ಕಾಡಿನ ಕತೆಗಳುನಡಿಗೆ ನಮ್ಮ ಖುಷಿಗೆಬೆರಗಿನ ಪಯಣಿಗರುಮ್ಯಾಜಿಕ್ ತಾಣಗಳುವಿಂಗಡಿಸದ

ದೇವರ ಕಾಡಲ್ಲಿ ದಾರಿ ತಪ್ಪಿದ ಮಕ್ಕಳು

ಜಗತ್ತೆಲ್ಲಾ ಹೈ ಸ್ಪೀಡ್ ಇಂಟರ್ನೆಟ್ ಅಡಿಯಾಳಾಗಿ ಬದುಕುತ್ತಿರುವ ಈ ಕಾಲದಲ್ಲಿ, ನಾವು ದೇವರ ಕಾಡಿನ ಅದ್ಯಾವುದೋ ಭಾಗದಲ್ಲಿ ನಿಂತು ಮ್ಯಾಪು ಸರಿ ದಾರಿ ತೋರಿಸುತ್ತದೆಯೋ? ಎಂದು ತಿಣುಕಾಡುತ್ತಿದ್ದೆವು. ಆ ಕಾಡಿನಲ್ಲಿ, ಅದೂ ಈ ಪರಿಸ್ಥಿತಿಯಲ್ಲಿ ನಿಂತ ನಮಗೆ, ಮುಂದೇನು? ಎಂಬ ಚಿಂತೆ ಕಾಡುತ್ತಿತ್ತು.

  • ಸ್ಕಂದ ಪ್ರಸಾದ್

ಗಟ್ಟಿ ನಿರ್ಧಾರ ಮಾಡಿ ಅಂತು ಈ ಕಾಡಿಗೆ ಕಾಲಿಟ್ಟಿದ್ದೆವು. ಆದರೆ ಮುಂದಿನ ಹೆಜ್ಜೆ ಎಲ್ಲಿ ಇಡುವುದು ಎನ್ನುವುದು ಮಾತ್ರ ತಿಳಿಯದಂತೆ ಆಗುತ್ತಿತ್ತು. ಮ್ಯಾಪ್ ಏನೋ ಏಳುನೂರೈವತ್ತು ಮೀಟರ್ ತೋರಿಸುತ್ತಾ ಇತ್ತು. ಆದರೆ ನಮ್ಮ ಹೆಜ್ಜೆಗಳು ಸಾಗಿದಷ್ಟು ದಾರಿ ಹತ್ತಿರವಾಗುತ್ತಿಲ್ಲ ಎಂಬಂತೆ ಭಾಸವಾಗುತ್ತಿತ್ತು.

ಭಟ್ರ ಮನೆಗೆ ತಲುಪುವ ಈ ದಾರಿಯಲ್ಲಿ ಬೆತ್ತದ ರೀತಿಯ ಮುಳ್ಳಿನ ಬಳ್ಳಿಯ ಗಿಡ ಗಂಟಿಗಳು ಬೆಳೆದಿದ್ದವು. ಕಾಲು ಎಡವಿ ಬೀಳುವ ಸಂದರ್ಭದಲ್ಲಿ, ಸಹಾಯಕ್ಕಾಗಿ ಹಿಡಿದ‌ ಬಳ್ಳಿಗಳೆಲ್ಲವೂ ಮುಳ್ಳುಗಳಿಂದ ಕೂಡಿದ್ದರಿಂದ ಕೈ ಕಾಲುಗಳಿಗೂ ಮುಳ್ಳು ಗೀರಿ ಗಾಯಗಳಾದವು.

