ಕರಾವಳಿಯಲ್ಲಿ ಸ್ವಾತಂತ್ರ್ಯ ಹೋರಾಟದ ನೆನಪುಗಳು
ದೇಶ ೭೫ ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಸುಮಾರು ೯೦ ವರ್ಷಗಳ ಹೋರಾಟದ ಫಲ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ಯ . ದೇಶ ಪ್ರೇಮದ ಕಿಚ್ಚು ಕರಾವಳಿ ಜಿಲ್ಲೆಗಳಲ್ಲಿ ಕೂಡ ಹರಡಿತ್ತು. ದೇಶವನ್ನು ಆಂಗ್ಲರಿಂದ ಮುಕ್ತಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ನಡೆದ ಹೋರಾಟದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸ್ವಾತಂತ್ರ್ಯ ಪ್ರೇಮದ ಕಿಚ್ಚು ಹರಡಿತ್ತು. ದೇಶದ ೭೫ ನೇ ವರ್ಷದ ಸಾರ್ಥಕ ಸ್ವಾತಂತ್ರ್ಯವನ್ನು ಸಂಭ್ರಮಿಸುವ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಹುಟ್ಟಿಕೊಂಡಿದ್ದ ಸ್ವಾತಂತ್ಯದ ಕೆಲ ಹೆಜ್ಜೆ ಗುರುತುಗಳನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಈ ಲೇಖನ.
- ನವ್ಯಶ್ರೀ ಶೆಟ್ಟಿ
ಮಾಹಿತಿ ಕೃಪೆ : ಪತ್ರಿಕೋದ್ಯಮ ವಿಭಾಗ, ಎಂ.ಜಿ.ಎಂ ಕಾಲೇಜು, ಉಡುಪಿ
ಸ್ವಾತಂತ್ರದ ಕಿಚ್ಚು ಜೋರಾಗಿ ಇತ್ತು. ಕರುನಾಡಲ್ಲೂ ಕೂಡ ಹೋರಾಟದ ಕಿಚ್ಚು ಹಬ್ಬಿತ್ತು. ಹೋರಾಟ ಜೋರಾಗುತ್ತಿದ್ದಂತೆ ಕೃಷ್ಣನ ನಗರಿಯಲ್ಲಿ ಕೂಡ ಹೋರಾಟ ಕಾವೇರಿತ್ತು. ಸ್ವಾತಂತ್ರ್ಯದ ಹಲವು ಹೆಜ್ಜೆ ಗುರುತುಗಳು ಉಡುಪಿಯಲ್ಲೂ ಘಟಿಸಿ ಹೋಗಿದೆ. ಆ ಘಟನೆಗಳು ಉಡುಪಿಯ ಸ್ವಾತಂತ್ರ್ಯದ ಇತಿಹಾಸದಲ್ಲಿ ಅಚ್ಚಳಿಯದ ನೆನಪುಗಳಾಗಿ ಉಳಿದು ಬಿಟ್ಟಿದೆ.
ಅನಂತೇಶ್ವರ ದೇವಾಲಯದ ಮಾನಸಸ್ತಂಭದಲ್ಲಿ ಹಾರಿತ್ತು ರಾಷ್ಟ್ರ ಧ್ವಜ
೧೯೪೨ರ ಚಲೇ ಜಾವ್ ಚಳವಳಿ ಅಥವಾ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಾಗಿತ್ತು. ರಾಷ್ಟ್ರ ಪ್ರೇಮಿಗಳು ತಮ್ಮ ಮನೆ ಅಥವಾ ಇತರ ಸ್ಥಳಗಳಲ್ಲಿ ಧ್ವಜ ಹಾರಿಸಿದರೆ ಕೂಡಲೇ ಪೊಲೀಸರು ಆಗಮಿಸಿ ಅದನ್ನು ಕಿತ್ತೆಸೆಯುತ್ತಿದ್ದರು. ಕೆಲ ದೇಶಪ್ರೆಮಿಗಳು ಉಡುಪಿಯ ಮಾನಸಸ್ತಂಭದ ಮೇಲೆ ಧ್ವಜ ಹಾರಿಸುವುದಕ್ಕೆ ಸಿದ್ಧರಾಗಿದ್ದರು. ಪೊಲೀಸ್ ಕಾವಲಿರುವ ಜಾಗದಲ್ಲಿ, ಹತ್ತಲು ಅಸಾಧ್ಯವಾದ ೬೦ ಅಡಿ ಎತ್ತರದ ಕಂಬದ ಮೇಲೆ ಧ್ವಜ ಹಾರಿಸುವುದು ಸಾಹಸವೇ ಸರಿ.

