆ. ತೊಟ್ಟಿ ಮನೆಯ ಹಾಗಿರುವ ಚೆಂದದ ಹೋಂ ಸ್ಟೇಯಿದು. ಉಡುಪಿಯ ಕಲಾವಿದ ಪುರುಷೋತ್ತಮ್ ಅಡ್ವೆ ಪ್ರಸ್ತುತ ಈ ಹೋಂ ಸ್ಟೇ ನೋಡಿಕೊಳ್ಳುತ್ತಿದ್ದಾರೆ. ಪುರುಷೋತ್ತಮ್ ಅವರಿಗೆ ಕಲಾತ್ಮಕ ಸಂಸ್ಕೃತಿಯನ್ನು ಕಾಪಾಡುವುದು ಇಷ್ಟ. ಇಷ್ಟದ ಪ್ರತಿ ರೂಪದಂತಿದೆ ಈ ಚೆಂದದ ಮನೆ.
ಸಾಹಿತಿ ಹೇಳುವಂತೆ ಮಣ್ಣ ಪಾಪು ಹೋಂ ಸ್ಟೇ ಕಲಾತ್ಮಕಕತೆಯನ್ನು ತುಂಬಿಕೊಂಡಿದೆ. ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ , ನಶಿಸುವ ಹಂತದಲ್ಲಿರುವ ಅದೆಷ್ಟೋ ಅತ್ಯಮೂಲ್ಯ ವಸ್ತುಗಳ ಸಂಗ್ರಹ ಇಲ್ಲಿದೆಯಂತೆ. ಬಾಲ್ಯದಲ್ಲಿ ನಾವು ಆಡುತ್ತಿದ್ದ ಚೌಕಾಬಾರ ಸೇರಿದಂತೆ ಅನೇಕ ಅಪರೂಪದ, ಇತ್ತೀಚೆಗೆ ವಿರಳವಾಗಿರುವ ಆಟಿಕೆಗಳ ಸಂಗ್ರಹ ಕೂಡ ಇಲ್ಲಿದೆ. ಹಳೆಯ ಕಾಲದಲ್ಲಿ ಆಡುತ್ತಿದ್ದ ಅದೆಷ್ಟೋ ಆಟ ಸಾಮಗ್ರಿಗಳ ಸಂಗ್ರಹವನ್ನು ನೀವು ಇಲ್ಲಿ ನೋಡಬಹುದು . ಈ ಮನೆಯ ನೋಡಿದಂತೆ ಹಳೆಯ ಕಾಲದ ಚೆಂದದ ಚಿತ್ರಣ ನಿಮ್ಮ ಕಣ್ಮುಂದೆ ಬರುತ್ತದೆ.
ನಾವು ಪಯಣ ಮಾಡುವಾಗ ಅದೆಷ್ಟೋ ಹಳೆ ಕಾಲದ ಅಪರೂಪದ ವಸ್ತುವನ್ನು ನೋಡಿರುತ್ತೇವೆ. ಆದರೆ ಅದನ್ನು ಸಂಗ್ರಹಿಸುವ ಗೋಜಿಗೆ ಹೋಗುವುದಿಲ್ಲ. ಕಲಾತ್ಮಕತೆ ನೋಡುವ ಕಣ್ಣು ಹಾಗೂ ಸಂಗ್ರಹಿಸುವ ಹವ್ಯಾಸವಿದ್ದರೆ ನಿಮಗೆ ಹಲವು ಅಪರೂಪದ ವಸ್ತುಗಳು ಸಿಗುತ್ತದೆ. ಈ ಮಾತಿಗೆ ಮಣ್ಣ ಪಾಪು ಮನೆ ನೈಜ ನಿದರ್ಶನ . ಇಲ್ಲಿರುವುದೆಲ್ಲ ಕಲೆ ,ಸಂಸ್ಕೃತಿಯನ್ನು ,ಪ್ರಾದೇಶಿಕತೆಯನ್ನು ಬಿಂಬಿಸುವ ವಸ್ತು ಎನ್ನುತ್ತಾರೆ ಸಾಹಿತಿ.
