ಬನ್ನೇರುಘಟ್ಟ ಉದ್ಯಾನವನದ ಅನಾಥ ಕಾಡುಪ್ರಾಣಿಗಳ ಮುದ್ದಿನ ಅಮ್ಮ ಸಾವಿತ್ರಮ್ಮ:
ಸಾವಿತ್ರಮ್ಮ ಕಳೆದ 20 ವರ್ಷಕ್ಕೂ ಅಧಿಕ ವರ್ಷಗಳಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ (Bannerghatta Biological Park) ಅನಾಥ ಕಾಡುಪ್ರಾಣಿಗಳನ್ನು (Wild Animals) ಅತ್ಯಂತ ಕಾಳಜಿಯಿಂದ ಹಾಲುಣಿಸಿ ಬೆಳೆಸುತಿದ್ದಾರೆ.
“ಚಿನ್ನೀ ಬಾ ಇಲ್ಲಿ” ಎನ್ನುತ್ತಾ ಕಾಡುಪ್ರಾಣಿಗಳ ಮರಿಗಳನ್ನು ಮುದ್ದಾಗಿ ಕರೆಯುತ್ತಾ, ಅವುಗಳನ್ನು ತನ್ನ ಸ್ವಂತ ಮಕ್ಕಳಂತೆ ಅಪ್ಪುತ್ತಾ, ಆಹಾರ ಉಣಿಸಿ, ಹಾಲು ಕುಡಿಸಿ ಸಾಕುವ ಸಾವಿತ್ರಮ್ಮನ (Savithramma) ನಡವಳಿಕೆಯನ್ನು ನೋಡಿದ ಎಂತಹ ಕಲ್ಲು ಹೃದಯವೂ ಕರಗುತ್ತವೆ.
ಪ್ರಾಣಿಗಳೂ ಹಾಗೇ ತನ್ನ ಮುದ್ದಿನ ಅಮ್ಮನನ್ನು ಕಂಡ ತಕ್ಷಣ ಅಷ್ಟೇ ಪ್ರೀತಿಯಿಂದ ಓಡಿ ಬಂದು ಅಪ್ಪಿಕೊಳ್ಳುತ್ತವೆ.
ಒಂದು ದಿನದ ಮರಿಗಳಿಗೆ ಹಾಲು ಕುಡಿಯಲು ಕಲಿಸುವುದರಿಂದ ಹಿಡಿದು ನಂತರ ಕಾಡಿಗೆ ಕಳುಹಿಸುವವರೆಗೆ ಅವುಗಳನ್ನು ಕಾಳಜಿಯಿಂದ ಪೋಷಿಸುತ್ತಾರೆ.
ಹುಲಿ, ಚಿರತೆ ಎಂತಹ ವ್ಯಾಘ್ರ ಪ್ರಾಣಿಗಳೂ ಸಾವಿತ್ರಮ್ಮನ ಆರೈಕೆ ಮುಂದೆ ಬಾಗಲೇಬೇಕು. ಅನಾಥ ಮೂಕ ಪ್ರಾಣಿಗಳಿಗೆ ಪ್ರೀತಿ ಪಾಠ ಮಾಡುತ್ತಾ, ಆಟವಾಡುತ್ತಾ, ಆರೋಗ್ಯ ತಪ್ಪಿದಾಗ ಔಷಧಿ ಕೊಟ್ಟು, ಶಕ್ತಿಯುತವಾಗಿ ಬೆಳೆಸಿ ಸಫಾರಿಗೆ ಬಿಡುವವರೆಗೂ ಸಾವಿತ್ರಮ್ಮ ಒಬ್ಬ ತಾಯಿಯಂತೆ ಪೋಷಿಸುತ್ತಾರೆ.
ಪತಿಯ ಆಕಸ್ಮಿಕ ಸಾವಿನ ನಂತರ, ಇಲ್ಲಿಗೆ ಬಂದ ಇವರು ಕಳೆದ 22 ವರ್ಷಗಳಿಂದ ವನ್ಯಮೃಗಗಳ ಆರೈಕೆಯಲ್ಲಿ ಖುಷಿ ಕಂಡು ಕೊಂಡಿದ್ದಾರೆ.
ಮಕ್ಕಳಿಲ್ಲದ ಸಾವಿತ್ರಮ್ಮನಿಗೆ ಈ ಕಾಡುಮೃಗಗಳೇ ಮಕ್ಕಳು. ತಾಯಿಯಲ್ಲದೇ ತಬ್ಬಲಿಯಾದ ಕಾಡುಪ್ರಾಣಿಗಳಿಗೆ ಸಾವಿತ್ರಮ್ಮನೇ ಅಮ್ಮಾ. ಎಂತಹ ಬಾಂಧವ್ಯವಲ್ಲವೇ?
