ಮ್ಯಾಜಿಕ್ ತಾಣಗಳುವಿಂಗಡಿಸದಸೂಪರ್ ಗ್ಯಾಂಗುಸ್ಮರಣೀಯ ಜಾಗ

ಕಾಫಿ ನಾಡಿನಲ್ಲಿ ಸ್ನೇಹಿತರ ಜೊತೆಗಿನ ಪಯಣದ ಕಥೆ

ಚಿಕ್ಕಮಗಳೂರು ಹಲವರು ಪದೇ ಪದೇ ಹೋಗಬೇಕೆಂದು ಬಯಸುವ ತಾಣ. ಅದರಲ್ಲೂ ಈ ಜಿಲ್ಲೆ ಮಳೆಗಾಲದಲ್ಲಿ ಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಮಳೆ ,ಮಂಜು ಕವಿದ ವಾತಾವರಣದಲ್ಲಿ ಕಾಫಿನಾಡು ನೋಡುವುದು ನಿಸರ್ಗ ಪ್ರಿಯರಿಗೆ ಹಬ್ಬ.

ಸ್ನೇಹಿತರೆಲ್ಲ ಚಿಕ್ಕಮಗಳೂರು ಹೋಗುವ ಪ್ಲಾನ್ ಮಾಡಿದ್ದೆವು. ಕೊನೆಯ ಕ್ಷಣದಲ್ಲಿ ಪ್ಲಾನ್ ಬದಲಾಗಿತ್ತು. ಬೇರೆ ತಾಣಗಳಿಗೆ ಹೋಗುವ ನಿರ್ಧಾರ ಆಗಿತ್ತು. ಮಳೆಯಿಂದ ಆ ತಾಣಗಳು ನೋಡುವುದಕ್ಕೆ ಆಗಿರಲಿಲ್ಲ. ಆ ಸಮಯ ಮತ್ತೆ ನಮ್ಮ ಪಯಣ ಹೊರಟಿದ್ದು ಚಿಕ್ಕಮಗಳೂರು ಕಡೆ. ಕಾಫಿನಾಡಿನಲ್ಲಿ ಸ್ನೇಹಿತರ ಜೊತೆಗಿನ ಪಯಣದ ಕಥೆ.

  • ನವ್ಯಶ್ರೀ ಶೆಟ್ಟಿ

ಬೇಸಿಗೆ ಸಮಯದಲ್ಲಿ ಪ್ರವಾಸ ಹೊರಡಬೇಕು ಎನ್ನುವ ಯೋಜನೆ ಮೊದಲೇ ಹಾಕಿಕೊಂಡಿದ್ದೇವು. ಆದರೆ ಅಷ್ಟರಲ್ಲಿ ಲಾಕ್ ಡೌನ್ ಆಗಿತ್ತು. ಲಾಕ್ ಡೌನ್ ಸಡಿಲಗೊಂಡ ಬಳಿಕ ಹೋಗಬೇಕು ಎಂದು ಕೊಂಡಾಗಲೇ ಕರಾವಳಿ ಜಿಲ್ಲೆಯಲ್ಲಿ ಮಳೆ ಜಾಸ್ತಿ ಆಗಿತ್ತು. ಪ್ರವಾಸ ಹೋಗಬೇಕು ಎಂದಿದ್ದ ನಮ್ಮ ಆಸೆಗೆ ಸಾಲು ಸಾಲು ವಿಘ್ನ. ಆದರೆ ಕೊನೆಗೆ ಒಂದು ದಿನ ನಿಗದಿ ಮಾಡಿ ಪ್ರವಾಸ ಪ್ಲಾನ್ ಮಾಡಿದೆವು.

ನಿಸರ್ಗದ ಸೌಂದರ್ಯ ಬಾಚಿ ಕೊಂಡಿರುವ ಚಿಕ್ಕಮಗಳೂರು ಜಿಲ್ಲೆಗೆ ಹೋಗುವುದು ನಮ್ಮ ಆಸೆಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬರುತ್ತೀನಿ ಎಂದಿದ್ದ ಸ್ನೇಹಿತೆ ಬಂದಿರಲಿಲ್ಲ. ಪ್ಲಾನ್ ಬದಲಾಗಿತ್ತು. ಕುಂದಾದ್ರಿ, ಕವಲೆದುರ್ಗ ಕಡೆ ಪ್ರವಾಸ ಹೊರಟಿದ್ದೆವು. ಆದರೆ ಅಲ್ಲಿ ಪ್ರವಾಸಿಗರಿಗೆ ಪ್ರವೇಶ ಇರಲಿಲ್ಲ. ನಿರಾಸೆ ನಿರೀಕ್ಷೆ ಗಳೊಂದಿಗೆ ಪಯಣ ಹೊರಟಿದ್ದು ಚಿಕ್ಕಮಗಳೂರು ಕಡೆಗೆ.