ಬೆತ್ತ ಎಂದಾಗ ನೆನಪಾಗುವುದು ಸುಬ್ರಹ್ಮಣ್ಯದ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದವರು. ವರ್ಷಕ್ಕೊಂದು ಬಾರಿ ಚಂಪಾಷಷ್ಠಿ ಬ್ರಹ್ಮರಥವನ್ನು ಕಟ್ಟಲು ಮತ್ತು ಎಳೆಯಲು ಬೇಕಾದ ಬೆತ್ತ, ಬಿದಿರು ತರಲು ಕಾಡಿಗೆ ಹೋಗಿ ನಾಲ್ಕು ದಿನ ಠಿಕಾಣಿ ಹೊಡೆದು ಸರಿಯಾದ ಬೆತ್ತವನ್ನು ಹುಡುಕಿ ತಂದು, ಸುಂದರವಾದ ರಥವನ್ನು ಯಾವುದೇ ಬಳ್ಳಿ ಬಳಸದೆ, ಬೆತ್ತದಿಂದ ನೇಯ್ದು ರಥ ಕಟ್ಟುತ್ತಾರೆ. ಈ ಕಾಡಲ್ಲಿ ಈ ಹಿಂದೆ ಜೀವನ ನಡೆಸುತಿದ್ದ ಮಲೆಕುಡಿಯ ಜನಾಂಗದವರ ಜೀವನಶೈಲಿ, ಧೈರ್ಯ ಹಾಗೂ ಸಾಹಸದ ದೃಶ್ಯಗಳು ಮಿಂಚಂತೆ ಬಂದು ಹೋಯಿತು.

ಈ ಬರ್ಬರ ಕಾಡು ಅದೆಷ್ಟು ಅಭೇದ್ಯವೆಂದರೆ ಸೂರ್ಯನ ಕಿರಣ ನೆಲ ಮುಟ್ಟುತ್ತಿರಲಿಲ್ಲ. ಕತ್ತಲು ಆವರಿಸಿದಂತಿದ್ದ ಕಾಡಲ್ಲಿ ಮ್ಯಾಪನ್ನು ನಂಬಿ ಹೊರಟ ನಮಗೆ ಅಡವಿಯಿಂದ ಹೊರಬಂದು ಹುಲ್ಲುಗಾವಲು ಪ್ರದೇಶ ತಲುಪಿದರೆ ಸಾಕಪ್ಪಾ ಎಂದೆನಿಸಿತ್ತು. ಎದ್ದು ಬಿದ್ದು ಕೊನೆಗೂ ಕಾಡಿಂದ ಹೊರಬಿದ್ದ ನಿಮಗೆ ಸೂರ್ಯನ ಕಿರಣಗಳು ಮೈಯನ್ನು ಸ್ಪರ್ಶ ವಾಯಿತು. ಅದೇನೋ ಸಾಧಿಸಿದ ಖುಷಿಯಲ್ಲಿ ಬಾಟಲಿ ತೆಗೆದರೆ ಕೊನೆಯ ಒಂದು ಗುಟುಕಿನಷ್ಟೇ ನೀರು ಇದ್ದಿದ್ದನ್ನು ಕಂಡು ಅವಾಕ್ಕಾದೆವು.

ಇನ್ನೂ ಅದೆಷ್ಟು ಸಾಗಬೇಕೋ ತಿಳಿಯದು, ಬಿರು ಬಿಸಿಲು ಬೇರೆ, ಆದಷ್ಟು ಬೇಗ ಭಟ್ರ ಮನೆ ತಲುಪಲೇಬೇಕು ಎನ್ನುವ ತವಕ ಹೆಚ್ಚಾಯಿತು. ಗೂಗಲ್ ಮ್ಯಾಪಿನ ಸಹಾಯ ಪಡೆಯಬೇಕು ನಿಜ, ಆದರೆ ಇಂತಹ ಚಾರಣಗಳಲ್ಲಿ ಅತಿಯಾಗಿ ಇದನ್ನು ನಂಬಿದರೆ ನಮ್ಮನ್ನು ಕಠಿಣ ಪರಿಸ್ಥಿತಿಗೆ ತಳ್ಳುವುದು ‌ಮಾತ್ರ ಸತ್ಯ.

