ವಿಂಗಡಿಸದಸಂಸ್ಕೃತಿ, ಪರಂಪರೆ

ಆದಿ ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಶಾರದಾ ಪೀಠಕ್ಕೆ ಒಮ್ಮೆ ಹೋಗಿ ಬನ್ನಿ

ಕರ್ನಾಟಕದಲ್ಲಿ ಸಾಕಷ್ಟು ದೇವಾಲಯಗಳಿವೆ, ಅವುಗಳಿಗೆ ಅದರದೇ ಆದ ಇತಿಹಾಸವೂ ಇದೆ. ಒಂದೊಂದು ದೇವಾಲಯಗಳು ಅಲ್ಲಿನ ಸಂಸ್ಕೃತಿಯನ್ನು ಪ್ರತಿಬಿಂಬಿಸಿ ನೋಡುಗರಿಗೆ ವಿಶೇಷ ಶಿಲ್ಪಕಲೆಗಳಿಂದ ಕಣ್ಮನ ಸೆಳೆಯುತ್ತವೆ.ಅಂತಹ ಪ್ರಮುಖ ದೇವಾಲಯಗಳಲ್ಲಿ ಮಲೆನಾಡಿನ ಶೃಂಗೇರಿಯ ಶಾರದ ಪೀಠವು ಒಂದು.

ರಾಹುಲ್ ಆರ್ ಸುವರ್ಣ

ಒಂದೊಂದು ಊರುಗಳಿಗೂ ಒಂದೊಂದು ಹಿನ್ನೆಲೆಯಿರುತ್ತದೆ. ಋಷ್ಯಶೃಂಗ ಎಂಬ ಹೆಸರಿನಿಂದ ಶೃಂಗೇರಿಯು ಜನ್ಮ ಪಡೆದುಕೊಂಡಿದೆ.ಋಷ್ಯಶೃಂಗ ಎಂದರೆ ಅಲ್ಲೇ ಸಮೀಪದಲ್ಲಿರುವ ಒಂದು ಬೆಟ್ಟದ ಹೆಸರು. ಪುರಾಣದ ಪ್ರಕಾರ ಆ ಬೆಟ್ಟದಲ್ಲಿ ವಿಭಾಂಡಕ ಋಷಿ ಮತ್ತು ಅವರ ಮಗ ಋಷ್ಯಶೃಂಗರು ವಾಸಿಸಿದ್ದರು. ಇವರ ಕುರಿತು ರಾಮಾಯಣದ ಬಾಲಕಾಂಡದಲ್ಲಿ ಉಲ್ಲೇಖವಿದೆ.

Shringeri

ಉಪಕಥೆಯಲ್ಲಿ ಋಷ್ಯಶೃಂಗರು ರೋಮಪಾದ ರಾಜ್ಯದಲ್ಲಿ ಮಳೆ ತರಿಸಿದ್ದಾರೆ ಎಂದು ವಸಿಷ್ಠರು ಹೇಳುತ್ತಾರೆ.ಶ್ರೀ ಆದಿ ಶಂಕರಾಚಾರ್ಯರು ದೇಶದಾದ್ಯಂತ ಧರ್ಮಸಂಚಾರದಲ್ಲಿದ್ದಾಗ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು, ಉತ್ತರದಲ್ಲಿ ಬದ್ರಿಕಾಶಮ್ ಜ್ಯೋತಿರ್ಪೀಠ, ಪಶ್ಚಿಮದಲ್ಲಿ ದ್ವಾರಕೆಯ ಶಾರದಾ ಪೀಠ, ಪೂರ್ವದಲ್ಲಿ ಪುರಿಯ ಗೋವರ್ಧನ ಪೀಠ ಹಾಗೂ ದಕ್ಷಿಣದಲ್ಲಿ ಶೃಂಗೇರಿಯ ಶಾರದಾ ಪೀಠ. 

Sharadambe

ಶಂಕರಾಚಾರ್ಯರು ಇಲ್ಲಿಗೆ ಬಂದ ಸಂದರ್ಭದಲ್ಲಿ ಹಾವೊಂದು ಸುಡುವ ಬಿಸಿಲಿನಲ್ಲಿ ಆಸರೆಯಿಲ್ಲದೆ ನರಳುತಿದ್ದ ಗರ್ಭಿಣಿ ಕಪ್ಪೆಯನ್ನು ತನ್ನ ಹೆಡೆಯಿಂದ ನೆರಳೊಡ್ಡಿ ರಕ್ಷಿಸಿದ್ದನ್ನು ಕಂಡು,ಈ ಸ್ಥಳದಲ್ಲಿ ವಿಶಿಷ್ಟ ಶಕ್ತಿಯಿದೆ ಎಂದು ಇಲ್ಲಿ ದೇವಾಲಯ ಕಟ್ಟುವ ನಿರ್ಧಾರಕ್ಕೆ ಬಂದರು. ಈಗಲೂ ಹಾವು ಕಪ್ಪೆಯನ್ನು ರಕ್ಷಿಸಿದ ಕಲ್ಲಿನ ಮೂರ್ತಿಯಿದೆ. ಹನ್ನೆರಡು ವರ್ಷ ಶಂಕರಾಚಾರ್ಯರು ಇಲ್ಲೆ ಉಳಿದುಕೊಂಡು ಕಲಿಸಲು ಶೃಂಗೇರಿಯನ್ನೇ ಆರಿಸಿಕೊಂಡಿದ್ದರು ಎನ್ನಲಾಗಿದೆ.ಇಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರೆ ಜ್ಞಾನಾರ್ಜನೆ ಹೆಚ್ಚುತ್ತದೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ.