ಇವರು ಬೆಳಗ್ಗೆ ಎಂಟರಿಂದ ಸಾಯಂಕಾಲ 5.30 ರವರೆಗೂ ಆಸ್ಪತ್ರೆ , ಮೃಗಾಲಯದ ಕಸ ಗುಡಿಸಿ ಸ್ವಚ್ಛ ಮಾಡಿ, ನಂತರ ಚಿಕಿತ್ಸೆ ನಡೆಯುತ್ತಿರುವ ಪ್ರಾಣಿಗಳ ಪೋಷಣೆ ಮಾಡುತ್ತಾರೆ.
ಒಂದು ದಿನದ ಮರಿಗಳಿಂದ ಈ ಪ್ರಾಣಿಗಳಿಗೆ ಮೇಕೆ ಹಾಲನ್ನು ಚೆನ್ನಾಗಿ ಕುದಿಸಿ ಆರಿಸಿ ಕುಡಿಸಲಾಗುತ್ತದೆ. ಆರಂಭದಲ್ಲಿ ಪ್ರತೀ ಐದು ನಿಮಿಷಕ್ಕೊಮ್ಮೆ, ನಂತರ ಅರ್ಧ ಗಂಟೆಗೊಮ್ಮೆ, ಹಾಗೆಯೇ ಮರಿಗಳು ಬೆಳೆಯುತ್ತಾ ಹೋದಂತೆ ಎರಡು ಗಂಟೆಗೊಮ್ಮೆ, ಮೂರು ಗಂಟೆಗೊಮ್ಮೆ ಹಾಲು ಕುಡಿಸಲಾಗುತ್ತದೆ.
ನಂತರ ಇವುಗಳಿಗೆ ಚಿಕನ್ ಕೈಮಾ ಮಾಡಿ, ಅಥವಾ ಬೀಫ್ ಮಾಂಸವನ್ನು ಕೊಡಲಾಗುತ್ತದೆ.
ಇದುವರೆಗೆ ಸಾವಿತ್ರಮ್ಮ ಮತ್ತು ಅವರ ತಂಡ 50 ಕ್ಕೂ ಹೆಚ್ಚು ಚಿರತೆಗಳನ್ನು, 7 ಹುಲಿ, 15 ಸಿಂಹದ ಮರಿಗಳು ಸಾಕಿ, 3 ತಿಂಗಳ ಕಾಲ ಆಸ್ಪತ್ರೆ ಒಳಗೇ ಇಟ್ಟು ಪೋಷಿಸಿದ್ದಾರೆ.
ಇವುಗಳು ಒಂದು ವರ್ಷ ತಲುಪಿದಾಗ ಸಫಾರಿಗೆ ಬಿಡಲಾಗುತ್ತದೆ. ಪುಟ್ಟ ಮರಿಗಳಿನ್ನೂ ಯಾರೂ ಮುಟ್ಟದಂತೆ ಆರೈಕೆ ಮಾಡಲಾಗುತ್ತದೆ. ಇನ್ಫೆಕ್ಷನ್ ನಿಂದ ತಡೆಯಲು ಈ ನಿಯಮ ಜಾರಿಗೆ ತರಲಾಗಿದೆ.
ಹಗಲಿನಲ್ಲಿ 7 ಜನ, ರಾತ್ರಿ ಇಬ್ಬರು ಈ ಮರಿಗಳ ಆರೈಕೆ ಮಾಡುತ್ತಾರೆ. ರಾತ್ರಿ ವೇಳೆಯಲ್ಲಿ ಇಬ್ಬರು, ಸಮಯಕ್ಕೆ ಸರಿಯಾಗಿ ಹಾಲು ಕುಡಿಸುವ ಕೆಲಸ ಮಾಡುತ್ತಾರೆ.
ಇಲ್ಲಿ ಇಷ್ಟು ಪ್ರೀತಿಯಿಂದ ಸಾಕಿದ ಮರಿಗಳನ್ನು ದೊಡ್ಡದಾದ ಮೇಲೆ ರಾಜ್ಯದ ಬೇರೆ ಕಡೆಯ ಮೃಗಾಲಯಗಳಿಗೂ ಕಳುಹಿಸಲಾಗುತ್ತದೆ.
ಇಂತಹ ಸಂದರ್ಭದಲ್ಲಿ ಮಕ್ಕಳನ್ನೇ ಕಳೆದುಕೊಂಡ ಭಾವ ಅನುಭವಿಸುತ್ತಾರೆ ಸಾವಿತ್ರಮ್ಮ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.