ಬಣ್ಣದ ಸ್ಟುಡಿಯೋವಿಂಗಡಿಸದಸ್ಫೂರ್ತಿ ಗಾಥೆ

ಫೋಟೋಗ್ರಫಿಯಿಂದಲೇ ಬದುಕು ಬದಲಿಸಿಕೊಂಡ ಶೈನ್ ರಾಘು: ಇವರ ಡ್ರೋನ್ ಶಾಟ್ ಗಳನ್ನು ಸಿನಿಮಾದಲ್ಲಿ ನೀವು ನೋಡಿರಬಹುದು

ಯಾರ ಬದುಕನ್ನು ಯಾರು ಬದಲಿಸುತ್ತಾರೆ ಅನ್ನುವುದು ಸುಲಭಕ್ಕೆ ಗೊತ್ತಾಗುವುದಿಲ್ಲ. ದಕ್ಷಿಣ ಕನ್ನಡ ಬೆಳ್ತಂಗಡಿಯ ರಾಘವೇಂದ್ರ ಬಡ ಕುಟುಂಬದಿಂದ ಬಂದವರು. ಸಣ್ಣ ಕೆಲಸ ಮಾಡುತ್ತಿದ್ದವರನ್ನು ಸೆಳೆದಿದ್ದು ಕ್ಯಾಮೆರಾ. ಒನ್ ಫೈನ್ ಡೇ ಕ್ಯಾಮೆರಾ ಅವರ ಬದುಕನ್ನು ಬದಲಿಸಿತು. ರಾಘವೇಂದ್ರ ಶೈನ್ ರಾಘು ಆಗಿ ಜನಪ್ರಿಯರಾದರು. ಆ ಯಶಸ್ಸಿನ ಕತೆ ಇದು.

  • ನವ್ಯಶ್ರೀ ಶೆಟ್ಟಿ
Shine Raghu Photography

ಜೀವನದ ಸುಂದರ ಕ್ಷಣಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದು ಇಟ್ಟುಕೊಳ್ಳುವುದು ಎಲ್ಲರಿಗೂ ಇಷ್ಟ. ನಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವ ಹಾಗೆ ಮಾಡುವ ಒಬ್ಬ ಫೋಟೋಗ್ರಾಫರ್ ಆದರೂ ನಮ್ಮ ಮನಸ್ಸಲ್ಲಿ ಸದಾ ಇರುತ್ತಾರೆ. 

Shine Raghu Photography

ಎಲ್ಲರನ್ನೂ ನಗಿಸುವ ಟ್ಯಾಲೆಂಟ್ ಇರುವವರು ಫೋಟೋಗ್ರಾಫರ್ ಮಾತ್ರ ಎನ್ನುವ ಮಾತು ಕೂಡ ಇದೆ. ತನ್ನಲ್ಲಿ ಎಷ್ಟೇ ಕಷ್ಟಗಳು ಇದ್ದರೂ ಇತರರ ಚಂದದ ಫೋಟೋ ತೆಗೆಯುವ ಕೆಲಸ ಮಾಡುತ್ತಾ, ಅದರಲ್ಲಿ ತನ್ನ ಖುಷಿಯನ್ನು ಕಾಣುವವರು ಛಾಯಾಗ್ರಾಹಕರು. ಹಾಗೆ ಇನ್ನೊಬ್ಬರಿಗೆ ಖುಷಿ ಕೊಡುವ ಕೆಲಸ ಎಲ್ಲರಿಗೂ ಒಲಿಯುವುದಿಲ್ಲ. ಒಲಿದರೆ ಮಾತ್ರ ಅವರು ಗುಂಪಿನಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಅಂಥಾ ಒಂದು ಭಿನ್ನ ವ್ಯಕ್ತಿತ್ವ ರಾಘವೇಂದ್ರ.

ಸೊನ್ನೆಯಿಂದ ಶುರು

ರಾಘವೇಂದ್ರ ಮೂಲತಃ ಮಂಗಳೂರಿನ ಬೆಳ್ತಂಗಡಿಯವರು.(belthangady) ಬಡ ಕುಟುಂಬದ ಹುಡುಗ. ಸಂತೋಷದಿಂದ ಹಾಗೂ ಹೀಗೂ ವಿದ್ಯಾಭ್ಯಾಸ ಪೂರೈಸಿದರು. ಬಡತನದಿಂದ ಹೆಚ್ಚಿನ ಓದು ಮುಂದುವರೆಸಲು ಆಗಲಿಲ್ಲ. ನಂತರ ತಿಂಗಳಿಗೆ 5000 ರೂಪಾಯಿ ಸಂಬಳ ಸಿಗುವ ಸಣ್ಣ ಕೆಲಸಕ್ಕೆ ಸೇರಿದರು. ಅದರಿಂದ ಅವರ ಕುಟುಂಬವನ್ನೂ ನೋಡಿಕೊಳ್ಳಬೇಕಿತ್ತು. ದಿನ ಸಾಗುತ್ತಿತ್ತು. ಹಗಲು ಕತ್ತಲಾಗಿ, ರಾತ್ರಿ ಹಗಲಾಗುತ್ತಿತ್ತು. ಆದರೆ ರಾಘವೇಂದ್ರ ಸುಮ್ಮನೆ ಇರಲಿಲ್ಲ. ಕನಸು ಕಾಣುತ್ತಿದ್ದರು.

