ಇವರ ದಾರಿಯೇ ಡಿಫರೆಂಟುಕಾರು ಟೂರುದೂರ ತೀರ ಯಾನಬೆರಗಿನ ಪಯಣಿಗರುವಿಂಗಡಿಸದ

೫೧ ದಿನಗಳಲ್ಲಿ ೨೮ ರಾಜ್ಯ ಸುತ್ತಿ ಬಂದ ಅಮ್ಮ – ಮಗನ ದೇಸಿ ಪಯಣದ ಕಥೆ.

ಕೆಲವು ಬೆರಗಿನ ಪಯಣಿಗರಿಗೆ ಪ್ರವಾಸ ನಿತ್ಯದ ಬದುಕಿನಲ್ಲೊಂದು ಭಾಗ. ತಮ್ಮ ಕೆಲಸದ ನಡುವೆ ಸಮಯ ಹೊಂದಾಣಿಕೆ ಮಾಡಿಕೊಂಡು ಪ್ರವಾಸ ಕೈ ಗೊಳ್ಳುತ್ತಾರೆ. ಅಂತಹ ಅಪರೂಪದ ಬೆರಗಿನ ಪಯಣಿಗರಲ್ಲಿ ಡಾ. ಮಿತ್ರಾ ಸತೀಶ್ ಕೂಡ ಒಬ್ಬರು.

ವೃತ್ತಿಯಲ್ಲಿ ಕೊಚ್ಚಿಯ ಸರಕಾರಿ ಆರ್ಯುವೇದ ಕಾಲೇಜಿನ ಸಹಾಯಕ ಪ್ರೊಫೆಸರ್. ತಮ್ಮ ೧೦ ವರ್ಷದ ಮಗನ ಜೊತೆಗೆ ೫೧ ದಿನಗಳ ಕಾಲ ದೇಶ ಸುತ್ತಿ ಬಂದಿದ್ದಾರೆ. ಕಾರಿನಲ್ಲಿ ೧೬,೮೦೦ಕಿಮೀ ಪಯಣಿಸಿ ಬಂದ ಅಮ್ಮ – ಮಗನ ದೇಸಿ ಪಯಣದ ಕಥೆ ನಿಮಗಾಗಿ.

  • ನವ್ಯಶ್ರೀ ಶೆಟ್ಟಿ

ತಾಯಿಯಾದ ಮೇಲೆ ಮಕ್ಕಳು ನೋಡಿಕೊಳ್ಳುವ ಜವಾಬ್ದಾರಿಗಳ ನಡುವೆ ಪ್ರವಾಸ ಬಹುತೇಕ ತಾಯಂದಿರಿಗೆ ಮರೆತೇ ಹೋಗಿರುತ್ತದೆ. ಇದರ ನಡುವೆ ಕೇರಳದ ಈ ಅಮ್ಮ – ಮಗನ ಜೋಡಿ ದೇಶ ಸುತ್ತಿ ಬಂದಿದೆ. ಈ ಮುದ್ದಾದ ಅಮ್ಮ – ಮಗನ ಹೆಸರು ಡಾ. ಮಿತ್ರಾ ಸತೀಶ್ (mitra satheesh), ಮತ್ತು ನಾರಾಯಣ (narayana)