ಶೇಷಣ್ಣ ಎನ್ನುವ ಸ್ವಾತಂತ್ರ್ಯ ಹೋರಾಟಗಾರ ಅನಂತೇಶ್ವರ ದೇವಾಲಯದ ಮಾನಸಸ್ತಂಭದಲ್ಲಿ ಧ್ವಜ ಹಾರಿಸಿದ್ದರು. ಪಲಿಮಾರು ಮಠದ ಎದುರಿನಲ್ಲಿ ಒಂದು ತೆಳ್ಳಗಿನ ಎಣಿ ಹೊತ್ತು ಅನಂತೇಶ್ವರ ದೇಗುಲದ ಮಾಡನ್ನು ಏರಿದರು. ಮೆಲ್ಲ ಮೆಲ್ಲನೆ ಹೆಜ್ಜೆ ಇಡುತ್ತಾ ಸದ್ದು ಮಾಡದೇ ಮುಂಭಾಗಕ್ಕೆ ಬಂದು ತಗಡಿನ ಚಪ್ಪರ ಏರಿದರು. ಚಪ್ಪರದಿಂದ ಮಾನಸ್ತಂಭಕ್ಕೆ ಏಣಿ ಇಟ್ಟು ಧ್ವಜ ಹಾರಿಸಿದ್ದರು.
ಗಾಂಧೀಜಿಯ ಉಡುಪಿ ಭೇಟಿ ನೆನೆಪಿಸುವ ಭುಜಂಗ ಪಾರ್ಕ್
ಕೆಲವು ವರ್ಷಗಳ ಹಿಂದೆ ಉಡುಪಿಯ ಜನರಿಗೆ ಮನೋರಂಜನೆ ಸಿಗುತ್ತಿದ್ದದ್ದು , ಭುಜಂಗ ಪಾರ್ಕ್ ನಲ್ಲಿರುವ ರೇಡಿಯೋ ಟವರ್ ನಿಂದ. ಅಜ್ಜರಕಾಡಿನಿಂದ ಅಂಬಲಪಾಡಿಯ ತನಕ ರೇಡಿಯೋ ನಿನಾದ ಕೇಳಿಸುತ್ತಿತ್ತು. ವಿಶಾಲ ಬಂಡೆಯ ಮೇಲೆ ನಿರ್ಮಾಣಗೊಂಡಿರುವ ಈ ರೇಡಿಯೋ ಟವರ್ ಆಗಿನ ಕಾಲದಲ್ಲಿ ವೃದ್ದರು ,ನಡು ವಯಸ್ಸಿನವರು ,ಮಾತಿನ ಮಲ್ಲರಿಗೆ ಮನೋರಂಜನೆಯ ತಾಣವಾಗಿತ್ತು.
ಈ ರೇಡಿಯೋ ಟವರ್ ಕೃಷ್ಣನ ನಾಡು ಉಡುಪಿಯ ಅಜ್ಜರಕಾಡಿನ ಭುಜಂಗ ಪಾರ್ಕ್ನಲ್ಲಿದೆ. ಮಹಾತ್ಮಾ ಗಾಂಧೀಜಿಯವರು ಉಡುಪಿಗೆ ಬಂದಾಗ ಇಲ್ಲಿ ಒಂದು ಬೃಹತ್ ಸಭೆ ನಡೆಸಿದ್ದರು.
