ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಮಹಾರಾಷ್ಟ್ರದ ತಾಣಗಳು

ಭಾರತವು ಒಟ್ಟು 42 ವಿಶ್ವ ಪಾರಂಪರಿಕ ತಾಣಗಳನ್ನು ಹೊಂದಿದೆ. ಅವುಗಳಲ್ಲಿ ಅತಿ ಹೆಚ್ಚು ವಿಶ್ವ ಪಾರಂಪರಿಕ ತಾಣಗಳನ್ನು ಹೊಂದಿರುವ ರಾಜ್ಯ “ಮಹಾರಾಷ್ಟ್ರ”. ಯುನೆಸ್ಕೋಯಿಂದ ಮಾನ್ಯತೆ ಪಡೆದ ಮಹಾರಾಷ್ಟ್ರದ ವಿಶ್ವ ಪಾರಂಪರಿಕ ತಾಣ (World Heritage Sites) ಗಳ ಕುರಿತು ಇಲ್ಲಿದೆ.

• ಉಜ್ವಲಾ ವಿ.ಯು.

1. ಅಜಂತಾ ಗುಹೆಗಳು:

Ajanta caves

ಅಜಂತಾ ಗುಹೆಗಳು ಭಾರತದ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯಲ್ಲಿದೆ. ಅಜಂತಾದ ಗಮನಾರ್ಹ ವರ್ಣ ಚಿತ್ರಗಳು ಮತ್ತು ಶಿಲ್ಪಗಳ ಪ್ರಭಾವದಿಂದ ಇದನ್ನು “ಬೌದ್ಧ ಧಾರ್ಮಿಕ ಕಲೆಯ ಮೇರುಕೃತಿ”ಗಳೆಂದು ಪರಿಗಣಿಸಲಾದ . 2 ನೇ ಮತ್ತು 1 ನೇ ಶತಮಾನಗಳಿಂದ(ಗುಪ್ತರ ಅವಧಿಯಲ್ಲಿ) ಅಜಂತಾದಲ್ಲಿನ ಮೊದಲ ಬೌದ್ಧ ಗುಹೆ ಸ್ಮಾರಕಗಳ ಕೆತ್ತನೆ ಆರಂಭವಾದವು. ಅವುಗಳಲ್ಲಿ ಐದು ಚೈತ್ಯಗೃಹಗಳು, ಸಂಘರಾಮಗಳು ಅಥವಾ ವಿಹಾರಗಳು (ಮಠ) ಒಳಗೊಂಡಂತೆ ಒಟ್ಟು 29 ಗುಹೆಗಳು ಇಲ್ಲಿವೆ. ಈ ಗುಹೆಗಳನ್ನು ಅಜಂತಾ ಬೆಟ್ಟಗಳಲ್ಲಿ ವಾಘೋರಾ ನದಿಯ ಎಡದಂಡೆಯ ಮೇಲಿರುವ ಬಂಡೆಯಿಂದ ಉತ್ಖನನ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಕಲೆ, ವಾಸ್ತುಶಿಲ್ಪ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಇತಿಹಾಸಗಳ ಪ್ರಮುಖ ಸಾಕ್ಷಿಯನ್ನು ಪ್ರಸ್ತುತ ಪಡಿಸುವ ಈ ಗುಹೆಗಳು 1983 ರಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು.

2. ಎಲ್ಲೋರಾ ಗುಹೆಗಳು:

