ಚಾರಣ ಪ್ರಿಯರ ಇಷ್ಟದ ತಾಣ ಕುಂದಾದ್ರಿ ಬೆಟ್ಟ

ಕುಂದಾದ್ರಿ ಬೆಟ್ಟ ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ಮುಂಜಾನೆಯ ಸೂರ್ಯೋದಯ ನೋಡ ಬಯಸುವ ನಿಸರ್ಗ ಪ್ರೇಮಿಗಳಿಗೆ ನೆಚ್ಚಿನ ತಾಣ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಆಗುಂಬೆಯ ಸಮೀಪದಲ್ಲಿರುವ ಕುಂದಾದ್ರಿ ಬೆಟ್ಟದ ಕುರಿತಾದ ಬರಹ.
ರಿಯಾನ
ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟಗಳ ಮಧ್ಯೆ ಆಗುಂಬೆಯ ಸಮೀಪದಲ್ಲಿ ನೆಲೆಸಿರುವ ಕುಂದಾದ್ರಿ ಬೆಟ್ಟ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಸುಮಾರು 826 ಮೀಟರ್ ಎತ್ತರವಿದ್ದು ಶೃಂಗೇರಿಯಿಂದ 30 ಕಿಲೋಮೀಟರ್ ದೂರದಲ್ಲಿದೆ. ಈ ಬೆಟ್ಟವು ಎರಡು ಪ್ರಮುಖ ಕಾರಣಗಳಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ.

ಮೊದಲನೆಯದಾಗಿ ಈ ಬೆಟ್ಟವು ತೀರ್ಥಂಕರನಿಗೆ ಅರ್ಪಿತವಾದ 17 ನೇ ಶತಮಾನದ ಜೈನ ದೇವಾಲಯಕ್ಕೆ ನೆಲೆಯಾಗಿದೆ. 23 ನೇ ತೀರ್ಥಂಕರ ‘ಪಾರ್ಶ್ವನಾಥ’ ಈ ದೇವಾಲಯದ ಮುಖ್ಯ ದೇವರು. ದೇವಾಲಯ ಒಳಗೆ ಸುಂದರವಾಗಿ ಕೆತ್ತಿದ ಅನೇಕ ಕಲ್ಲಿನ ಮೂರ್ತಿಗಳು ಕಂಗೊಳಿಸುತ್ತವೆ. ಇದಲ್ಲದೆ ದೇವಾಲಯದ ಪಕ್ಕದಲ್ಲಿ ಪಚ್ಚೆ ಹಸಿರು ನೀರಿನಿಂದ ಕೂಡಿದ ಮೂರು ಸಣ್ಣ ಕೊಳಗಳು ಬೆಟ್ಟವನ್ನು ಇನ್ನಷ್ಟು ಸುಂದರಗೊಳಿಸಿದೆ.
ಸಾವಿರಾರು ವರ್ಷಗಳ ಹಿಂದೆ ಜೈನ ಸನ್ಯಾಸಿ ‘ಆಚಾರ್ಯ ಕುಂದಕುಂದ’ ಧ್ಯಾನ ಮಾಡಿದ ಸ್ಥಳವಿದು ಎನ್ನುವ ಪ್ರತೀತಿಯಿದೆ. ಹಾಗಾಗಿ ಈ ಪ್ರದೇಶವನ್ನು ಕುಂದಾದ್ರಿ ಬೆಟ್ವವೆಂದು ಕರೆಯುತ್ತಾರೆ. ಹಬ್ಬ-ಹರಿದಿನಗಳನ್ನು ಬಿಟ್ಟರೆ ಇತರೆ ದಿನಗಳಲ್ಲಿ ಇಲ್ಲಿ ಹೆಚ್ಚಿನ ಜನಸಂದಣಿ ಕಡಿಮೆ ಆದರೆ ಸೂರ್ಯೋದಯ ,ಸೂರ್ಯಾಸ್ತ ನೋಡಲು ನಿಸರ್ಗ ಪ್ರೇಮಿಗಳು ಬರುತ್ತಿರುತ್ತಾರೆ.
ನೀವು ಇದನ್ನು ಇಷ್ಟ ಪಡಬಹುದು:ಪ್ರವಾಸಿಗರ ಸ್ವರ್ಗ ದೂದ್ ಸಾಗರ್