Friends group

ಆಗುಂಬೆಯಲ್ಲಿ ಮುಂಜಾನೆಯ ಸವಿ

ಕೆಲವು ತಿಂಗಳುಗಳ ಬಳಿಕ ಪ್ರವಾಸ ಹೊರಡುವ ಖುಷಿಯಲ್ಲಿ ನಾವಿದ್ದೇವು. ನಮ್ಮ ಪಯಣ ಮೊದಲು ಹೊರಟಿದ್ದು ಆಗುಂಬೆಗೆ. ಪ್ರವಾಸ ಹೊರಡುವಾಗ ಸುಮಾರು 6.30. ಉಡುಪಿಯಿಂದ ಆಗುಂಬೆ ಗೆ 55 ಕಿಮೀ. ನೀವು ಸೋಮೇಶ್ವರ ತಲುಪಿ ಆಗುಂಬೆಗೆ(Agumbe) ಹೋಗಬಹುದು. ಆದರೆ ಕೆಲವು ಕಾರಣದಿಂದ ನಮ್ಮ ಆಗುಂಬೆ ಪಯಣ ಹೊರಟಿದ್ದು ಉಡುಪಿಯಿಂದ ಹಾಲಾಡಿ ,ಹೆಬ್ರಿ ಮಾರ್ಗವಾಗಿ.

ಸೋಮೇಶ್ವರ ದಲ್ಲಿ ತಿಂಡಿ ತಿಂದು ಆಗುಂಬೆ ಪಯಣ ಶುರುವಾಗಿತ್ತು. ಅಷ್ಟರಲ್ಲೇ ಮಳೆ ಆರಂಭ ಆಗಿತ್ತು. ಜಿಟಿ ಜಿಟಿ ಮಳೆ , ಚುಮು ಚುಮು ಚಳಿ, ಜೊತೆಗೆ ಘಾಟಿಯ ಮಂಜು ಖುಷಿ ಜೊತೆಗೆ ಎಲ್ಲ ತಾಣಗಳನ್ನು ನೋಡುವ ಕಾತುರ. ಪ್ರವಾಸಿಗರನ್ನು ಬರ ಮಾಡಿಕೊಳ್ಳಲು ಇದೆಯೆನೋ ಎನ್ನುವಂತೆ ದಾರಿಯುದ್ದಕ್ಕೂ ಕುಳಿತಿದ್ದ ಕೋತಿ ಮರಿಗಳು.

Agumbe sunset point
ಚಿತ್ರ ಕೃಪೆ:Mahalakshmi devadiga

ಬೆಳಗಿನ ಮುಂಜಾವಿನಲ್ಲಿ ಆಗುಂಬೆಯ ಚೆಂದದ ಸನ್ ಸೆಟ್ ಪಾಯಿಂಟ್ ತಲುಪಿದೆವು. ಸೂರ್ಯಾಸ್ತ ಕ್ಕೆ ಹೆಸರಾಗಿರುವ ಈ ತಾಣ ಮಳೆಗಾಲದ ಸಮಯದಲ್ಲಿ ಬೆಳಗಿನ ಮುಂಜಾವು ಕೂಡ ಇಲ್ಲಿ ನೋಡುವುದು ಚೆಂದ. ಹಲವರ ಸಾಮಾಜಿಕ ಜಾಲತಾಣಗಳಲ್ಲಿ ಈ ತಾಣದ ಫೋಟೋ ನೋಡಿದ್ದ ನನಗೆ ಮೊದಲ ಬಾರಿ ನೋಡಿದ ಖುಷಿ .

