ಇವರ ದಾರಿಯೇ ಡಿಫರೆಂಟುದೂರ ತೀರ ಯಾನಬೆರಗಿನ ಪಯಣಿಗರುಮೋಟಾರ್ ಸೈಕಲ್ ಡೈರಿವಿಂಗಡಿಸದ

ಮಿಟಿಯೋರ್ ಬೈಕ್ನಲ್ಲಿ ಭಾರತ ಸುತ್ತಿದ ಶ್ರವಣ ದೋಷ ಇರುವ ಸಾಹಸಿ ಅರ್ಚನಾ

#ವಿಶ್ವ ಮೋಟಾರ್ ಸೈಕಲ್ ದಿನ ವಿಶೇಷ
ಪ್ರತಿಯೊಬ್ಬರಿಗೂ ಅವರದ್ದೇ ಆದ ಗುರಿಗಳಿರುತ್ತದೆ ಹಾಗೂ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ಆದರೆ ಸಮಸ್ಯೆಗಳನ್ನು ಮೆಟ್ಟಿ ನಿಂತು ಗುರಿಯನ್ನು ಸಾಧಿಸಲು ಸಾಧ್ಯವಾಗುವುದು ಕೆಲವರಿಗೆ ಮಾತ್ರ.

ಈ ಸಾಧಕರ ಸಾಲಿನಲ್ಲಿ ಒಬ್ಬರಾದ ಅರ್ಚನಾ ತಮ್ಮ ಕಿವಿಯ ನ್ಯೂನತೆ ಇದ್ದರೂ, ಇಡೀ ಭಾರತವನ್ನು ಮೋಟಾರ್ ಸೈಕಲ್ ನಲ್ಲಿ ಸುತ್ತಿದ್ದಾರೆ. ಅದು ಹೇಗೆ ಎಂಬ ಕುತೂಹಲ ಇದ್ದರೆ ಈ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದಿ. ಇದು World Motorcycle Day ವಿಶೇಷ.

  • ಪದ್ಮರೇಖಾ ಕೆ ಭಟ್, ಚಟ್ನಳ್ಳಿ

ಅರ್ಚನಾ ತಿಮ್ಮರಾಜು, ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಆಂಧ್ರಪ್ರದೇಶದಲ್ಲಿರುವ ಹೈದ್ರಾಬಾದ್ ನಲ್ಲಿ.(hyderabad) ಕರ್ನಾಟಕ ಚಿತ್ರ ಪರಿಷತ್ ನಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ‘ದೃಶ್ಯ ಕಲೆ’ (ವಿಶುವಲ್ ಆರ್ಟ್ಸ್)  ವಿಷಯದಲ್ಲಿ ಮುಗಿಸಿದ್ದಾರೆ. ಕೆಲವೊಂದು ಇಂಗ್ಲೀಷ್ ಪದಗಳನ್ನು ಮಾತಾಡಬಲ್ಲ ಇವರು ಹೆಚ್ಚಿನ ಸಂದರ್ಭಗಳಲ್ಲಿ ಸನ್ನೆಯನ್ನೇ ಸಂವಹನ ಮಾಧ್ಯಮವಾಗಿ ಬಳಸುತ್ತಾರೆ.

2004ರಲ್ಲಿ ಕಾಲೇಜಿನಲ್ಲಿ ಓದುತ್ತಿದ್ದ ಇವರಿಗೆ, ತಮ್ಮದೇ ವಯಸ್ಸಿನ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಕಾಲೇಜಿಗೆ ಮೋಟಾರ್ ಸೈಕಲ್ ನಲ್ಲಿ ಬರುವುದ್ದನ್ನು ಕಂಡು ತಾವು ಒಂದು ದಿನ ಹೀಗೆ ಮೋಟಾರ್ ಸೈಕಲ್ ಸವಾರಿ ಮಾಡಲೇಬೇಕು ಎಂಬ ಆಸೆ ಹುಟ್ಟಿತು. ಆದರೆ ತಮ್ಮದೇ ಆದ ಗಾಡಿ ಇಲ್ಲದೇ ಇರುವ ಕಾರಣ ಒಬ್ಬ ಸ್ನೇಹಿತರ ಹತ್ತಿರ ಆರ್ ಎಕ್ಸ್ ಹಂಡ್ರೆಡ್ ಬೈಕ್ ಅನ್ನು ಕೇಳಿ ಬೈಕ್ ಓಡಿಸಲು ಕಲಿತರು. 

