ಆಂಧ್ರದಲ್ಲಿ ಆಚರಿಸಲಾಗುವ ‘ಪರುವೇಟ ಉತ್ಸವ’ಕ್ಕೆ ಸಿಗಲಿದೆಯೇ ಯುನೆಸ್ಕೋ ಮಾನ್ಯತೆ ?
ಆಂಧ್ರಪ್ರದೇಶದ ಅಹೋಬಿಲಂನಲ್ಲಿ ಆಚರಿಸಲಾಗುವ ಪ್ರಸಿದ್ಧ “ಪರುವೇಟ ಉತ್ಸವ” (Paruveta Festival)ವನ್ನು ಯುನೆಸ್ಕೋದ “ಅಮೂರ್ತ ಸಾಂಸ್ಕೃತಿಕ ಪರಂಪರೆ”ಯ ಪಟ್ಟಿಗೆ ಸೇರಿಸಬೇಕೆಂದು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ಪ್ರಯತ್ನಿಸುತ್ತಿದೆ.
ಈ ಪರುವೇಟ ಉತ್ಸವವು (ಅಣಕು ಬೇಟೆ ಹಬ್ಬ) ಅಹೋಬಿಲಂನ (Ahobilam) ಶ್ರೀ ನರಸಿಂಹ ಸ್ವಾಮಿ ದೇವಾಲಯದಲ್ಲಿ(Sri Narasimha swami temple) ಪ್ರತೀ ವರ್ಷ ಅದ್ದೂರಿಯಿಂದ ಆಚರಿಸುವ ಹಬ್ಬವಾಗಿದೆ.
ಯುನೆಸ್ಕೋದ “ಅಮೂರ್ತ ಸಾಂಸ್ಕೃತಿಕ ಪರಂಪರೆ”ಯ (Intangible cultural heritage) ಪಟ್ಟಿಯಲ್ಲಿ ಸಾಮಾನ್ಯವಾಗಿ ಸಂಪ್ರದಾಯಗಳು, ಹಬ್ಬಗಳು ಮತ್ತು ಆನುವಂಶೀಯವಾಗಿ ಪೂರ್ವಜರಿಂದ ಬಂದ ಕೌಶಲ್ಯಗಳನ್ನು ಸೇರಿಸಲಾಗುತ್ತದೆ.
ಪರುವೇಟ ಹಬ್ಬವು ಕೋಮು ಸೌಹಾರ್ದತೆಯ ಸಂಕೇತವಾಗಿದ್ದು, ಹಬ್ಬದ ಸಂದರ್ಭದಲ್ಲಿ ಗರ್ಭಗುಡಿಯಿಂದ ದೇವರನ್ನು 40 ದಿನಗಳ ಕಾಲ ಅಹೋಬಿಲಂ ಸುತ್ತಮುತ್ತಲಿನ 32 ಚೆಂಚು ಬುಡಕಟ್ಟು (Chenchu Tribes) ಗ್ರಾಮಗಳಿಗೆ ಕರೆದೊಯ್ಯಲಾಗುತ್ತದೆ.
ಉತ್ಸವಕ್ಕೆ ಪುರಾಣದ ಮಹತ್ವ:
ಶತಮಾನಗಳಷ್ಟು ಹಳೆಯ ಈ ಉತ್ಸವವು ಹಿಂದಿನಿಂದಲೂ ಜಾತಿರಹಿತ ಸಮಾಜದ ಉಪಸ್ಥಿತಿಯನ್ನು ಸೂಚಿಸುತ್ತದೆ. ಈ ಉತ್ಸವವು ಜಾತ್ಯತೀತವಾಗಿ ಆಚರಿಸಲಾಗುತ್ತದೆ.
ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವಿನ ಅವತಾರಿಯಾದ ಶ್ರೀ ನರಸಿಂಹನು ಬುಡಕಟ್ಟು ಜನಾಂಗದ “ಚೆಂಚುಲಕ್ಷ್ಮಿ”ಯಾಗಿ ಜನಿಸಿದ ಮಹಾ ಲಕ್ಷ್ಮಿಯನ್ನು ವಿವಾಹವಾದನು.