ಆಗುಂಬೆ ಈ ಹೆಸರನ್ನು ಕೇಳಿದಾಗ ನಮಗೆ ಅದೆನೋ ಒಂದು ಹೊಸ ಹುರುಪು . ಆಗುಂಬೆಯ ಸನ್ ಸೆಟ್ ಪಾಯಿಂಟ್ ನಲ್ಲಿ ಮುಂಜಾನೆಯ ಸೂರ್ಯನ ಉದಯ , ಸಂಜೆ ಭಾಸ್ಕರನ ಅಸ್ತಂಗತ ನೋಡುವುದೇ ಚೆಂದ. ಆಗುಂಬೆಯ ಸನ್ ಸೆಟ್ ಪಾಯಿಂಟ್ ಇರುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಉಡುಪಿ ಜಿಲ್ಲೆಯಿಂದ ಹೋಗುವವರಿಗೆ ಹೆಬ್ರಿ ,ಸೋಮೇಶ್ವರ ದಾಟಿದ ಬಳಿಕ ಆಗುಂಬೆ ಘಾಟಿಯ ಸೌಂದರ್ಯದ ಅನಾವರಣ ಆಗುತ್ತಾ ಹೋಗುತ್ತದೆ. ಆಗುಂಬೆ ಹೆಚ್ಚು ಮೇಲೆ ಬೀಳುವ ಕರ್ನಾಟಕದ ಪ್ರದೇಶ. ದಕ್ಷಿಣ ಚಿರಾಪುಂಜಿ ಆಗುಂಬೆ ಎಲ್ಲ ಕಾಲಕ್ಕೂ ಪ್ರವಾಸಿಗರಿಗೆ ಇಷ್ಟ ಆಗುವ ತಾಣ.

ನಿರೀಕ್ಷಿಸದ ನಿರಾಸೆ

ಧೋ ಎಂದು ಮಳೆಯ ಸುರಿಯುವ ಕಾಲದಲ್ಲಿಯೇ ನಾವು ಪ್ರವಾಸ ಹೊರಟಿದ್ದು. ಆದರೆ ಎಲ್ಲ ಸ್ಥಳಗಳು ಓಪನ್ ಇರುತ್ತದೆ ಎನ್ನುವುದು ನಮ್ಮ ನಂಬಿಕೆಯಾಗಿತ್ತು . ಆದರೆ ಆ ನಂಬಿಕೆ ನಮ್ಮ ನಿರಾಸೆಗೆ ಕಾರಣವಾಗಿತ್ತು. ಆಗುಂಬೆ ಬಳಿಕ ನಾವು ಕುಂದಾದ್ರಿ ಬೆಟ್ಟಕ್ಕೆ ಪಯಣ ಹೊರಟಿದ್ದೆವು. ಅತಿಯಾದ ಮಳೆಯಿಂದ ಕುಂದಾದ್ರಿಗೆ ಪ್ರವಾಸಿಗರಿಗೆ ಪ್ರವೇಶ ಇರಲಿಲ್ಲ. ಅದು ನಮಗೆ ತಿಳಿದಿದ್ದು ಕುಂದಾದ್ರಿ ತಲುಪಿದ ಬಳಿಕವೇ. ಕವಲೆದುರ್ಗ ಆದರೂ ಓಪನ್ ಇರಬಹುದು ಎನ್ನುವ ನಿರೀಕ್ಷೆ ಕೂಡ ನಿರಾಸೆ ಆಗಿತ್ತು.

Agumbe ghat

ಮುಂದೆ ಎಲ್ಲಿಗೆ ಹೋಗುವುದು ಎಂದು ನಮಗೆ ಯಾರಿಗೂ ಗೊತ್ತಿಲ್ಲ. ಸಹಜವಾಗಿಯೇ ಬೇಸರ , ನಿರಾಸೆ ಆಗಿತ್ತು. ಹತ್ತಿರದ ಯಾವುದಾದ್ರೂ ಪ್ರವಾಸಿ ಸ್ಥಳ ಇದೆಯೇ ಎಂದು ಗೂಗಲ್ ನೋಡಿದಾಗ ಗೂಗಲ್ ತೋರಿಸಿದ್ದು ಬರ್ಕಾನ ಫಾಲ್ಸ್. ಆದರೆ ನಾವು ಹೋದ ದಾರಿ ತಪ್ಪಿತ್ತೋ , ಗೂಗಲ್ ಮ್ಯಾಪ್ ಸೂಚಿಸಿದ ದಾರಿ ತಪಾಯಿತ್ತೋ ಗೊತ್ತಿಲ್ಲ. ಮತ್ತೆ ಕೂಡ ನಿರಾಸೆ ಫಾಲ್ಸ್ ನೋಡಲು ಆಗಲಿಲ್ಲ. ಆದರೆ ಅರ್ಧಕ್ಕೆ ಪಯಣ ಮೊಟಕು ಗೊಳಿಸುವುದು ಯಾರಿಗೂ ಇಷ್ಟವಿರಲಿಲ್ಲ.

