ಪ್ರಕೃತಿ ಮತ್ತು ಇತಿಹಾಸದ ಸಮ್ಮಿಲನ ‘ಮಿರ್ಜಾನ್ ಕೋಟೆ’
ಪ್ರಯಾಣಗಳೇ ಹಾಗೆ ನಾವು ಪ್ರಯಾಣಿಸಬೇಕು ಎಂದು ಅಂದುಕೊಂಡಾಗ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಏನೂ ತಯಾರಿ ನಡೆಸದೆ ಇದ್ದರೂ ಪ್ರಯಾಣ ಮಾಡಿಬಿಡುತ್ತೇವೆ ಎನ್ನುತ್ತಲೇ ತನ್ನ ಮಿರ್ಜಾನ್ ಕೋಟೆಯ ಪ್ರಯಾಣದ ಸವಿ ನೆನಪುಗಳನ್ನು ಬಿಚ್ಚಿಡುತ್ತಾರೆ ಶ್ರೀಲಕ್ಷ್ಮಿ ಭಟ್ಟ.
- ಮಧುರಾ ಎಲ್ ಭಟ್
ನಾವು ನಮ್ಮ ಕಾಲೇಜ್ ದಿನಗಳಲ್ಲಿ ಪ್ರಯಾಣ ಮಾಡಬೇಕು ಎಂದು ಎಷ್ಟೆಲ್ಲ ತಯಾರಿಗಳನ್ನೂ ಮಾಡಿಕೊಳ್ಳುತ್ತಿದ್ದೆವು ಆದರೆ ಅದು ಕೆಲವು ಸಮಯಗಳಲ್ಲಿ ಮಾತ್ರ ಯಶಸ್ಸನ್ನು ಪಡೆದುಕೊಳ್ಳುತಿತ್ತು. ಹಾಗೆ ನಾವು ಪ್ಲ್ಯಾನ್ ಮಾಡಿ ಹೋದ ಪ್ರವಾಸದಲ್ಲಿ ಮಿರ್ಜಾನ್ ಕೋಟೆಯ ಪ್ರವಾಸವು ಒಂದು.
ಈ ಮಿರ್ಜಾನ್ ಕೋಟೆಯನ್ನು ಹತ್ತಬೇಕು. ಅಲ್ಲಿ ಎಲ್ಲಾ ಓಡಾಡಿ ವಿಷಯಗಳ ಸಂಗ್ರಹಣೆ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ಅದರಂತೆಯೇ ನಾವು ಮಿರ್ಜಾನ್ ಕೋಟೆಯ ದರ್ಶನಕ್ಕೆ ಹೋದೆವು.
ಮಿರ್ಜಾನ್ ಕೋಟೆ ಕುಮಟಾ ದಿಂದ ಸುಮಾರು 12 ಕಿಲೋಮೀಟರ್ ನಷ್ಟು ದೂರವಿದೆ. ಈ ಕೋಟೆಯನ್ನು ಕರಿಮೆಣಸು ರಾಣಿ ಎಂದೇ ಪ್ರಖ್ಯಾತಳಾಗಿರುವ ಗೇರುಸೊಪ್ಪೆ ರಾಣಿ ಚೆನ್ನಭೈರಾದೇವಿ ೧೬೦೮-೧೬೪೦ರ ನಡುವೆ ನಿರ್ಮಿಸಿದಳು ಎಂಬ ನಂಬಿಕೆಯಿದೆ.
ನಾವು ಎಲ್ಲಾ ಸ್ನೇಹಿತರು ಸೇರಿ ಮಾತನಾಡಿಕೊಂಡು ಬೆಳಗ್ಗೆ ಸುಮಾರು 7 ಗಂಟೆ ಗೆ ಮನೆಯಿಂದ ಹೊರಟೆವು. ಒಬ್ಬೊಬ್ಬರ ಮನೆ ಒಂದೊಂದು ಕಡೆ ಇರುವುದರಿಂದ ಎಲ್ಲರೂ ಸ್ವಲ್ಪ ಬೇಗನೆ ಹೊರಟಿದ್ದೆವು ಸರಿ ಸುಮಾರು 7.30 ಗಂಟೆಗೆ ಕುಮಟಾಕ್ಕೆ ಬಂದು ಸೇರಿದೆವು. ನಂತರ ಎಲ್ಲಾ ಒಂದು ಜೀಪಿನಲ್ಲಿ ಕುಳಿತು ಮಿರ್ಜಾನ್ ಕೋಟೆಯ ಕಡೆ ಪಯಣ ಬೆಳೆಸಿದೆವು.
