ಕಾಶ್ಮೀರಕ್ಕೆ ವಿದೇಶಿ ಹೂಡಿಕೆದಾರರು; ಆ್ಯಪಲ್ ಗೆ ಬಂತು ಸಖತ್ ಡಿಮ್ಯಾಂಡ್
ಕಾಶ್ಮೀರ.. ಕಣಿವೆ ನಾಡು… ಭಾರತದ ಉತ್ತರದ ತುತ್ತ ತುದಿಯಲ್ಲಿ, ದೇಶದ ಮುಕುಟಕ್ಕೆ ಕಿರೀಟದಂತಿರುವ ಸ್ಥಳ. ನಮ್ಮ ದೇಶದ ಸ್ವಿಜರ್‌ಲ್ಯಾಂಡ್ ಅಂತಲೇ ಜನ ಜನಿತ.
ಪ್ರವಾಸಿಗರ ಪಾಲಿಗೆ ಭೂ ಲೋಕದ ಸ್ವರ್ಗ. ಪಾಕೃತಿಕವಾಗಿಯೂ, ಪ್ರವಾಸಿ ತಾಣವಾಗಿಯೂ ಈ ರಾಜ್ಯದ ಚೆಲುವಿದೆಯಲಾ ಅದನ್ನು ವರ್ಣಿಸುವುದಕ್ಕೆ ಅಸಾಧ್ಯ..
ಕಾಶ್ಮೀರ ಎಂದಾಗ ಕಣಿವೆಗಳು ಹೇಗೆ ಎಲ್ಲರಿಗೂ ನೆನಪಾಗೊತ್ತದೆಯೋ ಅಷ್ಟೇ ಥಟ್ಟನೆ ಹೊಳೆಯುವುದು ಕಾಶ್ಮೀರಿ ಆ್ಯಪಲ್.ಕಾಶ್ಮೀರದ ಜೊತೆ ಜೊತೆಗೆ ಅಲ್ಲಿನ ಪ್ರಧಾನ ಕಸುಬು ಸೇಬಿನ ಉದ್ಯಮವೂ ಕೂಡ ಬೆಳೆದುಕೊಂಡು ಬಂದಿದೆ,.
ಈ ರಾಜ್ಯದ ಆರ್ಥಿಕತೆಗೆ ಸೇಬು ಬೆನ್ನುಲುಬು.ಕಾಶ್ಮೀರ ಆ್ಯಪಲ್‌ಗೆ(Kashmir Apple) ಜನಪ್ರಿಯ ಎನ್ನುವ ಸಂಗತಿಯನ್ನು ತಿಳಿಯದವರು ವಿರಳ.
ದೇಶದಲ್ಲಿ ಉತ್ಪಾದನೆಯಾಗುವ ಶೇ. 92ರಷ್ಟು ಸೇಬುಹಣ್ಣುಗಳು ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಿಂದ ಬರುತ್ತವೆ.
ಜಮ್ಮು ಕಾಶ್ಮೀರ(Jammu Kashmir)ಒಂದರಲ್ಲೇ ಸೇಬು ಉದ್ಯಮ ವಾರ್ಷಿಕ 8,000- 10,000 ಕೋಟಿ ರೂ. ಮೌಲ್ಯವನ್ನು ಹೊಂದಿದೆ.
ಈ ಉದ್ಯಮವನ್ನು ಮತ್ತಷ್ಟು ಹೆಚ್ಚು ಮಾಡೋದಕ್ಕೆ ಕಾಶ್ಮೀರದ ಸ್ಟಾರ್ಟ್ ಅಪ್ ಕಂಪೆನಿಯ ಮೂಲಕ ಬರೋಬ್ಬರಿ 60 ಕೋಟಿ ಹೂಡಿಕೆ ಮಾಡೋದಕ್ಕೆ ವಿದೇಶಿ ಕಂಪೆನಿಗಳು ಮುಂದಾಗಿವೆ(Foreign Investment).
