ದೂರ ತೀರ ಯಾನವಿಂಗಡಿಸದಸ್ಮರಣೀಯ ಜಾಗ

ಇನ್‌ಕ್ರಿಡಿಬಲ್ ಯಲ್ಲಾಪುರದಲ್ಲೊಂದು ಇಂಪಾಸಿಬಲ್ ಜರ್ನಿ

ಯಲ್ಲಾಪುರ ಪ್ರವಾಸಿಗರ ಮೆಚ್ಚಿನ ತಾಣ. ಅದರಲ್ಲೂ ಮಳೆಗಾಲದಲ್ಲಿ ಸೌಂದರ್ಯವೇ ಮೈವೆತ್ತಂತೆ ಇರುವ ಯಲ್ಲಾಪುರದಲ್ಲೊಂದು ಸುತ್ತು ಹೊಡೆದ, ಸೋನಿಯಾ ಆರ್.ಸಿ ಬರೆದ ಅವರ ಮಳೆಗಾಲದ ಪ್ರವಾಸದ ಕಥೆಯಿದು.

  • ಸೋನಿಯಾ ಆರ್.ಸಿ, ಹುಬ್ಬಳ್ಳಿ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಜಲಪಾತಗಳ ತವರೂರು ಎಂದೇ ಖ್ಯಾತಿ ಪಡೆದಿದೆ. ಅಲ್ಲದೆ ಅತಿಹೆಚ್ಚು ಅರಣ್ಯವನ್ನು ಒಳಗೊಂಡಿರುವ ನಾಡದು. ವರ್ಷದ ಬಹುತೇಕ ಎಲ್ಲ ಮಾಸಗಳಲ್ಲಿಯೂ ಹಸಿರಿನಿಂದ ಕಂಗೊಳಿಸುವ ರಮಣೀಯ ತಾಣಗಳನ್ನೊಳಗೊಂಡು, ಪ್ರಕೃತಿಯ ರಹಸ್ಯ ಕೌತುಕಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಈ ಯಲ್ಲಾಪುರದ ಪ್ರಯಾಣ ಬೆಳೆಸುವುದೇ ಒಂದು ವಿಶಿಷ್ಟ ಉಲ್ಲಾಸ. ಪಶ್ಚಿಮ ಘಟ್ಟಗಳ ನಡುವೆ ಹಸಿರ ಸಿರಿಗಳಿಂದ, ತನ್ನ  ವಿಭಿನ್ನ ಸಂಸ್ಕೃತಿ ಹಲವಾರು ಪ್ರವಾಸಿ ತಾಣಗಳಿಗೆ ಇದು ಹೆಸರುವಾಸಿ.

ಮಳೆಗಾಲ ಶುರುವಾಯಿತೆಂದರೆ ಯಲ್ಲಾಪುರದ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಎರಡು ಕಣ್ಣು ಸಾಲದು. ಬಹುತೇಕ ಮಲೆನಾಡಿನ ಎಲ್ಲ ಪ್ರದೇಶಗಳು ಹಚ್ಚ ಹಸಿರಿನಿಂದ, ದಟ್ಟ ಮೋಡಗಳಿಂದ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತವೆ. ಅಷ್ಟೇ ಅಲ್ಲದೇ ಇಲ್ಲಿನ ಜನರ ಜೀವನ ಶೈಲಿ, ಹವ್ಯಕ ಕನ್ನಡದ ಧಾಟಿ, ಅವರು ಪ್ರಕೃತಿಯೊಡನೆ ಜೀವನ ಹಂಚಿಕೊಂಡಿವ ಬಗೆ ಎಲ್ಲವೂ ಕಣ್ಮನ ಸೆಳೆಯುತ್ತವೆ. 

ಮೂಲತಃ ಹುಬ್ಬಳ್ಳಿಯವಳಾದ ನನಗೆ ಇಂತಹ ಹಸಿರು ಬೆಟ್ಟ, ಗುಡ್ಡ, ನದಿ, ಜಲಪಾತ, ದಟ್ಟ ಕಾಡುಗಳತ್ತ ಸೆಳೆತ ಕೊಂಚ ಜಾಸ್ತಿಯೇ. ಚಿಕ್ಕ ವಯಸ್ಸಿನಿಂದಲೂ ಪ್ರತಿವರ್ಷ ಅಜ್ಜಿ ಕಟ್ಟಿಕೊಂಡ ಹರಕೆಯ ನೆಪದಿಂದ ಧರ್ಮಸ್ಥಳ, ಶೃಂಗೇರಿ, ಹೊರನಾಡು, ಗೋಕರ್ಣ, ಇಡಗುಂಜಿ, ಶಿರಸಿ ಅಂತಾ ಎಲ್ಲವೂ ಸುತ್ತಿದ್ದಾಯ್ತು. ಆದರೆ ಈ ಎಲ್ಲಾ ಸ್ಥಳಗಳಿಗಿಂತ ತುಂಬಾ ಹತ್ತಿರವಿರುವ ಯಲ್ಲಾಪುರದ ಸೊಬಗನ್ನು ಸವಿಯಲು ಆಗಿರಲೇ ಇಲ್ಲ. 