Ellora Caves

ಎಲ್ಲೋರ ಗುಹೆಗಳು ಮಹಾರಾಷ್ಟ್ರದ ಔರಂಗಾಬಾದ್‌ ನಗರದಿಂದ 30 ಕಿಮೀ ದೂರದಲ್ಲಿರುವ, ರಾಷ್ಟ್ರಕೂಟ ಅರಸರಿಂದ ನಿರ್ಮಿಸಲ್ಪಟ್ಟ ಗುಹೆಗಳ ಸಂಕೀರ್ಣವಾಗಿದೆ. ಇದು 34 ಗುಹೆಗಳ ಸಮೂಹವಾಗಿದ್ದು, 17 ಗುಹೆಗಳು ಹಿಂದೂ ಧರ್ಮ, 12 ಗುಹೆಗಳು ಬೌದ್ಧ ಮತ್ತು 5 ಗುಹೆಗಳು ಜೈನ ಧರ್ಮದ ಆಧಾರದ ಮೇಲೆ ಕೆತ್ತನೆಗಳನ್ನು ಒಳಗೊಂಡಿದೆ. ಎಲ್ಲೋರಾ ಗುಹೆ ದೇವಾಲಯಗಳಲ್ಲಿ ಗಮನಾರ್ಹವಾಗಿರುವ “ಕೈಲಾಸ ದೇವಾಲಯ”(ಗುಹೆ-16)ವು ವಿಶ್ವದ ಅತಿದೊಡ್ಡ ಏಕಶಿಲಾ ದೇವಾಲಯಗಳಲ್ಲಿ ಒಂದೆನಿಸಿದೆ. ಎಲ್ಲೋರಾ ಗುಹೆಗಳು 2 ಕಿಮೀವರೆಗೆ ವಿಸ್ತರಿಸಿವೆ. ರಾಷ್ಟ್ರಕೂಟ ಮತ್ತು ಕಲಚೂರಿ ರಾಜವಂಶವು ಹಿಂದೂ ಮತ್ತು ಬೌದ್ಧ ಗುಹೆಗಳ ಭಾಗವನ್ನು ಮತ್ತು ಯಾದವ ರಾಜವಂಶವು ಹಲವಾರು ಜೈನ ಗುಹೆಗಳನ್ನು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ. ಈ ಗುಹೆಗಳ ವೈಶಿಷ್ಟ್ಯತೆಯನ್ನು ಸಂರಕ್ಷಿಸುವ ಸಲುವಾಗಿ 1983 ರಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು.

3. ಎಲಿಫೆಂಟಾ ಗುಹೆಗಳು:

Elephanta Caves

ಮುಂಬೈಗೆ ಸಮೀಪವಿರುವ ಓಮನ್ ಸಮುದ್ರದ ಎಲಿಫೆಂಟಾ ದ್ವೀಪದಲ್ಲಿಯು ಇದು ಏಳು ಗುಹೆಗಳ ಸಂಕೀರ್ಣವಾಗಿದೆ. ಶಿಲೆಯಲ್ಲಿ ಕೊರೆದು ರೂಪಿಸಲಾಗಿರುವ ಈ ಗುಹೆಗಳು ಸುಮಾರು 60,000 ಚದರ ಅಡಿಗಳಷ್ಟು ವಿಸ್ತಾರವಾಗಿವೆ.ಇಲ್ಲಿಯ ಆಕರ್ಷಣೆಯಾದ 7 ಮೀ ಎತ್ತರದ ಮೂರು ಮುಖವನ್ನು ಹೊಂದಿರುವ ಸದಾಶಿವ ಮೂರ್ತಿಯು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಹೋಲುತ್ತದೆ. ಈ ಗುಹೆಗಳಲ್ಲಿ ಹಲವು ಗುಡಿಗಳಿವೆ. ಈ ಗುಡಿಗಳು ವಿಭಿನ್ನ ರೀತಿಯ ಶಿಲಾಮೂರ್ತಿಗಳನ್ನು ಹೊಂದಿದೆ. ಜೊತೆಗೆ ಒಂದು ಶಿವಾಲಯವು ಸಹ ಪ್ರಧಾನವಾಗಿದೆ. ಈ ದೇವಾಲಯ ಸಂಕೀರ್ಣವು “ಶಿವನ ಆವಾಸತಾಣ”ವೆಂದು ಸ್ಥಳೀಯರ ನಂಬಿಕೆ. ಇದನ್ನು 1987ರಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು.