ನೀವುಇದನ್ನುಇಷ್ಟಪಡಬಹುದು: ಬೈಕಿನಲ್ಲಿ ದೇಶ ಸುತ್ತುವ ಮಾದರಿ ಅಪ್ಪ – ಮಗಳು

2018ರಲ್ಲಿ ಅವರ ಬೈಕ್ ಸವಾರಿ ಆಸೆಯ ಬೆನ್ನೇರಿ ರೋಯಲ್ ಎನ್ ಫೀಲ್ಡ್ ಥಂಡರ್ ಬರ್ಡ್(Royal Enfield Thunderbird) ಮೊದಲ ಬಾರಿಗೆ ಕೊಂಡುಕೊಂಡರು ಹಾಗೂ ‘ಸೈಲೆಂಟ್ ಎಕ್ಸಪೆಡಿಷನ್'(Silent Expediton) ಎನ್ನುವ ಸಂಸ್ಥೆಯನ್ನು ಡೇನಿಯಲ್ ಸುಂದರಂ ಎಂಬ ಸ್ನೇಹಿತರ ಒಟ್ಟಿಗೆ ಸ್ಥಾಪಿಸಿದರು.

ಇದರ ಬೆನ್ನಲ್ಲೇ ಮೊದಲ ದೂರದ ಬೈಕ್ ಸವಾರಿಯನ್ನು ಬೆಂಗಳೂರಿನಿಂದ ಲೇಹ್ ಗೆ(Leh) ಹಾಗೂ ಅಲ್ಲಿಂದ ವಾಪಾಸು ಬೆಂಗಳೂರಿಗೆ ಬರುವ ಯೋಜನೆಯನ್ನು ಇವರು ಕೈಗೊಂಡರು. ಒಟ್ಟು ಎಂಟು ಸಾವಿರದ ನಾಲ್ಕು ನೂರು ಕಿಲೋಮೀಟರ್ ಗಳನ್ನು ಮೂವತ್ತು ದಿನಗಳಲ್ಲಿ ಪೂರ್ಣಗೊಳಿಸಿದರು. ಈ ಸಾಧನೆಯಿಂದ ಅರ್ಚನಾ ಭಾರತದ ಮೊದಲ ಶ್ರವಣ ದೋಷವಿರುವ ಬೈಕ್ ರೈಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅರ್ಚನಾ ಅವರಿಗೆ 40% ಮಾತ್ರ ಕಿವಿ ಕೇಳುತ್ತದೆ, ಈ ನ್ಯೂನತೆ ಇವರ ಭಾಷೆಗೂ ಸ್ವಲ್ಪ ಮಟ್ಟಿಗೆ ತಡೆ ಮಾಡಲು ಶುರು ಮಾಡಿತ್ತು. ಆದರೆ ಹಿಯರಿಂಗ್ ಮೆಶಿನ್ ಸಹಾಯದಿಂದ ಸ್ವಲ್ಪ ಬೇರೆಯವರ ಮಾತು ಸ್ಪಷ್ಟವಾಗಿ ಅರ್ಥವಾಗುತ್ತಿತ್ತು ಹಾಗೂ ಇದೇ ಇವರಿಗೆ ತಮ್ಮ ಕನಸುಗಳನ್ನು ನನಸು ಮಾಡಲು ಸ್ಫೂರ್ತಿಯಾಯಿತು ಎನ್ನುತ್ತಾರೆ ಅರ್ಚನಾ.

‘ಸೈಲೆಂಟ್ ಎಕ್ಸಪೆಡಿಶನ್’ ಸಂಸ್ಥೆಯು ಅಂಗವಿಕಲ ಅಥವಾ ಶ್ರವಣ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಪ್ರವಾಸ ಹಾಗು ಇನ್ನಿತರ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಒದಗಿಸುವ ವೇದಿಕೆಯಾಗಿದೆ. ಈ ಸಂಸ್ಥೆಯು ಸಾಮಾನ್ಯ ಜನರಿಗೆ ಶ್ರವಣ ದೋಷಗಳಿರುವ ಜನರು ಎದುರಿಸುವ ಸವಾಲುಗಳು, ಸಂಕಷ್ಟಗಳ ಬಗ್ಗೆ ತಿಳಿಸಿಕೊಡುವ, ಹಾಗು ಅವರ ಆತ್ಮ ಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಎಲ್ಲರಂತೆ ಅವರನ್ನು ಸಮಾನವಾಗಿ ಕಾಣುವ ಬಗೆಗೆ ಚಿಂತನೆ ಮೂಡಿಸುವ ಉದ್ದೇಶವನ್ನು ಹೊಂದಿದೆ.

ಅರ್ಚನಾ ಅವರಿಗೆ ತಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳುವ ದಾರಿ ಬಹಳ ಕಷ್ಟಕರವಾಗಿತ್ತು. ಆದರು ಛಲ ಬಿಡದೆ ಹೊರಾಡಿ ತಮ್ಮ ಲೈಸೆನ್ಸ್ ಅನ್ನು ಪಡೆದುಕೊಂಡು ತಮ್ಮ ಈ ಅದ್ಭುತ ಪಯಣವನ್ನು ಶುರುಮಾಡಿದರು. ಇತ್ತೀಚೆಗೆ ಉತ್ತರಾಖಂಡ್ ಗೆ ಮಿಟಿಯೋರ್ ಬೈಕ್(Royal Enfield Meteor 350) ನಲ್ಲಿ ಏಳು ಸಾವಿರ ಕಿಲೋಮೀಟರ್ ದೂರ ಇಪ್ಪತ್ನಾಲ್ಕು ದಿನಗಳಲ್ಲಿ ಪ್ರಯಾಣಿಸಿದ ಇವರ ಸಾಧನೆ ಎಲ್ಲರ ಗಮನ ಸೆಳೆಯಿತು. ಒಟ್ಟು ಇಪ್ಪತ್ನಾಲ್ಕು ದಿನಗಳಲ್ಲಿ ಇಪ್ಪತ್ತು ನಗರಗಳನ್ನು ಸುತ್ತಿ ಬಂದಿದ್ದಾರೆ.