ಕಾಶ್ಮೀರ ಮೂಲದ ಸ್ಟಾರ್ಟಪ್ ಸಂಸ್ಥೆ ‘ಕುಲ್ ಫ್ರೂಟ್‌ವಾಲ್ ಫಾರ್ಮ್ ಇನ್‌ಸ್ಟಾಲೇಷನ್ಸ್’ಗೆ (qul fruit wall form installation)ವಿದೇಶದಿಂದ 60 ಕೋಟಿ ರೂ. ಹೂಡಿಕೆ ಹರಿದುಬಂದಿದೆ.
ಬೆಲ್ಜಿಯಂ ಮೂಲದ ಇನ್‌ಕಾಫಿನ್ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್(incofin investment management)ಮತ್ತು ಫೀಲ್ಡ್‌ಲಿನ್ ವೆಂಚರ್ಸ್ (Fiedlin)ಎರಡು ಸಂಸ್ಥೆಗಳು ಕಾಶ್ಮೀರ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿವೆ.
60 ಕೋಟಿ ಹೂಡಿಕೆಯಲ್ಲಿ ಶೇ. 80ರಷ್ಟು ಇನ್‌ಕಾಫಿನ್‌ನಿಂದ ಹರಿದುಬಂದರೆ, ಶೇ. 20ರಷ್ಟು ನೆರವು ಫೀಲ್ಡ್‌ಲಿನ್‌ನಿಂದ ದೊರಕಿದೆ.
ಈ ಕುಲ್ ಫ್ರೂಟ್‌ವಾಲ್ ಫಾರ್ಮ್ ಇನ್‌ಸ್ಟಾಲೇಷನ್ಸ್’ ಎನ್ನುವುದು ಶ್ರೀನಗರದಲ್ಲಿರುವ ಒಂದು ಖಾಸಗಿ ಸಂಸ್ಥೆ. 2019ರಲ್ಲಿ ಆರಂಭವಾದ ಈ ಸಂಸ್ಥೆ ಕೃಷಿಗೆ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ.
ಇದೇ ಕಂಪೆನಿಯ ಮೂಲಕ ಕಾಶ್ಮೀರ ಆ್ಯಪಲ್ ,ಮಾರುಕಟ್ಟೆಯಲ್ಲಿ ತನ್ನ ಹೂಡಿಕೆಯನ್ನು ಮಾಡೋದಕ್ಕೆ ವಿದೇಶಿ ಕಂಪೆನಿಗಳು ಮುಂದೆ ಬಂದಿವೆ ಎನ್ನಲಾಗುತ್ತಿದೆ.
ಖಾಸಗಿ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಸ್ವೀಕರಿಸಿದ ಕಾಶ್ಮೀರದ ಮೊದಲ ಸಂಸ್ಥೆ ಕುಲ್ ಫ್ರೂಟ್‌ವಾಲ್. ಸ್ಟಾರ್ಟ್ ಅಪ್ ಕಂಪೆನಿಗೆ ಬರೋಬ್ಬರಿ 60 ಕೋಟಿ ಹೂಡಿಕೆಯನ್ನು ಮಾಡುವ ಮೂಲಕ ಅಲ್ಲಿನ 5 ಸಾವಿರ ಮಂದಿಗೆ ತರಬೇತಿಯನ್ನು ನೀಡುವುದರ ಬಗ್ಗೆ ಯೋಜನೆ ರೂಪಿತವಾಗಿದೆ..
