ಭಾರತೀಯ ಅಂಚೆ ದಿನ ವಿಶೇಷ: ಭಾರತದಲ್ಲಿರುವ ವಿಶಿಷ್ಟ ಅಂಚೆ ಕಛೇರಿಗಳು
ಭಾರತೀಯ ಅಂಚೆ ಸೇವೆಯು ವಿಶ್ವದಲ್ಲೇ ಅತ್ಯಂತ ವ್ಯಾಪಕವಾಗಿ ಕಾರ್ಯನಿರ್ವಹಿಸುವ ಸರ್ಕಾರಿ ಅಂಚೆ ಸೇವೆಯಾಗಿದೆ. ಭಾರತೀಯ ಅಂಚೆಯ ಕಾರ್ಯವನ್ನು ಸ್ಮರಿಸುವ ಉದ್ದೇಶದಿಂದ ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 10 ರಂದು “ಭಾರತೀಯ ಅಂಚೆ ದಿನ”ವನ್ನು ಆಚರಿಸಲಾಗುತ್ತದೆ.
• ಉಜ್ವಲಾ ವಿ.ಯು.
ಈ ದಿನದ ವಿಶೇಷತೆಯ ಸಲುವಾಗಿ ನಮ್ಮ ದೇಶದಲ್ಲಿ ಇರುವ ವಿಶಿಷ್ಟ ಅಂಚೆ ಕಛೇರಿಗಳ ಕುರಿತಾದ ಲೇಖನ ನಿಮಗಾಗಿ.
1. ವಿಶ್ವದ ಅತಿ ಎತ್ತರದ ಅಂಚೆ ಕಛೇರಿ- ಹಿಕ್ಕಿಮ್:
ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯ ಹಿಕ್ಕಿಮ್ ಸಮುದ್ರ ಮಟ್ಟದಿಂದ 4,400 ಮೀ (14,400 ಅಡಿ) ಎತ್ತರದಲ್ಲಿದೆ. ಈ ಪ್ರದೇಶದಲ್ಲಿರುವ ಅಂಚೆ ಕಛೇರಿಯು ವಿಶ್ವದ ಅತಿ ಎತ್ತರದ ಅಂಚೆ ಕಛೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಪಿತಿ ಕಣಿವೆಯಲ್ಲಿರುವ ಕಾಜಾ ಪಟ್ಟಣದಿಂದ ಇದು ಸುಮಾರು 15 ಕಿ.ಮೀ ದೂರದಲ್ಲಿದೆ. ಅತಿ ಎತ್ತರವಾದ ಈ ಸ್ಥಳದಲ್ಲಿ ಮೊಬೈಲ್ ನೆಟ್‌ವರ್ಕ್ ಗಳು ಸಿಗದ ಕಾರಣ ಪತ್ರಗಳನ್ನು ಪೋಸ್ಟ್ ಮಾಡಲು ಅಥವಾ ತಮ್ಮ ಉಳಿತಾಯ ಖಾತೆಗಳಲ್ಲಿ ಹಣವನ್ನು ಜಮಾ ಮಾಡಲು ಹಳ್ಳಿಗರು ಇಲ್ಲಿಗೆ ಬರುತ್ತಾರೆ. ಚಳಿಗಾಲದ ತಿಂಗಳುಗಳಲ್ಲಿ ಭಾರೀ ಹಿಮಪಾತವಾಗುವ ಕಾರಣ ಅಂಚೆ ಕಚೇರಿಯನ್ನು ಮುಚ್ಚಲಾಗುತ್ತದೆ. ಈ ಅಂಚೆ ಕಛೇರಿಯ ಪಿನ್ ಕೋಡ್ 172114. ಪ್ರವಾಸಿಗರು ಸ್ಪಿತಿ ಕಣಿವೆಗೆ ಭೇಟಿ ನೀಡಿದಾಗ ಈ ಅಂಚೆ ಕಛೇರಿಯಿಂದ ತಮ್ಮ ಪ್ರೀತಿಪಾತ್ರರಿಗೆ ಪತ್ರ ಕಳುಹಿಸಿ ಸಂತೋಷ ಪಡುತ್ತಾರೆ.