ಚಿಕ್ಕಮಗಳೂರು ಕಡೆಗೆ ನಮ್ಮ ಪಯಣ

ಎಲ್ಲರಿಗೂ ಮುಂದೆ ಎಲ್ಲಿಗೆ ಹೋಗುವುದು ಎನ್ನುವ ಗೊಂದಲ . ಆದರೆ ಹೇಗೋ ಕೊನೆಗೆ ಚಿಕ್ಕಮಗಳೂರು (chikmangaluru)ಹೋಗುವ ನಿರ್ಧಾರ ಮಾಡಿಯೇ ಬಿಟ್ಟೆವು. ಆದರೆ ಅಲ್ಲಿ ಕೂಡ ಯಾವುದೆಲ್ಲ ಜಾಗ ನೋಡಬೇಕು ಎನ್ನುವ ಬಗ್ಗೆ ನಮಗೆ ಖಚಿತತೆ ಇರಲೇ ಇಲ್ಲ.

ಶೃಂಗೇರಿ(shringeri) ಶಾರದಾಂಬೆ ದೇವಸ್ಥಾನ ಓಪನ್ ಇರುತ್ತೋ ಇಲ್ಲವೋ ಅನ್ನುವ ಬಗ್ಗೆ ಗೊಂದಲವಿತ್ತು. ದೇವಸ್ಥಾನ ತೆಗಿದಿರುತ್ತೆ ಅನ್ನುವುದು ಕನ್ಫರ್ಮ್ ಮಾಡಿಕೊಂಡು ಕಾಫಿ ನಾಡು ಹೊರಟೆವು.

ಆಗುಂಬೆಯಿಂದ ನಾವು ಹೊರಟಿದ್ದು ಶೃಂಗೇರಿಗೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತಿತ್ತು. ಈ ಕಾರಣದಿಂದ ರಸ್ತೆ ಹೇಗಿರುತ್ತೆ ಎನ್ನುವ ಬಗ್ಗೆ ಕೂಡ ಅನುಮಾನವಿತ್ತು. ಆದರೆ ಯಾವುದೇ ತೊಂದರೆ ಇಲ್ಲದೆ ಶಾರದಾಂಭೆಯ ಸನ್ನಿಧಿ ತಲುಪಿದೆವು.

Shringeri

ನಾನು ಶೃಂಗೇರಿ ಹೋಗಿದ್ದು ಎರಡನೇ ಸಲ. ಆದರೆ ಹಿಂದಿನ ಬಾರಿ ಹೋದಾಗ ಶಾರದಾಂಬೆಯ ದರ್ಶನ ಭಾಗ್ಯ ಸಿಕ್ಕಿರಲಿಲ್ಲ. ಆದರೆ ಈ ಬಾರಿ ದೇವರನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತ್ತು. ಗುರು ಪೂರ್ಣಿಮೆಯ ದಿನವಾಗಿದ್ದ ಕಾರಣ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ನೀವು ಇದನ್ನು ಇಷ್ಟ ಪಡಬಹುದು: ಇನ್‌ಕ್ರಿಡಿಬಲ್ ಯಲ್ಲಾಪುರದಲ್ಲೊಂದು ಇಂಪಾಸಿಬಲ್ ಜರ್ನಿ

ಒಂದಷ್ಟು ಫೋಟೋ ಕ್ಲಿಕ್ಕಿಸಿ ಸನ್ನಿಧಿಯಲ್ಲಿ ಅನೆ ನೋಡಿ ಖುಷಿ ಪಟ್ಟು ಸ್ವಲ್ಪ ಸಮಯ ಕಳೆದು , ಊಟ ಮಾಡಿ ಮುಂದೆ ಹೊರಟಿದ್ದು ಹೊರನಾಡು (Horanadu) ಅನ್ನಪೂರ್ಣೇಶ್ವರಿ ಸನ್ನಿಧಿಗೆ