ಪ್ರವಾಸಕ್ಕೆ ಹೊರಟ ಅಮ್ಮ – ಮಗ

ತನ್ನ ಮಗನ ಜೊತೆಗೆ ದೇಶದ ಸುತ್ತಿ ಬಂದ ಅಮ್ಮ ಡಾ. ಮಿತ್ರಾ ಸತೀಶ್, ಕೊಚ್ಚಿಯ (kocchi) ಆರ್ಯುವೇದ ಕಾಲೇಜಿನ ಸಹಾಯಕ ಪ್ರೊಫೆಸರ್. ಮಗ , ಮಗಳು , ಪತಿಯೊಂದಿಗಿನ ಸುಂದರ ಕುಟುಂಬ. ೧೫ ವರ್ಷದ ಮಗಳು ವಿಶೇಷ ಚೇತನಳು. ಬದಲಾಗುವ ಹವಾಮಾನದ ವಾತಾವರಣಕ್ಕೆ ಹೊಂದಿಕೊಳ್ಳುವುದು ಆಕೆಗೆ ಕಷ್ಟ. ಇದರಿಂದ ಮಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಕೊಂಚ ಕಠಿಣ. ಅದಕ್ಕಾಗಿ ಪತಿ ಮನೆಯಲ್ಲಿ ಮಗಳನ್ನು ನೋಡಿಕೊಳ್ಳಲು ಉಳಿದು ಬಿಟ್ಟರು. ಮಾರ್ಚ್ ತಿಂಗಳಲ್ಲಿ ದೇಶ ಸುತ್ತಲು ಹೊರಟೇ ಬಿಟ್ಟಿತ್ತು ಈ ಅಮ್ಮ ಮಗನ ಜೋಡಿ.

Mitra Sateesh Narayan Kocchi Oru Desi Drive

ನಮ್ಮ ನಿತ್ಯದ ಬದುಕಿನ ಜಂಜಾಟಗಳ ನಡುವೆ ವರ್ಷದಲ್ಲಿ ಒಂದಷ್ಟು ದಿನವನ್ನು ಪ್ರವಾಸಕ್ಕಾಗಿ ಮೀಸಲಿಡುವುದು ತಪ್ಪಲ್ಲ ಅನ್ನುವುದು ಡಾ. ಮಿತ್ರಾ ಅವರ ಅಭಿಪ್ರಾಯ. ತನ್ನ ಕುಟುಂಬದವರ ಪ್ರೋತ್ಸಾಹದಿಂದ ಕಾರಿನಲ್ಲಿ ಪ್ರವಾಸಕ್ಕೆ ಹೊರಟಿತ್ತು ಈ ಅಮ್ಮ – ಮಗನ ಜೋಡಿ.

ಪ್ರವಾಸವನ್ನು ಇಷ್ಟ ಪಡುವ ಮಿತ್ರಾ ಒಬ್ಬಂಟಿಯಾಗಿ ಹಲವು ಪ್ರವಾಸ ಮಾಡಿದ್ದರು. ಸ್ನೇಹಿತರ ಜೊತೆ ಕೂಡ ಪ್ರವಾಸಕ್ಕೆ ಹೋಗಿದ್ದರು. ೧೦ ವರ್ಷದ ಮಗ ನಾರಾಯಣ್ ಗೆ ಪ್ರವಾಸದ ಮೇಲಿನ ಆಸಕ್ತಿ ನೋಡಿ ಮಗನ ಜೊತೆಗೆ ದೇಶ ಸುತ್ತುವ ನಿರ್ಧಾರ ಮಾಡಿದ್ದರು. ಕೊಚ್ಚಿಯಿಂದ ಆರಂಭವಾದ ಅಮ್ಮ ಮಗನ ಪಯಣ ೨೮ ರಾಜ್ಯ ೬ ಕೇಂದ್ರಾಡಳಿತ ಪ್ರದೇಶಗಳನ್ನು ಸುತ್ತಿ ಬಂದಿದೆ.

ಒಂದು ದೇಸಿ ಪಯಣ

ಅಮ್ಮ – ಮಗ ತಾವು ಮಾಡುವ ಪಯಣಕ್ಕೆ ‘ ಒರು ದೇಸಿ ಡ್ರೈವ್ ‘ಎಂದು ಹೆಸರಿಟ್ಟಿದ್ದರು. ಅಂದರೆ ಕನ್ನಡದಲ್ಲಿ ಒಂದು ದೇಸಿ ಪಯಣ ಎಂದರ್ಥ. ಮಾರ್ಚ್ ೧೭ ರಂದು ತಮ್ಮ ಮಾರುತಿ ಕಾರಿನಲ್ಲಿ ಪಯಣ ಆರಂಭಿಸಿದ ಅಮ್ಮ – ಮಗನ ಪಯಣ ತಮಿಳು ನಾಡು, ಕರ್ನಾಟಕ ,ಅಂದ್ರ ಪ್ರದೇಶ ,ಪುದುಚೇರಿ ,ಒಡಿಶಾ ,ತೆಲಂಗಾಣ ,ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳನ್ನು ತಲುಪಿ ಬಂದಿದೆ.