ಚಂದಗುಳಿ ಸಿದ್ದಿ ವಿನಾಯಕ ದೇವಸ್ಥಾನ:

ಲಾಕ್‌ಡೌನ್‌ನಿಂದ ಮನೆಯಲ್ಲಿ ಕೂತು ಬೋರಾಗಿ, ಎದ್ದು ಸೀದ ಯಲ್ಲಾಪುರದತ್ತ ಮುಖ ಮಾಡಿದೆ. ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕೇವಲ 70 ಕಿಮೀ ಇದ್ದು, ಒಂದೂವರೆ ಗಂಟೆಯಲ್ಲಿ ತಲುಪಬಹುದು. 

Chandaguli Ganteganapati Temple Yellapura Uttara Kannada

ನಾನು ಮೊದಲು ಭೇಟಿಕೊಟ್ಟಿದ್ದು ಯಲ್ಲಾಪುರ ಬಸ್‌ನಿಲ್ದಾಣದಿಂದ 15 ಕಿಮೀ ದೂರುದಲ್ಲಿರುವ ಚಂದಗುಳಿಗೆ. ಚಂದಗುಳಿಯಲ್ಲಿಯ ಶ್ರೀ ಸಿದ್ದಿ ವಿನಾಯಕ ದೇವಸ್ಥಾನ, ಅಲ್ಲಿನ ಪರಿಸರ ಮನಸ್ಸಿಗೆ ಏನೋ ಒಂಥರಾ ಶಾಂತಿ ನೀಡುತ್ತದೆ. ಈ ದೇವಸ್ಥಾನವು ಗಂಟೆ ಗಣಪತಿ ದೇವಸ್ಥಾನ ಎಂದೇ ಹೆಸರುವಾಸಿ. ಬರೀ ಕರ್ನಾಟಕದಿಂದ ಅಷ್ಟೇ ಅಲ್ಲದೇ ಹೊರರಾಜ್ಯಗಳಿಂದಲೂ ಭಕ್ತರು ಹಾಗೂ ಪ್ರವಾಸಿಗರು ಇಲ್ಲಿ ಭೇಟಿ ಕೊಡುತ್ತಾರೆ. 

ನೀವುಇದನ್ನುಇಷ್ಟಪಡಬಹುದು: ಯಾಣದ ಕಡೆಗೆ ಕುಟುಂಬದ ಯಾನ

ಇಲ್ಲಿಯ ಇನ್ನೊಂದು ವಿಶೇಷವೆಂದರೆ, ಇಲ್ಲಿ ಬಂದು ಏನೇ ಕೇಳಿಕೊಂಡರು ಅದು ನೆರವೇರುತ್ತದೆ ಮತ್ತು ಅದರ ಪ್ರತಿಫಲವಾಗಿ ಭಕ್ತರು ಗಂಟೆಗಳನ್ನು ತಂದು ದೇವಸ್ಥಾನಕ್ಕೆ ಕಟ್ಟುತ್ತಾರೆ. ಹೀಗಾಗಿ ಈ ಸ್ಥಳಕ್ಕೆ ‘ಚಂದಗುಳಿ ಗಂಟೆಗಣಪತಿ ದೇವಸ್ಥಾನ’ ಎಂದು ಕರೆಯಲಾಗುತ್ತದೆ. ನಿಮ್ಮ ಮನಸ್ಸಿನ ಕಾಮನೆಗಳನ್ನು ಇಡೇರಿಸಿಕೊಳ್ಳಲು ಈ ದೇವಸ್ಥಾನಕ್ಕೆ ಒಂದು ಬಾರಿ ಭೇಟಿಕೊಡಿ. 

ಮಾಗೋಡು ಜಲಪಾತ:

ಮಳೆಗಾಲ ಶುರುವಾಯಿತು ಎಂದರೆ ಮುಗಿಯಿತು. ಯಲ್ಲಾಪುರದ ಪ್ರದೇಶದೆಲ್ಲೆಡೆ ಸಣ್ಣ-ಪುಟ್ಟ ಜಲಧಾರೆಗಳು ಸೃಷ್ಟಿಯಾಗಿಬಿಡುತ್ತವೆ. ಅಲ್ಲದೇ ಪ್ರವಾಸಿಗರ ನೆಚ್ಚಿನ ಜಲಪಾತಗಳಿಗೆ ಜೀವ ಕಳೆ ಬಂದುಬಿಡುತ್ತದೆ. ಚಂದಗುಳಿ ಗಣಪತಿ ದೇವಸ್ಥಾನದಿಂದ ಕೇವಲ 7 ಕಿಮೀ ದೂರ ಕಾನನದಲ್ಲಿ ಕ್ರಮಿಸಿದರೆ ಈ ಪ್ರಸಿದ್ದ ಮಾಗೋಡು ಜಲಪಾತ ಸಿಗುತ್ತದೆ. 

