Moreದೂರ ತೀರ ಯಾನವಿಂಗಡಿಸದ

ಮಾ.31 ರಿಂದ ಬೆಂಗಳೂರು-ಲಕ್ಷದ್ವೀಪ ನೇರ ವಿಮಾನ ಹಾರಾಟ ಆರಂಭ; ಇಂಡಿಗೋ ಕೊಡುಗೆ

ಭಾರತದ ಅತಿ ದೊಡ್ಡ ವಿಮಾನ ಸಂಸ್ಥೆ “ಇಂಡಿಗೋ” (IndiGo) ಬೆಂಗಳೂರು (Bengaluru) ಮತ್ತು ಲಕ್ಷದ್ವೀಪದ ಅಗತ್ತಿ ದ್ವೀಪದ (Agatti Island) ನಡುವೆ ನೇರ ವಿಮಾನವನ್ನು (Direct Flight) ಮಾರ್ಚ್ 31 ರಿಂದ ಪ್ರಾರಂಭಿಸುವುದಾಗಿ ಘೋಷಿಸಿದೆ.

ಲಕ್ಷದ್ವೀಪದ (Lakshadweep) ವರ್ಚುವಲ್ ಗೇಟ್ ವೇ ಎಂದು ಕರೆಯಲ್ಪಡುವ ಅಗತ್ತಿ ದ್ವೀಪವು ಮೀನುಗಾರಿಕೆ, ಸ್ಕೂಬಾ ಡೈವಿಂಗ್, ನೌಕಾಯಾನ, ಸ್ಕೀಯಿಂಗ್, ಕಯಾಕಿಂಗ್, ಇತ್ಯಾದಿಗಳಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ವಿಮಾನಯಾನ ಸಂಸ್ಥೆಯು ತಿಂಗಳಾಂತ್ಯದಿಂದ ಈ ಮಾರ್ಗದಲ್ಲಿ ವಿಮಾನವನ್ನು ಆರಂಭಿಸುವುದಾಗಿ ಘೋಷಿಸಿದೆ.

ಈ ವಿಮಾನವು ಇಂಡಿಗೋ ಸಂಸ್ಥೆಯ 88 ನೇ ದೇಶೀಯ ಗಮ್ಯಸ್ಥಾನವಾಗಿದೆ ಮತ್ತು ಅಂತರರಾಷ್ಟ್ರೀಯ ಮಾರ್ಗಗಳನ್ನು ಒಳಗೊಂಡಂತೆ 121 ನೇ ಗಮ್ಯಸ್ಥಾನವಾಗಲಿದೆ.

ಬೆಂಗಳೂರು-ಲಕ್ಷದ್ವೀಪ ಮಾರ್ಗಕ್ಕಾಗಿ 78 ಆಸನಗಳನ್ನು ಒಳಗೊಂಡಿರುವ ಇಂಡಿಗೋ ATR ವಿಮಾನವನ್ನು ಬಳಸಲು ಸಿದ್ಧವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

“ಆಳದ ಸಮುದ್ರದ ಮೀನುಗಾರಿಕೆ, ಸ್ಕೂಬಾ ಡೈವಿಂಗ್, ನೌಕಾಯಾನ, ಸ್ಕೀಯಿಂಗ್ ಮತ್ತು ಕಯಾಕಿಂಗ್‌ಗಳಿಗೆ ಹೆಸರುವಾಸಿಯಾದ ಅಗತ್ತಿ ದ್ವೀಪವು ಜನವಸತಿಯಿಲ್ಲದ ಮತ್ತು ಪ್ರಶಾಂತವಾದ ಬಂಗಾರಮ್, ಪಿಟ್ಟಿ, ತಿನ್ನಕರ, ಪರಲಿ-I ಮತ್ತು ಪರಲಿ-II ದ್ವೀಪಗಳನ್ನು ಅನ್ವೇಷಿಸಲು ಸೂಕ್ತವಾದ ನೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಇತರೆ ಎಲ್ಲಾ ದ್ವೀಪಗಳಿಗೆ ಹತ್ತಿರದಲ್ಲಿದೆ” ಎಂದು ಬಜೆಟ್ ಏರ್‌ಲೈನ್ ತನ್ನ ಹೇಳಿಕೆಯಲ್ಲಿ ಸೇರಿಸಿದೆ.

ಇತ್ತೀಚಿಗೆ ಮಾಲ್ಡೀವ್ಸ್‌ (Maldives) ವಿವಾದದ ನಂತರ, ಭಾರತೀಯರು ಹೆಚ್ಚಾಗಿ ಲಕ್ಷದ್ವೀಪಕ್ಕೆ ತೆರಳುತಿದ್ದಾರೆ. ಆದರೆ ಅಲ್ಲಿಗೆ ಸುವ್ಯವಸ್ಥಿತ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಕೆಲವು ಸಮಸ್ಯೆಗಳು ಉಂಟಾಗುತ್ತಿದ್ದವು.