ತನ್ನ ಕೆಲಸಕ್ಕೆ ಗುಡ್ ಬೈ ಹೇಳಿ ಏನಾದರೂ ಸಾಧಿಸಬೇಕು, ಇನ್ನೊಬ್ಬರ ಕೈ ಕೆಳಗಡೆ ದುಡಿಯುವ ಬದಲು ತನ್ನ ಸ್ವಂತ ಉದ್ಯೋಗ ಮಾಡಬೇಕು ಎಂದು ಆಸೆ ಪಡುತ್ತಿದ್ದರು. ಆಗ ಅವರನ್ನು ತನ್ನೆಡೆಗೆ ಕೈ ಬೀಸಿ ಕರೆದಿದ್ದು ಕ್ಯಾಮೆರಾ. 

Shine Raghu Photography

ರಾಘವೇಂದ್ರ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಫೋಟೋಗ್ರಫಿ(Photography) ಬಗ್ಗೆ ಆಸಕ್ತಿ. ಅದರಿಂದಲೇ ಕ್ಯಾಮೆರಾ ಅವರ ಕೈ ಬಿಡಲಿಲ್ಲ. ರಾಘವೇಂದ್ರ ಕ್ಯಾಮೆರಾ ಹಿಡಿದಷ್ಟು ಹೊತ್ತು ಕ್ಯಾಮೆರಾ ಅವರಿಗೆ ಒಲಿಯಿತು. ರಾಘವೇಂದ್ರ ಫೋಟೋಗ್ರಫಿ ಕಲಿತರು. ಆದರೆ ಕ್ಯಾಮೆರಾ(Camera) ಕೊಳ್ಳಲು ಹಣ ಇರಲಿಲ್ಲ. ಅಣ್ಣನ ಬಳಿ ಮಾತನಾಡಿದರು. ಅವರಿಂದ ಹಣಕಾಸಿನ ನೆರವು ಪಡೆದರು. ಆದರೂ ದುಡ್ಡು ಸಾಕಾಗಲಿಲ್ಲ. ಚಿನ್ನ ಗಿರವಿ ಇಟ್ಟು ಕ್ಯಾಮೆರಾ ಖರೀದಿಸಿ ಒನ್ ಫೈನ್ ಡೇ ತಮ್ಮ ಕನಸಿನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿಯೇ ಬಿಟ್ಟರು.

ಸ್ನೇಹ ವಿದ್ಯೆ ಕಲಿಸಿತು 

ಫೋಟೋಗ್ರಫಿ ಕ್ಷೇತ್ರಕ್ಕೆ ಬಂದ ನಂತರ ಅನೇಕ ಗೆಳೆಯರು ಬೆನ್ನಿಗೆ ನಿಂತರು. ಪ್ರೋತ್ಸಾಹಿಸಿದರು. ಅದನ್ನು ರಾಘು ಈಗಲೂ ನೆನೆಸಿಕೊಳ್ಳುತ್ತಾರೆ. ಛಾಯಾಗ್ರಹಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಫೋಕಸ್ ರಾಘು,(Focus Raghu) ಅಪುಲ್ ಆಳ್ವ(Apul alva Photography) ಇತರರು ಈ ಕ್ಷೇತ್ರದಲ್ಲಿ ತನಗೆ ಸ್ಫೂರ್ತಿ ಎನ್ನುತ್ತಾರೆ ರಾಘು. ಅಪುಲ್ ಆಳ್ವ ಹಾಗೂ ವಿವೇಕ ಗೌಡ ಅವರು ಫೋಟೋಗ್ರಫಿಯಲ್ಲಿ ಸಾಕಷ್ಟು ಕಲಿಸಿಕೊಟ್ಟಿದಾರೆ ಎನ್ನುತ್ತಾರೆ ರಾಘವೇಂದ್ರ.  