ಸುಮಾರು ಒಂದಾಳೆತ್ತರಕ್ಕೆ ಬೆಳೆದು ನಿಂತಿದ್ದ ಹುಲ್ಲುಗಾವಲಲ್ಲಿ, ಮನುಷ್ಯರ ತಲೆಯಲ್ಲಿರುವ ಹೇನುಗಳಂತೆ ನಾವಿಬ್ಬರು ನಿಧಾನವಾಗಿ ಹೆಣಗಾಡುತ್ತಾ ಉತ್ತರ ದಿಕ್ಕಿನೆಡೆಗೆ ಸಾಗಿದೆವು‌. ಹಿಂದೆ ತಿರುಗಿ ನೋಡಿದರೆ ಬೆಟ್ಟಗಳ ಸಾಲು ಅದರಲ್ಲಿ ಸ್ಪಷ್ಟವಾಗಿ ಗುರುತಿಸುವಂತದ್ದು ಅತಿ ಎತ್ತರದ ಕುದುರೆಮುಖ ಶ್ರೇಣಿ, ಅದರ ಅಣತಿ ದೂರದಲ್ಲಿ ಮೂಡಿಗೆರೆ ತಾಲೂಕಿನ ಜೇನುಕಲ್ಲು ಗುಡ್ಡ, ದೀಪದ ಕಲ್ಲು. ಅದರಿಂದೀಚೆಗೆ ಚಾರ್ಮಾಡಿ ಭಾಗದ ಬೆಟ್ಟಗಳು, ಇನ್ನೂ ಬಲ ಭಾಗದಲ್ಲಿ ಬಿಸಿಲೆ ಭಾಗದ ಕನ್ನಡಿ ಕಲ್ಲು ಬಹಳ ಸಮೀಪವಿರುವಂತಿತ್ತು. ಅದೆಷ್ಟು ಸುಂದರ ನಮ್ಮ ಪಶ್ಚಿಮ ಘಟ್ಟದ ಬೆಟ್ಟದ ಸಾಲುಗಳು, ಕಣಿವೆಗಳು, ಅದರ ಮಧ್ಯದ ಶೋಲಾ ಅರಣ್ಯಗಳು.

ನೀವುಇದನ್ನುಇಷ್ಟಪಡಬಹುದುಅದ್ಭುತ ಅನುಭವಗಳ ಮೂಟೆ ದೇವರ ಕಾಡು ಚಾರಣ

ಈ ಪಶ್ಚಿಮ ಘಟ್ಟಗಳ ನಡುವೆ ಕುಕ್ಕೆ ಸುಬ್ರಹ್ಮಣ್ಯವೆಂಬ ಊರಲ್ಲಿ ಬೆಳೆದ ನಾವೇ ಧನ್ಯ. ಇನ್ನೂ ಸ್ವಲ್ಪ ಮೇಲೇರಿದಾಗ ಸ್ಪಷ್ಟವಾಗಿ ಕುಮಾರಧಾರ ನದಿಯ ಸೇತುವೆ, ಕುಕ್ಕೆ ಸುಬ್ರಹ್ಮಣ್ಯದ ಕಾಂಕ್ರೀಟ್ ರಸ್ತೆಗಳು, ಮತ್ತೂ ಸೂಕ್ಷ್ಮವಾಗಿ ಗಮನಿಸಿದಲ್ಲಿ ದೊಡ್ಡ ವಾಹನಗಳ ಓಡಾಟವೂ ಕಾಣಬಹುದು. ವೈಮಾನಿಕ ವೀಕ್ಷಣೆ ಮಾಡಿದ ಅನುಭವವಾಯಿತು.

ಮಧ್ಯಾಹ್ನವಾಗುತ್ತಿದ್ದಂತೆ ಸೂರ್ಯನ ಕಿರಣಗಳು ತೀಕ್ಷ್ಣ ವಾದವು, ಅದಾಗಲೇ ಬಸವಳಿದಿದ್ದ ನಮಗೆ ಸೂರ್ಯ ತನ್ನ ಪ್ರಲಾಪವನ್ನು ತೋರಿಸಲು ಹೊರಟಂತಿತ್ತು. ಚೆಲ್ಲಿಹೋದ ನೀರಿನ ನೆನಪಾಗಿ ಒಂದೊಂದು ಹನಿಯ ಮೌಲ್ಯದ ಅರಿವಾಯಿತು. ತಲೆ ಎತ್ತಿದರೆ ಸುತ್ತಲೂ ಆಳೆತ್ತರಕ್ಕೆ ಬೆಳೆದು ನಿಂತ ಹುಲ್ಲು, ನಡುವೆ ದಿಕ್ಕು ತಪ್ಪುವ ಸಂಭವವಿತ್ತು.

