
ಕೋವಿಡ್ ಮೂರನೇ ಅಲೆ ಭೀತಿಯಿಂದ ಹಲವು ಪ್ರವಾಸಿ ತಾಣಗಳು ನಿರ್ಬಂಧ ಹೇರಿವೆ. ಆ ಸಾಲಿಗೆ ಈಗ ಚಿಕ್ಕಮಗಳೂರು ಜಿಲ್ಲೆಯೂ ಸೇರಿದ್ದು, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಹೊಸ ನಿಯಮಗಳು ಜಾರಿಯಾಗಿವೆ.
- ಉಜ್ವಲ. ವಿ.ಯು
ಚಿಕ್ಕಮಗಳೂರು ಕರ್ನಾಟಕದ ಗಿರಿಶ್ರೇಣಿಗಳ ನಡುವೆ ಇರುವ ಸುಂದರವಾದ ಜಿಲ್ಲೆ. ಆದರೆ ಈ ಚಂದದ ತಾಣಕ್ಕೂ ಕೋವಿಡ್-೧೯ ಮೂರನೇ ಅಲೆಯ ಭೀತಿ ಶುರುವಾಗಿದೆ. ಆದ್ದರಿಂದ ಜಿಲ್ಲಾಡಳಿತ ಚಿಕ್ಕಮಗಳೂರಿನ ಪ್ರವಾಸಿತಾಣಗಳಿಗೆ ಭೇಟಿ ನೀಡಲು ಪ್ರವಾಸಿಗರಿಗಾಗಿ ಹೊಸ ರೂಲ್ಸ್ ಹೊರಡಿಸಿದೆ.
ಚಿಕ್ಕಮಗಳೂರು ಅತ್ಯಾಕರ್ಷಕ ಗಿರಿಧಾಮಗಳಿಗಾಗಿ ಮತ್ತು ಕಾಫಿ ನಾಡೆಂದು ಪ್ರಸಿದ್ಧವಾಗಿ ಸುಂದರವಾದ ಕಾಫಿ ಎಸ್ಟೇಟ್ ಗಳನ್ನೂ ಹೊಂದಿದೆ. ಈ ಜಿಲ್ಲೆಯಲ್ಲಿ ಒರಟಾದ ಭೂ ಪ್ರದೇಶ, ಸಾಲು ಸಾಲಾದ ಪರ್ವತ ಶ್ರೇಣಿಗಳು ಮತ್ತು ತಗ್ಗು ಪ್ರದೇಶ ಎಲ್ಲಾ ರೀತಿಯ ಭೂದೃಶ್ಯಗಳೂ ಇದೆ. ಅಂತೆಯೇ ಧಾರ್ಮಿಕ ಭೂಮಿಗೂ ಪ್ರಸಿದ್ಧವಾಗಿದೆ.

ಆದರೆ ಇಂತಹ ಚಂದದ ತಾಣಗಳಿಗೆ ಭೇಟಿ ನೀಡಲು, ನಮ್ಮ ಕನಸಿನ ಟ್ರಕ್ಕಿಂಗ್ ಸ್ಥಳಗಳಲ್ಲಿ ಚಾರಣ ಮಾಡಲು ಕಳೆದ ಎರಡು ವರ್ಷದಿಂದ ಕೋವಿಡ್-೧೯ ತಡೆಗೋಡೆ ಆಗಿಯೇ ನಿಂತಿದೆ. ಎರಡನೇ ಅಲೆಯಿಂದ ಈಗಷ್ಟೇ ಚೇತರಿಸಿಕೊಂಡು ಇನ್ನೇನು ಚಾರಣಕ್ಕಾಗಿ ಬ್ಯಾಗ್ ಪ್ಯಾಕ್ ಮಾಡಲು ತೊಡಗಿದ್ದ ನಮಗೆ ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತೇ ಶಾಕ್ ನೀಡಿದೆ.
ಮೂರನೇ ಅಲೆಯ ಭೀತಿ ಈಗಾಗಲೇ ಶುರುವಾಗಿರುವ ಕಾರಣ ಮುಳ್ಳಯ್ಯಗಿರಿಗೆ ಭೇಟಿ ನೀಡಲು ಜಿಲ್ಲಾಡಳಿತ ನೀಡಿರುವ ಕೆಲವು ನಿಯಮಗಳನ್ನು ನಾವು ಪಾಲಿಸಲೇಬೇಕಿದೆ, ಅವೆಂದರೆ – ಮುಳ್ಳಯ್ಯನಗಿರಿ ಭೇಟಿ ನೀಡಲು ದಿನಕ್ಕೆ 300 ವಾಹನ ಮತ್ತು 1200 ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಿದೆ. ಎಂದರೆ ಬೆಳಿಗ್ಗೆ 6 ರಿಂದ 9 ವರೆಗೆ 150 ವಾಹನಗಳು ಮತ್ತು 600 ಜನರಿಗೆ ಅವಕಾಶ ಮತ್ತು ಮಧ್ಯಾಹ್ನ 2 ರಿಂದ 4 ವರೆಗೆ 150 ವಾಹನ, 600 ಜನಕ್ಕೆ ಅವಕಾಶ ಕೊಡಲಾಗಿದೆ.