ಗಾಂಧೀಜಿ ನಡೆದಾಡಿದ ಇತಿಹಾಸಿಕ ಸ್ಥಳ ಭುಜಂಗ ಪಾರ್ಕ್. ಈ ಕಾರಣದಿಂದಲೇ ಇಲ್ಲಿನ ರೆಡಿಯೋ ಟವರ್ ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಂಡಿರುವುದು. ೧೯೩೮ಕ್ಕೂ ಹಿಂದೆ ಈ ಜಾಗದಲ್ಲಿ ಭುಜಂಗ ನಿಲಯವಿತ್ತು. ೧೯೩೪ರಲ್ಲಿ ಮಹಾತ್ಮ ಗಾಂಧೀಜಿ ಅವರು ಉಡುಪಿಗೆ ಬಂದಿದ್ದ ಸಂದರ್ಭ ಇದೇ ಭುಜಂಗ ಪಾರ್ಕ್ ನಲ್ಲಿ ವಿಶ್ರಾಂತಿ ಪಡೆದು ಸಾರ್ವಜನಿಕ ಸಭೆ ನಡೆಸಿದ್ದರು.
ಈ ಕಾರಣದಿಂದಾಗಿ ಗಾಂಧೀಜಿ ಸ್ಮರಣಾರ್ಥ ಇಲ್ಲಿ ಗಾಂಧಿ ಪ್ರತಿಮೆ ನಿರ್ಮಾಣವಾಗಿದೆ. ಇಂದಿಗೂ ಗಾಂಧೀಜಿ ಭೇಟಿಯನ್ನು ಇಲ್ಲಿ ನೆನಪಿಸಿಕೊಳ್ಳುತ್ತಾರೆ. ಗಾಂಧೀಜಿಯವರು ತೀರಿಕೊಂಡ ದಿನದಂದು ಅಂದರೆ ‘ಹುತಾತ್ಮರ ದಿನ’ ಇಲ್ಲಿ ಬೆಳಿಗ್ಗೆ ೧೧ ಗಂಟೆಗೆ ಗಟ್ಟಿಯಾಗಿ ವಿಷಲ್ ಮೊಳಗುತ್ತಿತ್ತು. ಆ ಮೂಲಕ ಗಾಂಧೀಜಿಯವರನ್ನು ಸ್ಮರಿಸಲಾಗುತ್ತಿತ್ತಂತೆ. ಬಹು ದೂರದ ತನಕ ಈ ವಿಷಲ್ ಕೇಳಿಸುತ್ತಿತ್ತು ಎನ್ನುವುದು ಕೇಳುಗರ ಅಭಿಪ್ರಾಯ.
ನೀವುಇದನ್ನುಇಷ್ಟಪಡಬಹುದು: ಸ್ವಾತಂತ್ರ್ಯ ದಿನದಂದು ಜೋಳದರಾಶಿ ಬೆಟ್ಟದಲ್ಲಿ ಹಾರಾಡಲಿದೆ ತಿರಂಗ ಧ್ವಜ

ಕರಾವಳಿಯಲ್ಲಿ ಪೋರ್ಚುಗೀಸರು
ಭಾರತ ಮತ್ತು ಯುರೋಪ್ನ ನಡುವೆ ಜಲಮಾರ್ಗ ಶೋಧನೆಗೆಂದು ವಾಸ್ಕೋ ಡ ಗಾಮಾ ಭಾರತಕ್ಕೆ ಹೊರಟು ಬಂದಿದ್ದ. ವಾಸ್ಕೋ ಡ ಗಾಮಾ ಕರಾವಳಿಗೂ ಕಾಲಿಟ್ಟಿದ್ದ. ಉಡುಪಿ ಜಿಲ್ಲೆಯ ಮಲ್ಪೆ ಸೇಂಟ್ ಮೇರಿಸ್ ದ್ವೀಪದ ಮೂಲಕ ವಾಸ್ಕೋ ಡ ಗಾಮಾ ಕರಾವಳಿ ಪ್ರವೇಶಿಸಿದ್ದ. ಜಲಮಾರ್ಗ ಶೋಧನೆಗೆಂದು ಬಂದಿದ್ದ ಪೋರ್ಚುಗೀಸರನ್ನು ಆಕರ್ಷಿಸಿದ್ದು, ಪಶ್ಚಿಮ ಕರಾವಳಿಯ ರೇವು ಪಟ್ಟಣಗಳು. ಆ ಕಾಲದಲ್ಲಿ ರೇವು ಪಟ್ಟಣಗಳು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿತ್ತು.