“ನನ್ನ ಪ್ರಕಾರ, ನಮ್ಮ ಅಂಗವಿಕಲತೆಯು ಬಗೆಗೆ ಯಾವತ್ತು ನಮಗೆ ಕೀಳರಿಮೆ ಇರಬಾರದು. ಅಂಗವಿಕಲರು ಹಲವು ಪ್ರತಿಭೆಗಳನ್ನು ಹಾಗೂ ಕೌಶಲ್ಯಗಳನ್ನು ಹೊಂದಿರುತ್ತಾರೆ. ಹಾಗಾಗಿ ನನಗೆ ದೃಢವಾದ ನಂಬಿಕೆ ಸಮಾನಭಾವ ಹಾಗು ಸಮಾನ ಹಕ್ಕಿನಲ್ಲಿದೆ. ಮೊದಲಿಗೆ ಹಲವರು ನನ್ನ ಈ ಯೋಜನೆಯ ಬಗ್ಗೆ ತುಂಬಾ ಕಷ್ಟ ಹಾಗು ಅಪಾಯಕಾರಿ ಎಂದೆಲ್ಲಾ ಅಭಿಪ್ರಾಯ ಪಟ್ಟರು ಆದರೆ ನನ್ನ ಈ ಯೋಜನೆಗಳು ಯಶಸ್ವಿ ಆದ ಹಾಗೆ ನನ್ನ ಕುಟುಂಬದವರು ಹಾಗು ಬಂಧುಗಳು ಪ್ರೋತ್ಸಾಹಿಸುತ್ತಿದ್ದಾರೆ” ಎನ್ನುತ್ತಾರೆ ಅರ್ಚನಾ.

ಇವರ ಪ್ರಕಾರ ಮಹಿಳೆಯರ ಸಬಲೀಕರಣದಿಂದ ಒಂದು ದೇಶದ ಆರ್ಥಿಕತೆ, ರಾಜಕಾರಣ ಹಾಗು ಸಮಾಜ ಕಲ್ಯಾಣ ಆಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಬುದ್ಧಿಶಕ್ತಿ ಹಾಗು ಮಾನಸಿಕ ಸ್ಥೈರ್ಯಗಳನ್ನು ಹೆಚ್ಚಿಸಲು ಪ್ರಯತ್ನ ಪಡಬೇಕು. ಇದರ ಜೊತೆಗೆ ಒಬ್ಬ ಟ್ರಾವೆಲರ್ ಗೆ ಕೆಲವೊಂದು ಗುಣಲಕ್ಷಣಗಳು ಎಂದರೆ ತೀಕ್ಷ್ಣ ವೀಕ್ಷಣೆ, ಕಲಿಯುವ ಹಾಗು ಅಡವಳಿಸಿಕೊಳ್ಳುವ ಕಲೆ, ಆತ್ಮ ಸ್ಥೈರ್ಯ ಹಾಗೂ ಅನುಭೂತಿಯು ಬಹಳ ಮುಖ್ಯವಾಗಿದೆ‌ ಎನ್ನುವುದು ಅರ್ಚನಾ ಅವರ  ಅಭಿಪ್ರಾಯ.

ತಮ್ಮ ಎಲ್ಲಾ ಸಮಸ್ಯೆ ಹಾಗು ಶ್ರವಣ ನ್ಯೂನತೆಯನ್ನು ಹಿಮ್ಮೆಟ್ಟಿ ಸಾಧನೆಯ ಶಿಖರವನ್ನು ಏರುತ್ತಿರುವ ಅರ್ಚನಾ, ತಮ್ಮ ದುರ್ಬಲತೆಯ ಬಗ್ಗೆ ಕೀಳರಿಮೆಯನ್ನು ಬೆಳೆಸಿಕೊಂಡು ಗುರಿಯನ್ನು ಮರೆತು ಖಿನ್ನರಾಗುವ ಎಷ್ಟೂ ಜನರಿಗೆ ಸ್ಪೂರ್ತಿ ತುಂಬಿ ಮುನ್ನಡೆಯಲು ದಾರಿ ತೋರುವ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು ಅಲ್ಲವೇ?.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

Related Articles

Leave a Reply

Your email address will not be published. Required fields are marked *

Back to top button