2. ವಿಶ್ವದಲ್ಲೇ ಪ್ರಥಮ ತೇಲುವ ಅಂಚೆ ಕಛೇರಿ, ಶ್ರೀನಗರ:
ಶ್ರೀನಗರದ ದಾಲ್ ಸರೋವರದಲ್ಲಿರುವ ಸುಮಾರು ೨೦೦ ವರ್ಷಗಳಷ್ಟು ಹಳೆಯ ವಿಶ್ವದ ಏಕೈಕ ತೇಲುವ ಅಂಚೆ ಕಛೇರಿ ಇದಾಗಿದೆ. ಈ ಬೋಟ್ ಹೌಸ್ ಮಾದರಿಯಲ್ಲಿರುವ ಈ ಅಂಚೆ ಕಛೇರಿಯನ್ನು ಮೊದಲು ನೆಹರು ಪಾರ್ಕ್ ಪೋಸ್ಟ್ ಎಂದು ಕರೆಯಲಾಗುತ್ತಿತ್ತು. ಆದರೆ 2011ರಲ್ಲಿ ‘ಫ್ಲೋಟಿಂಗ್ ಪೋಸ್ಟ್ ಆಫೀಸ್’ ಎಂದು ಹೆಸರಿಡಲಾಯಿತು. ಈ ಅಂಚೆ ಕಚೇರಿ ಕುರಿತು ಸಾಕಷ್ಟು ಸಾಕ್ಷ್ಯ ಚಿತ್ರಗಳಾಗಿವೆ. ಇದನ್ನು ನೋಡಲು ದೂರ ದೂರದಿಂದ ಪ್ರವಾಸಿಗರು ಬರುತ್ತಾರೆ. ಅಂಚೆ ಕಚೇರಿಯು ದಾಲ್ ಲೇಕ್ ನ ನಿವಾಸಿಗಳ ಸೇವಿಂಗ್ ಅಕೌಂಟ್, ಇತರೆ ವ್ಯವಸ್ಯೆಗಳನ್ನೂ ಹೊಂದಿದೆ. ಇಲ್ಲಿಗೆ ಬರುವ ಪ್ರವಾಸಿಗರೂ ಸಹ ಈ ವಿಶಿಷ್ಟ ಅಂಚೆ ಕಛೇರಿಯಿಂದ ತಮ್ಮ ಪ್ರೀತಿಪಾತ್ರರಿಗೆ ಪತ್ರ ಕಳುಹಿಸುತ್ತಾರೆ.
3. 3D ಮುದ್ರಿತ ಅಂಚೆ ಕಛೇರಿ, ಬೆಂಗಳೂರು
ದೇಶದ ಮೊದಲ 3D ಮುದ್ರಿತ ಅಂಚೆ ಕಛೇರಿಯು ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿದೆ. ಇದನ್ನು 3ಡಿ ತಂತ್ರಜ್ಞಾನದ ಮೂಲಕ ಕೇವಲ 45 ದಿನಗಳಲ್ಲಿ ನಿರ್ಮಿಸಲಾಗಿದೆ. ಚೆನ್ನೈ ಐಐಟಿಯ ಮಾರ್ಗದರ್ಶನದಲ್ಲಿ ಲಾರ್ಸೆನ್ ಮತ್ತು ಟುಬ್ರೋ ಲಿಮಿಟೆಡ್ (ಎಲ್ ಆ್ಯಂಡ್ ಟಿ) ಸಂಸ್ಥೆಯು ನಿರ್ಮಿಸಿದೆ.3ಸ್ವಯಂ ಚಾಲಿತ ಕಟ್ಟಡ ನಿರ್ಮಾಣ ತಂತ್ರಜ್ಞಾನದಲ್ಲಿ ರೋಬೋಟಿಕ್ ಮುದ್ರಣದ ಮೂಲಕ ಕಾಂಕ್ರೀಟ್ ಪದರವನ್ನು ಹಂತ ಹಂತವಾಗಿ ನಿರ್ಮಿಸಲಾಗುತ್ತದೆ. 3D ತಂತ್ರಜ್ಞಾನದಿಂದ ನಿರ್ಮಾಣವಾದ ಏಕೈಕ ಅಂಚೆ ಕಛೇರಿ ಇದಾಗಿದೆ.
4. ಜನರಲ್ ಪೋಸ್ಟ್ ಆಫೀಸ್, ಮುಂಬೈ:
ಕರ್ನಾಟಕದ ಬಿಜಾಪುರದ “ಗೋಲ್ ಗುಂಬಜ್” ಮಾದರಿಯಲ್ಲಿರುವ ಈ ವಿಶಿಷ್ಟ ಅಂಚೆ ಕಛೇರಿಯು ಮುಂಬೈ ನಗರದ ಕೇಂದ್ರ ಅಂಚೆ ಕಚೇರಿಯಾಗಿದೆ. ಇದನ್ನು ಬ್ರಿಟಿಷ್ ವಾಸ್ತುಶಿಲ್ಪಿ ಜಾನ್ ಬೆಗ್ 1902 ರಲ್ಲಿ ವಿನ್ಯಾಸಗೊಳಿಸಿದರು.ವಿಶ್ವಸಂಸ್ಥೆಯ ಅಂಚೆಚೀಟಿಗಳನ್ನು ಮಾರಾಟ ಮಾಡಲು ಅಧಿಕಾರ ಹೊಂದಿರುವ ದೇಶದ ಐದು ಅಂಚೆ ಕಚೇರಿಗಳಲ್ಲಿ ಈ ಅಂಚೆಯೂ ಒಂದು. ಮೊದಲನೇ ಮಹಾಯುದ್ಧದಲ್ಲಿ ಮಡಿದ ಭಾರತೀಯ ಸೇನೆಯ ಸೇವೆಯಲ್ಲಿದ್ದ ಭಾರತದ ಅಂಚೆ ಕಛೇರಿ ನೌಕರರನ್ನು ಸ್ಮರಿಸುವ ಯುದ್ಧ ಸ್ಮಾರಕ ಫಲಕವೂ ಸಹ ಈ ಕಛೇರಿಯಲ್ಲಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.