ಪೋರ್ಚುಗೀಸರು, ಭಟ್ಕಳ, ಕುಂದಾಪುರ, ಬಸ್ರೂರು, ಮಂಗಳೂರು, ಮಂಜೇಶ್ವರ ಬಂದರುಗಳಿಂದ ಕಪ್ಪ ಸಂಗ್ರಹಿಸಲು ಆರಂಭಿಸಿದರು. ಕಪ್ಪ ಕೊಡಲು ಒಪ್ಪದಿದ್ದರೆ ಬಂದರು ಮತ್ತು ಊರು ದೋಚುವ, ಸುಡುವ ಕಾರ್ಯಕ್ಕೂ ಮುಂದಾದರು.
ಹಲವರು ಪೋರ್ಚುಗೀಸರಿಗೆ ಕಪ್ಪ ಕೊಡಲು ಒಪ್ಪಿರಲಿಲ್ಲ. ಮಂಗಳೂರಿನ ಮೇಲೆ ದಾಳಿ ನಡೆಸಿ ಮಂಗಳೂರನ್ನು ವಶ ಪಡಿಸಿಕೊಂಡ. ಮುಂದೆ ಅಕ್ಕಿ ವ್ಯಾಪಾರಿಯೊಬ್ಬ ತೆರಿಗೆ ಕೊಡಲು ಒಪ್ಪದಿದ್ದಾಗ ಪೋರ್ಚುಗೀಸರು ಮಂಗಳೂರಿನಲ್ಲಿ ತನ್ನ ನೌಕಾ ಬಲದಿಂದ ಮುತ್ತಿಗೆ ಹಾಕಿದ್ದರು. ತುಳುನಾಡಿನ ಜನ ಅಳಿವೆ ಬಾಗಿಲಲ್ಲೇ ತಡೆಯೊಡಿದ್ದರೂ ಕೂಡ ಅನಿವಾರ್ಯವಾಗಿ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.
ರಾಣಿ ಅಬ್ಬಕ್ಕ ಕಪ್ಪ ಕೊಡಲು ಒಪ್ಪಿರಲಿಲ್ಲ. ಸೂರಾಲಿನ ರಾಜ ಕೂಡ ಪೋರ್ಚುಗೀಸರಿಗೆ ಕಪ್ಪ ಕೊಡಲು ನಿರಾಕರಿಸಿದ್ದ. ಪೋರ್ಚುಗೀಸರು ತನ್ನ ಸೇನಾ ಬಲದಿಂದ ಬಸ್ರೂರಿನ ಕೋಟೆಯನ್ನು ವಶ ಪಡಿಸಿಕೊಂಡಿದ್ದರು.
ಕರಾವಳಿ ಜಿಲ್ಲೆಗಳಲ್ಲಿ ಗಾಂಧೀಜಿಯ ನೆನಪುಗಳು
ಗಾಂಧೀಜಿ ಕರಾವಳಿ ಜಿಲ್ಲೆಗಳಿಗೂ ಭೇಟಿ ನೀಡಿದ್ದರು. ರಸ್ತೆ ಮಾರ್ಗವಿಲ್ಲದ ಆ ಕಾಲದಲ್ಲಿ ಜಲ ಮಾರ್ಗದ ಮೂಲಕ ಕರಾವಳಿಗೆ ಸ್ವಾತಂತ್ರ್ಯ ಹೋರಾಟದ ನಾನಾ ಕಾರ್ಯಗಳಿಗೆ ಭೇಟಿ ನೀಡಿದ್ದರು . ೧೯೨೦ರಲ್ಲಿ ಕರಾವಳಿಗೆ ಬಂದಿದ್ದ ಗಾಂಧೀಜಿ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಮೈದಾನದಲ್ಲಿ ಭಾಷಣ ಮಾಡಿದ್ದರು. ಕರಾವಳಿಯಲ್ಲಿ ಗಾಂಧೀಜಿಯ ಭೇಟಿ ನೆನಪಿಸಿಕೊಳ್ಳಲು ಅನೇಕ ಹೆಜ್ಜೆ ಗುರುತುಗಳು ಇಂದು ನಮಗೆ ಕಾಣ ಸಿಗುತ್ತದೆ.