ಅಹೋಬಿಲನೆಂಬುವವನು ನರಸಿಂಹನನ್ನು ಅವನ ಸೋದರ ಮಾವ ಎಂದು ಪೂಜಿಸುವುದು ಮತ್ತು ಮಕರ ಸಂಕ್ರಾಂತಿಗೆ ಅವನನ್ನು ಮನೆಗೆ ಆಹ್ವಾನಿಸುವ ಸಂಕೇತವಾಗಿ ಈ ಉತ್ಸವವನ್ನು ಆಚರಿಸಲಾಗುತ್ತದೆ.
1881 ರಲ್ಲಿ ಸರ್ಕಾರಿ ಮುದ್ರಣಾಲಯದಿಂದ ಪ್ರಕಟವಾದ ಕರ್ನೂಲ್ ಡಿಸ್ಟ್ರಿಕ್ಟ್ ಗೆಜೆಟಿಯರ್ಸ್, ಚೆಂಚು ಬುಡಕಟ್ಟು ಜನಾಂಗದವರ ಹಲವಾರು ನಂಬಿಕೆಗಳನ್ನು ದಾಖಲಿಸಿದೆ.
ವಿಜಯದಶಮಿ ಮತ್ತು ಮಕರ ಸಂಕ್ರಾಂತಿಯ ಸಮಯದಲ್ಲಿ ಪೆರುವೇಟವನ್ನು ಅನೇಕ ದೇವಾಲಯದಲ್ಲಿ ಆಚರಿಸಲಾಗುತ್ತದೆ. ಆದರೆ ಈ ದೇವಾಲಯದಲ್ಲಿ ಒಂದು ಮಂಡಲ (ನಲವತ್ತು ದಿನಗಳ) ಕಾಲ ನಡೆಸಲಾಗುತ್ತದೆ.
ಈ ಸಂದರ್ಭದಲ್ಲಿ ಚೆಂಚು ಬುಡಕಟ್ಟಿನ ಜನರು ಹಳದಿ ವಸ್ತ್ರವನ್ನು ಮತ್ತು ತುಳಸಿ ಮಾಲೆಯನ್ನು ಧರಿಸಿ, ನರಸಿಂಹ ದೀಕ್ಷೆಯನ್ನು (Narasimha Deeksha) ತೆಗೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಬ್ರಹ್ಮಚರ್ಯವನ್ನು ಪಾಲಿಸುತ್ತಾ, ಕಟ್ಟುನಿಟ್ಟಿನ ವ್ರತವನ್ನು ಆಚರಿಸುತ್ತಾರೆ.
ನರಸಿಂಹ ದೇವರು ತಮ್ಮ ಗ್ರಾಮವನ್ನು ತಲುಪಿದ ದಿನದಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.
ಅಹೋಬಿಲಂನ ನರಸಿಂಹ ದೇವಾಲಯವು 600 ವರ್ಷಗಳಷ್ಟು ಹಳೆಯ ಅಹೋಬಿಲಂ ಮಠದಿಂದ ಪರಂಪರಾಗತವಾಗಿ ನಡೆಸಿಕೊಂಡು ಬರುತ್ತಿದೆ.
ಈ ಹಬ್ಬವನ್ನು ಶತಮಾನಗಳ ಹಿಂದೆ ಬುಡಕಟ್ಟು ಜನಾಂಗಗಳಲ್ಲಿ ಶ್ರೀ ವೈಷ್ಣವ ಧರ್ಮವನ್ನು ಹರಡಲು ಆರಂಭಿಸಲಾಯಿತು ಎಂದು ಸಂಸ್ಕೃತ ನಾಟಕ ವಾಸಂತಿಕಾ ಪರಿಣಯಂನಲ್ಲಿ ಉಲ್ಲೇಖವಿದೆ.
ಈಗ ಈ ವಿಶಿಷ್ಟವಾದ ಉತ್ಸವವು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕೆಂದು ಸಕಲ ಪ್ರಯತ್ನಗಳು ಮತ್ತು ಪರಿಶೀಲನೆಗಳು ನಡೆಯುತ್ತಿವೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.