Mitra Sateesh Narayan Kocchi Oru Desi Drive

ತಾವು ಪ್ರವಾಸ ಮಾಡುತ್ತಿದ್ದ ಸಮಯದಲ್ಲಿ ಹೆಚ್ಚು ಜನರು ಸೇರುವ ಜಾಗ , ಐಷರಾಮಿ ರೆಸ್ಟೋರೆಂಟ್ ಗಳಿಂದ ಅಮ್ಮ ಮಗನ ಜೋಡಿ ಬಹಳ ದೂರವಿರುತ್ತಿತ್ತು. ಹಳ್ಳಿಯೆಂದರೆ ಇಬ್ಬರಿಗೂ ಇಷ್ಟ. ಈ ಕಾರಣದಿಂದ ತಮ್ಮ ಪಯಣದಲ್ಲಿ ಹೆಚ್ಚಾಗಿ ನೋಡಿದ್ದು ಹಳ್ಳಿಗಳನ್ನು. ಹೆಚ್ಚಿಗೆ ಅನುಭವಿಸಿದ್ದು ಹಳ್ಳಿಯ ಸೌಂದರ್ಯವನ್ನು. ಕೊರೋನಾ ಕಾಲದಲ್ಲಿ ಪ್ರವಾಸ ಅಷ್ಟೊಂದು ಸುಲಭದ ಮಾತಲ್ಲ. ಅಮ್ಮ ಮಗ ಪ್ರತಿ ವಾರ ಆರ್. ಟಿ. ಪಿಸಿಆರ್ (RT-PCR) ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು.

ಪಯಣದ ಮಧ್ಯದಲ್ಲಿ ಓದು

ಮಗ ನಾರಾಯಣ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಡಾ. ಮಿತ್ರಾ ಅವರು ನಾರಾಯಣ್ ಶಾಲೆಯಲ್ಲಿ ಅನುಮತಿ ಪಡೆದುಕೊಂಡು ಪ್ರವಾಸ ಕೈಗೊಂಡಿದ್ದರು. ನಾರಾಯಣ್ ತನ್ನ ತರಗತಿಯ ವಾರ್ಷಿಕ ಪರೀಕ್ಷೆ ಬರೆದಿದ್ದು ಪಯಣದ ಮಧ್ಯದಲ್ಲಿ. ಕಾರಿನಲ್ಲಿಅರ್ಧ ಗಂಟೆ ಓದುತ್ತಿದ್ದ ಮಗ ಎರಡು ವಾರಗಳಲ್ಲಿ ಏಳು ವಿಷಯದ ಪರೀಕ್ಷೆ ಬರೆದಿದ್ದ. ಪ್ರಯಾಣ ಜೊತೆಗೆ ಓದು ಕೂಡ ಜೊತೆಯಲ್ಲಿ ಸಾಗುತ್ತಿತ್ತು.

ನೀವು ಇದನ್ನು ಇಷ್ಟ ಪಡುಬಹುದು: ಮನೆ, ಕೆಲಸ, ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನು ಕೈಬಿಟ್ಟು ಜೀವನವನ್ನೇ ಪ್ರವಾಸವಾಗಿ ಪರಿವರ್ತಿಸಿದ ವಿಭಿನ್ನ ಕಥೆ

