ವಿಂಗಡಿಸದಸಂಸ್ಕೃತಿ, ಪರಂಪರೆ

ಹರಾವರಿ ಗ್ರಾಮದ ಆಕರ್ಷಣೆ ಕೊಡಗತ್ಯಮ್ಮ ದೇವಿ ಉತ್ಸವ

ಕರ್ನಾಟಕದ ಪ್ರತಿಯೊಂದು ಸ್ಥಳವು ತನ್ನದೆ ಆದ ವಿಶೇಷ ಹಾಗೂ ವೈಭವಿಕವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿವೆ. ಅದರಲ್ಲಿ ಕಾಫಿ ಬೆಳೆಗಾರರ ತವರು ಮನೆ ಚಿಕ್ಕಮಗಳೂರಿನಲ್ಲಿದೆ ಹರಾವರಿ ಗ್ರಾಮ. ಸುತ್ತಲೂ ಹಚ್ಚ ಹಸಿರಿಂದಲೇ ಕಂಗೊಳಿಸುತ್ತಿದ್ದು, ಪ್ರಾಣಿ ವರ್ಗಕ್ಕೆ ಆಸರೆಯಾಗಿದೆ. ಕೊಡಗತ್ಯಮ್ಮ ದೇವಿಯ ಉತ್ಸವ ಹಾಗೂ ಅಲ್ಲಿ ಪೂಜೆ ಕುರಿತಾದ ಬರಹ ಇಲ್ಲಿದೆ.

ರಾಹುಲ್ ಆರ್ ಸುವರ್ಣ

ಊರಿನಲ್ಲಿ ದೇವಸ್ಥಾನ, ದೇವರಗುಡಿಯಿದ್ದರೆ, ಅಲ್ಲಿ ದಿನ ನಿತ್ಯದ ಪೂಜೆ, ಭಕ್ತರ ಹರಕೆ ಸಲ್ಲಿಕೆ, ಅನ್ನ ಸಂತರ್ಪಣೆ ಸಾಮಾನ್ಯ, ಆದರೆ ಈ ಗ್ರಾಮದಲ್ಲಿ ಬಲಿಪಾಡ್ಯಮಿಯ ಮಾರನೆಯ ದಿನ ದೇವರ ಉತ್ಸವ ಮೂರ್ತಿಯು ವನಸಂಚಾರ ಮಾಡಿ, ತನ್ನ ಪತಿಯಾದ ಬಿರ್ಲಿಗೇಶ್ವರ ದೇವರನ್ನು ಕೂಡಿ ಭಕ್ತರ ಸಂಕಷ್ಟಗಳಿಗೆ ಅಭಯವನಿತ್ತು, ಮನೆ ಮನೆಗಳಿಂದಲೂ ಪೂಜೆಯನ್ನು ಸ್ವೀಕರಿಸಿ ಊರಿಗೆ ಹಿಂದಿರುಗುತ್ತದೆ ಎನ್ನುವುದು ಹರಾವರಿ ಗ್ರಾಮಸ್ಥರ ನಂಬಿಕೆ.ಸಂಸಾರ, ಸಂಬಂಧ ಎಂಬುದು ಪ್ರಾಣಿವರ್ಗದಿಂದ ಹಿಡಿದು ದೇವರವರೆಗೂ ರೂಡಿಯಲ್ಲಿರುವ ಪದ.

ಅದೇ ರೀತಿ ಇಲ್ಲಿನ ಗ್ರಾಮ ದೇವರಾದ ಕೊಡಗತ್ಯಮ್ಮ ಎಂಬ ದೇವಿಯು ಬಲಿಪಾಡ್ಯಮಿಯ ಮಾರನೆಯ ದಿನ ಭಕ್ತರ ಕಾಲ್ನಡಿಗೆಯೊಂದಿಗೆ ಐದು ಕಿ ಮೀ ಅದ್ದೂರಿ ಡೋಲು ವಾದನಗಳ ಮೂಲಕ ಭಕ್ತರ ಭಕ್ತಿ ಭಾವನೆಗಳ ಮಹಾಪೂರದೊಂದಿಗೆ ಕಟ್ಟಿನಮನೆಯಲ್ಲಿ ತನ್ನ ಪತಿಯಾದ ಬಿರ್ಲಿಗೆಶ್ವರ ದೇವರೊಂದಿಗೆ ಸೇರುತ್ತದೆ . ಈ ಸಂಧರ್ಭದಲ್ಲಿ ಉತ್ಸವ ಮೂರ್ತಿ ಎಂಟರಿಂದ ಹತ್ತು ಜನರು ಹೊರುತ್ತಾರೆ, ಹೆಚ್ಚು ಕಡಿಮೆ ಒಂದು ವಾರದಿಂದಲೇ ಶುದ್ಧರಿರಬೇಕಾದವರು. ಉತ್ಸವ ಮೂರ್ತಿಯನ್ನು ಯಾವ ಜಾತಿಯವರು ಹೊರಲು ಅವಕಾಶವಿದೆ. ಇದು ಈ ಊರಿನ ಧಾರ್ಮಿಕ ಸಮಾನತೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ ಈ ಊರಿನಿಂದ ಆ ಊರಿಗೆ ಕಾಲ್ನಡಿಗೆಯ ಮೂಲಕ ಹೋಗಿ ದಣಿದ ಜನರಿಗೆ ಅಲ್ಲಿನವರು ಉಪಹಾರ ವ್ಯವಸ್ಥೆಯನ್ನು ಕಲ್ಪಿಸಿ ಈ ಎರಡು ಊರಿನ ನಡುವಿನ ಆತ್ಮೀಯನ್ನು ಇನ್ನು ಬಲಪಡಿಸಿಕೊಳ್ಳುತ್ತಾರೆ.