ಮನೆಯೇ ಒಂದು ಮ್ಯೂಸಿಯಂ ಇದ್ದಂತೆ
ಹಳೆಯ ಕಾಲದ ವಿಶೇಷತೆಗಳನ್ನು ಇಂದಿಗೂ ಕಾಪಿಟ್ಟು ಕೊಂಡಿರುವ ಕಾರಣಕ್ಕಾಗಿ ಸಾಹಿತಿ ಗೆ ಮಣ್ಣ ಪಾಪು ಹೋಂ ಸ್ಟೇ ಇಷ್ಟ. ಇಲ್ಲಿ ತುಳುನಾಡಿನ ಭೂತಕೋಲದಲ್ಲಿ ಕಟ್ಟುವ ಗೆಜ್ಜೆಗಳ ಸಂಗ್ರಹವಿದೆ. ಹಳೆಯ ಕಾಲದಲ್ಲಿ ಅಡುಗೆ ಮನೆಯಲ್ಲಿರುತ್ತಿದ್ದ ಚಂದದ ಸಾಮಾನುಗಳು ಕೂಡ ಇದೆ. ಕರಾವಳಿಯ ಭೂತರಾಧನೆಯ ಮರದ ಕೆತ್ತನೆಗಳು ಸೇರಿದಂತೆ ಸಂಸ್ಕೃತಿಯನ್ನು ಬಿಂಬಿಸುವ ಅಪರೂಪದ ಕಲಾತ್ಮಕತೆಯನ್ನು ಹೊಂದಿರುವ ಈ ಹೋಂ ಸ್ಟೇ ,ಇಲ್ಲಿ ಬರುವ ಪ್ರವಾಸಿಗರಿಗೆ ಮ್ಯೂಸಿಯಂ ಅನುಭವ ನೀಡುತ್ತದೆ.
ಹಳೆಯ ಕಾಲದ ಕಲಾತ್ಮಕತೆಯನ್ನು ಬಿಂಬಿಸುವ ವಸ್ತುಗಳನ್ನು ಸಂಗ್ರಹಿಸಿ ಅದಕ್ಕೆ ಹೊಸ ರೂಪವನ್ನು ನೀಡಿದ್ದಾರೆ . ಇಲ್ಲಿ ಹಳೆಯ ಬಿದಿರಿನ ಒಂದು ಭಾಗದಂತೆ ಕಂಡು ಬರುವ ಸಂಗೀತದ ಉಪಕರಣವಿದೆ. ನೀವು ಅದನ್ನು ಮೇಲಿಂದ ಕೆಳಗೆ ತಿರುಗಿಸಿದರೆ , ನೀರು ಹರಿದಂತೆ ಶಬ್ಧ ಬರುತ್ತದೆ. ನಿಮ್ಮ ಕಿವಿಗೆ ಬೀಳುವ ಇಂಪಾದ ಆ ಶಬ್ದವನ್ನು ಕೇಳಿದಂತೆ ಮನಸಿಗೆ ಮುದ ಹಾಗೂ ಶಾಂತತೆ ಅನುಭವ ನೀಡುತ್ತದೆ.