ಅನತಿ ದೂರದಲ್ಲಿದ್ದ ಬಂಡೆ ಕಲ್ಲು ಏರಿ, ಎದುರಿಗಿದ್ದ ದೊಡ್ಡ ಬೆಟ್ಟವನ್ನೇರಿದರೆ ಭಟ್ರ ಮನೆಯ ದಾರಿ ಸಿಗಬಹುದೆಂದು ಭಾವಿಸಿ ಹುಲ್ಲುಗಳೆಡೆಯಲ್ಲಿ, ಇಲ್ಲದ ದಾರಿಯಲ್ಲಿ ನಡೆದದ್ದೇ ದಾರಿ ಎಂಬಂತೆ ಮುನ್ನುಗ್ಗಿದೆವು. ಕಾಡೊಳಗಿದ್ದಾಗ, ಕಾಡು ದಾಟಿ ಹುಲ್ಲುಗಾವಲು ತಲುಪಿದರೆ ಸಾಕು ಎನ್ನುತ್ತಿದ್ದ ನಾವು, ಈಗ ಹುಲ್ಲುಗಾವಲು ದಾಟಿ ಭಟ್ರ ಮನೆ ಸಿಕ್ಕಿದರೆ ಸಾಕು ಎಂದು ಭಾವಿಸಿದೆವು. ತಮ್ಮನ ಪಾಲಿನ ಕೊನೆಯ ಪೇರಳೆ ಹಣ್ಣು ಹಂಚಿ ತಿಂದೆವು. ಬಾಟಲಿಯಲ್ಲಿದ್ದ ಕೊನೆಯ ಗುಟುಕಿನ ನೀರಲ್ಲಿ ಅರ್ಧದಷ್ಟು ಆಪತ್ಕಾಲಕ್ಕಾಗಿ ಉಳಿಸಿ ಮನಸ್ಸಿಲ್ಲದ ಮನಸ್ಸಲಿ ಮುಚ್ಚಳ ಹಾಕಿದೆವು.

ಕಾಲುದಾರಿ ಇಲ್ಲದ ಹುಲ್ಲುಗಾವಲಲ್ಲಿ ಪ್ರತಿ ಹೆಜ್ಜೆಯೂ ಅಪಾಯ, ಭಯ. ಯಾಕೆಂದರೆ ಕಾಲ ಕೆಳಗೆ ಕಲ್ಲೋ, ಗುಂಡಿಯೋ, ಹುತ್ತವೋ, ಸರೀಸೃಪಗಳೋ ಇವೆಯೋ ಇಲ್ಲವೋ ಎಂದು ತಿಳಿಯದೆ ನಡೆಯಬೇಕು. ಕಲ್ಲು ಎಡವಿ ಬಿದ್ದು ಹೊರಳಿದ್ದೂ ಆಯಿತು, ನೀರಿಲ್ಲದೆ ದೇಹ ಸುಸ್ತಾಗಿತ್ತು, ಹಸಿವಿಂದ ಹೊಟ್ಟೆ ತಾಳ ಹಾಕುತಿತ್ತು.