ನಾವು ಚಿಕ್ಕಮಗಳೂರು ಜಿಲ್ಲೆಗೆ ಪಯಣ ಬೆಳೆಸಿದ್ದೇ ಗೂಗಲ್ ಮ್ಯಾಪ್ ನಂಬಿ. ಶೃಂಗೇರಿ ಯಿಂದ ಹೊರನಾಡು ಹೊರಟಿದ್ದು ಕೂಡ ಗೂಗಲ್ ಫ್ರೆಂಡ್ ಸಹಾಯದಿಂದಲೇ. ಗೂಗಲ್ ಮ್ಯಾಪ್ ನಮಗೆ ತೋರಿಸಿದ ಹಾದಿಯಲ್ಲಿ ಶೃಂಗೇರಿ ಯಿಂದ ಹೊರನಾಡು ಗೆ ಸುಮಾರು 40ಕಿಮೀ. ಹೋಗುವ ಮಾರ್ಗ ಮಧ್ಯ ನಮ್ಮ ಕಣ್ಣಿಗೆ ಬಿದ್ದಿದ್ದು ಚೆಂದದ ಫಾಲ್ಸ್. ಅದು ತೀರ್ಥ ಕೆರೆ ಫಾಲ್ಸ್.

Theerthakere falls

ಮಳೆಗಾಲದಲ್ಲಿ ಪ್ರಕೃತಿ ನೋಡುವುದೇ ಚೆಂದ. ಅದರಲ್ಲೂ ಧುಮ್ಮಿಕ್ಕಿ ಹರಿಯುವ ಜಲಪಾತದ ನಯನಮನೋಹರ ದೃಶ್ಯ ನೋಡುವುದು ಇನ್ನೂ ಚೆಂದ. ಶೃಂಗೇರಿಯಿಂದ ಹೊರನಾಡಿಗೆ ಹೋಗುವಾಗ ಸಿಗುವ ತೀರ್ಥಕೆರೆ ಫಾಲ್ಸ್(Theertha kere falls) ದೃಶ್ಯ ಸೊಗಸಾಗಿತ್ತು.

ನಾವು ಹೊರನಾಡು ತಲುಪುವಾಗ ಮತ್ತೆ ಮಳೆ ಆರಂಭವಾಗಿತ್ತು. ಅಲ್ಲಿಗೆ ತಲುಪುವಾಗ ಸುಮಾರು ಗಂಟೆ 3.30 ಆಗಿತ್ತು .ಅಲ್ಲಿ ಅನ್ನಪೂರ್ಣೆಶ್ವರಿಯ ದರ್ಶನ ಪಡೆದು ,ಕೆಲವು ತಿಂಗಳುಗಳ ನಂತರ ಸಿಕ್ಕಿದ್ದು ಸೂಪರ್ ಸೀನಿಯರ್ ಭೇಟಿ ಮಾಡಿ ಹೊರಟಿದ್ದು ಕಳಸ(kalasa) ಕಡೆಗೆ.

Horanadu

ಮಳೆ ,ಮಂಜು ಜೊತೆಗಿನ ಚಳಿಯಲ್ಲಿ ನಡೆಯಲು ಕಷ್ಟ ಅನ್ನುವ ಭಾವನೆ. ಚಳಿಯ ನಡುವೆ ಕೂಡ ಕಾರಿನಲ್ಲಿ ಹೋಗುವಾಗ ಅದೇನೋ ಒಂದು ಹಿತ ಅನುಭವ. ಕಳಸ ಹೋದ ಮೇಲೆ ಕಳಸೇಶ್ವರ ಸನ್ನಿಧಿಗೆ ಬಂದರೆ ಪಯಣಕ್ಕೆ ಅರ್ಥ ಇರಲ್ಲ.