ನೀವು ಇದನ್ನು ಇಷ್ಟಪಡಬಹುದು: ಉಡುಪಿಯ ಖ್ಯಾತ ಛಾಯಾಗ್ರಾಹಕ ಫೋಕಸ್ ರಾಘು ಸ್ಫೂರ್ತಿ ಕತೆ: ಬಣ್ಣದ ಸ್ಟುಡಿಯೋ

Shine Raghu Photography

ರಾಘು ಫೋಟೋಗ್ರಫಿಯಲ್ಲಿ ಕೋರ್ಸ್ ಕೂಡ ಪಡೆದವರಲ್ಲ. ಆದರೆ ಯಾರಿಗೂ ಕಮ್ಮಿ ಇಲ್ಲದಂತೆ ಫೋಟೋಗ್ರಫಿಯಲ್ಲಿ ತನ್ನ ಕೈಚಳಕ ತೋರಿಸುತ್ತಿದ್ದಾರೆ. ಅವರ ಫೋಟೋಗಳು ಜನ ಪ್ರೀತಿ ಗಳಿಸಿವೆ. ಅದರಿಂದಲೇ 6-7 ವರ್ಷಗಳಲ್ಲೇ ಅವರ ಸ್ಟುಡಿಯೋ ಸಾವಿರಾರು ಮಂದಿಯ ಕಣ್ಣಿಗೆ ಬಿದ್ದಿದೆ ಮತ್ತು ರಾಘವೇಂದ್ರ ಈಗ ಶೈನ್ ರಾಘು ಆಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ನಾನು ಇನ್ನು ಕಲಿಯುತ್ತಿದ್ದೇನೆ ಅಷ್ಟೆ ಎನ್ನುವ ಇವರ ಮಾತು ಇವರ ಸರಳತೆಯನ್ನು ತೋರಿಸುತ್ತದೆ. ತನ್ನ ಡ್ರೋನ್ ಶೂಟ್ ಮೂಲಕ ಮಂಗಳೂರಿನಲ್ಲಿ ಪ್ರಸಿದ್ದಿ ಪಡೆದಿರುವ ಇವರು ಸಿನಿಮಾ ಕ್ಷೇತ್ರದಲ್ಲಿ ಕೂಡ ಛಾಪು ಮೂಡಿಸಿದ್ದಾರೆ. ತುಳುವಿನ ಇಂಗ್ಲಿಷ್ ಸಿನಿಮಾ(English movie) ಸೇರಿದಂತೆ ಬೇರೆ ಬೇರೆ ಭಾಷೆಯ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರ ಡ್ರೋನ್(Drone) ಶಾಟ್ ಗಳು ಬಳಕೆಯಾಗಿವೆ ಅನ್ನುವುದು ಶೈನ್ ರಾಘು ಹೆಗ್ಗಳಿಕೆ.

Shine Raghu Photography

ರಾಘು ಅವರ ಪ್ರತೀ ಹೆಜ್ಜೆಗೂ ಜೊತೆಯಾಗಿದ್ದು, ಉತ್ಸಾಹ ತುಂಬಿದ್ದು ಅವರ ಪತ್ನಿ ವೀಕ್ಷೀತಾ. ಆರಂಭದಲ್ಲಿ ಫೋಟೋಗ್ರಾಫರ್ ಎನ್ನುವ ಕಾರಣಕ್ಕೆ ಅನೇಕರು ಮೂದಲಿಸಿದ್ದರು. ಆಗೆಲ್ಲಾ ರಾಘು ಬೇಜಾರಾಗುತ್ತಿದ್ದರು. ಹಾಗಂತ ಸುಮ್ಮನೆ ಕೂರಲಿಲ್ಲ. ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಫೋಟೋ ತೆಗೆದರು. ತನ್ನ ಪ್ರತಿಭೆ ಅನಾವರಣ ಮಾಡಿ ಫೋಟೋಗ್ರಫಿ ಕ್ಷೇತ್ರದ ಸಾಧಕನಾಗಿ ನಿಂತಿದ್ದಾರೆ. ಝೀರೋದಿಂದ ಹೀರೋ ಆಗಿದ್ದಾರೆ. ಅವರ ಈ ಪಯಣ ಅನೇಕರಿಗೆ ಸ್ಫೂರ್ತಿಯಾಗಿದೆ. 

ರಾಘು ಕಿವಿಮಾತು

  1. ಛಾಯಾಗ್ರಾಹಕರಿಗೆ ಮೊದಲು ತಾಳ್ಮೆ ಇರಬೇಕು. ಫೋಟೋ ತೆಗೆಯಲು ನಿಸರ್ಗವೇ ಸುಂದರ ತಾಣ. 
  2. ಫೋಟೋಗ್ರಫಿಯ ಬೇರೆ ಬೇರೆ ವಿಧಾನದಲ್ಲಿ ಫೋಟೋ ತೆಗೆಯುವುದನ್ನು ಕಲಿತು ಅದರಲ್ಲಿ ಇನ್ನೂ ಹೆಚ್ಚು ಯಶಸ್ಸು ಪಡೆಯಬೇಕು.
Shine Raghu Photography

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button