ಬೆಟ್ಟ ಎಷ್ಟು ಕಡಿದಾಗಿತ್ತೆಂದರೆ ಒಂದೊಂದು ಹೆಜ್ಜೆ ಸುಮಾರು 2-3 ಅಡಿಯಷ್ಟು ಎತ್ತರಕ್ಕೆ ಇಟ್ಟು ಕೈಯಿಂದ ಅಕ್ಕ ಪಕ್ಕದ ಹುಲ್ಲಿನ ಬುಡ ಹಿಡಿದು ಹತ್ತಬೇಕಿತ್ತು. ಪ್ರತಿ ಹೆಜ್ಜೆ ಕಷ್ಟವಾಯಿತು, ಶಕ್ತಿ ಒಂದೇ ಸಮನೆ ಕುಗ್ಗ ತೊಡಗಿತು, ಹೃದಯ ಬಡಿತ ಏರುತ್ತಲೇ ಇತ್ತು. ಕೊನೆಯ ಅರ್ಧ ಗುಟುಕು ನೀರಿನ ಸರಿಯಾದ ಹಂಚಿಕೆ ಮಾಡಿ ಭಟ್ರ ಮನೆಯ ದಿಕ್ಕಿಗೆ ಬೆಟ್ಟ ಹತ್ತತೊಡಗಿದೆವು. ಸುಮಾರು ಹನ್ನೆರಡು ಮೂವತ್ತರ ಸುಮಾರಿಗೆ ಬೆಟ್ಟದ ತುದಿ ತಲುಪುತ್ತಿದ್ದಂತೇ ಗಿರಿಗದ್ದೆ ಭಟ್ರ ಅಡಕೆ ತೋಟ ಕಂಡೊಡನೆ ಮನೆ ಸಮೀಪವಿರುವುದು ನಿಚ್ಚಳವಾಯಿತು. ಇಬ್ಬರ ಮುಖದಲ್ಲಿ ಸಾಧಿಸಿದ ಖುಷಿ ಇತ್ತು. ಮನೆ ತಲುಪಿದ ಖುಷಿಗೆ ನೀರು ಮರೆತೇ ಹೋಗಿತ್ತು.

ಭಟ್ರ ಮನೆಯ ಕೆಲಸದವರಿಗೆ ಬಂದ ದಾರಿಯ ಬಗ್ಗೆ ತಿಳಿಸಿದಾಗ, ಕಾಡಲ್ಲಿ ಕಳೆದು ಹೋಗದ್ದು ಪುಣ್ಯ ಎಂದು ಕಳವಳ ವ್ಯಕ್ತಪಡಿಸಿದರೆ, ಭಟ್ರು ಇದನ್ನು ಅಲ್ಲಗಳೆದು ಊರ ಹುಡುಗರಿಗೆ ದಾರಿ ತಪ್ಪಿದರೂ ಗುರಿ ತಲುಪುವ ಚಾಕಚಕ್ಯತೆ ಇರುತ್ತದೆ ಎಂದಾಗ ಸಹೋದರರ ಎದೆ ಸ್ವಲ್ಪ ಹಿಗ್ಗಿತು. ಸ್ವಲ್ಪ ಹೊತ್ತು ಕುಶಲೋಪರಿ ಮಾತಾಡಿ, ಊಟಕ್ಕೆ ಒಳ ಕರೆದು ಅನ್ನ, ಸಾಂಬಾರು, ಪಾಯಸ, ಮಾವಿನ ಮಿಡಿ ಉಪ್ಪಿನಕಾಯಿ ಚಪ್ಪರಿಸಿ ಗಡದ್ದಾಗಿ ಊಟ ಮುಗಿಸಿ ಭಟ್ರೊಂದಿಗೆ ಮಾತಿಗೆ ಕುಳಿತೆವು.