Mitra Sateesh Narayan Kocchi Oru Desi Drive

ಹಳ್ಳಿಯ ಸವಿಯನ್ನು ಅಸ್ವಾದಿಸುತ್ತಿದ್ದರು ಅಮ್ಮ ಮಗ. ನಾರಾಯಣ ಪಶ್ಚಿಮ ಬಂಗಾಳದ ಪಂಚಾಮುರ (panchamura) ಎನ್ನುವ ಹಳ್ಳಿಯಲ್ಲಿ ಟೆರಾಕೋಟ ಟೈಲ್ಸ್(terakotta tiles) ತಯಾರಿಕೆಯ , ಅಸ್ಸಾಮಿನ(assam) ಸಲ್ಮೊರ(salmora) ಹಳ್ಳಿಯಲ್ಲಿ ,ಯಂತ್ರದ ಸಹಾಯವಿಲ್ಲದೇ ಕೈ ಯಿಂದ ಮಡಿಕೆ ತಯಾರಿಸುವುದನ್ನು ಕಲಿತು ಕೊಂಡಿದ್ದನು .ಉದಕ ಮಂಡಲದ(udaka mandala) ಜನಾಂಗೀಯ ಸಂಸ್ಕೃತಿ ಸೇರಿದಂತೆ ಸ್ಥಳೀಯ ಸಂಸ್ಕೃತಿಯನ್ನು ನೋಡಿ ಸಂಭ್ರಮಿಸಿದ್ದರು ಅಮ್ಮ ಮಗ.

ಅರ್ಧಕ್ಕೆ ನಿಂತ ಪಯಣ

ಅಮ್ಮ ಮಗ ಕಾಶ್ಮೀರಕ್ಕೆ ಪಯಣ ಹೊರಟಿದ್ದ ಸಮಯದಲ್ಲಿ ದೇಶಕ್ಕೆ ವೈರಸ್ ಎರಡನೇ ಅಲೆಯು ಬಂದಾಗಿತ್ತು. ಈ ಸಮಯದಲ್ಲಿ ಪಯಣ ಮುಂದುವರೆಸುವುದು ಕಷ್ಟ. ತಾವು ಪ್ರವಾಸಕ್ಕೆ ಹೋದ ಮೊದಲ ತಿಂಗಳಿನಲ್ಲಿ ೧೪ ರಾಜ್ಯದ ಹಳ್ಳಿಗಳನ್ನು ಸುತ್ತಿದ್ದರು ತಾಯಿ ಮಗ. ಆದರೆ ವೈರಸ್ ದೇಶದಲ್ಲಿ ಹೆಚ್ಚಾಗ ತೊಡಗಿತ್ತು. ಇಬ್ಬರ ಪಯಣದ ಅಸೆಗೆ ಅಡ್ಡಿಯಾಗಿತ್ತು. ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿತ್ತು.

Mitra Sateesh Narayan Kocchi Oru Desi Drive

ಮಗನ ಆಸೆಯಂತೆ ಪ್ರವಾಸಿಗರ ಸ್ವರ್ಗ ಕಾಶ್ಮೀರದ ಹಿಮ ಸೌಂದರ್ಯ, ಜೋಜಿಲ (zojila), ಗುಮ್ರಿ (gumri) ನೋಡಿಕೊಂಡು ಕೊಚ್ಚಿಗೆ ಮರಳಿದ್ದರು ಅಮ್ಮ ಮಗ.
ನಾಲ್ಕು ದಿನದಲ್ಲಿ ೩,೭೦೦ಕಿಮೀ ಪಯಣಿಸಿ ಊರಿಗೆ ಮರಳಿದ್ದರು. ಕೊಚ್ಚಿಗೆ ಹಿಂದಿರುವ ವೇಳೆಯಲ್ಲಿ ೧೭ ಗಂಟೆಗಳ ಕಾಲ ಕಾರು ಚಲಾಯಿಸುತ್ತಿದ್ದರು ಡಾ. ಮಿತ್ರಾ ಸತೀಶ್.