ಗಾಡಿಯಲ್ಲಿ ಕೂತು ಮಿರ್ಜಾನ್ ತಲುಪುವವರೆಗೂ ನಮ್ಮ ಹಾಡು, ಒಗಟು ಬಿಡಿಸುವುದು, ದಂಶರತ್ ಎಲ್ಲಾ ಆಟವನ್ನು ಆಡಿದೆವು. ಆಟವಾಡುತ್ತಲೇ ಇದ್ದ ನಮಗೆ ದಾರಿ ಸಾಗಿದ್ದೇ ತಿಳಿಯಲಿಲ್ಲ. ನಂತರ ಮಿರ್ಜಾನ್ ಕೋಟೆ ಸಮೀಪಿಸುತ್ತಲೇ ಜೀಪಿನಿಂದ ಇಳಿದು ಕೋಟೆಯತ್ತ ಮುಖ ಮಾಡಿದೆವು.
ನೀವು ಇದನ್ನು ಇಷ್ಟಪಡಬಹುದು:ಕಾಸರಗೋಡಿನ ಬೇಕಲದಲ್ಲಿದೆ ಕೇರಳದ ಅತಿ ದೊಡ್ಡ ಕೋಟೆ
ಆ ಕೋಟೆ ಸುಮಾರು ೧೧.೫ ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಇರಬಹುದು. ಅತ್ಯಂತ ಸುಂದರವಾಗಿ ಹಾಗೂ ಹಳೆಯ ಕಾಲದಿಂದಲೂ ಹೆಸರು ಮಾಡಿದ ಕೋಟೆ ಇದು. ಇದನ್ನು ಪ್ರವೇಶಿಸುವಾಗ ಮೊದಲು ನಮಗೆ ಮುಖ್ಯ ದ್ವಾರ ಕಾಣಿಸುತ್ತದೆ. ನಂತರ ಮೂರು ಉಪ ದ್ವಾರಗಳು ಕಂಡುಬರುತ್ತವೆ.
ಈ ಕೋಟೆಯಲ್ಲಿ 9 ಬಾವಿಗಳನ್ನು ನಾವು ಕಾಣಬಹುದಾಗಿದೆ. ಅಲ್ಲದೇ ಇಲ್ಲಿ ರಾಣಿ ಮಹಾರಾಣಿಯರ ಆಸನ ವ್ಯವಸ್ಥೆ, ಗುಪ್ತ ದ್ವಾರ, ಪಾಕಶಾಲೆ, ದೇವಸ್ಥಾನ ಇತ್ಯಾದಿಗಳೆಲ್ಲವೂ ನೋಡಲು ಸಿಗುತ್ತವೆ. ನಾವು ಒಂದೊಂದಾಗಿ ನೋಡುತ್ತಾ ನೋಡುತ್ತಾ ಅದರ ಬಗ್ಗೆ ನಮ್ಮದೆ ಆದ ಕಲ್ಪನೆಯನ್ನು ಸೇರಿಸುತ್ತಾ ಸೇರಿಸುತ್ತಾ ಕೋಟೆಯನ್ನು ಒಂದು ಸುತ್ತು ಹಾಕಿ ಬಂದೆವು.
ಸರ್ಪಮಲ್ಲಿಕಾ ಎಂಬ ರಾಜ ಇಲ್ಲಿ ವಾಸವಾಗಿದ್ದಾಗ ಇದಕ್ಕೆ ಮೇರಿ ಜಾನ್ ಎಂದು ಕರಿದಿದ್ದನಂತೆ ಅದಕ್ಕಾಗಿಯೆ ಇದಕ್ಕೆ ಮಿರ್ಜಾನ್ ಎಂಬ ಹೆಸರು ಬಂತು ಎಂಬ ನಂಬಿಕೆಯು ಇದೆ. ಇದರ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ಸುರಂಗ ಮಾರ್ಗಗಳು ಇರುವಂತದ್ದು. ಒಂದೊಂದು ಸುರಂಗ ಮಾರ್ಗಗಳು ಕಾಶಿ, ಗೋಕರ್ಣ, ಸೋಂದಾ ಕೋಟೆಗಳನ್ನು ತಲುಪುತಿತ್ತು ಎಂಬುದಕ್ಕೆ ಕುರುಹು ಮತ್ತು ನಂಬಿಕೆ ಎರಡು ಇದೆ.