ಈ ಹೂಡಿಕೆ ಕುಲ್ ಕಂಪೆನಿಯ ಉತ್ಸಾಹವನ್ನು ಕೂಡ ಹೆಚ್ಚಿಸಿದೆ. ಹೆಕ್ಟೇರ್‌ಗೆ 12 ಮೆಟ್ರಿಕ್ ಟನ್‌ಗಳ ಪ್ರಸ್ತುತ ಮಟ್ಟದಿಂದ ಸೇಬಿನ ಇಳುವರಿಯನ್ನು ಐದು ವರ್ಷಗಳಲ್ಲಿ ಕನಿಷ್ಠ ನಾಲ್ಕು ಪಟ್ಟು ಹೆಚ್ಚಿಸುವ ಮೂಲಕ ತೋಟಗಾರಿಕೆಯಲ್ಲಿ ಹೊಸ ಕ್ರಾಂತಿಯನ್ನು ಮಾಡುವ ಉದ್ದೇಶ ಹಾಕಿಕೊಂದಿದೆ.
ಕುಲ್ ಈಗಾಗಲೇ 5,000 ರೈತರನ್ನು ಹೈಟೆಕ್, ಹೈ-ಡೆನ್ಸಿಟಿ ಫಾರ್ಮಿಂಗ್‌ಗೆ ಯಶಸ್ವಿಯಾಗಿ ಪರಿವರ್ತಿಸಿದೆ, ಕೃಷಿ ಆದಾಯವನ್ನು ನಾಲ್ಕರಿಂದ ಆರು ಪಟ್ಟು ಹೆಚ್ಚಿಸಿದೆ.
ಭಾರತೀಯ ಸೇಬುಗಳನ್ನು ಗ್ಲೋಬಲ್ ಲೆವೆಲ್‌ಗೆ ಕೊಂಡೊಯ್ಯುವುದಕ್ಕೆ ವಿದೇಶಿ ಕಂಪೆನಿಗಳು ಕೂಡ ಹೂಡಿಕೆ ಮಾಡಿದೆ.
ಮುಂದಿನ ವರ್ಷಗಳಲ್ಲಿ 30,000 ರೈತರ ಮೇಲೆ ಪರಿಣಾಮ ಬೀರಲು ಕಂಪನಿಯು ತನ್ನ ಮಾದರಿಯನ್ನು ಅಳೆಯಲು ಯೋಜಿಸಿದೆ, ಮುಂದಿನ ಐದು ವರ್ಷಗಳಲ್ಲಿ 1,000 ಕೋಟಿ ಆದಾಯ ತಲುಪುವ ಯೋಜನೆಯನ್ನು ಕೂಡ ಹಾಕಿಕೊಂಡಿದೆ.
ಇನ್‌ಕಾಫಿನ್ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್ ಮತ್ತು ಫೀಲ್ಡ್‌ಲಿನ್ ವೆಂಚರ್ಸ್ ಸಂಸ್ಥೆಗಳ ಹೂಡಿಕೆಯಿಂದ ಕಾಶ್ಮೀರದಲ್ಲಿ ಹೊಸ ಭರವಸೆಯೊಂದು ಮೂಡಿದೆ.
ಅಲ್ಲದೇ ಇದು ದಿನಕಳಳೆದಂತೆ ಕಣಿವೆ ರಾಜ್ಯದ ಆರ್ಥಿಕತೆಯ ಮೇಲೆಯೂ ಬಹುದೊಡ್ಡ ಪರಿಣಾಮ ಬೀರಬಹುದು ಅಂತಲೂ ಹೇಳಲಾಗ್ತಿದೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ಹೂಡಿಕೆ ರಾಜ್ಯಕ್ಕೆ ಹರಿದುಬರುವ ವಿಶ್ವಾಸವನ್ನು ರಾಜ್ಯದ ಆರ್ಥಿಕ ಪರಿಣತರು ವ್ಯಕ್ತಪಡಿಸಿದ್ದಾರೆ.
ವಿದೇಶಿ ಹೂಡಿಕೆದಾರರ ಈ ಇನ್‌ವೆಸ್ಟ್‌ಮೆಂಟ್ ಕಾಶ್ಮೀರದ ರೈತರ ಆರ್ಥಿಕತೆಯ ಚಿತ್ರಣವನ್ನೇ ಬದಲಿಸಬಹುದು ಎನ್ನಲಾಗ್ತಿದೆ.