ಹೋಂ ಸ್ಟೇ ಸಮೀಪದಲ್ಲೊಂದು ಜಲಪಾತ
ಮಣ್ಣ ಪಾಪು ಹೋಂ ಸ್ಟೇ ಇರುವ ಸ್ವಲ್ಪ ದೂರದಲ್ಲಿ ಒಂದು ಜಲಪಾತವಿದೆ. ನೀವು ನಡೆದುಕೊಂಡು ಹೋಗಬಹುದು. ಟ್ರೆಕ್ಕಿಂಗ್ ಮಾಡಿಕೊಂಡು ಹೋದರೆ ಅದೊಂದು ಚೆಂದದ ಅನುಭವ . ಹಳ್ಳಿಯಲ್ಲಿ ಇರುವುದರಿಂದ ಅಲ್ಲಿ ಪ್ರವಾಸಿಗರು ಕಡಿಮೆ . ಆದರೆ ಈ ಜಲಪಾತ ರಮಣೀಯ ನೋಟವನ್ನು ಬೀರುತ್ತದೆ . ಮಣ್ಣ ಪಾಪುವಿಗೆ ಹೋದಾಗಲೆಲ್ಲ ಸಂಜೆ ಅಲ್ಲಿಗೆ ಹೋಗಿ ಕಾಲ ಕಳೆಯುತ್ತಿದ್ದೆವು ಎನ್ನುತ್ತಾರೆ ಸಾಹಿತಿ.
ಮಣ್ಣ ಪಾಪುವಿನ ಅಡುಗೆಯೂ ರುಚಿ.
ಈ ಹೋಂ ಸ್ಟೇ ಅಲ್ಲಿ ಎಲ್ಲವೂ ವಿಶೇಷ. ಅಡುಗೆ ಕೂಡ ಅದಕ್ಕೆ ಹೊರತಾಗಿಲ್ಲ. ಪಕ್ಕಾ ದೇಶಿ ಶೈಲಿಯ ,ಪ್ರಾದೇಶಿಕತೆಯನ್ನು ಪ್ರತಿನಿಧಿಸುವ ರುಚಿಯಾದ ಅಡುಗೆ ಇಲ್ಲಿ ತಯರಾಗುತ್ತದೆ. ಹೊರಗಡೆಯಿಂದ ತಂದು ಊಟ ಮಾಡುವುದಕ್ಕೆ ಅವಕಾಶವಿಲ್ಲ. ಇಲ್ಲಿ ಬರುವ ಅತಿಥಿಗಳಿಗೆ ರುಚಿಯಾದ ಅಡುಗೆ ತಯಾರಿಸುತ್ತಾರೆ. ಶುದ್ಧ ಊಟ. ಮದ್ಯಪಾನ, ಧೂಮಪಾನ ಇಲ್ಲಿ ನಿಷಿದ್ಧ .
ನೀವುಇದನ್ನುಇಷ್ಟಪಡಬಹುದು: ರುಚಿಯಾದ ಆಹಾರಕ್ಕೆ ಪ್ರಿಯವಾದ ಉಡುಪಿಯ ಜಾಗಗಳು
ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನಬೇಕು ಎನ್ನುವ ಆಸೆ ಹುಟ್ಟಿಸುವ ರುಚಿ. ನಾನಾ ಬಗೆಯ ಊಟದ ಮೆನುಗಳು ನಿಮ್ಮ ಬಾಯಿಯಲ್ಲಿ ನೀರೂರಿಸುವುದು ಸುಳ್ಳಲ್ಲ. ಆಹಾರ ಪ್ರಿಯರಿಗಂತೂ ಇಲ್ಲಿ ಇದ್ದಷ್ಟು ದಿನ ಮನೆಯ ಊಟವೇನೋ ಅನ್ನುವಷ್ಟು ಆತ್ಮೀಯತೆ
ಬರುವ ಪ್ರವಾಸಿಗರನ್ನು ನೋಡಿಕೊಳ್ಳುಲು ಮನು ಎನ್ನುವವರು ಇದ್ದಾರೆ. ಅವರು ನಿಮ್ಮನ್ನು ಮನೆಯವರು ಎನ್ನುವಂತೆ ನೋಡಿಕೊಳ್ಳುತ್ತಾರೆ. ಇಲ್ಲಿ ಗಾಂಧಾರಿ ಮೆಣಸಿನಿಂದ(gandhari chilly) ಮಾಡುವ ಖಾರದ ಟೀ , ಜೀಗುಜ್ಜೆ ಪೋಡಿ(breadfruit), ಕಾಡ ಹಾಗಲದಿಂದ (spine guard) ಮಾಡುವ ತಿಂಡಿ , ಪತ್ರೊಡೆ ವಿಶೇಷ.