ಗಿರಿಗದ್ದೆಯಿಂದ ಭತ್ತದ ರಾಶಿ ಬೆಟ್ಟ, ಶೇಷ ಪರ್ವತ ಹಾಗೂ ಕುಮಾರ ಪರ್ವತವನ್ನು ಇಡೀ ದಿನ ಬೇಕಾದರೂ ನೋಡುತ್ತಾ ಸೌಂದರ್ಯ ಆಸ್ವಾದಿಸಬಹುದು. ಪ್ರತಿಯೊಂದು ಕಷ್ಟದ ಹೆಜ್ಜೆಗೂ ಸಾರ್ಥಕವಾಯಿತು. ಹಸಿರು ಬೆಟ್ಟಗಳಲ್ಲಿ ಹಸುಗಳ ಹಿಂಡು ಹುಲ್ಲು ಮೇಯುವುದನ್ನು ನೋಡುವಾಗ ಬೇರೆ ಯಾವುದೋ ಲೋಕಕ್ಕೆ ಹೋದ ಅನುಭವ. ಕುಮಾರ ಪರ್ವತಕ್ಕೆ ಚಾರಣ ಹೋಗುವ ದಾರಿ ಮಧ್ಯೆ ಭತ್ತದ ರಾಶಿ ಬೆಟ್ಟದ ಮೇಲೆ ಕಪ್ಪಗಿನ ಬಣ್ಣ ಮನೆ ಹೊರಗೆ ನಿಂತು ನೋಡಿದಾಗ ಗೋಚರಿಸಿತು, ಅದರ ಬಗ್ಗೆ ಕೇಳಿದಾಗ ಭಟ್ರ ಉತ್ತರ ನಿಬ್ಬೆರಗಾಗಿಸಿತು.

ಒಂದು ವಾರದ ಹಿಂದೆ ದೊಡ್ಡ ಸಿಡಿಲೊಂದು ಬೆಟ್ಟಕ್ಕೆ ಅಪ್ಪಳಿಸಿ ಬೆಟ್ಟದ ಹುಲ್ಲು, ಮಣ್ಣು, ಕಲ್ಲು ಸುಟ್ಟು ಕರಕಲಾಗಿತ್ತು. ಯಾರಾದರೂ ಕುಮಾರ ಪರ್ವತ ಚಾರಣಕ್ಕೆ ಬಂದವರು ಬೆಟ್ಟದ ಮೇಲಿದ್ದರೆ ಸುಟ್ಟು ಬೂದಿಯಾಗುತ್ತಿದ್ದರು ಎಂದಾಗ ಮಳೆಗಾಲದ ಚಾರಣದ ಕರಾಳ ಸತ್ಯಗಳು ಬೆವರಿಳಿಸಿತ್ತು.ಅದಕ್ಕಾಗಿಯೇ ಅರಣ್ಯ ಇಲಾಖೆಯು ಪ್ರತಿವರ್ಷ ಮಳೆಗಾಲದಲ್ಲಿ ಚಾರಣ ನಿಷಿದ್ಧಗೊಳಿಸುತ್ತದೆ.

ಬೆಟ್ಟದಲ್ಲಿ ಕಬ್ಬಿಣ ಹಾಗೂ ಇತರ ಖನಿಜ ಅಂಶಗಳು ಹೆಚ್ಚಿರುವುದರಿಂದ ಸಿಡಿಲು ಬಡಿಯುವ ಸಾಧ್ಯತೆ ಜಾಸ್ತಿ ಎಂದರು‌. ಆ ದಿನ ಮಳೆ ಬಂದದ್ದರಿಂದ ಬೆಟ್ಟ ಉಳಿಯಿತು ಇಲ್ಲದಿದ್ದರೆ ಸಾಲು ಸಾಲು ಬೆಟ್ಟಗಳು ಸುಟ್ಟು ಕರಕಲಾಗುತ್ತಿತ್ತು ಎಂದರು. ಬಾಟಲಿಗಳಿಗೆ ನೀರು ತುಂಬಿಸಿ, ಅವರ ಸತ್ಕಾರಕ್ಕೆ ಧನ್ಯವಾದ ತಿಳಿಸಿ ಸರಿಯಾದ ಕಾಲುದಾರಿಯಲ್ಲಿ ಸುಬ್ರಹ್ಮಣ್ಯ ತಲುಪಿದೆವು. ದಾರಿಯುದ್ದಕ್ಕೂ ಬೆಳಗಿನ ದಾರಿ ಅನ್ವೇಷಣೆಯ ರೋಚಕತೆಯನ್ನು ಮೆಲುಕು ಹಾಕುತ್ತಾ 100 ನಿಮಿಷಗಳಲ್ಲಿ ಮನೆ ತಲುಪಿದ್ದೇ ತಿಳಿಯಲಿಲ್ಲ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button