ಪ್ರಯೋಗಶೀಲತೆ ಮೈಗೂಡಿಸಿಕೊಳ್ಳಲು ಜಮ್ಮು ಮತ್ತು ಕಾಶ್ಮೀರದ ಬೆಳೆಗಾರರು ಉತ್ಸುಕವಾಗಿದ್ದು, 5000 ಬೆಳೆಗಾರರು ‘ಕುಲ್ ಫ್ರೂಟ್‌ವಾಲ್ ಫಾರ್ಮ್ ಇನ್‌ಸ್ಟಾಲೇಷನ್ಸ್’ ಸ್ಟಾರ್ಟಪ್‌ನಿಂದ ಈಗಾಗಲೇ ತರಬೇತಿ ಪಡೆದಿದ್ದಾರೆ.
ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಕಣಿವೆ ರಾಜ್ಯದ ಸೇಬು ಹೊರಡುವುದಕ್ಕೂ ಸಿದ್ಧವಾಗಿದೆ .
ಕಾಶ್ಮೀರದ ಸೇಬುಹಣ್ಣುಗಳಿಗೆ ದೇಶದಲ್ಲಿ ಎಲ್ಲ ಕಾಲಕ್ಕೂ ಬೇಡಿಕೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದೇಶಗಳಿಂದಲೂ ನಮ್ಮ ದೇಶಕ್ಕೆ ಸೇಬು ಹಣ್ಣು ಆಮದಾಗುತ್ತಿರುವುದರಿಂದ ಕಾಶ್ಮೀರದ ಸೇಬು ಉದ್ಯಮ ಕೊಂಚ ಸಂಕಷ್ಟಕ್ಕೆ ಸಿಲುಕಿತ್ತು.
ಅದರಲ್ಲೂ ಮುಖ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಾಶ್ಮೀರದ ಸೇಬಿಗೆ ಅಮೆರಿಕ ಸೇಬು ತೀವ್ರ ಪೈಪೋಟಿ ಒಡ್ಡುತ್ತಿದೆ.ಈ ಕಾರಣದಿಂದಲೇ ಕೆಲ ವರ್ಷಗಳ ಹಿಂದೆ ಬೆಲೆ ಕುಸಿತದಂತಹ ಸಮಸ್ಯೆಗಳನ್ನು ಎದುರಿಸಿತ್ತು.
ಅದು ಸಾಲದು ಎನ್ನುವಂತೆ ವಿದೇಶಿಗಳ ಪೈಪೋಟಿ ಜಾಗತಿಕ ಮಟ್ಟದಲ್ಲಿಯೂ ಕಾಶ್ಮೀರಿ ಆ್ಯಪಲ್‌ಗೆ ಹಿನ್ನಡೆಯಾಗೋದಕ್ಕೂ ಕಾರಣವಾಗಿತ್ತು..
ಈ ಬಾರಿ 10 ಸಾವಿರ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿರುವ ಕಾಶ್ಮೀರಿ ಸೇಬಿನ ಮಾರುಕಟ್ಟೆ ಮೌಲ್ಯ ಎರಡು ವರ್ಷಗಳ ಹಿಂದೆ ಬರೋಬ್ಬರಿ 11 ಸಾವಿರ ಕೋಟಿಯಿತ್ತು.
ಆದ್ರೆ ಇತ್ತೀಚಿಗೆ ಸುಮಾರು ಒಂದು ಸಾವಿರ ಕೋಟಿಯಷ್ಟು ಕುಸಿತವನ್ನು ಕಂಡಿದೆ. ಅದು ಅಲ್ಲಿನ ಆರ್ಥಿಕತೆಯ ಮೇಲೆಯೂ ಹೊಡೆತವನ್ನು ಕೊಟ್ಟಿತ್ತು..
