ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ 2023; ಮಹಾರಾಷ್ಟ್ರಕ್ಕೆ “ಸ್ವಚ್ಛ ರಾಜ್ಯ” & ಇಂದೋರ್, ಸೂರತ್ ಗೆ “ಸ್ವಚ್ಛ ನಗರ” ಸ್ಥಾನ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಪ್ರಶಸ್ತಿಗಳನ್ನು ಗುರುವಾರ ಪ್ರದಾನ ಮಾಡಿದ್ದು, ಇಂದೋರ್ ಮತ್ತು ಸೂರತ್ ನಗರಗಳಿಗೆ ದೇಶದ ‘ಸ್ವಚ್ಛ ನಗರಗಳು’ ಸ್ಥಾನ ದೊರೆತರೆ, ಮಹಾರಾಷ್ಟ್ರ “ಸ್ವಚ್ಛ ರಾಜ್ಯ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸತತ ಏಳು ವರ್ಷದಿಂದ “ಇಂದೋರ್” (Indore) ದೇಶದ ಸ್ವಚ್ಛ ನಗರ (Cleanest City) ಎಂಬ ಗೌರವಕ್ಕೆ ಪಾತ್ರವಾಗಿದೆ. ಕಳೆದ ವರ್ಷ ಮೂರನೇ ಸ್ಥಾನವನ್ನು ಪಡೆದಿದ್ದ “ನವಿ ಮುಂಬೈ” ನಗರವು ಈ ವರ್ಷವೂ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ.
‘ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ 2023’ ರಲ್ಲಿ (Swachh Survekshan Awards 2023) ಸ್ವಚ್ಛತಾ ಕಾರ್ಯದಲ್ಲಿ ‘ಉತ್ತಮ ಪ್ರದರ್ಶನ ನೀಡುವ ರಾಜ್ಯಗಳ’ ವಿಭಾಗದಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ವಿಭಾಗದಲ್ಲಿ ನೀಡುವ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಹಾರಾಷ್ಟ್ರದ ಸಾಸ್ವಾಡ್ ಸ್ವಚ್ಛ ನಗರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಛತ್ತೀಸ್ಗಢದ ಪಟಾನ್ ಮತ್ತು ಮಹಾರಾಷ್ಟ್ರದ ಲೋನಾವಾಲಾ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದೆ.
ವಾರಣಾಸಿ ಮತ್ತು ಪ್ರಯಾಗರಾಜ್ ಗಳನ್ನು “ಸ್ವಚ್ಛ ಗಂಗಾ ಪಟ್ಟಣ” ಗಳೆಂದು ಗುರುತಿಸಲ್ಪಟ್ಟಿವೆ. ಮಧ್ಯಪ್ರದೇಶದ MHOW ಕಂಟೋನ್ಮೆಂಟ್ ಬೋರ್ಡ್ಗೆ “ಸ್ವಚ್ಛ ಕಂಟೋನ್ಮೆಂಟ್ ಪಟ್ಟಣ” ಎಂಬ ಪ್ರಶಸ್ತಿ ದೊರೆತಿದೆ.
2016ರಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ನಡೆಸುತ್ತಿರುವ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯು, ವಿಶ್ವದ ಅತಿದೊಡ್ಡ ನಗರ ನೈರ್ಮಲ್ಯ ಮತ್ತು ಸ್ವಚ್ಛತೆಯ ಸಮೀಕ್ಷೆಯಾಗಿದೆ.
ಈ ವರ್ಷ, ಇದು ಎಂಟನೇ ವರ್ಷದ ಸಮೀಕ್ಷೆಯನ್ನು ನಡೆಸಿದ್ದು, ಒಟ್ಟು 3,000 ಮೌಲ್ಯಮಾಪಕರು, 46 ಸೂಚಕಗಳಲ್ಲಿ 4,500 ಕ್ಕೂ ಹೆಚ್ಚು ನಗರಗಳ ಮೌಲ್ಯಮಾಪನವನ್ನು ನಡೆಸಿದೆ.
46 ಸೂಚಕಗಳು ಪ್ರತ್ಯೇಕವಾದ ಮನೆ-ಮನೆ ತ್ಯಾಜ್ಯ ಸಂಗ್ರಹಣೆ, ಶೂನ್ಯ ತ್ಯಾಜ್ಯ ನಿರ್ವಹಣೆ, ಅಂಗವಿಕಲ ಸ್ನೇಹಿ ಶೌಚಾಲಯಗಳು ಮತ್ತು ಸುಧಾರಿತ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ.
ಭಾರತದ ಟಾಪ್ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಈ ವರ್ಷ ಮೈಸೂರು ನಗರಕ್ಕೆ ಸ್ಥಾನ ದೊರೆತಿಲ್ಲ. 2022ರಲ್ಲಿ ಮೈಸೂರು ಎಂಟನೇ ಸ್ಥಾನ ಪಡೆದಿತ್ತು. 2020ರಲ್ಲಿ ಮೈಸೂರು 5ನೇ ಸ್ಥಾನದಲ್ಲಿ ಇತ್ತು. ಆದರೆ ಈ ವರ್ಷ 27ನೇ ಸ್ಥಾನಕ್ಕೆ ಕುಸಿದಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.