ಮಾರ್ಚ್ ೧೭ರಂದು ಕೊಚ್ಚಿಯಿಂದ ಆರಂಭವಾದ ಅಮ್ಮ ಮಗನ ಪಯಣ ,ಮರಳಿ ಕೊಚ್ಚಿ ತಲುಪಿದ್ದು ಮೇ ೬ ರಂದು. ವೈರಸ್ ಎರಡನೇ ಅಲೆಯಿಂದ ಅಮ್ಮ ಮಗನ ಪಯಣ ಅರ್ಧಕ್ಕೆ ನಿಂತರೂ ಕೂಡ ೫೧ ದಿನದಲ್ಲಿ ದೇಶದ ಹಲವು ಜಾಗಗಳನ್ನು ನೋಡಿ ಸಂಭ್ರಮಿಸಿದ್ದರು ತಾಯಿ ಮಗ.

೧೦೦ ದಿನದ ಆಲೋಚನೆಯಲ್ಲಿ ಪಯಣ

ಮಿತ್ರಾ ಸತೀಶ್ ಹಾಕಿಕೊಂಡಿದ್ದು ೧೦೦ ದಿನಗಳ ಜರ್ನಿ. ದಿನಕ್ಕೆ ೮೦೦ಕಿಮೀ ಪಯಣ. ಆದರೆ ವೈರಸ್ ಕಾರಣದಿಂದ ಪಯಣ ಅರ್ಧಕ್ಕೆ ನಿಂತು ಹೋಗಿತ್ತು. ೧೦೦ ದಿನದ ಪಯಣಕ್ಕೆ ೪.೫ ಲಕ್ಷ ಬಜೆಟ್ ಹಾಕಿಕೊಂಡಿದ್ದರು. ಆದರೆ ಕೆಲವು ದಿನ ಸ್ನೇಹಿತರ ಮನೆ , ಹಳ್ಳಿಯ ಪುಟ್ಟ ಮನೆಗಳಲ್ಲಿ ಉಳಿದುಕೊಂಡಿದ್ದ ಕಾರಣ ಖರ್ಚು ಸ್ವಲ್ಪ ಕಮ್ಮಿಯಾಗಿತ್ತು.

೫೧ ದಿನಗಳಲ್ಲಿ ಖರ್ಚು ಮಾಡಿದ್ದು ೧.೫ ಲಕ್ಷ ಹಣ . ವೈರಸ್ ನಿಂದ ಹೊರಗಿನ ಆಹಾರ ಅಷ್ಟೊಂದು ಸುರಕ್ಷಿತವಲ್ಲದ ಕಾರಣ ಹಣ್ಣು , ಹಾಲು ಕೆಲವು ಆಹಾರ ವಸ್ತುಗಳನ್ನು ಕಾರಿನಲ್ಲಿ ಇಟ್ಟುಕೊಂಡು ಪಯಣಿಸುತ್ತಿದ್ದರು.

Mitra Sateesh Narayan Kocchi Oru Desi Drive

ಪ್ರವಾಸದ ಪ್ರತಿದಿನ ಅಮ್ಮ ಮಗ ಹೊಸ ವ್ಯಕ್ತಿಗಳನ್ನು ಭೇಟಿಯಾಗುತ್ತಿದ್ದರು. ಮಗ ನಾರಾಯಣ್ ಪ್ರತಿ ದಿನ ಹೊಸ ಸಂಸ್ಕೃತಿ, ಆಹಾರ, ಸ್ಥಳ, ಜೀವನ ಶೈಲಿಯನ್ನು ನೋಡಿದ್ದ ಮಗನಿಗೆ ಇನ್ನಷ್ಟು ಕುತೂಹಲ ನೀಡುತ್ತಿತ್ತು. ೫೧ ದಿನ ಕಾರಿನಲ್ಲಿ ೧೬, ೮೦೦ಕಿಮೀ ಸುತ್ತಿದ್ದ ತಾಯಿ ಮಗನ ಪ್ರವಾಸ ಪ್ರೀತಿ ನಿಜಕ್ಕೂ ಎಲ್ಲರಿಗೂ ಅಚ್ಚರಿ. ಅಮ್ಮ ಮಗನ ಒಂದೊಳ್ಳೆ ದೇಸಿ ಪಯಣ ಹಲವರಿಗೆ ಪಯಣಕ್ಕೆ ಪ್ರೇರಣೆಯಾಗಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button