Magod Waterfalls

ಮಳೆಗಾಲದಲ್ಲಿ ಈ ಮಾಗೋಡು ಜಲಪಾತ ಹರಿಯುವ ರೀತಿಯನ್ನು ನೋಡಿದರೆ ಈ ಹಸಿರ ಸಿರಿ ತನ್ನ ಒಡಲಲ್ಲಿ ಇನ್ನು ಅದೆಷ್ಟು ಸೌಂದರ್ಯವನ್ನು ಬಚ್ಚಿಟ್ಟುಕೊಂಡಿದೆ ಎಂದು ಅನ್ನಿಸದೆ ಇರದು. ಮೇಲಿನಿಂದ ಧುಮ್ಮಿಕ್ಕುವ ಈ ಜಲಪಾತದ ನೀರಿನ ಶಬ್ಧವು ಕಿವಿಗೆ ಬೀಳುತ್ತಿದ್ದಂತೆಯೇ ರೋಮಾಂಚನ ಉಂಟುಮಾಡುತ್ತದೆ. ಮಾಗೋಡು ನಮ್ಮನ್ನು ಸ್ವಾಗತಿಸಿದ ರೀತಿಗೆ ನಾನು ಕಳೆದೇ ಹೋಗಿದ್ದೆ. 

ಇನ್ನೊಂದು ವಿಶೇಷವೆಂದರೆ ಈ ಮಾಗೋಡು ಜಲಪಾತವನ್ನು ನಾವು ನಾಲ್ಕು ಬಗೆಯಲ್ಲಿ ನೋಡಬಹುದು. ಈ ಜಲಪಾತವನ್ನು ವೀಕ್ಷಿಸಲು ನಾಲ್ಕು ವೀವ್ ಪಾಯಿಂಟ್‌ಗಳನ್ನು ಮಾಡಲಾಗಿದೆ. ಒಂದೊಂದು ವೀವ್ ಪಾಯಿಂಟ್‌ನಿಂದಲೂ ಬೇರೆ ಬೇರ ರೀತಿ ಕಾಣುವ ಜಲಧಾರೆ ಅದ್ಭುತ ಸೃಷ್ಟಿ.

ಜೇನುಕಲ್ ಗುಡ್ಡ

ವ್ಹಾವ್! ಜೇನುಕಲ್ ಗುಡ್ಡದ ಬಗ್ಗೆ ಹೇಳಲು ಪದಗಳೇ ಸಾಲೋಲ್ಲ. ಅಷ್ಟು ಸುಂದರ ಅದು. ಈ ಗುಡ್ಡದ ಮೇಲೆ ನಿಂತು ಮೌನವಾಗಿ ಪ್ರಕೃತಿಯನ್ನು ಸವಿತಿದ್ರೆ ಸ್ವರ್ಗಕ್ಕೆ ಮೂರೇ ಗೇಣು. ಹೃದಯದ ಬಡಿತ ಹಿಡಿತಕ್ಕೆ ಬಾರದೇ, ಆಕಾಶದ ತುಂಬೆಲ್ಲಾ ಹಾರುತ್ತಲೇ ಇರುತ್ತೆ. ಕಣ್ಣಿಗೆ ಹಬ್ಬದಂತೆ ಕಾಣುವ ಈ ತಾಣ ಥೇಟ್ ಸ್ವರ್ಗವೇ. 

Jenukallu Gudda Yellapura

ಲಾಕ್‌ಡೌನ್ ನಿಂದ ಮನೆಯಲ್ಲಿಯೇ ಇದ್ದು ಇದ್ದು ಬೇಸತ್ತಿದ್ದರೆ ಈ ಜಾಗಗಳಿಗೆ ಭೇಟಿಕೊಟ್ಟು ಮೂಡ್ ಫ್ರೆಶ್ ಮಾಡಿಕೊಳ್ಳುವುದಕ್ಕೆ ಯಲ್ಲಾಪುರ ಬೆಸ್ಟ್ ಪ್ಲೇಸ್. ಈ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಪ್ರವಾಸ ಮಾಡುವುದೇ ಒಂದು ಅದ್ಬುತ ಅನುಭವ. ಇಲ್ಲಿಯ ಮಳೆಯಲ್ಲಿ ನೆನೆಯುವುದು ಒಂದು ತಹರದ ಖುಷಿ. ಈ ಊರು ನಮಗೆ ತುಂಬಿಕೊಳ್ಳಲಾಗದಷ್ಟು ಖುಷಿ ನೀಡುವುದರಲ್ಲಿ ಸಂದೇಹವೇ ಇಲ್ಲ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button