Shankaracharya

ಇಲ್ಲಿ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಂದೆ ತಾಯಂದಿರು ಬಂದು ಮಕ್ಕಳ ಅಕ್ಷರಾಭ್ಯಾಸ ಮಾಡಿಸಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ದೇವಾಲಯದ ಪ್ರವೇಶ ದ್ವಾರದಲ್ಲೆ ವಾಯ ನಗರ, ಹೊಯ್ಸಳ,ದ್ರಾವಿಡ ಶೈಲಿಯ ವಾಸ್ತು ಶಿಲ್ಪದ ಮಿಶ್ರಣವನ್ನು ಹೊಂದಿದ ವಿದ್ಯಾ ಶಂಕರ ದೇವಾಲಯ ನಮ್ಮ ಕಣ್ಣಿಗೆ ಬೀಳುತ್ತದೆ. ಈ ದೇವಾಲಯದಲ್ಲಿ ಹನ್ನೆರಡು ರಾಶಿ ಸ್ತಂಭಗಳಿವೆ,ಅವುಗಳಲ್ಲಿ ರಾಶಿ ಚಕ್ರ ಚಿಹ್ನೆಗಳನ್ನು ಕೆತ್ತಲಾಗಿದೆ.ನವರಾತ್ರಿಯ ಉತ್ಸವದಂದು ಆಭರಣಾಲಂಕೃತವಾಗಿ ಮೆರವಣಿಗೆ ಮಾಡಲಾಗುತ್ತದೆ.

ನೀವು ಇದನ್ನು ಇಷ್ಟ ಪಡಬಹುದು:ಕಾಫಿ ನಾಡಿನಲ್ಲಿ ಸ್ನೇಹಿತರ ಜೊತೆಗಿನ ಪಯಣದ ಕಥೆ

ವಿಶೇಷ ಪೂಜೆ, ಹೋಮ ಹವನಗಳಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರ ಮೂಲಕ ಇನ್ನಷ್ಟು ಭಕ್ತರ ಗಮನ ಸೆಳೆಯುತ್ತದೆ.

ಇಲ್ಲಿನ ವಿಶೇಷ ಆಕರ್ಷಣೆ

ದೇವಾಲಯದ ಆನೆಗಳು ಇಲ್ಲಿನ ಆಕರ್ಷಣೆ. ಶೃಂಗೇರಿಯಲ್ಲಿ ಶಕ್ತಿ, ಸಮಗ್ರತೆಯ ಸಂಕೇತವಾದ ಆನೆಯನ್ನು ಸಾಕಲಾಗಿದೆ. ಆನೆಯಿಂದ ಆಶೀರ್ವಾದ ಪಡೆದರೆ ಒಳ್ಳೆಯದು, ಆದ್ದರಿಂದ ಪ್ರತಿದಿನವು ಭಕ್ತರ ಸಮೂಹವೇ ಆನೆಗಳ ಸಮೀಪದಲ್ಲಿರುತ್ತವೆ.

Elephant

ಮತ್ಸ್ಯ ಸಮೂಹ

ಇಲ್ಲಿನ ತುಂಗನದಿಯಲ್ಲಿ ಸಾವಿರಾರು ಮೀನುಗಳಿವೆ. ಅವುಗಳಿಗೆ ಭಕ್ತರು ಅಲ್ಲೇ ಸಿಗುವ ಮಂಡಕ್ಕಿಯನ್ನು ಆಹಾರವನ್ನಾಗಿ ಹಾಕುತ್ತಾರೆ. ಇವುಗಳಲ್ಲಿ ಶಂಕರಾಚಾರ್ಯರು ಒಂದು ಮೀನಿಗೆ ಮೂಗುತ್ತಿ ಹಾಕಿ ಬಿಟ್ಟಿದ್ದರು ಎನ್ನಲಾಗುತ್ತದೆ, ಇಲ್ಲಿನ ಮೀನುಗಳನ್ನು ಯಾರು ಹಿಡಿಯುವಂತಿಲ್ಲ.ಪ್ರತಿ ದಿನವೂ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆಯು ಇಲ್ಲಿದೆ. ಇಷ್ಟೆಲ್ಲ ಕೇಳಿ,ಭಕ್ತರ ಸಂಕಷ್ಟಗಳ ಬಗೆಹರಿಸಿ ಬದುಕಿಗೆ ಮತ್ತೆ ಬೆಳುಕು ಚೆಲ್ಲುವ ಶೃಂಗೇರಿಯ ಶಾರದಾಂಬೆಯ ದರ್ಶನ ಪಡೆಯದೆ ಬದುಕು ವ್ಯರ್ಥ ವಲ್ಲವೇ?

Fish

ಶೃಂಗೇರಿಯ ಕಡೆಗೆ

ಬೆಂಗಳೂರಿನಿಂದ 345 km,ದಿನವಿಡೀ ಬಸ್ ಗಳು ಶೃಂಗೇರಿಯ ಕಡೆಗಿವೆ, ಹಸಿರು ಕಾಡುಗಳ ಮದ್ಯೆ ಸಾಗುವ ಬಸ್ ವರ್ಣಿಸಲಾಗದ ಅನುಭವ ನೀಡುತ್ತದೆ. ಮಂಗಳೂರಿನಿಂದ ಶೃಂಗೇರಿ 107km. ಮಂಗಳೂರು, ಉಡುಪಿಯ ಮೂಲಕ ಶೃಂಗೇರಿ ಸೇರಬಹುದು.

ನಾವು ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button