ಕಳಸದ ಪ್ರಸಿದ್ಧ ಕಳಸೇಶ್ವರ ಸನ್ನಿಧಿಗೆ ಹೋಗಿ ಬಂದೆವು. ಕಾಫಿ ನಾಡು ಹೋದ ಮೇಲೆ ಕಾಫಿ ಸವಿಯದಿರಲು ಹೇಗೆ ಸಾಧ್ಯ. ರುಚಿಯಾದ ಕಾಫಿ ಹೀರಿ, ರುಚಿಯಾದ ತಿಂಡಿ ತಿಂದು ನಮ್ಮ ಪಯಣ ಮರಳಿ ಹೊರಟಿದ್ದು ಉಡುಪಿ ಕಡೆಗೆ.

Kalaseshwara temple

ಮತ್ತೆ ಮತ್ತೆ ಹೋಗಬೇಕು ಎನ್ನುವ ಆಸೆ

ಮಳೆಗಾಲದಲ್ಲಿ ಕಾಫಿ ನಾಡಿನ ಸೌಂದರ್ಯಕ್ಕೆ ನಾನಂತೂ ಮೂಕವಿಸ್ಮಿತಳಾಗಿದ್ದೆ .ಕುದುರೆಮುಖ ಚೆಕ್ ಪೋಸ್ಟ್ ನಿಂದ ಕಾರ್ಕಳ ಹೋಗುವ ಹಾದಿಯಲ್ಲಿ ನಾನು ಪ್ರಯಾಣ ಮಾಡಿದ್ದು ಇದೇ ಮೊದಲ ಬಾರಿ.

Estate

ಹಸಿರ ಸೌಂದರ್ಯ ಹೆಜ್ಜೆ ಹೆಜ್ಜೆಗೂ ನನಗೊಂದು ಕೌತುಕದ ಅನುಭವ. ಕತ್ತಲೆಯಲ್ಲಿ ಕುದುರೆಮುಖ ಚೆಕ್ ಪೋಸ್ಟ್ ಹಾದಿಯಲ್ಲಿ ಹೋಗುವಾಗ ನಮ್ಮದೇ ಹತ್ತಾರು ಕಥೆಗಳು ವಿನಿಮಯ ಆಗುತ್ತಿತ್ತು. ನೆಟರ್ಕ್ ಸಿಕ್ಕಿದ್ದರೆ ಮೊಬೈಲ್ ನಲ್ಲಿ ನಾವು ಮುಳುಗಿ ಹೋಗುವ ಸಾಧ್ಯತೆಗಳು ಇತ್ತು. ಆದರೆ ಕೊಂಚವೂ ನೆಟ್ವವರ್ಕ್ ಸಿಗದೆ ಕುದುರೆಮುಖ ಚೆಕ್ ಪೋಸ್ಟ್ ನಿಂದ ಕಾರ್ಕಳ ಕಡೆಗಿನ ಹಾದಿಯಲ್ಲಿ ನಮ್ಮ ನಡುವೆ ಅದೆಷ್ಟೋ ಕಥೆಗಳು ವಿನಿಮಯ ಆಗಿದ್ದವು. ಸಂಜೆ ಆಗಿದ್ದ ಕಾರಣಕ್ಕೋ ಏನೋ ಹೋದಷ್ಟು ದಾರಿ ಸಾಗುವುದೇ ಇಲ್ಲವೇನೋ ಅನ್ನುವ ಅನುಭವ ನಮ್ಮದು. ಆದರೆ ಸುತ್ತಲ ಹಸಿರು ನಮಗೆ ಇನ್ನಷ್ಟು ಹುಮ್ಮಸ್ಸು ನೀಡುತ್ತಿತ್ತು.

ಕಾಫಿ ಎಸ್ಟೇಟ್, ದೂರದಲ್ಲಿ ನೋಡಲು ಸಿಕ್ಕ ಗಂಗಾಮೂಲ, ,ಮಂಜು, ಮಳೆ, ನೋಡಲಾಗದೇ ಬಾಕಿ ಉಳಿದಿರುವ ಹಲವು ತಾಣ, ಧುಮ್ಮಿಕ್ಕಿ ಹರಿಯುವ ನೀರಿನ ಝರಿಗಳು ಮತ್ತೆ ಮತ್ತೆ ಚಿಕ್ಕಮಗಳೂರು ನೋಡಬೇಕು ಎನ್ನುವ ಆಸೆಯನ್ನು ಹುಟ್ಟಿಸಿ ಬಿಟ್ಟಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ .

Related Articles

Leave a Reply

Your email address will not be published. Required fields are marked *

Back to top button