ಬೆಂಗಳೂರಿನಲ್ಲಿ ಭಾರತದ ಪ್ರಥಮ ಸುರಂಗ ಅಕ್ವೇರಿಯಂ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಭಾರತದ ಮೊಟ್ಟ ಮೊದಲ ಸುರಂಗ ಅಕ್ವೇರಿಯಂ ನಿರ್ಮಾಣವಾಗಿದೆ. ಸಮುದ್ರ ಜೀವನದ ಸುಂದರ ನೋಟವನ್ನು ಪ್ರಯಾಣಿಕರು ಇನ್ನುಮುಂದೆ ಇಲ್ಲಿ ಕಣ್ತುಂಬಿಸಿಕೊಳ್ಳಬಹುದು.
- ಚೈತ್ರಾ ರಾವ್ ಉಡುಪಿ
ಇದು ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮದಿಂದ ವಿನೂತನ ಪ್ರಯತ್ನವಾಗಿದೆ. ರೈಲ್ವೇ ನಿಲ್ದಾಣದ ಸಮೀಪದಲ್ಲೇ ೨೦೨೧ರ ಜುಲೈ ೧ರಂದು ಈ ಸುರಂಗ ಅಕ್ವೇರಿಯಂನ್ನು ಉದ್ಘಾಟನೆ ಮಾಡಲಾಯಿತು. “ಅಕ್ವಾಟಿಕ್ ಕಿಂಗ್ಡಂ” ಎಂದು ಈ ಸುರಂಗ ಅಕ್ವೇರಿಯಂಗೆ ನಾಮಕರಣ ಮಾಡಲಾಗಿದೆ.
ಈ ಸುರಂಗ ಅಕ್ವೇರಿಯಂನಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಆಯಾಸ ಹಾಗು ದಣಿವು ತೀರಿಸಿಕೊಳ್ಳಲು ಇನ್ನುಮುಂದೆ ಟನಲ್ ಅಕ್ವೇರಿಯಂ ಒಳಗೆ ಪ್ರವೇಶಿಸಿ ಆಹ್ಲಾದಕರ ಅನುಭವವನ್ನು ಪಡೆದುಕೊಳ್ಳಬಹುದು. ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ಟನಲ್ ಅಕ್ವೇರಿಯಂ ನೋಡಲು ಬರುತ್ತಿದ್ದಾರೆ.
ಏನೆಲ್ಲ ವಿಶೇಷತೆ ಇದೆ?
12 ಅಡಿ ಉದ್ದದ ಪಲುಡೇರಿಯಂನಲ್ಲಿ ಅಮೇಜಾನ್ ಕಾಡು ನಿರ್ಮಾಣ ಮಾಡಲಾಗಿದೆ. ಈ ಅಮೇಜಾನ್ ಕಾಡಿನ ಜಲ ಸಸ್ಯದ ದೃಶ್ಯ ನೋಡುತ್ತಿದ್ದಂತೆ ಮೈರೋಮಾಂಚನವಾಗುತ್ತದೆ. ಅಷ್ಟು ಅದ್ಭುತವಾಗಿ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ.
ಸುರಂಗದ ಗಾಜಿನ ಒಳಗಡೆ ವಿವಿಧ ಮೀನುಗಳು ಓಡಾಡುವುದನ್ನು ನೋಡಬಹುದು. ನಮ್ಮ ಸುತ್ತಲೂ ತಿಳಿ ನೀರಿನಲ್ಲಿ ಮೀನುಗಳು ಓಡಾಡುವುದು ಮನಸ್ಸಿಗೆ ಮುದನೀಡುತ್ತದೆ. ಅದಕ್ಕೆ ತಕ್ಕಂತೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಗಾಜಿನ ಟನಲ್ ಹೊರತುಪಡಿಸಿ ಇತರ ಅಕ್ವೇರಿಯಂಗಳಲ್ಲಿ ಆಕರ್ಷಕವಾಗಿ ದೇಶ-ವಿದೇಶದ ಮೀನುಗಳನ್ನು ಪ್ರದರ್ಶನಕ್ಕಾಗಿ ಇಡಲಾಗಿದೆ.
ಪರೋಟ ಮೀನು, ಓಸ್ಕಾರ್ ಫಿಶ್, ಜ್ಯುವೆಲ್ ಫಿಶ್, ಹಸಿರು ಭಯೋತ್ಪಾದನೆ, ಗೌರಮಿ, ಅಲ್ಬಿನೋ ಓಸ್ಕಾರ್, ರೆಡ್ ಟೇಲ್ ಕ್ಯಾಟ್ ಫಿಶ್, ಹಸಿರು ಬಿಚರ್, ರೆಡ್ ಕ್ಯಾಪ್ ಒರಾಂಡಾ, ಬಬಲ್ ಐ ಗೋಲ್ಡ್, ರ್ಯುಕಿನ್ ಗೋಲ್ಡ್, ಕಪ್ಪು ಮೂರ್, ಫ್ಯಾನ್ ಬಾಲ, ಶಂಬುಕ, ಮೂರಿಶ್ ಐಡಾಲ್ ಹೀಗೆ ಇನ್ನು ವಿವಿಧ ಬಗೆಯ ಮೀನಿನ ಸಾಮ್ರಾಜ್ಯವನ್ನೇ ಈ ಸುರಂಗ ಅಕ್ವೇರಿಯಂನಲ್ಲಿ ನೋಡಬಹುದು.