ಮಣ್ಣು ಪಾಪುವಿನಲ್ಲಿ ಸಿಗುವ ಊಟಗಳಿಗೆ ಬಳಕೆಯಾಗುವ ವಸ್ತುಗಳು ಸ್ಥಳೀಯವಾಗಿ ಸಿಗುವಂತದ್ದು. ಇಲ್ಲಿನ ಎಲ್ಲ ಖಾದ್ಯ ವಿಶೇಷ ಮತ್ತು ರುಚಿಕಟ್ಟು. ಈ ಕಾರಣಕ್ಕಾಗಿ ನಾವೆಲ್ಲ ಮಣ್ಣ ಪಾಪುವನ್ನು ಅಜ್ಜಿ ಮನೆ ಎಂದು ಕರೆಯುತ್ತೇವೆ
ಎನ್ನುತ್ತಾರೆ ಸಾಹಿತಿ. ಮಣ್ಣ ಪಾಪು ಮನೆಯ ರುಚಿ ಕಟ್ಟಾದ ಅಡುಗೆ ಎಷ್ಟು ಫೇಮಸ್ ಅಂದರೆ ಅಲ್ಲಿಗೆ ಇಂಟರ್ನ್ಶಿಪ್ ಗೆ ಬಂದವರೊಬ್ಬರು ಮಣ್ಣ ಪಾಪುವಿನ ಅಡುಗೆಯ ಕುರಿತಾಗಿಯೇ ಪುಸ್ತಕ ಹೊರ ತಂದಿದ್ದಾರೆ.
ಹಳೆಯ ಕಾಲದ ಶೈಲಿ ಬಿಂಬಿಸುವ ಅಡುಗೆ ಮನೆ
ಮಣ್ಣ ಪಾಪುವಿನ ಹಲವು ವಿಶೇಷತೆಗಳಲ್ಲಿ ಅಡುಗೆ ಮನೆ ಕೂಡ ಒಂದು. ಒಲೆಯಲ್ಲಿ ಅಡುಗೆ ಮಾಡುವುದರಿಂದ ಅದರ ಹೊಗೆಯ ನಿಯಂತ್ರಣ , ಮಳೆಗಾಲದ ನೀರು ಬಾರದೆ ನೋಡಿಕೊಳ್ಳುವುದು ಹೀಗೆ ಎಲ್ಲವೂ ಅಚ್ಚು ಕಟ್ಟಾಗಿ ಸುಂದರವಾಗಿದೆ ಮಣ್ಣ ಪಾಪುವಿನ ಮನೆಯಲ್ಲಿ. ಇಲ್ಲಿ ಬೆಣ್ಣೆಯನ್ನು ಸ್ವತಃ ಅವರೇ ತಯಾರಿಸುವುದು ವಿಶೇಷ.
ಕಾರ್ಕಳದ ಪುಟ್ಟ ಗ್ರಾಮ ಮಾಳದಲ್ಲಿರುವ ಈ ಹೋಂ ಸ್ಟೇ ಹಲವರಿಗೆ ಅಚ್ಚು ಮೆಚ್ಚು. ನೀವು ಹೋಂ ಸ್ಟೇ ತನಕ ವಾಹನದಲ್ಲಿ ಹೋಗಬಹುದು. ಮನೆಯ ವಾತಾವರಣದ ಚೆಂದದ ಅನುಭವ ನೀಡುವ ,ಪ್ರವಾಸಿಗರ ನೆಚ್ಚಿನ ಮಣ್ಣ ಪಾಪು ಹೋಂ ಸ್ಟೇ ಗೆ ನೀವು ಒಮ್ಮೆ ಹೋಗಿ ಬನ್ನಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