Festival

ನೀವೂ ಇದನ್ನು ಇಷ್ಟ ಪಡಬಹುದು:ಪಾದಯಾತ್ರಿಗಳಿಗೆ ಮತ್ತೆ ಜೀವತುಂಬಿದ ದೀಪೋತ್ಸವ

ಪ್ರತಿ ವರ್ಷವೂ ಈ ಊರಿನಿಂದ 250 -300 ಜನರು ಕಾಲ್ನಡಿಗೆಯಲ್ಲೇ ತೆರಳುತ್ತಾರೆ. ಅಲ್ಲಿ ಹೋದ ಬಳಿಕ ಎರಡು ದೇವರುಗಳಿಗೂ ವಿಶೇಷ ಪೂಜೆ ಹಾಗೂ ಅಲ್ಲಿನ ಪರಿವಾರ ದೇವರುಗಳಿಗೂ ಪೂಜೆ ಸಲ್ಲಿಸಲಾಗುತ್ತದೆ.

ಹಿಂದೆ

ಹರಾವರಿ ಗ್ರಾಮದೇವತೆಯು ಸರಿ ಸುಮಾರು ಐವತ್ತು ವರ್ಷಗಳ ಹಿಂದೆ 9ಕೀ ಮೀ ದೂರದಲ್ಲಿರುವ, ಉತ್ಸವ ಮೂರ್ತಿಯು ತನ್ನ ತವರು ಮನೆಯಾದ ಗುಬ್ಬುರು ಎಂಬ ಊರಿಗೆ ಹೋಗಿ ಬರುತ್ತಿತ್ತು . ಆದರೆ ಹತ್ತಿರದಲ್ಲೇ ಬಿರ್ಲಿಗೆಶ್ವರ ದೇವರ ಪ್ರತಿಷ್ಠಾಪನೆ ಆದುದರಿಂದ ಇಲ್ಲಿಗೆ ಕಳೆದ ಮೂವತ್ತು ವರ್ಷಗಳಿಂದ ಹೋಗಿ ಬರುತ್ತಿದೆ. ಎಲ್ಲದಕ್ಕಿಂತ ಶ್ರೇಷ್ಠ ದಾನವಾದ ಅನ್ನದಾನದ ವ್ಯವಸ್ಥೆ ಬಂದಂತ ಭಕ್ತರಿಗೆ ಕಲ್ಪಿಸಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ವಿಶೇಷ ಆಕರ್ಷಣೆ

ಸಾಮಾನ್ಯವಾಗಿ ನಾವು ದೇವಸ್ಥಾನಗಳ ಹೊರ ಭಾಗದಲ್ಲಿ ಹುತ್ತ ಇರುವುದನ್ನು ನೋಡಿರುತ್ತೇವೆ. ಆದರೆ ಬಿರ್ಲಿಗೆಶ್ವರ ದೇವಸ್ಥಾನದ ಒಳಗೆಯ ಹುತ್ತವಿದೆ. ಇದು ಪ್ರತಿ ವರ್ಷವೂ ಬೆಳೆಯುತ್ತಲೇ ಹೋಗುತ್ತಿದೆ. ಇಲ್ಲಿ ತಿಂಗಳಿಗೊಮ್ಮೆ ಪೂಜೆ ನೆರವೇರಿಸಲಾಗುತ್ತದೆ.ಅದಲ್ಲದೆ ಇಲ್ಲಿ ಕತ್ತಿ ಕುಣಿತ ನಡೆಯುತ್ತದೆ, ಇದನ್ನು ನೋಡಲೆಂದೆ ದೂರದ ಊರಿನವರು ಇಲ್ಲಿಗೆ ಜಮಾಯಿಸಿರುತ್ತಾರೆ. ಇವೆಲ್ಲವೂ ಮುಗಿದ ಬಳಿಕ ಅಲ್ಲಿಂದ ಕೊಡಗತ್ಯಮ್ಮನವರ ಉತ್ಸವ ಮೂರ್ತಿಯೂ ಹೊರಡುವ ರೀತಿಯು ವಿಭಿನ್ನವಾಗಿದೆ.

Devotees

ಎಲ್ಲಾ ಪೂಜೆಗಳು ಮುಗಿದ ಬಳಿಕ ಎರಡು ಉತ್ಸವ ಮೂರ್ತಿಗಳು ಸೇರಿ ದೇವಸ್ಥಾನಕ್ಕೆ ಮೂರು ಸುತ್ತು ಬಂದು ನಾಲ್ಕನೇ ಸುತ್ತಿಗೆ ಹರಾವರಿ ಗ್ರಾಮ ದೇವತೆಯ ಉತ್ಸವ ಮೂರ್ತಿಯು ನಿಶಬ್ದವಾಗಿ, ಎಲ್ಲಾ ವಾದ್ಯಗಳನ್ನು ನಿಲ್ಲಿಸಿ ಸದ್ದಿಲ್ಲದಂತೆ ಹಿಂದಿರುಗುತ್ತದೆ.ಹರಾವರಿ ಗ್ರಾಮದಲ್ಲಿ ದಿನ ನಿತ್ಯವು ಪೂಜೆ ನಡೆಯುತ್ತದೆ ಅಲ್ಲದೆ ವಿಶೇಷ ಪೂಜೆಗಳಿಗೂ ಅವಕಾಶವಿದ್ದು ಪ್ರತಿ ಶುಕ್ರವಾರದಂದು ಭಕ್ತರ ಸಮೂಹವೆ ಇಲ್ಲಿ ನೆರೆದಿರುತ್ತದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button