ಜಗತ್ಪ್ರಸಿದ್ಧವಾದ ಶಂಕರಾಚಾರ್ಯ ಸಂಸ್ಥಾಪಿತ ಶೃಂಗೇರಿ ಶಾರದಾದೇವಿ ಮಠ ಇರುವುದು ಈ ಜಿಲ್ಲೆಯಲ್ಲಿಯೇ. ಹಾಗೇ ಚಾರಣಿಗರಿಗೆ ಅತಿ ಹೆಚ್ಚು ಚಾರಣ ಸ್ಥಳಗಳನ್ನು ಒದಗಿಸುವುದು ಈ ಸ್ಥಳವೇ. ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ Z ಪಾಯಿಂಟ್, ಮಾಣಿಕ್ಯಧಾರಾ ಜಲಪಾತ, ಹೆಬ್ಬೆ ಜಲಪಾತ, ಕಲ್ಹತ್ತಗಿರಿ, ಮಡು ಗುಂಡಿ ಜಲಪಾತ, ಕ್ಯಾತನಮಕ್ಕಿ ಇತ್ಯಾದಿ ಸಾಹಸಮಯವಾದ ಟ್ರಕ್ಕಿಂಗ್ ಸ್ಥಳಗಳಿವೆ. ಹಾಗೆಯೇ ಕುದುರೆಮುಖ ರಾಷ್ಟ್ರೀಯ ಉದ್ಯಾನ, ಭದ್ರ ಅಭಯಾರಣ್ಯಗಳನ್ನೂ ಕಾಣಬಹುದು.

ನೀವು ಇದನ್ನುಇಷ್ಟಪಡಬಹುದು: ಕೋವಿಡ್ ನೆಗೆಟಿವ್ ವರದಿ ಇಲ್ಲದೆಯೂ ಭೇಟಿ ನೀಡಬಹುದಾದ 7 ಜಾಗಗಳು
ಮುಖ್ಯವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿ ಚಾರಣಿಗರಿಗೆ ಒಂದು ಒಳ್ಳೆಯ ಸವಾಲಿನ ಹಾಗೂ ಅವಿಸ್ಮರಣೀಯ ತಾಣ. ಸಮುದ್ರ ಮಟ್ಟಕ್ಕಿಂತ ಸುಮಾರು 2000 ಮೀಟರ್ ಎತ್ತರದಲ್ಲಿರುವ ಇದು ಕರ್ನಾಟಕದಲ್ಲಿಯೇ ಅತ್ಯಂತ ಎತ್ತರವಾದ ಪರ್ವತ. ಸಾಹಸ ಪ್ರಿಯರಿಗೆ ಕಡಿದಾದ ದಾರಿಯೊಂದಿಗೆ ಎಷ್ಟೋ ಸವಾಲನ್ನು ನೀಡಿದರೆ, ಜನಜಂಗುಳಿಯಿಂದ ದೂರವಿರಲು, ಪ್ರಕೃತಿ ಮಡಿಲಲ್ಲಿ ಶಾಂತವಾಗಿ ಸಮಯ ಕಳೆಯಲು ಬಯಸುವವರಿಗೆ ಸೂಕ್ತವಾದ ಸ್ಥಳವೂ ಹೌದು.
ಈ ಶಿಖರದ ಮೇಲ್ಭಾಗದಲ್ಲಿ ಶಿವನಿಗೆ ಅರ್ಪಿತವಾದ ಮುಳ್ಳಯ್ಯಸ್ವಾಮಿ ದೇವಾಲಯವಿದೆ. ಇದು ಚಿಕ್ಕಮಗಳೂರಿಂದ 12 ಕಿ. ಮೀ ದೂರದಲ್ಲಿದೆ. ಮಳೆಗಾಲದಲ್ಲಿ ಭಾರೀ ಮಳೆ ಸುರಿವುಯುದರಿಂದ ಚಾರಣವು ಅಪಾಯಕಾರಿ ಆಗುವ ಸಂಭವ ಹೆಚ್ಚು. ಆದ್ದರಿಂದ ಚಳಿಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದು ಹೆಚ್ಚು ಸೂಕ್ತ. ಚಾರಣಿಗರ ಸ್ವರ್ಗವೆಂದೇ ಕರೆಯಲ್ಪಡುವ ಈ ತಾಣ ಮಂಜಿನ ರಮಣೀಯತೆಯನ್ನೂ ನೀಡುತ್ತದೆ.
ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಲು ನಕರಾತ್ಮಕ ಕೋವಿಡ್-೧೯ ಪತ್ರದ ಅವಶ್ಯಕತೆ ಇದ್ದೇ ಇದೆ. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಲು ಬಯಸುತ್ತಿರುವವರು ಈ ಎಲ್ಲಾ ಅಂಶಗಳನ್ನು ತಿಳಿದು ಹೊರಟರೆ ಉತ್ತಮ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