4. ಛತ್ರಪತಿ ಶಿವಾಜಿ ಟರ್ಮಿನಸ್:

Chhatrapati shivaji terminus

ಮುಂಬೈ ನಗರದಲ್ಲಿರುವ ಛತ್ರಪತಿ ಶಿವಾಜಿ ಟರ್ಮಿನಸ್ ಅನ್ನು ಹಿಂದೆ ವಿಕ್ಟೋರಿಯಾ ಟರ್ಮಿನಸ್ ಸ್ಟೇಷನ್ ಎಂದು ಕರೆಯಲಾಗುತ್ತಿತ್ತು. 1888ರಲ್ಲಿ FW ಸ್ಟೀವನ್ಸ್ ವಿನ್ಯಾಸಗೊಳಿಸಿದ ಈ ಕಟ್ಟಡವು ಗೋಥಿಕ್ ಮತ್ತು ವಿಕ್ಟೋರಿಯನ್ ಇಟಾಲಿಯನೇಟ್ ರಿವೈವಲ್ ಮತ್ತು ಭಾರತೀಯ ವಾಸ್ತುಶಿಲ್ಪ ಶೈಲಿ ಮಿಶ್ರಿತ ಕಟ್ಟಡವಾಗಿದೆ. ಇದು ವಿಶ್ವದ ಅತ್ಯುತ್ತಮ ಕ್ರಿಯಾತ್ಮಕ ರೈಲ್ವೆ ನಿಲ್ದಾಣ ಕಟ್ಟಡಗಳಲ್ಲಿ ಒಂದಾಗಿದೆ ಮತ್ತು ಇದನ್ನು ಪ್ರತಿದಿನ ಮೂರು ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರು ಬಳಸುವುದರಿಂದ ಭಾರತದಲ್ಲೇ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲೊಂದಾಗಿದೆ. ಇದರ ಗಮನಾರ್ಹವಾದ ಗೋಪುರ, ಕಮಾನು ಮತ್ತು ವಾಸ್ತುಶಿಲ್ಪದ ಕಾರಣದಿಂದಾಗಿ ಇದನ್ನು 2004 ರಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು.

5. ವಿಕ್ಟೋರಿಯನ್ ಗೋಥಿಕ್ ಮತ್ತು ಆರ್ಟ್ ಡೆಕೊ ಎನ್ಸೆಂಬಲ್ಸ್:

Victorian Gothic and Art Deco Ensembles of Mumbai

ಮುಂಬೈನ ವಿಕ್ಟೋರಿಯನ್ ಗೋಥಿಕ್ ಮತ್ತು ಆರ್ಟ್ ಡೆಕೊ ಎನ್ಸೆಂಬಲ್ಸ್ 19 ನೇ ಶತಮಾನದ ವಿಕ್ಟೋರಿಯನ್ ರಿವೈವಲ್ ಸಾರ್ವಜನಿಕ ಕಟ್ಟಡ ಮತ್ತು 20 ನೇ ಶತಮಾನದ ಮುಂಬೈ ಆರ್ಟ್ ಡೆಕೊ ಖಾಸಗಿ ಕಟ್ಟಡಗಳ ಸಂಗ್ರಹವಾಗಿದೆ. ಈ ಕಟ್ಟಡಗಳನ್ನು 2018 ರಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು.

6. ಪಶ್ಚಿಮ ಘಟ್ಟಗಳು:

Western ghats of Maharashtra

ಜೈವಿಕ ವೈವಿಧ್ಯತೆಯ ಸಂರಕ್ಷಣೆಗಾಗಿ ಪಶ್ಚಿಮ ಘಟ್ಟಗಳು 1,600 ಕಿಮೀ ಉದ್ದದ ಪ್ರದೇಶದಲ್ಲಿ ಸುಮಾರು 140,000 ಕಿಮೀ² ವಿಸ್ತೀರ್ಣವನ್ನು ಒಳಗೊಂಡಿದೆ. ಇದು ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳನ್ನು ಹಾದು ಹೋಗುತ್ತವೆ. ಮಹಾರಾಷ್ಟ್ರದ ಭಾಗದ ಪಶ್ಚಿಮ ಘಟ್ಟಗಳು ಸಹ ಪಟ್ಟಿಯಲ್ಲಿ ಒಳಗೊಂಡಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್(Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button