ನೀವುಇದನ್ನುಇಷ್ಟಪಡಬಹುದು: ಬೆಂಗಳೂರಿನ ಮಲ್ಲೇಶ್ವರಂನ ಚಂದ ನೋಡಿ: ಬಣ್ಣಬಣ್ಣದ ಕತೆ ಹೇಳಿವೆ ಗೋಡೆ ಚಿತ್ತಾರಗಳು
ವಿಭಿನ್ನ ಶೈಲಿಯಲ್ಲಿ ಬಣ್ಣಬಣ್ಣದ ಗಿಡಗಳನ್ನು ಇಟ್ಟು, ಚಿತ್ರಗಳನ್ನು ಅಳವಡಿಸಿಕೊಂಡು, ಕಲರ್ಫುಲ್ ಲೈಟಿಂಗ್ಗಳನ್ನು ಬಳಸಿಕೊಂಡು ಜನರನ್ನು ಆಕರ್ಷಿಸುವಲ್ಲಿ ಕೆಎಸ್ಆರ್ ರೈಲುನಿಲ್ದಾಣದಲ್ಲಿ ನಿರ್ಮಿಸಲಾದ ಈ ಸುರಂಗ ಅಕ್ವೇರಿಯಂ ಯಶಸ್ವಿಯಾಗಿದೆ.
ಸೆಲ್ಫಿ ಪಾಯಿಂಟ್ಗಳನ್ನು ಇಡಲಾಗಿದೆ
ಈ ಸುರಂಗ ಅಕ್ವೇರಿಯಂ ನೋಡಲು ಬಂದ ಪ್ರಯಾಣಿಕರಿಗೆ ಆಮೆ, ಏಡಿ, ಸ್ಟಾರ್ ಫಿಶ್ ಹೀಗೆ ಅನೇಕ ಜಾತಿಯ ಜಲಚರಗಳನ್ನು ಸೆಲ್ಫಿ ಪಾಯಿಂಟ್ಗಳನ್ನಾಗಿ ಮಾಡಲಾಗಿದೆ. ಈ ಸೆಲ್ಫಿ ಪಾಯಿಂಟ್ 3ಡಿ ಚಿತ್ರಗಳಾಗಿವೆ. ಹಾಗಾಗಿ ಜನರು ಈ ಅಕ್ವೇರಿಯಂ ವೀಕ್ಷಣೆ ಸಂದರ್ಭದಲ್ಲಿ ದೈತ್ಯಾಕಾರದ ಜಲಚರಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ.
ಸುರಂಗ ಅಕ್ವೇರಿಯಂ ವೀಕ್ಷಿಸಲು ಮುಂಜಾನೆ 9.00ರಿಂದ ರಾತ್ರಿ 9.00ರವರೆಗೆ ಸಮಯ ನಿಗದಿಪಡಿಸಲಾಗಿದೆ. ಹಾಗೆ ಪ್ರವೇಶದ ದರ 25/-ರೂ ನಿಗದಿಮಾಡಲಾಗಿದೆ. ಕೊರೋನಾ ಮುಂಜಾಗೃತ ಕ್ರಮವಾಗಿ ಒಂದು ಬಾರಿಗೆ ಕೇವಲ 25 ಜನರನ್ನು ಬಿಡಲಾಗುತ್ತದೆ. ಮಾಸ್ಕ್ ಕಡ್ಡಾಯ ಮತ್ತು ಪ್ರವೇಶಿಸುವ ಸಂದರ್ಭ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು.
ಈ ಪರಿಕಲ್ಪನೆ ಹುಟ್ಟಿಕೊಂಡ ಬಗೆ
ಎಚ್.ಎ.ಐ ವ್ಯವಸ್ಥಾಪಕ ಪಾಲುದಾರ ಸೈಯದ್ ಹಮೀದ್ ಹಸನ್ ಸುಮಾರು ಮೂರು ವರ್ಷಗಳಿಂದ ಮೀನುಗಾರಿಕಾ ಇಲಾಖೆಯ ಮತ್ಸ್ಯಮೇಳದಲ್ಲಿ ಭಾಗವಹಿಸುತ್ತಿದ್ದರು. ಹಾಗೇ ಮೈಸೂರು ದಸರಾ ಸಮಯದಲ್ಲಿ ಈ ರೀತಿಯ ಪ್ರದರ್ಶನವನ್ನು ನೀಡಿದ್ದರು. ಹಾಗಾಗಿ ಬೆಂಗಳೂರಿನಲ್ಲೊಂದು ಹೊಸದನ್ನು ಪ್ರಯತ್ನಿಸಬೇಕೆಂದು ಈ ರೀತಿಯ ಯೋಜನೆಯನ್ನು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಅದ್ಭುತವಾದ ಅಕ್ವಾಟಿಕ್ ಕಿಂಗ್ ಡಮ್ ನಿರ್ಮಿಸಲಾಗಿದೆ.
ಪ್ರಯಾಣಿಕರು ಮಾತ್ರವಲ್ಲದೆ ಇತರರು ಈ ಸುರಂಗ ಅಕ್ವೇರಿಯಂನ್ನು ನೋಡಲು ಬರಬಹುದು. ಇಲ್ಲಿನ ಎಲ್ಲಾ ಅಕ್ವೇರಿಯಂಗಳಲ್ಲಿ ಇರುವ ಮೀನುಗಳನ್ನು ನೋಡುತ್ತಾ ಹೋದಂತೆ ಮನಸ್ಸಿನಲ್ಲಿ ನೆಮ್ಮದಿಯ ಭಾವ ಮೂಡುತ್ತದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