ಈ ಉಪಕ್ರಮವು ಟೆಕ್ ಹಬ್ ಆದ ಬೆಂಗಳೂರು ಮತ್ತು ಲಕ್ಷದ್ವೀಪ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಈಗ ಪ್ರಸ್ತುತ ಅಲಯನ್ಸ್ ಏರ್ (Alliance Air) ಮಾತ್ರ ಅಗತ್ತಿಗೆ ವಿಮಾನವನ್ನು ಹೊಂದಿದೆ.

ಇತ್ತೀಚೆಗೆ ಬಿಡುಗಡೆಯಾದ ಗೋವಾ (Goa) ಮೂಲದ FLY91 ಸಹ ಮುಂದಿನ ತಿಂಗಳು ದ್ವೀಪದಲ್ಲಿ ಸೇವೆಗಳನ್ನು ಪ್ರಾರಂಭಿಸಲು ಸರತಿಯಲ್ಲಿದೆ.

ಮೊದಲು ಅಲಯನ್ಸ್ ಏರ್ ಲಕ್ಷದ್ವೀಪಕ್ಕೆ ವಿಮಾನ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾಗಿತ್ತು. ಕೊಚ್ಚಿ-ಅಗತ್ತಿ-ಕೊಚ್ಚಿ ಮಾರ್ಗದಲ್ಲಿ ಲಕ್ಷದ್ವೀಪಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು.

ಭಾನುವಾರ ಮತ್ತು ಬುಧವಾರ ವಾರಕ್ಕೆ ಎರಡು ದಿನ ಇದು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂದು ಅಲಯನ್ಸ್ ಏರ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಹೊಚ್ಚ ಹೊಸ ಗೋವಾ ಮೂಲದ ಮೊದಲ ಪ್ರಾದೇಶಿಕ ವಿಮಾನಯಾನ FLY91 ಗೋವಾದಿಂದ ಬೆಂಗಳೂರಿಗೆ ಟೇಕ್ ಆಫ್ ಆಗುವುದರೊಂದಿಗೆ ಸೋಮವಾರ (ಮಾ.18) ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಇದನ್ನು ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (MOPA) ಲಕ್ಷದ್ವೀಪದ ಅಗತ್ತಿ ದ್ವೀಪಗಳಿಗೆ ಉದ್ದೇಶಿಸಲಾಗಿತ್ತು.

ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉಕ್ಕಿನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಉದ್ಘಾಟಿಸಿದರು.

ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಿಂದ ಸಿಂಧುದುರ್ಗ, ಜಲಗಾಂವ್, ನಾಂದೇಡ್ ಮತ್ತು ಗೋವಾಕ್ಕೆ ಹೆಚ್ಚುವರಿ ಮಾರ್ಗಗಳನ್ನು ಹಂತ ಹಂತವಾಗಿ ಪರಿಚಯಿಸಲಾಗುವುದು ಎಂದು FY19 ಸಂಸ್ಥೆ ಘೋಷಿಸಿದೆ.

ಇದೇ ಬೆನ್ನಲ್ಲೇ ಈಗ ಇಂಡಿಗೋ ಸಂಸ್ಥೆಯ ಈ ಹೊಸ ಮಾರ್ಗವು ಬೆಂಗಳೂರು-ಲಕ್ಷದ್ವೀಪದ (Bengaluru – Lakshadweep) ನಡುವೆ ನೇರ ಸಂಪರ್ಕವನ್ನು ಸ್ಥಾಪಿಸುತ್ತದೆ.

ಇದು ಪ್ರವಾಸಿಗರಿಗೆ ಸುಲಭವಾಗಿ ಪ್ರವೇಶಿಸುವಿಕೆ, ಹೆಚ್ಚಿನ ವಿಮಾನ ಆಯ್ಕೆಗಳನ್ನು ಒದಗಿಸುತ್ತದೆ ಮತ್ತು ಲಕ್ಷದ್ವೀಪದ ಸಂಪರ್ಕವನ್ನು ಬಲಪಡಿಸುತ್ತದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಬೆಂಗಳೂರಿನಿಂದ ಬೆಳಗ್ಗೆ 10.25ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಅಗತ್ತಿ ತಲುಪಲಿದ್ದು, ಅಗತ್ತಿಯಿಂದ ಮಧ್ಯಾಹ್ನ 1.20ಕ್ಕೆ ಹೊರಟು ಸಂಜೆ 5.20ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button