ವಿಸ್ಮಯ ವಿಶ್ವಸ್ಮರಣೀಯ ಜಾಗ

ನಮ್ ತೇಜಸ್ವಿ ಮನೆ ಹೀಗಿದೆ ನೋಡಿ: ನಂದೀಶ್ ಬಂಕೇನಹಳ್ಳಿ ಬರೆದ ಮೊದಲ ಭೇಟಿಯ ಬರಹ

ನಂದೀಶ್ ಬಂಕೇನಹಳ್ಳಿ ಯುವ ಕತೆಗಾರ, ಪತ್ರಕರ್ತ. ಕೊಟ್ಟಿಗೆಹಾರ, ಮೂಡಿಗೆರೆಯನ್ನು ವಿಸ್ಮಯದ ಕಣ್ಣುಗಳಿಂದ ನೋಡುತ್ತಾ ಬರೆಯುತ್ತಾ ಬರುತ್ತಿರುವ ಉದಯೋನ್ಮುಖ ಬರಹಗಾರ.   

ನಂದೀಶ್ ಬಂಕೇನಹಳ್ಳಿ

ಅದು 2008ನೇ ಇಸವಿ. ತೇಜಸ್ವಿ ಅವರು ನಮ್ಮನ್ನೆಲ್ಲಾ ಅಗಲಿ ಒಂದು ವರ್ಷ ಆಗಿತ್ತು. ತೇಜಸ್ವಿ ಅವರ ಜುಗಾರಿ ಕ್ರಾಸ್ ಓದಿ ಮುಗಿಸಿದವನಿಗೆ ತೇಜಸ್ವಿ ಮನೆ ನಿರುತ್ತರಕ್ಕೆ ಹೋಗಿ ಬರಬೇಕು ಅನಿಸಿತ್ತು. ಆದರೆ ಹೋಗಲು ಏನದರೂ ಒಂದು ಕಾರಣ ಬೇಕಲ್ಲ. ಪುಸ್ತಕ ಬೇಕು ಎಂಬ ನೆಪದಲ್ಲಿ ತೇಜಸ್ವಿ ಮನೆಗೆ ಹೋಗುವುದು ಎಂದುಕೊಂಡೆ. ತೇಜಸ್ವಿ ಅವರೇ ಆರಂಭಿಸಿದ್ದ ಪುಸ್ತಕ ಪ್ರಕಾಶನದ ಮೂಲಕ ಬುಕ್ ಪೋಸ್ಟ್ ಸೇವೆ ಇತ್ತು ಆಗ. ಈಗಲೂ ಇದೆ. ಪುಸ್ತಕ ಪ್ರಕಾಶನದ ಮೂಲಕ ಪೋಸ್ಟ್ ನಲ್ಲಿ ಪುಸ್ತಕ ತರಿಸುವ ಅವಕಾಶ ಇತ್ತು. ಆದರೂ ಪುಸ್ತಕ ತೆಗೆದುಕೊಳ್ಳುವ ಕಾರಣದಲ್ಲಿ ನಿರುತ್ತರಕ್ಕೆ‌ ಹೊರಟೆ. 

ಮೂಡಿಗೆರೆ ಹ್ಯಾಂಡ್ ಪೋಸ್ಟ್ ದಾಟಿ ಭೈರಾಪುರ ಕಡೆಗೆ ಹೋಗುರ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿದ ನಂತರ ನಿರುತ್ತರದ ಹಳದಿ ಗೇಟು ಕಾಣಿಸಿತು.

ಅಕ್ಷಯ ಬೆರಗಿನ ವಿಸ್ಮಯದ ತವರು ಮನೆಯಂತಿದ್ದ ನಿರುತ್ತರದ ಹಾದಿಯಲ್ಲಿ ನಡೆಯತೊಡಗಿದೆ‌. ತೇಜಸ್ವಿ ಈ ದಾರಿಯಲ್ಲಿ‌ ನಡೆದ ಹಾದಿ ಇದು ಎನಿಸಿ ರೋಮಾಂಚನ ಎನಿಸಿತು. ಕಾಲುಹಾದಿ ಇಕ್ಕೆಲದಲ್ಲಿ ಕಾಫಿ ತೋಟ, ತೋಟದ ಅಕ್ಷಯ ಎಲೆಗಳ ನಡುವೆ ಹಕ್ಕಿಗಳ ಹಾಡು, ನೆತ್ತಿಯಲ್ಲಿ ಸ್ವಚ್ಛಂದವಾಗಿ ತೇಲುವ ತುಂಡುಮೋಡಗಳು ಹಿನ್ನಲೆಯಲ್ಲಿ ನೀಲಿ ನೀಲಿ ಆಕಾಶ. ಸ್ವಲ್ಪ ದೂರ ಸಾಗಿ ತಿರುವು ದಾಟಿ ಮುಂದೆ ಸಾಗಿದೆ. ಅಲ್ಲಿ ಎದುರಾಯಿತು ಆ ಮನೆ. ಕರ್ವಾಲೊ, ಮಾಯಾಲೋಕ ಮುಂತಾದ ಕೃತಿಗಳ ಮೂಲಕ‌ ನನ್ನ ಭಾವಕೋಶವನ್ನು ವಿಸ್ತರಿಸಿದ, ಅರಿವಿಗೊಂದು ಹೊಸ ವ್ಯಾಖ್ಯಾನ ಬರೆದ ಆ ಮಾಯಗಾರ ಬದುಕಿ ಬಾಳಿದ ಆ ಮನೆ. ಸುತ್ತ ಹಸಿರು, ಗಿಡದಲ್ಲಿ ತೊನೆದಾಡೋ ಹೂರಾಶಿ, ಹಕ್ಕಿಗಳ‌ ಚಿಲಿಪಿಲಿ. ಮೇಲೆ ಅಕ್ಷಯ ನೀಲಿ. 

