ಬಿಎಂಟಿಸಿ “ಭೋಜನ ಬಂಡಿ”; ಹಳೆ ಬಸ್ ಗಳಿಗೆ ಕ್ಯಾಂಟೀನ್ ಲುಕ್:
ಇತ್ತೀಚಿಗೆ ಬೆಂಗಳೂರಿನ ಬಿಎಂಟಿಸಿ ಹೊಸ ಹೊಸ ಯೋಜನೆಗಳನ್ನು ತರುತ್ತಲೇ ಇದೆ. ಈಗ ಬಿಎಂಟಿಸಿ ಸಂಸ್ಥೆಯು ತನ್ನ ಹಳೆ ಗುಜರಿಯ ಬಸ್ ಗಳಿಗೆ ಹೊಸ ಲುಕ್ ಕೊಟ್ಟು ಹೊಸ ಯೋಜನೆಗೆ ಬಳಸಿಕೊಳ್ಳಲು ಮುಂದಾಗಿದೆ.
ಏನಿದು ಯೋಜನೆ?
ಬಿಎಂಟಿಸಿ (BMTC) ಹಳೆಯ ಬಸ್ ಗಳು (Old Bus) ಕ್ಯಾಂಟೀನ್ ಗಳ (Canteen) ರೂಪ ಪಡೆದಿವೆ. ಇವುಗಳನ್ನು ಬಸ್ ಡಿಪೋಗಳಲ್ಲಿ ಕ್ಯಾಂಟೀನ್ ಇಲ್ಲದ ಬಸ್ ನಿಲ್ದಾಣಗಳಲ್ಲಿ ಡಿಪೋಗಳ ಸಿಬ್ಬಂದಿಗಳಿಗೆ ಆಹಾರವನ್ನು ಒದಗಿಸಲು ಬಳಸಿಕೊಳ್ಳಲಾಗುತ್ತಿದೆ.
ಈ ವಿಶಿಷ್ಟ ಕ್ಯಾಂಟೀನ್ ಗಳಿಗೆ “ಭೋಜನ ಬಂಡಿ” (Bhojana Bandi) ಎಂಬ ಹೆಸರು ಇಡಲಾಗಿದೆ. ಲಕ್ಷಾಂತರ ಕಿಮೀ ಸಂಚರಿಸಿ ಡಿಪೋ ಸೇರಿರುವ ಬಸ್ ಗಳನ್ನು ಇದಕ್ಕಾಗಿ ಬಳಸಲಾಗುತ್ತದೆ.
ಬಿಎಂಟಿಸಿ ಉತ್ತರ ವಲಯದ ಲೇಲ್ಯಾಂಡ (Layland) ಉಗ್ರಾಣದಲ್ಲಿ 10 ಲಕ್ಷ ಕಿ.ಮೀ ಸಂಚರಿಸಿ, ಕಾರ್ಯ ಸ್ಥಗಿತಗೊಳಿಸಿರುವ ಬಸ್ ಅನ್ನು ಕಾರ್ಯಾಗಾರ–4ರ ಸಹಾಯಕ ತಾಂತ್ರಿಕ ಇಂಜಿನಿಯರ್ ಆರ್. ಆನಂದಕುಮಾರ್ ಮತ್ತು ತಾಂತ್ರಿಕ ಸಹಾಯಕರಿಂದ ಕ್ಯಾಂಟೀನ್ ಆಗಿ ಪರಿವರ್ತಿಸಲಾಗಿದೆ.
ಈ ಕ್ಯಾಂಟೀನ್ ಅನ್ನು ಯಶವಂತಪುರ ಅಥವಾ ಪೀಣ್ಯ ಡಿಪೋದಲ್ಲಿ ಇರಿಸಲು ಸಂಸ್ಥೆ ಮುಂದಾಗಿದೆ.
ಕ್ಯಾಂಟೀನ್ ನ ಉಭಯ ಕಡೆಗಳಲ್ಲಿ ಭೋಜನ ಬಂಡಿ ಶೀರ್ಷಿಕೆ ಇದ್ದು, “ ಭೋಜನ ಬಂಡಿ, ಬನ್ನಿ ಕುಳಿತು ಊಟ ಮಾಡೋಣ” ಎಂಬ ಘೋಷವಾಕ್ಯಗಳನ್ನು ಬರೆಯಲಾಗಿದೆ.
ಬಸ್ ಗಳ ಸೀಟ್ ಗಳನ್ನು ತೆಗೆದು, ಟೇಬಲ್ ಮತ್ತು ಆಸನಗಳನ್ನು ಇರಿಸಲಾಗಿದೆ.
ಕೈತೊಳೆಯುವ ಬೇಸಿನ್, ಕುಡಿಯುವ ನೀರು, ಫ್ಯಾನ್‌ಗಳ ವ್ಯವಸ್ಥೆ ಸಹ ಮಾಡಲಾಗಿದೆ.
ಬೆಳಕಿಗಾಗಿ ಬಸ್ ನ ಚಾವಣಿಯಲ್ಲಿ ಗಾಜಿನ ಕಿಟಕಿಗಳನ್ನು ಇರಿಸಲಾಗಿದೆ.
ಗಾಳಿ, ಬೆಳಕು ಬರಲು ಬಸ್‌ನ ಎರಡೂ ಕಡೆಗಳಲ್ಲಿ ಕಿಟಕಿಗಳನ್ನು ಇಡಲಾಗಿದೆ.
ಬಸ್ ಚಾವಣಿಯ ಮೇಲೆ ನೀರಿನ ಟ್ಯಾಂಕ್ ನ್ನು ಸಹ ಇರಿಸಲಾಗಿದೆ.
ಒಟ್ಟಿನಲ್ಲಿ ಒಂದು ಹೋಟೆಲ್ ನಲ್ಲಿರುವ ಎಲ್ಲಾ ಸೌಲಭ್ಯಗಳೂ ಭೋಜನ ಬಂಡಿಯಲ್ಲಿ ಇರುವಂತೆ ನೋಡಿಕೊಳ್ಳಲಾಗಿದೆ.
ನಗರಗಳಲ್ಲಿ ಈಗಾಗಲೇ 19 ಬಿಎಂಟಿಸಿ ಡಿಪೊಗಳು (BMTC Depots) ಕಾರ್ಯನಿರ್ವಹಿಸುತ್ತಿವೆ.
ಕೆಲವು ಕಡೆ ಕ್ಯಾಂಟೀನ್ ವ್ಯವಸ್ಥೆ ಇದ್ದರೆ, ಇನ್ನು ಕೆಲವು ಕಡೆಗಳಲ್ಲಿ ಈ ಸೌಲಭ್ಯವಿಲ್ಲ. ಈ ಕಾರಣಕ್ಕಾಗಿ ಹಳೆಯ ಬಸ್ ಗಳನ್ನು ಕ್ಯಾಂಟೀನ್ ಗಳಾಗಿ ಪರಿವರ್ತಿಸಿ ಬಸ್ ಸಿಬ್ಬಂದಿಗಳಿಗೆ ಊಟ ನೀಡಲು ಬಳಸಲಾಗುತ್ತದೆ.
ಈಗಾಗಲೇ ಒಂದು ಭೋಜನ ಬಂಡಿ ತಯಾರಾಗಿದೆ. ಇನ್ನೂ ಕೆಲವು ಬಸ್ ಗಳನ್ನು ಕ್ಯಾಂಟೀನ್ ಆಗಿ ಬದಲಿಸಿ 17 ಡಿಪೋಗಳಲ್ಲಿ ಅಳವಡಿಸಲು ಯೋಜನೆ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.