ನಾವು ಈ ಕೋಟೆಯ ಒಳಗಡೆ ಪ್ರವೇಶಿಸಿದಾಗ ನಮ್ಮನ್ನು ಅಚ್ಚಿರ ಪಡಿಸಿದ ಇನ್ನೊಂದು ಸಂಗತಿ ಎಂದರೆ ಅಲ್ಲಿನ ಮೆಟ್ಟಿಲನ್ನು ಇಳಿಯುತ್ತಾ ಸಾಗಿದ ಹಾಗೆ ನಾವು ಭೂಮಿಯ ತಳಮಟ್ಟಕ್ಕೆ ಹೋಗುತ್ತಿದ್ದವು ಅಲ್ಲದೇ ಒಂದೊಂದು ಮೆಟ್ಟಿಲು ಇಳಿದಾಗಲೂ ನಾವು ಮಾತನಾಡುವ ದ್ವನಿ ಮೊಳಗುವಿಕೆ ಹೆಚ್ಚಾಗುತ್ತಲೇ ಹೋಗುತಿತ್ತು.
ಇದನೆಲ್ಲ ಬರಿ ಸಿನಿಮಾ ಧಾರಾವಾಹಿಯಲ್ಲಿ ನೋಡಿದ ನಮಗೆ ಇದು ಮಾತ್ರ ಎಂದೆಂದಿಗೂ ಮರೆಯಲಾರದ ನೆನಪನ್ನು ನೀಡಿತ್ತು. ಇಂದಿಗೂ ಕೂಡಾ ಈ ಜಾಗದಲ್ಲಿ ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಹಾಗೂ ರಾಷ್ಟ್ರೀಯ ಹಬ್ಬದ ದಿನದಂದು ಇಲ್ಲಿ ಧ್ವಜ ನೆಡುವುದರ ಮೂಲಕ ಹಬ್ಬದ ಆಚರಣೆಯನ್ನು ನಡೆಸಲಾಗುತ್ತದೆ. ಈ ಕೋಟೆಯನ್ನು ಜಂಬಿಟ್ಟಿಗೆ ಕಲ್ಲಿನಿಂದ (ಲ್ಯಾಟರೈಟ್) ನಿರ್ಮಾಣಮಾಡಿದ್ದು, ಇಂದಿಗೂ ಅದರ ಗೋಡೆಗಳು ಗಟ್ಟಿಯಾಗಿವೆ.
ಹೀಗೆ ನಮ್ಮ ಪ್ರಯಾಣ ತುಂಬಾ ಅರ್ಥ ಪೂರ್ಣವಾಗಿತ್ತು. ಅಲ್ಲಿ ನಾವು ಮೋಜು ಮಸ್ತಿ ಮಾಡಿದ್ದಕ್ಕಿಂತ ಆ ಕೋಟೆಯ ಬಗ್ಗೆ ಹೆಚ್ಚಿನ ವಿಶೇಷವನ್ನು ತಿಳಿದುಕೊಂಡೆವು. ನಮ್ಮ ನಮ್ಮ ಕನಸುಗಳು ನನಸಾಗಲು ಈ ಪ್ರಯಾಣ ತುಂಬಾ ಸಹಕಾರಿಯಾಗಿತ್ತು. ಇನ್ನೊಂದು ವಿಚಾರ ಎಂದರೇ ನಮಗೆ ತಿನ್ನಲು / ಊಟ ಮಾಡಲು ಇಲ್ಲಿ ಯಾವುದೇ ಹೋಟೆಲ್ ಗಳು ಇರಲಿಲ್ಲ ಹಾಗಾಗಿ ಸ್ವಲ್ಪ ಹಸಿವು ಹಸಿವಿನಿಂದಲೇ ನಮ್ಮ ಪ್ರಯಾಣ ಸಾಗಿತು ಎನ್ನುತ್ತಾ ತನ್ನ ಪ್ರವಾಸದ ಸವಿ ನೆನಪನ್ನು ಮುಂದಿಟ್ಟರು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