ನೀವು ಇದನ್ನು ಇಷ್ಟಪಡಬಹುದು: ಜಗತ್ತಿನಲ್ಲಿ 195 ದೇಶಗಳಲ್ಲಿ 186 ದೇಶ ಸುತ್ತಿ ಬಂದಿರುವ ರವಿ ಪ್ರಭು

ರೋಮಾಂಚನ, ಉದ್ವೇಗ, ಏನೇನೋ‌ ಮಿಶ್ರಣದ ಭಾವದೊಂದಿಗೆ ನಿರುತ್ತರದ ಮನೆಯ ಕಾಲಿಂಗ್ ಬೆಲ್ ಒತ್ತಿದೆ. ರಾಜೇಶ್ವರಿ ತೇಜಸ್ವಿ ಮೇಡಂ ಬಾಗಿಲು ತೆರೆದರು. 

ಅದು ನನ್ನ ಮೊದಲ ಭೇಟಿ. ಒಳಗೆ ಕುಳಿತು ಕೊಳ್ಳಲು ಹೇಳಿ ಎಲ್ಲಿಯವರು? ಏನು ವಿಷಯ ಎಂದೆಲ್ಲಾ‌ ವಿಚಾರಿಸಿದರು. ತೇಜಸ್ವಿ ಅವರ ‘ಅಲೆಮಾರಿಯ ಅಂಡಮಾನ್ ಮತ್ತು ನೈಲ್ ನದಿ’ ಪುಸ್ತಕ ಬೇಕು ಎಂದೆ. ಮನೆಯೊಳಗೆ ಹೋದವರು ಕರ್ಜೂರದ ಹಣ್ಣನ್ನು ಕೊಟ್ಟರು. ನಂತರ ಮನೆಯ ಪಕ್ಕದಲ್ಲಿದ್ದ ಪುಸ್ತಕದ ಕೊಠಡಿಗೆ ಹೋಗಿ ಅಲೆಮಾರಿಯ ಅಂಡಮಾನ್ ಮತ್ತು ನೈಲ್ ನದಿ ಪುಸ್ತಕ ಕೊಟ್ಟರು. 

ಕುವೆಂಪು ಅವರ ಪುಸ್ತಕಗಳು ಅಲ್ಲಿದ್ದರಿಂದ ‘ನೆನಪಿನ ದೋಣಿಯಲ್ಲಿ’ ಕುವೆಂಪು ಆತ್ಮಕಥೆಯ ಪುಸ್ತಕವನ್ನು ಕೊಂಡೆ. ರಾಜೇಶ್ವರಿ ತೇಜಸ್ವಿ ಮೇಡಮ್ ಅವರಿಗೆ ಆಟೋಗ್ರಾಫ್ ಹಾಕಿ ಕೊಡಿ‌ ಮೇಡಮ್ ಎಂದೆ. ಹಾಕಿಕೊಟ್ಟರು. ನಂತರ ತೇಜಸ್ವಿ ಮನೆ ಹಿಂದಿನ ಕೆರೆ, ಅವರು ಬಳಸುತ್ತಿದ್ದ ಸ್ಕೂಟರ್ ಎಲ್ಲವನ್ನೂ ನೋಡಿದೆ. ಬದುಕಿನ ಮೇಲೆ ಪ್ರಭಾವ ಬೀರಿದ ವ್ಯಕ್ತಿತ್ವವೊಂದು ಬಾಳಿ ಬದುಕಿದ ಪರಿಸರದಲ್ಲಿ ನಾನು ಇದ್ದೇನೆ ಎಂಬ ಕಲ್ಪನೆಯೆ  ರೋಮಾಂಚನ ಮುಡಿಸುವಂತದ್ದು. ನಿರುತ್ತರದ ಪರಿಸರದಲ್ಲಿ ಅಡ್ಡಾಡಿ ನಿರುತ್ತರದ ದಾರಿಯಲ್ಲಿ ಹಿಂದಿರುಗಿ ಹೊರಟೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button