ನೀವು ಇದನ್ನೂ ಇಷ್ಟ ಪಡಬಹುದು:ಚಳಿಗಾಲದ ತಾಜಾ ಹಿಮಪಾತ ಸ್ವಾಗತಿಸಿದ ಗುಲ್ಮಾರ್ಗ್
ಅವೆಲ್ಲವನ್ನೂ ಮೀರಿ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಹಾಗೇಯೇ ಉಳಿಸಿಕೊಳ್ಳುವುದಕ್ಕೆ ಅದ್ಯಾಕೋ ಕಾಶ್ಮೀರಿ ರೈತರು ಅಂದುಕೊಂಡ ಮಟ್ಟಿಗೆ ಯಶಸ್ಸು ಸಾಧಿಸಿರಲಿಲ್ಲ.
ಅಲ್ಲದೇ ಕಣಿವೆ ರಾಜ್ಯದ ಸೇಬು ಬೆಳೆಗಾರರು ಯಾವುದೇ ಬಗೆಯ ಹೊಸತನದ ಪ್ರಯೋಗ ಕೈಗೊಳ್ಳಲು ಕೂಡ ಹಿಂದೇಟು ಹಾಕುತ್ತಿದ್ರು.
ಆರ್ಥಿಕ ಸಹಾಯ ಮತ್ತು ತಿಳಿವಳಿಕೆಯ ಕೊರತೆಯೂ ಇದಕ್ಕೆ ಕಾರಣ ಅಂತಲೂ ಹೇಳಲಾಗುತ್ತಿತ್ತು.. ಆದ್ರೆ ಈಗ ಯಾವಾಗ ವಿದೇಶಿ ಮಾರುಕಟ್ಟೆಗೆ ನಮ್ಮ ಸೇಬು ತೆರೆದುಕೊಳ್ತಿದೆಯೋ ಈಗ ಬೇಡಿಕೆ ಹೆಚ್ಚಾಗಿದೆ..
ಕುಲ್ ಸಂಸ್ಥೆಗೆ ಬಂಡವಾಳ ಹರಿದುಬರುವುದರಿಂದ ಅಲ್ಲಿಂದ ತರಬೇತಿ ಪಡೆದುಕೊಂಡ ಸೇಬು ಬೆಳೆಗಾರರು ಪ್ರಯೋಗಾತ್ಮಕ ರೀತಿಯಲ್ಲಿ ಸೇಬು ಬೆಳೆಯುವುದಕ್ಕೆ ಧೈರ್ಯ ತೋರುತ್ತಾರೆ.
ಇದರಿಂದಾಗಿ ಉದ್ಯಮದ ಮಾರುಕಟ್ಟೆ ಮತ್ತಷ್ಟು ವಿಸ್ತಾರವಾಗುವ ಎಲ್ಲ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.
ವಿದೇಶಿ ನೇರ ಹೂಡಿಕೆಯಿಂದಾಗಿ ಕಾಶ್ಮೀರದ ಸೇಬುಗಳು ಭಾರತದ ಮಾರುಕಟ್ಟೆಯನ್ನು ಮಾತ್ರವಲ್ಲ ಜಗತ್ತಿನ ಹಲವು ದೇಶಗಳನ್ನು ತಲುಪುವ ಹಾದಿಯೂ ಮತ್ತಷ್ಟು ಸುಲಭವಾಗಲಿದೆ.
ಇದರಿಂದ ಆ ರಾಜ್ಯದ ಸ್ಥಳೀಯ ಸೇಬು ಬೆಳೆಗಾರರ ಸ್ಥಿತಿಗತಿಯೂ ಉತ್ತಮಗೊಳ್ಳಬಹುದು ಎನ್ನುವ ನಿರೀಕ್ಷೆ ಇದೆ..ಕುಲ್ ಫ್ರೂಟ್‌ವಾಲ್ ಸಂಸ್ಥೆ ಕೂಡ ಅದೇ ವಿಶ್ವಾಸದಲ್ಲಿದೆ..
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.