ಗಾಂಧಿ ಕರಾವಳಿಗೆ ಬಂದ ಸಮಯದಲ್ಲಿ ಪುತ್ತೂರಿನ ಅಶ್ವತ್ಥ ಮರದಡಿ ಭಾಷಣ ಮಾಡಿದರು. ಆ ಸ್ಥಳ ಇಂದು ‘ಗಾಂಧಿ ಕಟ್ಟೆ ‘ಯಾಗಿದೆ . ಗಾಂಧಿ ಪುತ್ತೂರಿನಲ್ಲಿ ವಿಶ್ರಮಿಸಿದ್ದ ಸುಂದರ್ ರಾವ್ ಅವರ ಮನೆ ಇದೀಗ ಸತ್ಯಸಾಯಿ ನರ್ಸಿಂಗ್ ಹೋಂ ಆಗಿದೆ.
ಗಾಂಧೀಜಿ ಗಡಿ ಬಿಡಿಯಲ್ಲಿ ಸುಂದರ್ ರಾವ್ ಅವರ ಮನೆಯಲ್ಲಿ ಒಂದು ಚಿನ್ನದ ಸರ ಬಿಟ್ಟು ಹೋಗಿದ್ದರು. ಸುಂದರ್ ರಾವ್ ಅವರಿಗೆ ಅದನ್ನು ಏನು ಮಾಡಬೇಕು ಎಂದು ತೋಚದೇ , ಅದೇ ಹಣದಲ್ಲಿ ಪುತ್ತೂರಿನ ರಾಗಿದಕುಮೇರಿಯ ದಲಿತ ಕಾಲೋನಿಯ ಜನರಿಗೆ ಬಾವಿ ನಿರ್ಮಾಣ ಮಾಡಿ ಕೊಟ್ಟಿದ್ದರು . ಚಿನ್ನದ ಸರ ಬಿಟ್ಟು ಹೋದ ಬಗ್ಗೆ, ಬಾವಿ ನಿರ್ಮಾಣದ ಬಗ್ಗೆ ಸುಂದರ್ ರಾವ್ ಗಾಂಧೀಜಿಗೆ ಪತ್ರ ಬರೆದಿದ್ದರಂತೆ . ಇಂಥ ಒಳ್ಳೆಯ ಕಾರ್ಯ ಮಾಡುವುದಿದ್ದರೆ ,ಮೂರು ಸರ ಬಿಟ್ಟು ಬರುತ್ತಿದ್ದೆ, ಒಂದು ಬಿಟ್ಟು ಬಂದು ತಪ್ಪು ಮಾಡಿದೆ ಎಂದು ಉತ್ತರಿಸಿದ್ದರಂತೆ.
ಗಾಂಧಿ ಭೇಟಿಯನ್ನು ನೆನಪಿಸುವ ಮತ್ತೊಂದು ತಾಣ ಲೈಟ್ ಹೌಸ್ ಹಿಲ್ ಮತ್ತು ಬಾವುಟ ಗುಡ್ಡೆ. ಇಲ್ಲಿನ ‘ಸರಸ್ವತಿ ನಿವಾಸ’ದಲ್ಲಿ ತಂಗಿದ್ದರು. ಆ ನೆನಪಿಗಾಗಿ ಇಲ್ಲಿ ಗಾಂಧಿಜಿ ನೆನಪಿಗಾಗಿ ಅರ್ಪಿಸಿದ ಗ್ರಂಥಾಲಯವಿದೆ. ಗಾಂಧೀಜಿಯ ಪ್ರತಿಮೆ ಕೂಡ ಇದೆ.
ಕರಾವಳಿಗೆ ಗಾಂಧೀಜಿಯ ಭೇಟಿ ಒಂದು ಅವಿಸ್ಮರಣೀಯ ಘಟನೆ. ಈ ಕಾರಣದಿಂದಾಗಿಯೇ ಗಾಂಧೀಜಿ ಭೇಟಿ ನೀಡಿದ ಕರಾವಳಿ ಸ್ಥಳಗಳಲ್ಲಿ ನಿಮಗೆ ಹಲವು ನೆನಪುಗಳು ಇಂದಿಗೂ ಕಾಣ ಸಿಗುವುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