ಪಾಪನಾಶಿನಿ, ನಾಗಕನ್ಯೆ ಕೊಳ ಹಾಗೂ ಕಮಲದ ಕೊಳಗಳೆಂಬ ಮೂರು ಕೊಳಗಳು ಇಲ್ಲಿ ಹರಿಯುತ್ತವೆ.ಪ್ರತಿಯೊಂದು ಕೊಳಕ್ಕೂ ಒಂದೊಂದು ವಿಶೇಷತೆಗಳಿವೆ . ಸ್ಸlಲ್ಲ್ದ ಇತಿಹಾಸದ ಪ್ರಕಾರ ವೇಷಧರಿಸಿದ ಒಬ್ಬ ರಾಕ್ಷಸನು ಶ್ರೀಕೃಷ್ಣನನ್ನು ಬೆನ್ನಟ್ಟಿ ಕೊಂಡು ಕುಂದಾದ್ರಿಯ ತುದಿಗೆ ತಲುಪುತ್ತಾನೆ. ಅಲ್ಲಿ ದಾರ್ಶನಿಕನಾದ ಕುಂದಕುಂದಾಚಾರ್ಯ ಧ್ಯಾನದಲ್ಲಿ ಮಗ್ನರಾಗಿರುತ್ತಾನೆ.ಅವನನ್ನು ಗುರುತಿಸಿದ ಶ್ರೀಕೃಷ್ಣನು ತನ್ನ ಪೀತಾಂಬರ ಅಥವಾ ಆಭರಣಗಳನ್ನು ದಾರ್ಶನಿಕನಿಗೆ ತೊಡಿಸಿ ಅಲ್ಲೇ ಸುತ್ತಮುತ್ತಲಿನ ಪ್ರದೇಶದಲ್ಲಿ ಅಡಗಿಕೊಳ್ಳುವನು. ರಾಕ್ಷಸನು ಕೃಷ್ಣನೆಂದು ಭಾವಿಸಿ ದಾರ್ಶನಿಕನನ್ನು ಒದೆಯುತ್ತಾನೆ. ನಂತರ ದಾರ್ಶನಿಕನು ತನ್ನ ಕಣ್ಣುಗಳನ್ನು ತೆರೆಯುತ್ತಿದ್ದಂತೆ ರಾಕ್ಷಸನು ಅಲ್ಲೇ ಬೂದಿಯಾಗುತ್ತಾನೆ. ಅಂದಿನಿಂದ ಬೆಟ್ಟದ ತುದಿಯನ್ನು ಕಾಗೆಗಳೂ ಕೂಗದ ನಾಡು ಎಂದೂ ಕರೆಯುವುದುಂಟು. ದೇವಾಲಯದ ಆವರಣದಲ್ಲಿ ಕುಂದಕುಂದಾಚಾರ್ಯರ ಹೆಜ್ಜೆಗುರುತುಗಳನ್ನು ಕಾಣಬಹುದು.

ಇದರ ಜೊತೆಗೆ ಕುಂದಾದ್ರಿ ಬೆಟ್ಟಗಳು ಸಾಹಸಪ್ರಿಯರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಶಿಖರವನ್ನು ತಲುಪಲು ಚಾರಣಕ್ಕೆ ಸುಮಾರು ಮೂರು ಗಂಟೆಗಳು ಬೇಕಾಗಬಹುದು. ಸರಿಸುಮಾರು ಏಳು ಕಿಲೋಮೀಟರ್ ದೂರದ ಈ ಪ್ರಯಾಣವು ಸಣ್ಣ ತೊರೆಗಳು, ಕಡಿದಾದ ಭೂಪ್ರದೇಶ ಹಾಗೂ ಕಾಡುಸಸ್ಯವರ್ಗಗಳ ಮೂಲಕ ಪ್ರಯಾಣಿಕರನ್ನು ಸ್ವಾಗತಿಸುತ್ತದೆ. ಪ್ರತಿಹಂತದಲ್ಲೂ ಇಲ್ಲಿನ ಆಕರ್ಷಕ ನೋಟವು ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ನಗರಜೀವನದ ಗದ್ದಲ ಹಾಗೂ ವಾಹನಗಳ ಝೇಂಕಾರದಿಂದ ದೂರವಿರಿಸಿ ಒಂದು ಸೌಮ್ಯವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ .ಹಕ್ಕಿಗಳ ಕಲರವ ಚಾರಣವನ್ನು ಇನ್ನಷ್ಟು ವೈಭವೀಕರಿಸುತ್ತದೆ. ಇಲ್ಲಿನ ಮೌನ ವಾತಾವರಣ ನಮ್ಮ ಮೈಮನಸೆಳೆಯುತ್ತದೆ. ಇಲ್ಲಿನ ಸೂರ್ಯೋದಯದ ದೃಶ್ಯ ಅತ್ಯಂತ ಮನಮೋಹಕ.

ರವಿಯ ಕಿರಣಗಳು ಮೋಡಗಳನ್ನು ಸರಿದು ಮೆಲ್ಲನೆ ಉದಯಿಸುವ ದೃಶ್ಯ ಅದ್ಭುತ. ಚಿಲಿಪಿಲಿಗುಟ್ಟುವ ಹಕ್ಕಿಗಳು, ತಣ್ಣನೆಯ ಗಾಳಿ ಹಾಗೂ ಸೂರ್ಯನ ಚಿನ್ನದಂತಹ ಕಿರಣಗಳು ಎಂದಿಗೂ ಮರೆಯಲಾಗದ ಅನುಭವವನ್ನು ಸೃಷ್ಟಿ ಸುತ್ತದೆ. ಒಟ್ಟಾರೆ ಸಾಹಸ, ಆಧ್ಯಾತ್ಮಿಕತೆ ಹಾಗೂ ನೈಸರ್ಗಿಕ ಅನುಗ್ರಹದ ಸಹಜ ನೆಲೆಯಾಗಿದೆ ಕುಂದಾದ್ರಿ ಬೆಟ್ಟ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